ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರುಷರ ಫ್ಯಾಷನ್‌ನಲ್ಲಿ ಬಿಳಿ ಉಡುಪು

Last Updated 8 ಅಕ್ಟೋಬರ್ 2021, 19:30 IST
ಅಕ್ಷರ ಗಾತ್ರ

ಬಿಳಿ ಅಥವಾ ಶ್ವೇತವರ್ಣವನ್ನು ಇಷ್ಟಪಡದೇ ಇರುವವರು ಹಲವರು. ಶಾಂತಿಯ ಸಂಕೇತವಾದ ಬಿಳಿ ಬಣ್ಣದ ಉಡುಪು ಎಲ್ಲರಿಗೂ ಹೊಂದುತ್ತದೆ. ಅದರಲ್ಲೂ ಹೆಣ್ಣುಮಕ್ಕಳಿಗಿಂತ ಗಂಡು ಮಕ್ಕಳು ಈ ಬಣ್ಣದ ದಿರಿಸು ತೊಡಲು ಹೆಚ್ಚು ಇಷ್ಟಪಡುತ್ತಾರೆ. ಟಿಪ್‌ಟಾಪ್‌ ಆಗಿ ಕಾಣಲು ಬಿಳಿ ಬಣ್ಣ ಹೆಚ್ಚು ಸೂಕ್ತ. ಬಿಳಿ ಬಣ್ಣ ಯೂನಿವರ್ಸಲ್ ಬಣ್ಣವಾದ ಕಾರಣ ಇದನ್ನು ಎಲ್ಲದರ ಜೊತೆ ಮಿಕ್ಸ್ ಅಂಡ್ ಮ್ಯಾಚ್ ಮಾಡಿಕೊಳ್ಳಬಹುದು. ಈ ಉಡುಪು ಧರಿಸುವುದರಿಂದ ದೇಹವು ತಣ್ಣಗಿರುತ್ತದೆ. ಇದು ಉಷ್ಣಾಂಶವು ನೇರವಾಗಿ ದೇಹವನ್ನು ತಾಕುವುದನ್ನು ತಡೆಯುತ್ತದೆ.

ಬಿಳಿಯೊಂದಿಗೆ ಬಿಳಿ

ಅಡಿಯಿಂದ ಮುಡಿಯವರೆಗೆ ಸಂಪೂರ್ಣವಾಗಿ ಬಿಳಿ ಬಣ್ಣ ಧರಿಸುವುದರಿಂದ ಅಂದವಾಗಿ ಕಾಣಬಹುದು. ಹಾಲು ಬಿಳುಪು ಹಾಗೂ ತಿಳಿ ಬಿಳಿ ಬಣ್ಣ ಇರುವವರಿಗೆ ಈ ರಂಗಿನ ದಿರಿಸು ಹೆಚ್ಚು ಒಪ್ಪುತ್ತದೆ. ಬಿಳಿ ಬಣ್ಣದ ಟೀ–ಶರ್ಟ್‌, ಶರ್ಟ್‌, ಪೈಜಾಮ, ಪ್ಯಾಂಟ್‌ ಅಥವಾ ಟ್ರ್ಯಾಕ್‌ ಸೂಟ್... ಹೀಗೆ ಸಂಪೂರ್ಣ ಬಿಳಿ ಬಣ್ಣದ ಉಡುಪನ್ನೇ ಧರಿಸಬಹುದು. ಇದರೊಂದಿಗೆ ಎರಡು ಭಿನ್ನ ಛಾಯೆ ಇರುವ ಡ್ರೆಸ್‌ ಅನ್ನು ಮ್ಯಾಚ್ ಮಾಡಿಕೊಳ್ಳಬಹುದು.

ಒಳ ಉಡುಪುಗಳು

ಬಳಿ ಬಣ್ಣದ ಒಳ ಉಡುಪುಗಳನ್ನು ಸದಾ ಕಾಟನ್ ಬಟ್ಟೆಯಲ್ಲಿ ತಯಾರಿಸುವುದರಿಂದ ಇದನ್ನು ಧರಿಸಿದರೆ ದೇಹಕ್ಕೆ ಆರಾಮದಾಯಕ ಎನಿಸುತ್ತದೆ. ಅಲ್ಲದೇ ಇದು ಚರ್ಮವು ಉಸಿರಾಡಲು ಸುಲಭವಾಗುವಂತೆ ಮಾಡುತ್ತದೆ.

ಬಿಳಿ ಬನಿಯನ್‌

ಕಟ್ಟಡ ಕಾಮಗಾರಿ ಕೆಲಸ ಮಾಡುವ ಮಂದಿ ಹೆಚ್ಚಾಗಿ ಬಳಿ ಬಣ್ಣದ ಅರ್ಧ ತೋಳಿನ ಬನಿಯನ್ ಧರಿಸುತ್ತಿದ್ದರು. ಇದರಿಂದ ಬಿಳಿಯ ಬನಿಯನ್‌ ಇಂದು ಹೆಚ್ಚು ಪ್ರಚಲಿತದಲ್ಲಿದೆ. ಮನೆಯಲ್ಲಿ ಧರಿಸಲು, ಜಿಮ್‌ನಲ್ಲಿ, ರನ್ನಿಂಗ್ ಮಾಡುವಾಗ ವಿವಿಧ ವಿನ್ಯಾಸದ ಬಿಳಿ ಬನಿಯನ್ ಅನ್ನು ಧರಿಸುವುದು ಟ್ರೆಂಡ್ ಆಗಿದೆ. ಆ ಮೂಲಕ ಹಳೆಯ ಟ್ರೆಂಡ್‌ಗೆ ಮರುಜೀವ ನೀಡಲಾಗಿದೆ.

ಬಿಳಿ ಬಣ್ಣದ ದಿರಿಸನ್ನು ಕೇವಲ ಕಚೇರಿಗಷ್ಟೇ ಧರಿಸಬೇಕು ಎಂಬ ಅಭ್ಯಾಸ ಈಗಿಲ್ಲ. ವಾರಾಂತ್ಯದಲ್ಲಿ, ಸಂಜೆ ಪಾರ್ಟಿ ಸೇರಿದಂತೆ ವಿವಿಧೆಡೆಗೆ ಧರಿಸಲು ಹೆಚ್ಚು ಸೂಕ್ತ ಎನ್ನಿಸುತ್ತದೆ. ಪಿಕ್‌ನಿಕ್‌, ಬೀಚ್‌ನಲ್ಲಿ ಧರಿಸಲೂ ಬಿಳಿಯ ಉಡು‍ಪು ಹೆಚ್ಚು ಸೂಕ್ತ. ಬೀಚ್‌ನಲ್ಲಿ ಧರಿಸಲು ಬಿಳಿ ಪೈಜಾಮ ಹಾಗೂ ಅರ್ಧ ತೆರೆದಂತಿರುವ ಕತ್ತಿನ ಶರ್ಟ್ ಧರಿಸುವುದು ಉತ್ತಮ. ಪೈಜಾಮ, ಪ್ಯಾಂಟ್ ಹಾಗೂ ಶರ್ಟ್ ಅನ್ನು ಹಗುರವಾದ ಹತ್ತಿಯ ಬಟ್ಟೆಯಲ್ಲಿ ಮಾಡಿರುವುದರಿಂದ ಧರಿಸಿದಾಗ ಹಿತ ಎನ್ನಿಸುತ್ತದೆ.

ಟೀ ಶರ್ಟ್

ಬಿಳಿಯ ಟೀ ಶರ್ಟ್ ಅನ್ನು ಹಿಂದಿನಿಂದಲೂ ಹೆಚ್ಚು ಮಂದಿ ಇಷ್ಟಪಡುತ್ತಿದ್ದರು. ರೌಂಡ್‌ ನೆಕ್‌, ವಿ ಆಕಾರದ ನೆಕ್‌.. ಹೀಗೆ ವಿವಿಧ ರೂಪದ ಟೀ ಶರ್ಟ್‌ಗಳು ಜೀನ್ಸ್ ಜೊತೆ ತೊಡಲು ಸೂಕ್ತ. ಇದನ್ನು ಜಾಕೆಟ್‌ ಅಥವಾ ಸೆಮಿ ಫಾರ್ಮಲ್‌ ಉಡುಪಿನ ಜೊತೆಗೂ ಧರಿಸಬಹುದು.

ಕ್ಯಾಷುವಲ್ ಶರ್ಟ್

ಬಹುಶಃ ಬಿಳಿಯ ಶರ್ಟ್ ಅನ್ನು ತಮ್ಮ ಉಡುಪಿನ ಸಂಗ್ರಹದಲ್ಲಿ ಇಟ್ಟುಕೊಳ್ಳದ ಪುರುಷರು ಬಹಳ ಕಡಿಮೆ ಎನ್ನಬಹುದು. ಇದು ಪುರುಷರಿಗೆ ಅಗತ್ಯ ವಸ್ತುಗಳಲ್ಲಿ ಒಂದು ಎಂದರೂ ತಪ್ಪಾಗಲಿಕ್ಕಿಲ್ಲ. ಇದನ್ನು ಜೀನ್ಸ್, ಫಾರ್ಮಲ್ ಪ್ಯಾಂಟ್ ಹೀಗೆ ಎಲ್ಲದರ ಜೊತೆ ಧರಿಸಬಹುದು.

ಬಿಳಿ ಡೆನಿಮ್ ಜಾಕೆಟ್‌

ಬಿಳಿ ಡೆನಿಮ್ ಜಾಕೆಟ್ ಇಂದಿನ ಟ್ರೆಂಡ್‌. ಸಂ‍ಪೂರ್ಣ ಬಿಳಿ ಬಣ್ಣದೊಂದಿಗೆ ಕಪ್ಪು ಪಟ್ಟಿ ಇರುವ ಜಾಕೆಟ್ ಧರಿಸುವುದರಿಂದ ಟ್ರೆಂಡಿ ಆಗಿ ಕಾಣಿಸಬಹುದು. ಅದನ್ನು ಜೀನ್ಸ್, ಕಾರ್ಗೋ ಪ್ಯಾಂಟ್‌ ಸೇರಿದಂತೆ ಕ್ಯಾಷುವಲ್ ಪ್ಯಾಂಟ್ ಜೊತೆಗೂ ಧರಿಸಬಹುದು.

ಸಾಂಪ್ರದಾಯಿಕ ಉಡುಪು

ಬಿಯ ಕುರ್ತಾ ಪೈಜಾಮವನ್ನು ಸಾಂಪ್ರದಾಯಿಕ ಉಡುಪಾಗಿಯೂ ಪರಿಗಣಿಸಲಾಗಿದೆ. ಇದರೊಂದಿಗೆ ಧೋತಿ ಅಥವಾ ಬಳಿ ಬಣ್ಣದ ಪಂಚೆಯನ್ನೂ ತೊಡಬಹುದು. ಇದರಿಂದ ಹೊಸ ಟ್ರೆಂಡ್ ಸೃಷ್ಟಿಸಬಹುದು.

ಬಿಳಿ ಬಣ್ಣದ ಜೀನ್ಸ್

ಸಂಪೂರ್ಣ ಶ್ವೇತಮಯವಾದ ಜೀನ್ಸ್ ಧರಿಸುವುದು ಸುಲಭ. ಆದರೆ ಅದನ್ನು ಧರಿಸಿದ ಮೇಲೆ ಕಲೆಯಾಗದಂತೆ ಕಾಪಾಡಿಕೊಳ್ಳುವುದು ಕಷ್ಟ. ಇದನ್ನು ಬಳಿ ಅಥವಾ ಕಪ್ಪು ಬಣ್ಣದ ಶರ್ಟ್‌ನೊಂದಿಗೆ ಧರಿಸುವುದರಿಂದ ಅಂದವಾಗಿ ಕಾಣಬಹುದು. ಇದರೊಂದಿಗೆ ಚಿತ್ತಾರವಿಲ್ಲದ ಅಥವಾ ಅಲ್ಲಲ್ಲಿ ಚಿತ್ತಾರವಿರುವ, ಶರ್ಟ್‌ನೊಂದಿಗೆ ಧರಿಸಬಹುದು.

ಬಿಳಿ ಚಪ್ಪಲಿ ಅಥವಾ ಶೂ

ಬಿಳಿ ಬಣ್ಣದ ಚಪ್ಪಲಿ ಅಥವಾ ಶೂ ಧರಿಸುವುದರಿಂದ ನಮ್ಮ ನೋಟವೇ ಬದಲಾಗುತ್ತದೆ. ಮದುವೆ, ಮುಂಜಿಯಂತಹ ಕಾರ್ಯಕ್ರಮ ಮಾತ್ರವಲ್ಲದೇ ನೈಟ್ ಪಾರ್ಟಿಯಂತಹ ಕಾರ್ಯಕ್ರಮಕ್ಕೂ ಬಿಳಿ ಬಣ್ಣದ ಶೂ ಹೊಂದುತ್ತದೆ. ಯಾವುದೇ ಬಣ್ಣದ ಜೀನ್ಸ್‌ನೊಂದಿಗೆ ಬಿಳಿ ಶರ್ಟ್‌, ಟೀ ಶರ್ಟ್ ಧರಿಸಿದಾಗ ಈ ಶೂ ಹೆಚ್ಚು ಸೂಕ್ತ ಎನ್ನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT