ಶುಕ್ರವಾರ, ಆಗಸ್ಟ್ 12, 2022
20 °C

ಆರೋಗ್ಯಕ್ಕೂ ಸೈ, ಅಂದಕ್ಕೂ ಜೈ

ಪವನ ಎಚ್‌.ಎಸ್‌ Updated:

ಅಕ್ಷರ ಗಾತ್ರ : | |

ಸಲ್ಮಾನ್‌ ಖಾನ್

ಫ್ಯಾಷನ್‌ ಕ್ಷೇತ್ರ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಇಂದು ಒಂದು ರೀತಿಯ ಫ್ಯಾಷನ್‌ ಇದ್ದರೆ ನಾಳೆಗೆ ಆ ಟ್ರೆಂಟ್‌ ಹಳೆಯದಾಗಿರುತ್ತದೆ. ಆದರೆ, ಕೆಲವೊಂದು ಟ್ರೆಂಡ್‌ಗಳು ಫ್ಯಾಷನ್‌ನೊಂದಿಗೆ ಆರೋಗ್ಯ ಕಾಪಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತವೆ. ಅದರಲ್ಲಿ ಸನ್‌ಗ್ಲಾಸ್‌ ಸಹ ಒಂದು.

ಆಕರ್ಷಕ ಸನ್‌ಗ್ಲಾಸ್ ಮೋಹಕ್ಕೆ ಮರುಳಾಗಿ ಫ್ಯಾಷನ್ ಪ್ರಿಯರು ಅದನ್ನು ಖರೀದಿಸುತ್ತಾರೆ. ಆದರೆ, ಅದರ ಬಳಕೆ ಆರಂಭವಾಗಿದ್ದು, ಕಣ್ಣಿನ ರಕ್ಷಣೆಯ ದೃಷ್ಟಿಯಿಂದ ಎಂಬುದು ಅನೇಕ ಮಂದಿಗೆ ತಿಳಿದಿಲ್ಲ.

ಕಣ್ಣಿನ ವಿಷಯದಲ್ಲಿ ನಾವು ಎಷ್ಟು ಜಾಗೃತವಾಗಿದ್ದರೂ ಸಾಲದು. ಪಂಚೇಂದ್ರಿಯಗಳಲ್ಲಿ ಮುಖ್ಯವಾಗಿರುವ ನೇತ್ರಗಳಿಗೆ ಸಣ್ಣ ತೊಂದರೆಯಾದರೆ ಸಾಕು, ನಾವು ಜೀವಮಾನ ಪೂರ್ತಿ ಕತ್ತಲೆಯಲ್ಲೇ ಕಾಲ ಕಳೆಯಬೇಕಾದ ಪರಿಸ್ಥಿತಿ ಎದುರಾಗಬಹುದು. ಆ ನಿಟ್ಟಿನಲ್ಲಿ ಕನ್ನಡಕ ಬಳಕೆ ಪ್ರಮುಖ ಪಾತ್ರ ವಹಿಸುತ್ತದೆ.

ಸೂಕ್ಣ್ಮ ದೂಳಿನ ಕಣಗಳಿಂದ ಕಣ್ಣನ್ನು ಕಾಪಾಡಿಕೊಳ್ಳುವ ಸಲುವಾಗಿ ಅನೇಕ ಮಂದಿ ಸನ್‌ಗ್ಲಾಸ್ ಧರಿಸುತ್ತಾರೆ. ಅದಕ್ಕಿಂತಲೂ ಮುಖ್ಯವಾಗಿ ನೇರಳಾತೀತ ಕಿರಣಗಳಿಂದ ಹಾಗೂ ಪ್ರಖರ ಬೆಳಕಿನಿಂದ ನೇತ್ರ ರಕ್ಷಣೆಗೆ ಸನ್‌ಗ್ಲಾಸ್ ಬಳಸಲಾಗುತ್ತಿದೆ. ಕಣ್ಣಿನ ಸುತ್ತ ಉಂಟಾಗಿರುವ ಸುಕ್ಕುಗಳನ್ನು ಮರೆಮಾಚಲೂ ಕೆಲವರು ಸನ್‌ಗ್ಲಾಸ್‌ ಧರಿಸುತ್ತಾರೆ.

ಸ್ತ್ರೀ-ಪುರುಷರೆಂಬ ಭೇದವಿಲ್ಲದೆ ಇಂದು ಎಲ್ಲರೂ ಕನ್ನಡಕ ಪ್ರಿಯರೇ. ಆ ನಿಟ್ಟಿನಲ್ಲಿ ವಿವಿಧ ವಯೋಮಾನದವರಿಗೆ, ಪುರುಷರಿಗೆ, ಮಹಿಳೆಯರಿಗೆ ಮಕ್ಕಳಿಗೆ ಎಂದೇ ಪ್ರತ್ಯೇಕ ವಿನ್ಯಾಸದ ಏವಿಯೇಟರ್, ಪೋಲರೈಸ್ಡ್ , ಪ್ಲಾಸ್ಟಿಕ್ ಏಸಿಯೇಟ್ ಮಾದರಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಸನ್‌ಗ್ಲಾಸ್‌ಗಳ ತಯಾರಿಕಾ ಕಂಪನಿಗಳಲ್ಲೂ ಸ್ಪರ್ಧೆ ಏರ್ಪಟ್ಟಿರುವುದರಿಂದ ನವ ನವೀನ ಮಾದರಿಯ ವಿನ್ಯಾಸ, ಬಣ್ಣಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ. ರೇಬಾನ್, ಫಾಸ್ಟ್‌ಟ್ರ್ಯಾಕ್, ಆಕ್ಲೆ, ಟೈಟಾನ್ ಗ್ಲೇರ್, ಐಡೀ, ವೋಗ್‌, ಪ್ರಾಡಾ, ಜೊ ಬ್ಲ್ಯಾಕ್‌, ಫ್ಯಾರನ್‌ಹೀಟ್‌, ಗುಚಿ, ವಿನ್ಸೆಂಟ್‌ ಚೇಸ್‌ನಂತಹ ಪ್ರತಿಷ್ಠಿತ ಕಂಪನಿಗಳ ಸನ್‌ಗ್ಲಾಸ್‌ಗಳಿಗೆ ಜನ ಮಾರುಹೋಗಿದ್ದಾರೆ. ಅಲ್ಲದೆ, ಸಾವಿರಾರು ಕಂಪನಿಗಳು ತರಹೇವಾರಿ ಬೆಲೆಯಲ್ಲಿ ಗ್ಲಾಸ್‌ಗಳನ್ನು ಬಿಡುಗಡೆ ಮಾಡಿವೆ. ಹಾಗಂತ, ಫ್ಯಾಷನ್ ನೆಪದಲ್ಲಿ ನಾವು ಆರೋಗ್ಯದ ವಿಚಾರದಲ್ಲಿ ರಾಜಿ ಮಾಡಕೊಳ್ಳಬಾರದು. ರಸ್ತೆಯ ಬದಿಯಲ್ಲಿ ಕಡಿಮೆ ಬೆಲೆಗೆ ದೊರಕಿತು ಎಂದೋ ಅವುಗಳನ್ನು ಖರಿದಿಸಲೇ ಬಾರದು. ಇದರಿಂದ ಕಣ್ಣಿಗೆ ಹಾನಿಯಾಗುವ ಸಾಧ್ಯತೆಗಳೂ ಹೆಚ್ಚು.

ಮುಖದ ಆಕಾರಕ್ಕೆ, ಬಟ್ಟೆಗಳಿಗೆ ಹೊಂದುವ ಗ್ಲಾಸ್‌ಗಳು ಲಭ್ಯವಿದೆ. ಆದರೆ, ಸರಿಯಾದ ಫಿಟ್ಟಿಂಗ್‌ ಇರುವುದನ್ನು ಖರೀದಿಸಿದರೆ ಉತ್ತಮ. ಕಣ್ಣಿನ ರೆಪ್ಪೆಗಳು ಗ್ಲಾಸ್‌ಗೆ ತಾಗದಂತೆ ನೋಡಿಕೊಳ್ಳುವುದು ಅತ್ಯಗತ್ಯ. ಹೆಚ್ಚು ಭಾರವಾಗಿರದೆ ಹಗುರವಾಗಿದ್ದರೆ ಮೂಗು ಹಾಗೂ ಕಿವಿಗೆ ನೋವುಂಟಾಗುವ ಸಾಧ್ಯತೆ ಇರುವುದಿಲ್ಲ. ಅಂತೆಯೇ, ನೋಡಲು ಚೆನ್ನಾಗಿ ಕಾಣುತ್ತವೆ ಎನ್ನುವ ದೃಷ್ಟಿಯಿಂದ ಗಾಢಬಣ್ಣದ ಗ್ಲಾಸ್‌ ಧರಿಸಿದರೆ ನೋಟದಲ್ಲೇ ವ್ಯತ್ಯಾಸವಾಗಬಹುದು. ಅಂದರೆ, ಗ್ಲಾಸ್‌ ಮೂಲಕ ಹೊರಗೆ ನೋಡಿದರೆ ಬಣ್ಣದಲ್ಲಿ ವ್ಯತ್ಯಾಸವಾಗುತ್ತದೆ.

ಚೌಕ ಮುಖ ಹೊಂದಿರುವವರು ರೌಂಡ್‌ ಫ್ರೇಮ್‌, ಹಾಗೂ ಉದ್ದ ಮುಖದವರಿಗೆ ಚೌಕದ ಫ್ರೇಮ್‌ ಆಯ್ಕೆ ಸೂಕ್ತ. ಸನ್‌ ಗ್ಲಾಸ್‌ ಜಾಸ್ತಿ ದೊಡ್ಡದೂ ಆಗಿರದೆ ಚಿಕ್ಕದೂ ಆಗಿರದೆ ನಿಮ್ಮ ಮುಖಕ್ಕೆ ಒಪ್ಪುವಂತಿದ್ದರೆ ನೋಡಲೂ ಸುಂದರ. ಕಣ್ಣಿನ ರಕ್ಷಣೆಯೂ ಸಾಕಾರ.

ಸನ್‌ಗ್ಲಾಸ್‌ ಇತಿಹಾಸದ ಇಣುಕು ನೋಟ...

12ನೇ ಶತಮಾನದಲ್ಲಿಯೇ ಚೀನಾದಲ್ಲಿ ಸನ್‌ಗ್ಲಾಸ್‌ ಬಳಸಲಾಗುತ್ತಿತ್ತು. ಅಲ್ಲಿನ ನ್ಯಾಯಾಧೀಶರು ತಮ್ಮ ಭಾವನೆಗಳನ್ನು ಮರೆಮಾಚುವುದಕ್ಕಾಗಿ ಸ್ಫಟಿಕ ಶಿಲೆಗಳಿಂದ ಮಾಡಿದ ಸನ್‌ಗ್ಲಾಸ್‌ ಬಳಸುತ್ತಿದ್ದರು ಎಂದು ಇತಿಹಾಸ ಹೇಳುತ್ತದೆ.

ಉದ್ಯಮಿ ಸ್ಯಾಮ್‌ ಫೋಸ್ಟರ್‌ 1929ರಲ್ಲಿ ಮೊದಲ ಬಾರಿಗೆ ಸೆಲ್ಯುಲಾಯ್ಡ್‌ ಸನ್‌ಗ್ಲಾಸ್‌ ತಯಾರಿಸಿ ಮಾರಾಟ ಮಾಡಿದರು. ಬಳಿಕ ಹಾಲಿವುಡ್‌ ತಾರೆಯರು ಅದನ್ನು ಬಳಸಲು ಮುಂದಾದರು. ನಂತರದ ದಿನಗಳಲ್ಲಿ ಅನೇಕರು ಸುಧಾರಿತ ಸನ್‌ಗ್ಲಾಸ್‌ಗಳನ್ನು ತಯಾರಿಸಿದರು. ಅಂತೆಯೇ, ವಿಶ್ವದಾದ್ಯಂತ ಸನ್‌ಗ್ಲಾಸ್‌ಗಳ ಬಳಕೆ ಆರಂಭವಾಯಿತು. ಈಗ ಸನ್‌ಗ್ಲಾಸ್‌ ತಯಾರಿಕೆ ಒಂದು ಉದ್ಯಮವಾಗಿ ಮಾರ್ಪಟ್ಟಿದ್ದು, ನಿರಂತರವಾಗಿ ವಿವಿಧ ಸಂಶೋಧನೆಗಳು ನಡೆಯುತ್ತಲೇ ಇವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು