ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾವೂ ಚಂದ ಕಾಣ್ಬೇಕು’

Last Updated 20 ನವೆಂಬರ್ 2018, 6:12 IST
ಅಕ್ಷರ ಗಾತ್ರ

ಹೌದು, ಪುರುಷರೂ ಮಹಿಳೆಯರಷ್ಟೇ ಸೌಂದರ್ಯಸೂತ್ರಗಳಿಗೆ ತಮ್ಮನ್ನು ಒಡ್ಡಿಕೊಳ್ಳುವುದು ಈಗ ಸಾಮಾನ್ಯ. ‘ಪಾರ್ಲರ್ ಗೆ ಹೋಗಿ ಐ ಬ್ರೋ ಮಾಡಿಸ್ಕೊಂಡು ಬರ್ತೀನಿ’ ಎಂದು ಹೆಂಡತಿ ಹೇಳಿಹೋಗುತ್ತಿದ್ದಷ್ಟೇ ಸಲೀಸಾಗಿ, ‘ಮುಖ ಎಲ್ಲಾ ಒಂಥರಾ ಆಗಿದೆ ಕಣೇ ಹೇರ್ ಕಟಿಂಗು, ಹಾಗೇ ಫೇಷಿಯಲ್ ಮಾಡಿಸ್ಕೊಂಡು ಬರ್ತೀನಿ’ ಎಂದು, ಸಲೂನ್‌ಗೆ ಹೊರಟ ಗಂಡ ಹೇಳುವುದು ಸಾಮಾನ್ಯವಾಗಿದೆ.ವಿಶೇಷ ಸಂದರ್ಭಗಳಿಗೆ ಇಬ್ಬರೂ ಫ್ಯಾಮಿಲಿ ಸಲೂನ್‌ಗೆ ಹೋಗಿ ಫೇಷಿಯಲ್, ಕೈಕಾಲಿಗೆ ಸ್ಪಾ ಮಾಡಿಸಿಕೊಳ್ಳುವುದು ಟ್ರೆಂಡ್ ಆಗಿದೆ. ‘ಮದುವೆ ಗಂಡೂ ಅರಶಿನ ಹಚ್ಚಿಸಿಕೊಳ್ಳಲು ಮುಜುಗರ ಪಡುತ್ತಿದ್ದ ಕಾಲವೊಂದಿತ್ತು. ಹಾಗಿರುವಾಗ ಯಾಕೆ ಈ ಸೌಂದರ್ಯ ಪ್ರಜ್ಞೆ’ ಎಂದು ಕೇಳಿದರೆ, ಥಣಿಸಂದ್ರ ಅಲೂನ್ ಆ್ಯಂಡ್ ಸ್ಪಾವೊಂದರ ನೌಕರ ಜೆನ್ನಿ, ‘ಅದು ಶೋಕಿ’ ಎಂದು ನಗುತ್ತಾರೆ!

‘ದೊಡ್ಡ ಕಂಪನಿ, ದೊಡ್ಡ ಸಂಬಳ. ಖರ್ಚಾಗ್ಬೇಕಲ್ವಾ? ಎಲ್ಲರಿಗೂ ಬಾಸ್ ಥರ ಕಾಣಿಸ್ಕೊಳ್ಳೋ ಶೋಕಿ. ಈಗ ಸಾಮಾನ್ಯ ಸಲೂನ್‌ಗಳಲ್ಲೂ ‘ಸ್ಪಾ’ ಸೇರಿ ಕೊಂಡಿದೆ. ಹೇರ್ ಕಟಿಂಗ್‌ಗೆ ಬಂದ ಗ್ರಾಹಕರು ತಲೆ ಮಸಾಜ್, ಫೇಷಿಯಲ್, ಸ್ಪಾ ಮಾಡಿಸ್ಕೋತಾರೆ’ ಎಂದು ಜೆನ್ನಿ ವಿವರಿ ಸುತ್ತಾರೆ.

‘ಫ್ಯಾಷನ್ ಪ್ರಜ್ಞೆ ಅನ್ನೋದಕ್ಕಿಂತ ಈಗಿನ ಕಾರ್ಪೊರೇಟ್ ಸಂಸ್ಕೃತಿಯಲ್ಲಿ ಉಳಿದುಕೊಳ್ಳಲು ಆಕರ್ಷಕವಾಗಿ ಕಾಣಿಸಿ ಕೊಳ್ಳಲೇಬೆಕಾಗಿದೆ’ ಎಂದು ಹೇಳುತ್ತಾರೆ, ಐಟಿಸಿ ಕೇಂದ್ರ ಕಚೇರಿಯ ಉದ್ಯೋಗಿ ಸಾಯಿರಂಜನ್. ಇದೊಂದು ಟ್ರೆಂಡ್. ಸೆಲ್ಫ್ ಪ್ರೆಸೆಂಟೇಷನ್' ಅಂತೀವಿ.

ಗಡ್ಡ, ಮೀಸೆ ಕ್ಲೀನ್ ಶೇವ್ ಮಾಡಿಕೊಳ್ಳೋದು ಅಥವಾ ದಿನಾ ‘ಕ್ಲೀನ್ ಫೇಸ್ಡ್’ ಆಗಿ ಕಚೇರಿಗೆ ಹೋಗುವುದು ಕಾರ್ಪೊರೇಟ್ ಸಂಸ್ಕೃತಿಯಲ್ಲಿ ಶಿಸ್ತು ಎನಿಸಿಕೊಳ್ಳುತ್ತಿದೆ. ಐದಂಕಿ ವೇತನ ಪಡೆಯುವವರು ಗೃಹ ಬಳಕೆ, ಪೆಟ್ರೋಲ್, ಡೀಸಲ್‌ಗೆ ತಿಂಗಳ ಬಜೆಟ್ ನಿಗದಿ ಮಾಡುವಂತೆಯೇ ಈ ಸೆಲ್ಫ್ ಪ್ರೆಸೆಂಟೇಷನ್‌ಗೂ ದುಡ್ಡು ವಿನಿಯೋಗಿಸುತ್ತಾರೆ. ಇದೆಲ್ಲಾ ಈಗ ಮಾಮೂಲು' ಎಂದುಸಾಯಿ ರಂಜನ್ ತಮ್ಮ ಮತ್ತು ಸ್ನೇಹಿತರ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಈ ಟ್ರೆಂಡ್ ಸಲೂನ್ ಮತ್ತು ಸ್ಪಾಗಳಿಗೆ ಭರ್ಜರಿ ಆದಾಯ ತಂದುಕೊಡುತ್ತಿದೆ.

ಪಾಂಡವಪುರದಿಂದ ಇತ್ತೀಚೆಗಷ್ಟೇ ಬೆಂಗಳೂರಿಗೆ ಬಂದು ಕೆಲಸಕ್ಕೆ ಸೇರಿರುವ ಜೆನ್ನಿ ಅವರಿಗೆ ಇದೊಂದು ಮಾಯಾಲೋಕದಂತೆ ಕಾಣುತ್ತಿದೆಯಂತೆ. ‘ದಿನಾ ಗಡ್ಡ ತೆಗೆಯೋದು, ಇಸ್ತ್ರಿ ಮಾಡಿದ ಪ್ಯಾಂಟ್ ಶರ್ಟ್ ಹಾಕ್ಕೊಳ್ಳೋದು, ಪಾಲಿಶ್ ಮಾಡಿದ ಶೂ ಹಾಕ್ಕೊಳ್ಳೋದು ಕಡ್ಡಾಯ'. ಈ ಕಂಪನಿಗೆ ಸೇರುವವರಿಗೆ ನೇಮಕಾತಿ ಆದೇಶ ಪತ್ರ ಕೈಗಿಡುವ ಮೊದಲು ಮಾನವ ಸಂಪನ್ಮೂಲ ವಿಭಾಗದವರು ನಡೆಡುವ ಕೌನ್ಸೆಲಿಂಗ್‌ನಲ್ಲೇ ಹೇಳಿಬಿಡ್ತಾರೆ. ಅನಾರೋಗ್ಯವಿದ್ದಾಗ ಮಾತ್ರ ವಿನಾಯಿತಿ' - ಹೊಸೂರು ರಸ್ತೆಯ ಕಾರ್ಪೊರೇಟ್ ಆಸ್ಪತ್ರೆಯೊಂದರಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿರುವ ನರೇಶ್ ಗೌಡ ಹೀಗೆ ಹೇಳುತ್ತಾರೆ.

'ಕಾಲೇಜಿನಲ್ಲಿ ನಮ್ಮ ಸೋಷಿಯಾಲಜಿ ಲೆಕ್ಚರರ್‌, 'ನಿಮಗೆ ಡ್ರೆಸ್ಸಿಂಗ್ ಸೆನ್ಸ್ ಇಲ್ಲ ಉಢಾಳರು' ಅಂತ ಬೈತಿದ್ರು. ನಾನು ಮತ್ತು ನನ್ನ ಗೆಳೆಯರು ಅವರನ್ನು ಚುಡಾಯಿಸಲಿಕ್ಕಂತಲೇ ಇನ್ನಷ್ಟು ಅಶಿಸ್ತಿನಿಂದ ನಡ್ಕೋತಿದ್ವಿ. ಹವಾಯ್ ಸ್ಲಿಪ್ಪರ್ಸ್ ಹಾಕ್ಕೊಂಡು ಹೋಗಿದ್ದೂ ಇದೆ. ಶಿಸ್ತಿನ ಬೆಲೆ ಈಗ ಗೊತ್ತಾಗ್ತಿದೆ' ಎಂದು ಅವರು ನಗುತ್ತಾರೆ. ಬೆಳ್ಳನೆಯ ಚರ್ಮ, ಕಪ್ಪು ಅಥವಾ ಕಡುಕಂದು ಬಣ್ಣದ ಕೂದಲು ಎಂಬ, ಫ್ಯಾಷನ್‌ ಲೋಕದ ಸೌಂದರ್ಯಸೂತ್ರ ಪುರುಷರನ್ನು ಬೇರೆ ಬೇರೆ ಉತ್ಪನ್ನಗಳಿಗೆ ಮೈವೊಡ್ಡಿಕೊಳ್ಳುವಂತೆ ಪ್ರಚೋದಿಸುತ್ತಿದೆ.

ಅಂತರರಾಷ್ಟ್ರೀಯ ಖ್ಯಾತಿಯ ಸೆಲೆಬ್ರಿಟಿ ಕಾಸ್ಮೊಡರ್ಮಟಾಲಜಿಸ್ಟ್ ಹಾಗೂ ‘ಕಾಸ್ಮೊಡರ್ಮ’ ಸರಣಿಯ ಸಂಸ್ಥಾಪಕಿ ಡಾ. ಚೈತ್ರಾ ವಿ. ಆನಂದ್ ಅವರು ಪ್ರತಿದಿನ ಪುರುಷರು ಚರ್ಮದ ಸಮಸ್ಯೆ ಬಗ್ಗೆ ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಜ್ಞಾವಂತರಾಗುತ್ತಿದ್ದಾರೆ ಎನ್ನುತ್ತಾರೆ.

‘ವಿಶೇಷವಾಗಿ ದ್ವಿಚಕ್ರ ವಾಹನ ಸವಾರರಲ್ಲಿ ಕೆನ್ನೆ ಮತ್ತು ಮೂಗಿನ ಸುತ್ತ ಚರ್ಮ ವಿಕಾರಗೊಳ್ಳುತ್ತದೆ. ಪಿಗ್ಮೆಂಟೇಷನ್ ಹಾಗೂ ಅದರ ಮುಂದುವರಿದ ಸ್ಥಿತಿ ಅದು. ಪಿಗ್ಮೆಂಟೇಷನ್ ಶುರುವಾಗುತ್ತಲೇ ಯುವಕರು ನಮ್ಮನ್ನು ಭೇಟಿಯಾಗುತ್ತಾರೆ. ಈ ಪ್ರಜ್ಞೆ ನಿಜಕ್ಕೂ ಉತ್ತಮ ಬೆಳವಣಿಗೆ' ಎಂಬುದು ಅವರ ಅಭಿಪ್ರಾಯ.

‘ವೈದ್ಯಕೀಯ ಕ್ಷೇತ್ರವೂ ಹೊರತಾಗಿಲ್ಲ’

ಅಪೋಲೊ ಆಸ್ಪತ್ರೆಯಲ್ಲಿ ಕನ್ಸಲ್ಟೆಂಟ್ ಲ್ಯಾಪರೊಸ್ಕೋಪಿಕ್ ಸರ್ಜನ್ ಆಗಿರುವ ಡಾ. ಹರೀಶ್ ಎನ್.ಎಸ್. ಅವರು, ಪರ್ಸನಲ್ ಪ್ರೆಸೆಂಟೇಷನ್‌ಗೆ ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚು ಆದ್ಯತೆ ಇದೆ ಎನ್ನುತ್ತಾರೆ.

ಶಸ್ತ್ರಚಿಕಿತ್ಸಕ ಹಾಗೂ ಪ್ರಾಧ್ಯಾಪಕರೂ ಆಗಿರುವ ಡಾ.ಹರೀಶ್ ಅವರ ಪ್ರಕಾರ, ತಮ್ಮ ನಡೆ ನುಡಿ, ವರ್ತನೆ, ವೇಷಭೂಷಣದಲ್ಲಿ ಶಿಸ್ತು ಇದ್ದರೆ ಅದು ವ್ಯಕ್ತಿತ್ವ ಮತ್ತು ಕೆಲಸದ ಮೇಲೂ ಪರಿಣಾಮ ಬೀರುತ್ತದೆ. ಧರಿಸುವ ಪಾದರಕ್ಷೆಗಳೂ ಶಿಸ್ತಿನ ಸಂಕೇತದಂತಿರಬೇಕು ಎಂದು ಅವರು ವಿವರಿಸುತ್ತಾರೆ.

'ಅಗತ್ಯವಿದ್ದಾಗ ಬ್ಲೇಜರ್, ಟೈ, ಸೂಟು ಧರಿಸುವುದು ನನಗಿಷ್ಟ. ಇದೆಲ್ಲವನ್ನೂ ಫ್ಯಾಷನ್ ಅಥವಾ ಟ್ರೆಂಡ್ ಹೆಸರಿನಲ್ಲಿ ಮಾಡುವುದಿಲ್ಲ. ಬದಲಾಗಿ ಅದು ನಮ್ಮ ಕ್ಷೇತ್ರದ ಶಿಸ್ತಿನ ದ್ಯೋತಕ' ಎಂದು ಅವರು ಸಮರ್ಥಿಸಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT