ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್ 2020: ಆದಾಯ ತೆರಿಗೆಯಲ್ಲಿ ಸೀಮಿತ ಕೊಡುಗೆ?

ತೆರಿಗೆ ಸಂಗ್ರಹ ಕೊರತೆ; ವಿತ್ತೀಯ ಶಿಸ್ತು ಕಾಯ್ದುಕೊಳ್ಳುವ ಸವಾಲು
Last Updated 27 ಜನವರಿ 2020, 1:40 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ: ತೆರಿಗೆ ಸಂಗ್ರಹದಲ್ಲಿ ಕೊರತೆ ಬೀಳಲಿರುವುದರಿಂದ ಈ ಬಾರಿಯ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ವೈಯಕ್ತಿಕ ಆದಾಯ ತೆರಿಗೆಯಲ್ಲಿ ಭಾರಿ ಪ್ರಮಾಣದಲ್ಲಿ ವಿನಾಯ್ತಿ ನೀಡುವ ಸಾಧ್ಯತೆ ಕ್ಷೀಣಿಸಿದೆ.

ಆರ್ಥಿಕತೆಯಲ್ಲಿನ ಅಸ್ಥಿರ ಪರಿಸ್ಥಿತಿಯಿಂದಾಗಿ ಉದ್ದೇಶಿತ ತೆರಿಗೆ ಸಂಗ್ರಹದಲ್ಲಿ ₹ 2 ಲಕ್ಷ ಕೋಟಿ ಕೊರತೆ ಬೀಳುವ ಅಂದಾಜು ಮಾಡಲಾಗಿದೆ. ಷೇರು ವಿಕ್ರಯದ ಗುರಿಯೂ ವಿಫಲಗೊಂಡಿದೆ. ಹೀಗಾಗಿ ವೇತನದಾರರಿಗೆ ಅರ್ಥಪೂರ್ಣವಾದ ಕೊಡುಗೆಯನ್ನೇನೂ ನೀಡಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಸಾಧ್ಯವಾಗಲಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ.

ಆರ್ಥಿಕತೆಗೆ ಉತ್ತೇಜನ ನೀಡಲುನಿರ್ಮಲಾ ಅವರು ಸೆಪ್ಟೆಂಬರ್‌ನಲ್ಲಿ ಕಾರ್ಪೊರೇಟ್‌ ತೆರಿಗೆ ದರದಲ್ಲಿ ಕಡಿತ ಮಾಡಿದ್ದರು. ಅದೇ ರೀತಿಯಲ್ಲಿ ವೈಯಕ್ತಿಕ ಆದಾಯ ತೆರಿಗೆ ದರ ಕಡಿತ ಮಾಡಲಿದ್ದಾರೆ ಅಥವಾ ವಿನಾಯ್ತಿ ಮಿತಿ ಹೆಚ್ಚಿಸಲಿದ್ದಾರೆ ಎಂದು ಬಹುವಾಗಿ ನಿರೀಕ್ಷಿಸಲಾಗಿದೆ.

2019–20ರ ಹಣಕಾಸು ವರ್ಷದಲ್ಲಿ ಕಾರ್ಪೊರೇಟ್‌ ಮತ್ತು ಆದಾಯ ತೆರಿಗೆ ಸಂಗ್ರಹ ಗುರಿಯಲ್ಲಿ ₹ 1.5 ಲಕ್ಷ ಕೋಟಿ ಮತ್ತು ಪರೋಕ್ಷ ತೆರಿಗೆಯಲ್ಲಿ ₹ 50 ಸಾವಿರ ಕೋಟಿ ಕೊರತೆ ಬೀಳುವ ಸಾಧ್ಯತೆ ಇದೆ. ಕುಂಠಿತ ಆರ್ಥಿಕ ಪ್ರಗತಿ ಮತ್ತು ಜಿಎಸ್‌ಟಿ ಸಂಗ್ರಹದಲ್ಲಿನ ಕುಸಿತದಿಂದ ತೆರಿಗೆ ಸಂಗ್ರಹವು ಕಡಿಮೆಯಾಗಲಿದೆ.

‘ವಿವಿಧ ಮೂಲಗಳಿಂದ ಕೇಂದ್ರದ ಬೊಕ್ಕಸಕ್ಕೆ ಬರಬೇಕಾದ ವರಮಾನದಲ್ಲಿ ₹ 3.50 ಲಕ್ಷದಿಂದ ₹ 3.75 ಲಕ್ಷ ಕೋಟಿ ಕೊರತೆ ಬೀಳುವ ಅಂದಾಜಿದೆ. ಕೇಂದ್ರದ ತೆರಿಗೆ ಬಾಬತ್ತಿನಲ್ಲಿ ರಾಜ್ಯಗಳಿಗೆ ವರ್ಗಾಯಿಸುವ ಮೊತ್ತವನ್ನು ಕಡಿತಗೊಳಿಸುವ ಸಾಧ್ಯತೆ ಇದೆ’ ಎಂದು ಮಾಜಿ ಹಣಕಾಸು ಕಾರ್ಯದರ್ಶಿ ಎಸ್‌. ಸಿ. ಗರ್ಗ್ ಇತ್ತೀಚೆಗೆ ಹೇಳಿದ್ದರು.

ಉದ್ಯೋಗ ಸೃಷ್ಟಿ ನಿರೀಕ್ಷೆ

2020–21ನೇ ಹಣಕಾಸು ವರ್ಷದ ಬಜೆಟ್‌ನಲ್ಲಿ ನಗರ ಪ್ರದೇಶದಲ್ಲಿನ ಗೃಹ ನಿರ್ಮಾಣ, ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್‌ಎಂಇ), ಸ್ಟಾರ್ಟ್‌ಅಪ್, ರಸ್ತೆ ನಿರ್ಮಾಣ, ರೈಲ್ವೆ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಕೃಷಿ ವಹಿವಾಟಿಗೆ ಹೆಚ್ಚಿನ ಅನುದಾನ ನಿಗದಿಪಡಿಸುವ ಸಾಧ್ಯತೆ ಇದೆ.

ಕುಂಠಿತ ಆರ್ಥಿಕ ಪ್ರಗತಿಗೆ ಚೇತರಿಕೆ ನೀಡಲು ಉದ್ಯೋಗ ಸೃಷ್ಟಿಗೆ ಭಾರಿ ಉತ್ತೇಜನ ನೀಡುವುದು ಸರ್ಕಾರದ ಉದ್ದೇಶವಾಗಿದೆ. ಹೀಗಾಗಿ ಮೂಲ ಸೌಕರ್ಯಗಳಿಗೆ ಹಿಂದಿನ ವರ್ಷಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಜೆಟ್‌ ನೆರವು ನಿಗದಿಪಡಿಸಲಿದೆ. ಹೊಸ ಉದ್ಯೋಗ ಅವಕಾಶ ಸೃಷ್ಟಿಸಲು ‘ಎಂಎಸ್‌ಎಂಇ’ ವಲಯಕ್ಕೆ ಹೆಚ್ಚು ಆದ್ಯತೆ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT