ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳಿತಾಯ ಖಾತೆಗೆ ಶೇ 4 ಬಡ್ಡಿ

Last Updated 3 ಮೇ 2011, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಬ್ಯಾಂಕ್‌ಗಳ ಉಳಿತಾಯ ಖಾತೆಗಳಲ್ಲಿನ ಹಣಕ್ಕೆ ಆರ್‌ಬಿಐ ಶೇ 0.5ರಷ್ಟು ಬಡ್ಡಿ ಹೆಚ್ಚಿಸಿರುವುದರಿಂದ ಇನ್ನು ಮುಂದೆ ಈ ಉಳಿತಾಯಕ್ಕೆ ಶೇ 4ರಷ್ಟು ಬಡ್ಡಿ ದೊರೆಯಲಿದೆ.

ಉಳಿತಾಯ ಖಾತೆಯಲ್ಲಿ ಇರುವ ಹಣಕ್ಕೆ 8 ವರ್ಷಗಳ ಹಿಂದೆ ನಿಗದಿಯಾಗಿದ್ದ ಬಡ್ಡಿ ದರವನ್ನೇ  (ಶೇ 3.5) ಬ್ಯಾಂಕ್‌ಗಳು ಇದುವರೆಗೆ ನೀಡುತ್ತ ಬಂದಿವೆ.

ಇದರಿಂದ ಬ್ಯಾಂಕ್‌ಗಳ ಚಾಲ್ತಿ ಖಾತೆ ಮತ್ತು ಉಳಿತಾಯ ಖಾತೆ (ಸಿಎಎಸ್‌ಎ)  ನಿಧಿಗಳ ಮೇಲಿನ ವೆಚ್ಚವೂ ಹೆಚ್ಚಲಿದೆ. ಬ್ಯಾಂಕ್‌ಗಳು ‘ಕಾಸಾ’ ನಿಧಿಗಳಿಂದ ಹೆಚ್ಚು ಪ್ರಯೋಜನ ಪಡೆಯುತ್ತಿವೆ. ಈ ‘ಕಾಸಾ’ ಠೇವಣಿಗಳು  ನಿಶ್ಚಿತ ಠೇವಣಿಗಳಿಗಿಂತ ಹೆಚ್ಚು ಅಗ್ಗವಾಗಿವೆ. ಇನ್ನು ಮುಂದೆ ಇವು ಕೂಡ ದುಬಾರಿಯಾಗಲಿರುವುದರಿಂದ ಬ್ಯಾಂಕ್‌ಗಳು ಈ ಹೊರೆಯನ್ನೂ ವಿವಿಧ ಬಗೆಯ ಸಾಲಗಳ ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸುವ ಮೂಲಕ ಗ್ರಾಹಕರಿಗೆ ವರ್ಗಾಯಿಸುವ ಸಾಧ್ಯತೆಗಳು ಇವೆ.

‘ಎಸ್‌ಬಿ’ ಖಾತೆಗಳ ಬಡ್ಡಿ ದರಗಳನ್ನು  ಆರ್‌ಬಿಐ ಈಗಲೂ ನಿಯಂತ್ರಿಸುತ್ತಿದೆ. ಈ ಬಡ್ಡಿ ದರಗಳನ್ನೂ ನಿಯಂತ್ರಣ ಮುಕ್ತಗೊಳಿಸುವ ಆಲೋಚನೆಯನ್ನು ಸಾರ್ವಜನಿಕ ಚರ್ಚೆಗೆ ಬಿಡುಗಡೆ ಮಾಡಲಾಗಿದೆ.

ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ, ಬಡ್ಡಿ ದರಗಳನ್ನು ಶೇ 3.5ರಿಂದ ಶೇ 4ಕ್ಕೆ ಹೆಚ್ಚಿಸಲು ಮತ್ತು  ಇದು ತಕ್ಷಣದಿಂದ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ‘ಆರ್‌ಬಿಐ’ ಗವರ್ನರ್ ದುವ್ವೆರಿ ಸುಬ್ಬರಾವ್ ಪ್ರಕಟಿಸಿದರು.

ಕೆಲ ಮಟ್ಟಿಗೆ ಈ ದರಗಳನ್ನು ನಿಯಂತ್ರಣ ಮುಕ್ತಗೊಳಿಸಬಹುದು ಎಂದು ಪ್ರಧಾನಿ ಆರ್ಥಿಕ ಸಲಹಾ ಮಂಡಳಿ ಅಧ್ಯಕ್ಷ ಸಿ. ರಂಗರಾಜನ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT