ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಷನ್: ಸಾಂಪ್ರದಾಯಿಕ ಕೇಶ ವಿನ್ಯಾಸ

Last Updated 28 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಚಂದವಾಗಿ ಸೀರೆಯುಟ್ಟು, ಒಪ್ಪುವ ತೊಡುಗೆ ತೊಟ್ಟು, ತಕ್ಕಮಟ್ಟಿಗೆ ಮೇಕಪ್ ಮಾಡಿಕೊಂಡು, ಸೀರೆಗೆ, ಒಡವೆಗೆ, ಮೊಗಕ್ಕೆ ಒಗ್ಗುವ ಕೇಶ ವಿನ್ಯಾಸ ಮಾಡಿಕೊಂಡರೆ ಹೆಂಗಳೆಯರ ಅಂದ ದುಪ್ಪಟ್ಟಾಗುತ್ತೆ. ಮುಖ್ಯವಾಗಿ ಕೇಶ ವಿನ್ಯಾಸವು ನಮ್ಮ ಒಟ್ಟಾರೆನಿಲುವನ್ನು ಹೆಚ್ಚಿಸುತ್ತದೆ. ಅಂದ ಹೆಚ್ಚಿಸುವ ಅಂತಹ ಸಾಂಪ್ರದಾಯಿಕ ಶೈಲಿಯ ಕೆಲವು ಕೇಶ ವಿನ್ಯಾಸಗಳು ಇಲ್ಲಿವೆ.

ಮೆಸ್ಸಿ ಸೈಡ್ ಬ್ರೈಡ್ (Messy Side Braid)
ಇದು ಹಬ್ಬಕ್ಕೆ ಹೇಳಿ ಮಾಡಿಸಿದ ಕೇಶ ವಿನ್ಯಾಸ. ಜಡೆರೂಪದಲ್ಲಿರುವ ಇದು ಸಾಂಪ್ರದಾಯಿಕವಾಗಿಯೂ ಕಾಣುವುದರಿಂದ ಸೀರೆ, ಕುರ್ತಾ, ಚೂಡಿದಾರದಂತಹ ವಸ್ತ್ರಗಳಿಗೆ ಬೆಸ್ಟ್ ಲುಕ್ ನೀಡುತ್ತದೆ.

ಮೊದಲು ಸ್ವಲ್ಪ ಮುಂಗುರುಳು ಕೂದಲನ್ನು ಬಿಟ್ಟುಕೊಂಡು ನಿಮ್ಮ ಎಡ ಅಥವಾ ಬಲ ಭಾಗದಲ್ಲಿ ಬೈತಲೆ ತೆಗೆದುಕೊಂಡು ನಂತರ ನಿಮಗೆ ಬೇಕಾದ ಭಾಗದಲ್ಲಿ ಸಂಪೂರ್ಣ ಕೂದಲನ್ನು ತೆಗೆದುಕೊಳ್ಳಬೇಕು. ಒಟ್ಟಂದದ ಕೂದಲನ್ನು ನೀವು ಮೂರು ಕಾಲಿನ ಜಡೆ ಅಥವಾ ನಾಲ್ಕು ಕಾಲಿನ ಜಡೆಯನ್ನು ಸ್ವಲ್ಪ ಸಡಿಲವಾಗಿ ಹೆಣೆದುಕೊಳ್ಳಬೇಕು. ಮೂರು ಕಾಲಿನ ಜಡೆಗಿಂತ ನಾಲ್ಕು ಕಾಲಿನ ಜಡೆಯೂ ಈ ಕೇಶ ವಿನ್ಯಾಸಕ್ಕೆ ಸೂಕ್ತವಾಗುತ್ತದೆ. ಈ ಮೊದಲೇ ಬಿಟ್ಟುಕೊಂಡ ಮುಂಗುರುಳ ಕೂದಲನ್ನು ಕರ್ಲಿ ಮಾಡಿಕೊಳ್ಳಬೇಕು. ಜಡೆ ಪ್ರಾರಂಭಿಸುವ ಮೊದಲೇ ಕರ್ಲಿ ಮಾಡಿಕೊಂಡರೂ ಆಗುತ್ತದೆ.

ಸ್ಲೀಕ್ ಲೋ ಬನ್ (Sleek Low Bun)
ಕೇಶ ವಿನ್ಯಾಸ ತುರುಬಿನ ರೂಪದಲ್ಲಿದ್ದರೆ ಚಂದ ಇರುತ್ತದೆ ಎಂದುಕೊಳ್ಳುವವರಿಗೆ ಇದು ಸೂಕ್ತವಾದ ಕೇಶ ವಿನ್ಯಾಸ. ಈ ಸ್ಲೀಕ್ ಲೋ ಬನ್ ಗಿಂತ ಉತ್ತಮ ಆಯ್ಕೆ ಯಾವುದು ಇಲ್ಲ.

ಮೊದಲು ನಿಮ್ಮ ಕೂದಲನ್ನು ಯಾವುದೇ ಸಿಕ್ಕು ಇಲ್ಲದಂತೆ ನಯವಾಗಿ ಬಾಚಿಕೊಳ್ಳಿ. ಮುಂದೆ, ನಿಮ್ಮ ಕೂದಲನ್ನು ಮಧ್ಯ ಬೈತಲೆ ತೆಗೆದು ಎರಡು ಭಾಗಗಳಾಗಿ ಮಾಡಿ ಮತ್ತು ಅಗತ್ಯವಿದ್ದರೆ ಸ್ಟೈಲಿಂಗ್ ಜೆಲ್ ಬಳಸಿ ಹಾರುವ ಪುಡಿ ಕೂದಲು ಸೇರಿ ಎಲ್ಲಾ ಕೂದಲನ್ನು ಬಿಗಿಯಾದ ಪೋನಿಟೇಲ್ ಆಗಿ ಒಟ್ಟುಗೂಡಿಸಿ. ಈ ರೀತಿ ಮಾಡಿದ ನಂತರ, ಪೋನಿಟೇಲ್ ಅನ್ನು ಬನ್ ಅಥವಾ ತುರುಬಿನ ರೂಪದಲ್ಲಿ ತಿರುಗಿಸಿ. ಬಾಬಿ ಪಿನ್‌ಗಳನ್ನು ಸರಿಯಾಗಿ ನಿಲ್ಲುವಂತೆ ಮಾಡಿಕೊಳ್ಳಿ. ನಿಮಗೆ ಬೇಕಾದಲ್ಲಿ ನಿಮ್ಮ ಇಷ್ಟವಾದ ಹೂವನ್ನು ಬನ್ ಸುತ್ತ ಹಾಕಿಕೊಳ್ಳಬಹುದು.

ಸೈಡ್ ವೇವ್ (Side Wave)
ಈ ಕೇಶ ವಿನ್ಯಾಸ ಉದ್ದನೆಯ ಮತ್ತು ಚಿಕ್ಕದಾದ ಕೂದಲು ಇಬ್ಬರಿಗೂ ಹೊಂದಿಕೆಯಾಗುವಂತದ್ದು. ಅದರಲ್ಲೂ ಅಲೆ ರೂಪದ ಕೂದಲು ಇದ್ದವರಿಗೆ ಬಹಳ ಸೊಗಸಾಗಿ ಕಾಣುತ್ತದೆ. ನೇರ ಕೂದಲು ಇದ್ದವರು ಕರ್ಲಿಂಗ್ ಮಾಡುವ ಉಪಕರಣದಿಂದ ಕರ್ಲ್ ಮಾಡಿಕೊಂಡು ಕೇಶ ವಿನ್ಯಾಸ ಪ್ರಯತ್ನಿಸಬಹುದು.

ನಿಮಗೆ ಒಂದೇ ಭಾಗದಲ್ಲಿ ಎಲ್ಲಾ ಕೂದಲನ್ನು ಒಗ್ಗೂಡಿಸಿ ಮಾಡಿಕೊಳ್ಳಬಹುದು ಅಥವಾ ಎರಡು ಬದಿಯಲ್ಲೂ ಕೂದಲು ಬರುವಂತೆ ಮಧ್ಯಭಾಗದಲ್ಲಿ ಬೈತಲೆ ತೆಗೆದು ಮಾಡಿಕೊಳ್ಳಬಹುದು. ಬೇಕೆಂದಲ್ಲಿ ನೆತ್ತಿಯ ಎರಡು ಭಾಗದಲ್ಲಿ ಸಣ್ಣಗೆ ಜಡೆ ಹಾಕಿಕೊಂಡು ಅಲಂಕಾರಿಕ ಮಣಿಗಳನ್ನು ಬಳಸಿ ಮತ್ತಷ್ಟು ಸುಂದರವಾಗಿಸಬಹುದು. ಬೇಕಾದಲ್ಲಿ ಬೈತಲೆ ಬೊಟ್ಟು ಹಾಕಿಕೊಳ್ಳಬಹುದು.

ಜುಡ ಬನ್ (ಜಡೆ ತುರುಬು) (Juda Bun)
ಮೊದಲು ಕೂದಲನ್ನು ಸ್ವಲ್ಪವೂ ಸಿಕ್ಕು ಇಲ್ಲದಂತೆ ಬಾಚಿಕೊಳ್ಳಬೇಕು. ನಂತರ ಕೂದಲನ್ನು ನಾಲ್ಕು ಭಾಗಗಳಾಗಿ ಮಾಡಿಕೊಂಡು ನಾಲ್ಕು ಜಡೆಗಳನ್ನು ಸಡಿಲವಾಗಿ ಹೆಣೆದುಕೊಳ್ಳಬೇಕು. ಇದು ಮುಗಿದ ಬಳಿಕ ಮೂರನೇ ಜಡೆಯನ್ನು ಎರಡನೇ ಜಡೆಯ ಕೆಳಗಿನಿಂದ ವೃತ್ತಾಕಾರವಾಗಿ ಸುತ್ತಿಯೂ ಪಿನ್ ಸಹಾಯದಿಂದ ಕೂರಿಸಬೇಕು. ಆಮೇಲೆ ಎರಡನೇ ಜಡೆಯನ್ನು ಸುತ್ತಿದ ತುರುಬಿನ ಮೇಲೆ ವೃತ್ತಾಕಾರವಾಗಿ ಕೂರಿಸಬೇಕು. ಬಳಿಕ ನಾಲ್ಕನೇ ಜಡೆ ಮತ್ತು ಮೊದಲನೇ ಜಡೆಯದೇ ಈ ಹಿಂದೆ ಅನುಸರಿಸಿದಂತೆ ವೃತ್ತಾಕಾರವಾಗಿ ಸುತ್ತಿಯೂ ಪಿನ್ ಬಳಸಿ ಗಟ್ಟಿ ಮಾಡಬೇಕು. ನಿಮಗೆ ಬೇಕಾದಲ್ಲಿ ಸಣ್ಣ ಸಣ್ಣ ಜಡೆ ಅಲಂಕಾರಿಕ ವಸ್ತುಗಳಾದ ಮಣಿ, ಹೂಗಳನ್ನು ಬಳಸಿ ಬನ್ ಅನ್ನು ಅಂದಗೊಳಿಸಬಹುದು. ಇದು ಲೆಹೆಂಗಾ, ಸೀರೆಗಳಿಗೆ ಸುಂದರವಾಗಿ ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT