ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರಿಗೂ ಒಪ್ಪುವ ಕಪ್ಪೆ ಚಿಪ್ಪಿನ ಆಭರಣ

Last Updated 26 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಹೆಣ್ಣುಮಕ್ಕಳ ಅಂದ ಹೆಚ್ಚಲು ಆಭರಣ ಭೂಷಣ ಅಂತಲೇ ಹೇಳಬಹುದು. ಚೆಂದದ ಉಡುಪು ಧರಿಸಿದಾಗ ಅದಕ್ಕೆ ಒಪ್ಪುವಂತಹ ಆಭರಣ ಗಳನ್ನು ಧರಿಸುವ ಮೂಲಕ ಇನ್ನಷ್ಟು ಅಂದವಾಗಿ ಕಾಣಬಹುದು. ಇತ್ತೀಚೆಗೆ ನಮ್ಮ ದೇಹಸಿರಿಗೆ ಒಪ್ಪುವ ಉಡುಪಿನೊಂದಿಗೆ ಆಭರಣಗಳನ್ನು ಧರಿಸುವುದು ಟ್ರೆಂಡ್ ಆಗಿದೆ. ಈಗೀಗ ಕಪ್ಪೆಚಿಪ್ಪಿನ ಆಭರಣಗಳು ಟ್ರೆಂಡಿಯಾಗುತ್ತಿವೆ. ಕಪ್ಪೆಚಿಪ್ಪಿನ ಸರ, ಕಿವಿಯೋಲೆ, ಬ್ರೇಸ್ಲೆಟ್‌, ಬಳೆ... ಹೀಗೆ ವಿವಿಧ ಬಗೆಯ ಆಭರಣಗಳು ಹೆಣ್ಣುಮಕ್ಕಳು, ಗಂಡುಮಕ್ಕಳು ಇಬ್ಬರಿಗೂ ಇಷ್ಟವಾಗುತ್ತಿವೆ. ಗಂಡುಮಕ್ಕಳೂ ಕಪ್ಪೆಚಿಪ್ಪಿನ ಬ್ರೇಸ್ಲೆಟ್‌, ಪದಕ, ಉಂಗುರ ಧರಿಸುವುದು ವಿಶೇಷ.

ಕಪ್ಪೆಚಿಪ್ಪಿನ ಹಾರ

ವಿವಿಧ ಗಾತ್ರದ ಹಾಗೂ ಆಕಾರದ ಕಪ್ಪೆಚಿಪ್ಪುಗಳು ಸಮುದ್ರದಡದ ಮೇಲೆ ಬಿದ್ದಿರುತ್ತವೆ. ಈ ಚಿಪ್ಪುಗಳಿಂದ ಸುಂದರವಾದ ಹಾರವನ್ನು ತಯಾರಿಸಬಹುದು. ಈ ಕಪ್ಪೆಚಿಪ್ಪಿನ ಹಾರ ಕತ್ತಿನ ಅಂದವನ್ನು ಹೆಚ್ಚಿಸುವುದರಲ್ಲಿ ಎರಡು ಮಾತಿಲ್ಲ. ಇದರಲ್ಲಿ ವಿವಿಧ ಬಣ್ಣದ ಚಿಪ್ಪುಗಳು ಲಭ್ಯವಿದ್ದು ಈ ಹಾರಗಳನ್ನು ಭಾರತೀಯ ಹಾಗೂ ಪಾಶ್ಚಾತ್ಯ ಎರಡೂ ಬಗೆಯ ದಿರಿಸಿನೊಂದಿಗೆ ಧರಿಸಬಹುದು. ಬಿಳಿಯ ಚಿಪ್ಪಿಗೆ ವಿವಿಧ ಬಣ್ಣ ಬಳಿದು ಕಾಂಟ್ರ್ಯಾಸ್ಟ್ ಬಣ್ಣದ ಚಿಪ್ಪಿನಿಂದ ತಯಾರಿಸಿದ ಹಾರವೂ ಹೆಣ್ಣುಮಕ್ಕಳ ಕತ್ತನ್ನು ಅಲಂಕರಿಸುತ್ತಿವೆ. ಖಾದಿ ಸೀರೆ ಅಥವಾ ಕುರ್ತಾದೊಂದಿಗೂ ಕಪ್ಪೆಚಿಪ್ಪಿನ ಹಾರವನ್ನು ಧರಿಸಬಹುದು. ಇದಕ್ಕೆ ದೊಡ್ಡ ಗಾತ್ರದ ಚಿಪ್ಪಿನ ಪೆಂಡೆಂಟ್ ಧರಿಸಿದರೆ ಅಂದ ಹೆಚ್ಚುತ್ತದೆ.

ಕೈ ಬಳೆಗಳು

ಸರಳವಾಗಿ, ಸುಂದರವಾಗಿರುವ ಕಪ್ಪೆಚಿಪ್ಪಿನ ಬಳೆಗಳು ಕೈಯ ಅಂದವನ್ನು ಹೆಚ್ಚಿಸುತ್ತವೆ. ಚಿಪ್ಪಿನ ಒಂದೇ ಬಳೆಯನ್ನು ಧರಿಸುವುದು ಸೂಕ್ತ. ಇದರಲ್ಲಿ ಟ್ರೆಂಡಿ ಬಳೆಗಳು ಲಭ್ಯವಿದ್ದು ಡ್ರೆಸ್‌ಗೆ ಮ್ಯಾಚಿಂಗ್ ಎನ್ನಿಸುವಂತಹವನ್ನು ಧರಿಸಬಹುದು. ಇವನ್ನು ಬೆಳ್ಳಿ ಅಥವಾ ಆಕ್ಸಿಡೈಸ್ಡ್‌ ರೂಪ‍ದ ಬಳೆಗಳಲ್ಲಿ ಜೋಡಿಸಬಹುದು. ಸುಂದರವಾದ ಚಿಪ್ಪುಗಳನ್ನು ಒಂದರ ಹಿಂದೆ ಒಂದರಂತೆ ಜೋಡಿಸಿ ಬಳೆ ರೂಪದಲ್ಲಿ ಧರಿಸಬಹುದು. ಇದನ್ನು ಜೀನ್ಸ್ ಟಾಪ್‌, ಚೂಡಿದಾರ್ ಜೊತೆ ಧರಿಸಿದರೆ ಟ್ರೆಂಡಿ ಲುಕ್ ಸಿಗುವುದರಲ್ಲಿ ಅನುಮಾನವಿಲ್ಲ.

ಉಂಗುರ

ಉಂಗುರದಲ್ಲಿ ವಿವಿಧ ಗಾತ್ರ, ಆಕಾರದ ಕಪ್ಪೆಚಿಪ್ಪನ್ನು ಜೋಡಿಸುವುದು ಈಗಿನ ಟ್ರೆಂಡ್‌. ನಿಮಗೆ ಬೇಕಾದ ಗಾತ್ರ ಅಥವಾ ವಿನ್ಯಾಸದ ಕಪ್ಪೆಚಿಪ್ಪುಗಳನ್ನು ನೀವು ಇಷ್ಟಪಡುವ ವಿನ್ಯಾಸದ ಉಂಗುರದೊಂದಿಗೆ ಜೋಡಿಸಬಹುದು. ಸಾಮಾನ್ಯವಾಗಿ ಅಗಲವಾದ ವಿನ್ಯಾಸದ ಉಂಗುರಕ್ಕೆ ಕಪ್ಪೆಚಿಪ್ಪನ್ನು ಜೋಡಿಸಲಾಗುತ್ತದೆ.

ಬ್ರೇಸ್ಲೆಟ್‌

ಕಪ್ಪೆಚಿಪ್ಪಿನಿಂದ ಮಾಡಿರುವ ಬ್ರೇಸ್ಲೆಟ್‌ಗಳು ಎಲ್ಲದಕ್ಕಿಂತ ಹೆಚ್ಚು ಟ್ರೆಂಡಿ ಎನ್ನಿಸುತ್ತವೆ. ಕಪ್ಪೆಚಿಪ್ಪಿನ ಬ್ರೇಸ್ಲೆಟ್‌ ಅನ್ನು ಹೆಣ್ಣುಮಕ್ಕಳು ಹಾಗೂ ಗಂಡುಮಕ್ಕಳು ಇಬ್ಬರೂ ಧರಿಸಬಹುದು. ಇದು ಸಾಮಾನ್ಯವಾಗಿ ಎಲಾಸ್ಟಿಕ್ ರೂಪದಲ್ಲಿರುತ್ತದೆ. ಮಿಲೇನಿಯಲ್ ಜಮಾನದವರು ಈ ಬ್ರೇಸ್ಲೆಟ್‌ ಧರಿಸುವ ಮೂಲಕ ಟ್ರೆಂಡಿಯಾಗಿ ಕಾಣಿಸುತ್ತಾರೆ. ಇದು ಧರಿಸಿದಾಗ ತಕ್ಷಣಕ್ಕೆ ಕಣ್ಣಿಗೆ ಸೆಳೆಯುವುದರಲ್ಲಿ ಅನುಮಾನವಿಲ್ಲ. ಒಂದೇ ಬ್ರೇಸ್ಲೆಟ್‌ನಲ್ಲಿ ವಿವಿಧ ಬಣ್ಣದ ಚಿಪ್ಪನ್ನು ಜೋಡಿಸುವ ಮೂಲಕ ಎಲ್ಲಾ ಬಟ್ಟೆಗೂ ಮ್ಯಾಚಿಂಗ್ ಇರುವಂತೆ ನೋಡಿಕೊಳ್ಳಬಹುದು.

ಕಾಲ್ಗೆಜ್ಜೆ

ಹಿಂದೆಲ್ಲಾ ಕಾಲ್ಗೆಜ್ಜೆ ಎಂದರೆ ಬೆಳ್ಳಿಯದ್ದೇ ಆಗಿರಬೇಕು ಎಂಬ ನಿಯಮವಿತ್ತು, ಆದರೆ ಇತ್ತೀಚೆಗೆ ಇತರ ಲೋಹಗಳು, ಮಣಿಗಳಿರುವ ಕಾಲ್ಗೆಜ್ಜೆಗಳು ಹೆಚ್ಚು ಸದ್ದು ಮಾಡುತ್ತಿವೆ. ಹಳೆಯ ಸಿನಿಮಾಗಳಲ್ಲಿ ನದಿತೀರದಲ್ಲಿ ವಾಸಿಸುವ ಮಂದಿ ಕಪ್ಪೆಚಿಪ್ಪಿನ ಕಾಲ್ಗೆಜ್ಜೆ ಧರಿಸುವುದನ್ನು ನೋಡಿರಬಹುದು. ಅದೇ ಈಗ ನಗರದ ಜನರ ನೆಚ್ಚಿನ ಟ್ರೆಂಡ್‌ ಆಗಿದೆ. ಈ ಕಾಲ್ಗೆಜ್ಜೆ ಎಲ್ಲಾ ಥರದವರಿಗೂ ಹೊಂದುತ್ತದೆ. ಆ್ಯಂಕಲ್‌ ಜೀನ್ಸ್‌, ಜೆಗ್ಗಿಂಗ್ಸ್‌, ಪೆನ್ಸಿಲ್‌ ಪ್ಯಾಂಟ್‌ ಜೊತೆ ಇದನ್ನು ಧರಿಸಿದರೆ ಕಾಲಿನ ಅಂದ ಹೆಚ್ಚುವುದಲ್ಲದೇ ಟ್ರೆಂಡಿ ಆಗಿಯೂ ಕಾಣಿಸುತ್ತದೆ.

ಕಿವಿಯೋಲೆ

ಕಪ್ಪೆಚಿಪ್ಪಿನ ಕಿವಿಯೋಲೆಯನ್ನು ಧರಿಸುವುದರಿಂದ ಸೊಗಸಾಗಿ ಕಾಣಬಹುದು. ವಾರ್ಷಿಕೋತ್ಸವ, ಮದುವೆ, ಹುಟ್ಟುಹಬ್ಬದಂದು ಇದನ್ನು ಉಡುಗೊರೆ ರೂಪದಲ್ಲೂ ನೀಡಬಹುದು. ಈ ಸೊಗಸಾದ ಕಿವಿಯೋಲೆಗಳು ವಾರ್ಡ್‌ರೋಬ್‌ಗೆ ಉತ್ತಮ ಸೇಪರ್ಡೆಯಾಗಿವೆ. ನಮ್ಮ ಉಡುಪಿಗೆ ಮ್ಯಾಚಿಂಗ್‌ ಎನ್ನಿಸುವ ಬಣ್ಣದ ಚಿಪ್ಪನ್ನು ಆಯ್ಕೆ ಮಾಡಿಕೊಂಡು ಧರಿಸಬಹುದು. ಇದೂ ಕೂಡ ಭಾರತೀಯ ಹಾಗೂ ಪಾಶ್ಚಾತ್ಯ ಎರಡೂ ರೀತಿಯ ಉಡುಪಿಗೆ ಹೊಂದುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT