ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಬ್ಬದ ಸಡಗರಕ್ಕೆ ಖಾದಿ ಸಿಲ್ಕ್‌ ಸೀರೆ, ಬೆಳ್ಳಿಯ ಒಡವೆ

Last Updated 2 ಅಕ್ಟೋಬರ್ 2021, 2:42 IST
ಅಕ್ಷರ ಗಾತ್ರ

ಉದ್ಯೋಗಸ್ಥರಿಗೆ, ಅವರಲ್ಲೂ ಮಿಲೇನಿಯಲ್‌ ಯುವತಿಯರಿಗೆ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಲು ಹಬ್ಬ, ಮದುವೆಯಂತಹ ವಿಶೇಷ ದಿನಗಳೇ ಬರಬೇಕು. ಜರಿಯಂಚು, ಕುಚ್ಚು ನೇಯ್ದ ಸೆರಗಿನ ರೇಷ್ಮೆ ಸೀರೆಯ ಜೊತೆ ಡಿಸೈನರ್‌ ರವಿಕೆ ತೊಟ್ಟು, ಮ್ಯಾಚಿಂಗ್‌ ಆಭರಣಗಳನ್ನು ಧರಿಸಿ ಸಂಭ್ರಮಿಸಲು ಈ ಹಬ್ಬಗಳ ಸಾಲು ಸಂದರ್ಭ ಒದಗಿಸಿದೆ. ನವರಾತ್ರಿಯಲ್ಲಂತೂ ಒಂಬತ್ತು ದಿನಗಳ ಕಾಲ ಒಂಬತ್ತು ವಿಧದ ರಂಗಿನ ಸೀರೆಗಳನ್ನುಡುವ ಸಡಗರ.

ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಯಲ್ಲಿ ಬನಾರಸ್‌, ಕಾಂಜೀವರಂ, ಮೈಸೂರು ಸಿಲ್ಕ್‌, ಪಟೋಲ, ಮಹೇಶ್ವರಿ, ಪೈಠಣಿ, ಪೋಚಂಪಲ್ಲಿ, ಜಾಮ್ದಾನಿ, ಕಥಾನ್‌, ಅರ್ಗಂಝಾ, ಟಸ್ಸಾರ್‌, ಚಂದೇರಿ, ಬಾಲುಶಾರಿ, ಧರ್ಮಾವರಂ, ಗದ್ವಾಲ್‌, ಭಾಗಲ್ಪುರಿ, ಉಪ್ಪಡ, ಮಟ್ಕಾ.. ಹೀಗೇ ತರಾವರಿ ರೇಷ್ಮೆ ಸೀರೆಗಳು, ಡಿಸೈನರ್‌ ಸೀರೆಗಳು ಲಭ್ಯ. ಇವುಗಳ ಜೊತೆಗೆ ಕೆಲವು ವರ್ಷಗಳಿಂದೀಚೆಗೆ ಖಾದಿ ಸೀರೆಗಳ ಮೇಲೆ ಮಹಿಳೆಯರ ಮೋಹ ಹೆಚ್ಚುತ್ತಿದೆ. ಖಾದಿ ಸಿಲ್ಕ್ ಸೀರೆ, ಖಾದಿ ಕಾಟನ್‌, ಖಾದಿ ಪ್ರಿಂಟೆಡ್‌ ಸಿಲ್ಕ್‌ ಸೀರೆ, ಖಾದಿ ಪಟ್ಟು.. ಹೀಗೆ ಗರಿಗರಿಯಾದ ಖಾದಿ ರೇಷ್ಮೆ ಸೀರೆಗಳಲ್ಲದೇ, ಸಾಫ್ಟ್‌ ಸೀರೆಗಳೂ ಗಮನ ಸೆಳೆಯುತ್ತಿವೆ.

ಬೆಲೆ ತುಸು ಹೆಚ್ಚಿಗೆ ಎನ್ನಿಸಿದರೂ, ಸೀರೆ ಉಟ್ಟಾಗ ಇದು ಕೊಡುವ ರಾಯಲ್‌ ಲುಕ್‌ಗೆ ಎಲ್ಲರೂ ಮನಸೋತಿದ್ದಾರೆ. ಸೀರೆಗಳು ಹಗುರ ಇರುವುದರಿಂದ ಉಡಲು ಇಷ್ಟವಾಗುತ್ತದೆ. ಕಸೂತಿ ಸೀರೆಗಳನ್ನು ಕಚೇರಿಗೂ, ಮುಖ್ಯವಾದ ಮೀಟಿಂಗ್‌ಗೂ ಉಡಬಹುದು.

ಖಾದಿ ಸೀರೆ ಉಡುವ ರೀತಿಯಿಂದಲೂ ನಮ್ಮ ಲುಕ್‌ ಅನ್ನು ಅಂದವಾಗಿಸಿಕೊಳ್ಳಬಹುದು.

* ಸೀರೆಯ ಸೆರಗನ್ನು ಕುತ್ತಿಗೆಯ ಸುತ್ತ ಸುತ್ತಿಕೊಳ್ಳಬಹುದು. ಇದು ಸೀರೆ ಜೊತೆಗೆ ಸ್ಕಾರ್ಫ್‌ ಹಾಕಿಕೊಂಡ ಅನುಭವ ಕೊಡುತ್ತದೆ.
* ಸೆರಗಿಗೆ ನೆರಿಗೆ ಮಾಡದೇ ಒಂದೆಳೆಯಾಗಿ ಬಿಟ್ಟುಕೊಂಡರೆ, ಚಂದದ ಲುಕ್‌ ಸಿಗುತ್ತದೆ.
* ಬಲ ತೋಳಿನ ಮೇಲಿಂದ ಸೆರಗು ಹಾಕಿಕೊಂಡರೂ ಖಾದಿ ಸೀರೆಗಳು ಹೆಚ್ಚು ರಿಚ್‌ ಆಗಿ ಕಾಣುತ್ತದೆ.
* ಬೆಂಗಾಲಿ ಶೈಲಿಯಲ್ಲೂ ಕೂಡ ಖಾದಿ ಸೀರೆಗಳನ್ನು ಉಡಬಹುದು.

ಯಾವ ರೀತಿಯ ಬ್ಲೌಸ್‌ ಧರಿಸಬಹುದು?
ಖಾದಿ ಸೀರೆಯ ಬಣ್ಣಕ್ಕೆ ಕಾಂಟ್ರಾಸ್ಟ್‌ ಇರುವಂಥ ಬಣ್ಣದ ಬ್ಲೌಸ್‌ ಧರಿಸಬಹುದು. ಜೊತೆಗೆ, ಖಾದಿ ಸೀರೆಗಳಿಗೆ ಹೆಚ್ಚಿನ ಬಾರಿ ಸಾದಾ, ಒಂದೇ ಬಣ್ಣ ಇರುವ ಬ್ಲೌಸ್‌ಗಳನ್ನು ಹಾಕಿದರೆ ಅಂದ ಹೆಚ್ಚುತ್ತದೆ. ಖಾದಿ ಕಾಟನ್‌ ಸೀರೆಗೆ ಹೈ ನೆಕ್‌ ಇರುವಂಥದ್ದು, ಮುಕ್ಕಾಲು ಉದ್ದದ ತೋಳಿನ ಬ್ಲೌಸ್‌ ಹೊಂದುತ್ತದೆ.

ಖಾದಿ ಸಿಲ್ಕ್‌ ಮತ್ತು ಪಟ್ಟು ಸೀರೆಗೆ ಕುಂದನ್‌ ವರ್ಕ್‌ ಇರುವ, ಬಂಗಾರದ ಜರಿ ಅಂಚಿನದು, ಹರಳುಗಳ ಕುಸುರಿ ಇರುವ ಬ್ಲೌಸ್‌ಗಳು ಹೆಚ್ಚು ಸೂಕ್ತ. ಮಣಿ ಕಟ್ಟಿಗೆ ಬರುವ ತೋಳಿನ ಉದ್ದದ ಬ್ಲೌಸ್‌ಗಳೂ ಸೂಕ್ತವಾಗುತ್ತದೆ.

ಬನಾರಸಿ ಖಾದಿ ಸೀರೆಗೆ ಬೆಳ್ಳಿ ಬಣ್ಣದ ಕಸೂತಿ ಇರುವ ಬ್ಲೌಸ್‌ ಹೊಂದುತ್ತದೆ.

ಬೆಳ್ಳಿ ಒಡವೆಗಳ ಮಿನುಗು
ಖಾದಿ ಸೀರೆಗಳಿಗೆ ಕಡಿಮೆ ಒಡವೆ ಧರಿಸಿದಷ್ಟೂ ಉಟ್ಟವರ ಅಂದ ಹೆಚ್ಚುತ್ತದೆ. ದೊಡ್ಡದಾದ ಝುಮ್ಕಾ, ಷಾಂಡೆಲಿಯರ್‌ ಕಿವಿಯೋಲೆ ಹಾಕಿಕೊಂಡರೆ ಕತ್ತಿಗೆ ಧರಿಸುವ ಅವಶ್ಯಕತೆಯಿಲ್ಲ. ಬೆಳ್ಳಿಯ ಒಡವೆಗಳು, ಬ್ಲ್ಯಾಕ್‌ ಮೆಟಲ್‌, ಟೆರ್‍ರಾಕೋಟಾದಿಂದ ಮಾಡಿದ ಒಡವೆಗಳು ಹೆಚ್ಚು ಹೊಂದುತ್ತವೆ. ಸೆಮಿ ಪ್ರೆಶಿಯಸ್‌ ಜೇಡ್‌, ಅಗೇಟ್‌, ಟೋಪಾಜ್‌ ಮಣಿಗಳ ಸರವನ್ನು ಕೂಡ ಹಾಕಿಕೊಳ್ಳಬಹುದು. ಕೈಗೆ ಬೆಳ್ಳಿಯ ಕಡಗ ಧರಿಸಬಹುದು.

ಹರಳಿನ ಕ್ಲಚ್‌
ಅಲ್ಟ್ರಾ ಫ್ಯಾಷನ್‌ ಮಾಡುವವರು ಉದ್ದನೆಯ ಕುಂದನ್‌ ಬಿಂದಿ ಧರಿಸಬಹುದು. ಈಗಂತೂ ದೊಡ್ಡ ದೊಡ್ಡ ಬಿಂದಿಗಳು ಟ್ರೆಂಡ್‌ ಎನಿಸಿವೆ.

ಹಬ್ಬದ ಪೂಜೆಗೆ ಹೋಗಬೇಕಾದರೆ ಕೈಯಲ್ಲೊಂದು ಹರಳಿನ ವರ್ಕ್‌ ಮಾಡಿದ ಕ್ಲಚ್‌ ಹಿಡಿದುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT