ಹೆಣ್ಣುಮಕ್ಕಳಿಗೆ ತಮ್ಮ ಮುಖದ ಅಂದದ ಮೇಲೆ ವಿಶೇಷ ಕಾಳಜಿ. ಆದರೆ, ಕೆಲವೊಮ್ಮೆ ಅವರಿಗೆ ಅರಿಯದಂತೆಯೇ ಮುಖದ ಮೇಲೆ ಕಪ್ಪುಕಲೆಗಳು ಮೂಡುತ್ತವೆ. ಮುಖದ ಮೇಲೆ ಕಾಣಿಸಿಕೊಳ್ಳುವ ಈ ಕಪ್ಪುಕಲೆಗೆ ಹೈಪರ್‌ಪಿಗ್ಮೆಂಟೇಷನ್ ಎನ್ನುತ್ತಾರೆ. ಮೆಲನಿನ್ ಅಂಶದ ಅತಿ ಉತ್ಪತ್ತಿಯಿಂದಲೂ ಹೈಪರ್ ಪಿಗ್ಮೆಂಟೇಷನ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಅತಿಯಾಗಿ ಸೂರ್ಯನ ಕಿರಣಗಳಿಗೆ ಚರ್ಮವನ್ನು ಒಡ್ಡುವ ಕಾರಣದಿಂದ ಕಾಲು, ಕೈ ಹಾಗೂ ಮುಖದ ಚರ್ಮದಲ್ಲಿ ಪಿಗ್ಮೆಂಟೇಷನ್ ಕಾಣಿಸಿಕೊಳ್ಳುತ್ತದೆ. ಇದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ, ನಮ್ಮ ಬಾಹ್ಯ ಸೌಂದರ್ಯವನ್ನು ಕೆಡಿಸುತ್ತದೆ. ಆ ಕಾರಣಕ್ಕೆ ಮನೆಯಲ್ಲೇ ಸಿಗುವ ಕೆಲವು ನೈಸರ್ಗಿಕ ವಸ್ತುಗಳಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅಲ್ಲದೇ ಇದರಿಂದ ಚರ್ಮಕ್ಕೂ ಹಾನಿಯಿಲ್ಲ.
ನಿಂಬೆರಸ
ನಿಂಬೆರಸದಲ್ಲಿ ಸಿಟ್ರಿಕ್ ಆ್ಯಸಿಡ್ ಅಂಶ ಅಧಿಕವಿದೆ. ಇದು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ನಿಂಬೆರಸವು ಚರ್ಮದ ಕಪ್ಪುಕಲೆಗಳನ್ನು ನಿವಾರಿಸುತ್ತದೆ. ಅಲ್ಲದೇ ಚರ್ಮ ಹೊಳೆಯುವಂತೆ ಮಾಡುತ್ತದೆ. ನೀರಿನಲ್ಲಿ 2 ಚಮಚ ನಿಂಬೆರಸ ಕಲೆಸಿ ಕಲೆಗಳಿರುವ ಜಾಗದಲ್ಲಿ ಹಚ್ಚಿ. 15 ನಿಮಿಷ ಬಿಟ್ಟು ತಣ್ಣೀರಿನಿಂದ ಮುಖ ತೊಳೆಯಿರಿ. ಒಂದು ತಿಂಗಳ ಕಾಲ ಈ ರೀತಿ ಮಾಡುವುದರಿಂದ ಚರ್ಮದ ಅಂದ ಹೆಚ್ಚುವುದಲ್ಲದೇ ಕಲೆಗಳು ಮಾಯವಾಗುತ್ತವೆ.
ಆಲೂಗೆಡ್ಡೆ
ಆಲೂಗೆಡ್ಡೆಯಲ್ಲಿರುವ ಟೈರೋಸಿನೇಸ್ ಅಂಶವು ತಾಮ್ರದ ಅಂಶದ ಉತ್ಪತ್ತಿಯನ್ನು ಕಡಿಮೆ ಮಾಡುತ್ತದೆ. ಟೈರೋಸಿನೇಸ್ ಅಂಶವು ಮೆಲಸ್ಮಾದಂತಹ ಹೈಪರ್‌ಪಿಗ್ಮೆಂಟೇಷನ್ ಹೆಚ್ಚಲು ಕಾರಣವಾಗುತ್ತದೆ. ಅದಕ್ಕೆ ಆಲೂಗೆಡ್ಡೆಯನ್ನು ತುರಿದು, ಅದರ ರಸ ತೆಗೆದು ಚರ್ಮಕ್ಕೆ ಹಚ್ಚಬೇಕು. ಆ ರಸ ಚೆನ್ನಾಗಿ ಒಣಗಿದ ಮೇಲೆ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಬೇಕು.
ಅರಿಸಿನ
ಅರಿಸಿನದಲ್ಲಿರುವ ಕರ್ಕ್ಯುಮಿನ್ ಅಂಶವು ಚರ್ಮದಲ್ಲಿ ಮೆಲನೊಮ ಕೋಶಗಳ ಸ್ರವಿಕೆಯನ್ನು ಕಡಿಮೆ ಮಾಡಿ ಕಪ್ಪುಕಲೆಗಳನ್ನು ನಿವಾರಿಸುತ್ತದೆ.ಹೈಪರ್‌ಪಿಗ್ಮೆಂಟೇಷನ್ ಕಡಿಮೆಯಾಗಲು 1 ಟೀ ಚಮಚ ಅರಿಸಿನಕ್ಕೆ ಅರ್ಧ ಟೀ ಚಮಚ ನಿಂಬೆರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಪಿಗ್ಮೆಂಟೇಷನ್ ಆಗಿರುವ ಕಡೆ ಹಚ್ಚಬೇಕು. ಒಣಗಿದ ಮೇಲೆ ತಣ್ಣೀರಿನಿಂದ ಮುಖ ತೊಳೆಯಬೇಕು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.