ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಬಜೆಟ್‌: ಸೇವಾ ವಲಯಕ್ಕೆ ಆದ್ಯತೆ?

ತೆರಿಗೆ ವಿನಾಯಿತಿ‌ ಮೂಲಕ ನೆರವಿನ‌ ನಿರೀಕ್ಷೆ
Last Updated 29 ಜನವರಿ 2021, 7:28 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಅರ್ಥ ವ್ಯವಸ್ಥೆಯ ಬಹುಮುಖ್ಯ ಭಾಗವಾಗಿರುವ ಸೇವಾ ವಲಯವು ಫೆಬ್ರುವರಿ 1ರಂದು ಮಂಡನೆ ಆಗಲಿರುವ 2021–22ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ವಿಶೇಷ ಆದ್ಯತೆ ಪಡೆದುಕೊಳ್ಳುವ ಸಾಧ್ಯತೆ ಇದೆ. ಕೋವಿಡ್–19 ಕಾರಣದಿಂದಾಗಿ ಹೆಚ್ಚಿನ ತೊಂದರೆಗೆ ಒಳಗಾದ ಪ್ರವಾಸೋದ್ಯಮ, ಹೋಟೆಲ್‌ನಂತಹ ಉದ್ಯಮ ವಲಯಗಳಿಗೆ ಕೆಲವು ತೆರಿಗೆ ವಿನಾಯಿತಿಗಳು ಸಿಗುವ ನಿರೀಕ್ಷೆ ಇದೆ.

ಸಾಂಕ್ರಾಮಿಕದಿಂದಾಗಿ ಹೆಚ್ಚಿನ ತೊಂದರೆಗೆ ಒಳಗಾಗಿದ್ದರೂ, ಸರ್ಕಾರದ ಆದ್ಯತೆ ಇದುವರೆಗೆ ಸಿಗದಿರುವ ಉದ್ಯಮ ವಲಯಗಳಿಗಾಗಿ ನೀತಿಗಳಲ್ಲಿ ತುಸು ಬದಲಾವಣೆ ತರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಉದ್ಯಮ ವಲಯ
ಗಳು ಪುನಶ್ಚೇತನ ಪಡೆದುಕೊಳ್ಳಲು ಸಾಧ್ಯವಾಗುವಂತಹ ವಾತಾವರಣ ಸೃಷ್ಟಿಗೆ ಬಜೆಟ್‌ನಲ್ಲಿ ಗಮನ ನೀಡಬಹುದು ಎನ್ನಲಾಗಿದೆ.

ಪ್ರವಾಸೋದ್ಯಮ ವಲಯಕ್ಕೆ ನೆರವಿನ ಹಸ್ತ ಚಾಚುವ ಉದ್ದೇಶದಿಂದ, ದೇಶದೊಳಗಿನ ಪ್ರವಾಸಗಳಿಗೆ ಆದಾಯ ತೆರಿಗೆ ವಿನಾಯಿತಿಯ ಪ್ರಯೋಜನ ಘೋಷಿಸುವುದು, ಈ ಉದ್ಯಮ ವಲಯಕ್ಕೆ ಎರಡು ವರ್ಷಗಳ ಅವಧಿಗೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡುವ ಸಾಧ್ಯತೆ ಹೆಚ್ಚಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಕೆಲವು ಸೇವೆಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪ್ರಮಾಣದಲ್ಲಿ ಮರುಹೊಂದಾಣಿಕೆ ಮಾಡುವುದು ಕೂಡ ಕೇಂದ್ರ ಸರ್ಕಾರದ ಆದ್ಯತಾ ಪಟ್ಟಿಯಲ್ಲಿ ಇದೆ. ಆದರೆ, ಇದು ಜಿಎಸ್‌ಟಿ ಮಂಡಳಿಯಲ್ಲಿ ಚರ್ಚೆಯಾದ ನಂತರವಷ್ಟೇ ಅಂತಿಮವಾಗಲಿದೆ ಎಂದು ಮೂಲಗಳು ವಿವರಿಸಿವೆ.

‘ಇಡೀ ಸೇವಾ ವಲಯಕ್ಕೆ ನೆರವಾಗುವ ಕ್ರಮಗಳನ್ನು ಸಿದ್ಧಪಡಿಸಲಾಗುತ್ತಿದೆ. ಈ ವಿಚಾರವಾಗಿ ಬೇರೆ ಬೇರೆ ಕಡೆಗಳಿಂದ ಮನವಿಗಳು ಕೂಡ ನಮಗೆ ಬಂದಿವೆ. ಇದುವರೆಗೆ ನೆರವು ಲಭ್ಯವಾಗದ, ಸೇವಾ ವಲಯದ ಹೆಚ್ಚಿನ ಉದ್ಯಮಗಳಿಗೆ ಗಣನೀಯ ಪ್ರಮಾಣದ ವಿನಾಯಿತಿ ಸಿಗಲಿದೆ ಎಂಬ ನಿರೀಕ್ಷೆ ಇದೆ’ ಎಂದು ಅಧಿಕಾರಿಯೊಬ್ಬರು ಹೆಸರು ಬಹಿರಂಗಪಡಿಸಬಾರದು ಎಂಬ ಷರತ್ತಿನೊಂದಿಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ಸಾಂಕ್ರಾಮಿಕದ ಕಾರಣದಿಂದಾಗಿ ಕೆಲವು ದೇಶಗಳೊಂದಿಗೆ ಸಂಪರ್ಕ ಸ್ಥಗಿತವಾದ ಪರಿಣಾಮ, ಸೇವಾ ವಲಯಕ್ಕೆ ಏಟುಬಿದ್ದಿದೆ ಎಂದು ಅವರು ಹೇಳಿದರು.

ಭಾರತದಲ್ಲಿ ಸೃಷ್ಟಿಯಾಗುವ ಉದ್ಯೋಗಗಳಲ್ಲಿ ಸೇವಾ ವಲಯದ ಕೊಡುಗೆ ಶೇಕಡ 44ರಷ್ಟಿದೆ. ‘ಭಾರತೀಯ ಹೋಟೆಲ್ ಮತ್ತು ರೆಸ್ಟಾರೆಂಟ್ ಸಂಘಟನೆಗಳ ಒಕ್ಕೂಟ’ವು (ಎಫ್‌ಎಚ್‌ಆರ್‌ಎಐ) 2021ರ ಏಪ್ರಿಲ್‌ನಿಂದ ಆರಂಭವಾಗುವಂತೆ ಮೂರು ವರ್ಷಗಳ ಅವಧಿಗೆ ‘ಕನಿಷ್ಠ ಪರ್ಯಾಯ ತೆರಿಗೆ’ಯಿಂದ (ಎಂಎಟಿ) ವಿನಾಯಿತಿ ಕಲ್ಪಿಸುವಂತೆ ಮನವಿ ಮಾಡಿದೆ.

ಇದಲ್ಲದೆ, ವಿದೇಶಗಳಿಂದ ಸಾಲ ಪಡೆಯಲು ಅನುಮತಿ, ವಿಶೇಷ ಆರ್ಥಿಕ ವಲಯಗಳಲ್ಲಿ ಸುಧಾರಣೆ ಮತ್ತು ಸಾಲವನ್ನು ಒಂದು ಬಾರಿಗೆ ಮರುಹೊಂದಾಣಿಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ರೂಪದಲ್ಲಿಯೂ ಸೇವಾ ವಲಯಕ್ಕೆ ನೆರವು ಸಿಗಬಹುದು.

ಆರೋಗ್ಯ ಸೇವಾ ವಲಯಕ್ಕೆ ಕೂಡ ತೆರಿಗೆ ವಿನಾಯಿತಿಗಳು ಸಿಗುವ ನಿರೀಕ್ಷೆ ಇದೆ. ಅಲ್ಲದೆ, ಆಸ್ಪತ್ರೆಗಳು ಮತ್ತು ಡಯಾಗ್ನೊಸ್ಟಿಕ್ಸ್‌ ಕೇಂದ್ರಗಳ ಮೇಲೆ ಹೂಡಿಕೆ ಮಾಡಲು ಉತ್ತೇಜನ ನೀಡುವ ಕ್ರಮಗಳನ್ನು ಕೂಡ ಬಜೆಟ್‌ ಒಳಗೊಂಡಿರುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT