ಗುರುವಾರ , ಸೆಪ್ಟೆಂಬರ್ 23, 2021
27 °C
ಹಿಂದಿನ ವರ್ಷಕ್ಕೆ ಹೋಲಿಸಿದರೆ ಚಿನ್ನಾಭರಣ ಮಾರಾಟ ಶೇ 25ರಷ್ಟು ಏರಿಕೆ

ಅಕ್ಷಯ ತೃತೀಯ: ಹೆಚ್ಚಿದ ಖರೀದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು / ಮುಂಬೈ: ಚಿನ್ನ ಖರೀದಿ ಮೂಲಕ ಸಮೃದ್ಧಿ ಬರಮಾಡಿಕೊಳ್ಳುವ ‘ಅಕ್ಷಯ ತೃತೀಯ’ಕ್ಕೆ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಚಿನ್ನಾಭರಣಗಳ ಬೇಡಿಕೆಯು ಶೇ 25ರಷ್ಟು ಹೆಚ್ಚಾಗಿದೆ ಎಂದು ದೇಶಿ ಚಿನಿವಾರ ಪೇಟೆಯ ಮೂಲಗಳು ಅಂದಾಜಿಸಿವೆ.

ಮೂರು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಚಿನ್ನಾಭರಣ ಅಂಗಡಿಗಳಿಗೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ದಾಂಗುಡಿ ಇಟ್ಟಿದ್ದರು. ಬೆಳಗಿನಿಂದ ಉತ್ತಮ ಆರಂಭ ಕಂಡಿದ್ದ ಖರೀದಿ ವಹಿವಾಟು ಸಂಜೆಯಾಗುತ್ತಿದ್ದಂತೆ ತೀವ್ರಗೊಂಡಿತು.

ಕೆಲವರು ಸಾಂಕೇತಿಕವಾಗಿ ಚಿನ್ನ ಖರೀದಿಸಿದರೆ, ಇನ್ನೂ ಕೆಲವರು ಈ ಮೊದಲೇ ಬುಕಿಂಗ್‌ ಮಾಡಿದ್ದ ಆಭರಣಗಳ ಖರೀದಿಗೆ ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿನ ಚಿನ್ನದ ವಹಿವಾಟು ದೇಶಿ ಮಾರುಕಟ್ಟೆಯ ದ್ವಿತೀಯ ತ್ರೈಮಾಸಿಕದ ಒಂದು ಮೂರಾಂಶದಷ್ಟು ಇರಲಿದೆ ಎಂದು ಅಹ್ಮದಾಬಾದ್‌ನಲ್ಲಿನ ಚಿನ್ನದ ವಹಿವಾಟಿನ ಚಿಂತಕರ ಚಾವಡಿಯಾಗಿರುವ, ‘ಭಾರತದ ಚಿನ್ನದ ನೀತಿ ಕೇಂದ್ರ’ವು ವಿಶ್ಲೇಷಿಸಿದೆ.

ಉತ್ತೇಜಕರ ವರದಿ: ‘ಚಿನ್ನಾಭರಣಗಳ ಖರೀದಿ ಉತ್ಸಾಹದ ಬಗ್ಗೆ ದೇಶದಾದ್ಯಂತ ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಿಂದ ಉತ್ತೇಜಕರ ವರದಿಗಳು ಬಂದಿವೆ. ಚಿನ್ನದ ಬೇಡಿಕೆಯು ಶೇ 25ರಷ್ಟು ಹೆಚ್ಚಳಗೊಂಡಿರುವ ಅಂದಾಜಿದೆ’ ಎಂದು ಅಖಿಲ ಭಾರತ ಚಿನ್ನಾಭರಣ ಮಂಡಳಿ (ಜಿಐಸಿ) ಅಧ್ಯಕ್ಷ ಅನಂತ್‌ ಪದ್ಮನಾಭನ್‌ ಪ್ರತಿಕ್ರಿಯಿಸಿದ್ದಾರೆ.

‘ಬೆಲೆ ಸ್ಥಿರತೆಯ ಕಾರಣಕ್ಕೆ ಗ್ರಾಹಕರು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಚಿನ್ನಾಭರಣಗಳ ಖರೀದಿಗೆ ಹೆಚ್ಚಿನ ಉತ್ಸುಕತೆ ತೋರಿದ್ದಾರೆ. ಈ ಪವಿತ್ರ ದಿನ ಹಗುರ ಆಭರಣಗಳ ಮಾರಾಟ ಹೆಚ್ಚಳಗೊಂಡಿದೆ. ಮದುವೆ ಸೀಸನ್‌ ಕೂಡ ಮಾರಾಟ ಹೆಚ್ಚಲು ಕಾರಣವಾಗಿದೆ’ ಎಂದು ಹೇಳಿದ್ದಾರೆ.

ತಲಾ 10 ಗ್ರಾಂಗಳ ಚಿನ್ನಕ್ಕೆ ಮಾರುಕಟ್ಟೆಯಲ್ಲಿ ₹ 31,800 ರಿಂದ ₹ 32,000 ಬೆಲೆ ಇರುವುದು ಖರೀದಿ ಭರಾಟೆಗೆ ಪೂರಕವಾಗಿದೆ ಎನ್ನುವುದು ವರ್ತಕರ ಅನಿಸಿಕೆಯಾಗಿದೆ.

ಚಿನ್ನಾಭರಣ ಪ್ರಿಯರು, ಅದರಲ್ಲೂ ವಿಶೇಷವಾಗಿ ಮಹಿಳೆಯರು ಚಿನ್ನ, ಬೆಳ್ಳಿ ನಾಣ್ಯ ಮತ್ತು ಹಗುರ ಆಭರಣಗಳನ್ನು ಹೆಚ್ಚಾಗಿ ಖರೀದಿಸಿದ್ದಾರೆ. ವರ್ತಕರು ಆಭರಣಗಳ ತಯಾರಿಕಾ ಶುಲ್ಕದಲ್ಲಿ ಕಡಿತ ಘೋಷಿಸಿರುವುದು ಸೇರಿದಂತೆ ಹತ್ತಾರು ಆಕರ್ಷಕ ಕೊಡುಗೆಗಳನ್ನು ನೀಡಿರುವುದೂ ಗ್ರಾಹಕರನ್ನು ಹೆಚ್ಚಾಗಿ ಸೆಳೆದಿದೆ.

ನೋಟು ರದ್ದತಿ ಮತ್ತು ಜಿಎಸ್‌ಟಿ ಕಾರಣಕ್ಕೆ ಈ ಹಿಂದಿನ ವರ್ಷಗಳಲ್ಲಿ ಈ ದಿನದ ಚಿನ್ನ ಖರೀದಿ ಉತ್ತೇಜಕರವಾಗಿರಲಿಲ್ಲ. 2016ರ ನಂತರ ಇದೇ ಮೊದಲ ಬಾರಿಗೆ ಮಾರಾಟದ ಸ್ವರೂಪದಲ್ಲಿ ಗಣನೀಯ ಚೇತರಿಕೆ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು