ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Budget 2024: ಬಜೆಟ್‌ನಲ್ಲೂ ಕೇಂದ್ರ, ಬಿಜೆಪಿಗೆ ತಿವಿದ ಸಿದ್ದರಾಮಯ್ಯ

Published 16 ಫೆಬ್ರುವರಿ 2024, 16:05 IST
Last Updated 16 ಫೆಬ್ರುವರಿ 2024, 16:05 IST
ಅಕ್ಷರ ಗಾತ್ರ

ಬೆಂಗಳೂರು: ತೆರಿಗೆ ಪಾಲು ಹಂಚಿಕೆ, ಅನುದಾನ ಮತ್ತು ನೆರವುಗಳ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಬಜೆಟ್‌ನಲ್ಲೂ ವಾಗ್ದಾಳಿ ಮಂದುವರಿಸಿದರು.

ಕೇಂದ್ರ ಸರ್ಕಾರ ಮತ್ತು ಬಿಜೆಪಿಯಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂಬ ಉಲ್ಲೇಖ ಬಜೆಟ್‌ನ ಹಲವೆಡೆ ಇದೆ. ‘ಹಿಂದಿನ ಹತ್ತು ವರ್ಷಗಳ ಅವಧಿಯಲ್ಲಿನ ಕೇಂದ್ರ ಸರ್ಕಾರದ ಜನವಿರೋಧಿ ನಿಲುವುಗಳಿಂದ ಅಸಮಾನತೆ ಹೆಚ್ಚಾಗಿದೆ’ ಎಂದು ಆರಂಭದಲ್ಲೇ ತಿವಿದ ಅವರು, ‘ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ಅದಕ್ಕಾಗಿ ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳ ಮೂಲಕ ಆ ಕೆಲಸವನ್ನು ಕೈಗೆತ್ತಿಕೊಂಡಿದೆ’ ಎಂದರು.

‘ನಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವವರೇ ಗ್ಯಾರಂಟಿಗಳನ್ನು ಕದ್ದು ಅವರ ಗ್ಯಾರಂಟಿಗಳು ಎಂಬುದಾಗಿ ಬಿಂಬಿಸುತ್ತಿರುವುದು ವಿಪರ್ಯಾಸ’ ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದರು.

‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅವೈಜ್ಞಾನಿಕ ಹಂಚಿಕೆಯಿಂದ ಏಳು ವರ್ಷಗಳಲ್ಲಿ ರಾಜ್ಯಕ್ಕೆ ₹59,274 ಕೋಟಿ ನಷ್ಟವಾಗಿದೆ. 15ನೇ ಹಣಕಾಸು ಆಯೋಗದ ಅನುದಾನ ನಿಗದಿಯಲ್ಲೂ ₹62,098 ಕೋಟಿ ನಷ್ಟವಾಗಿದೆ. ಡಬ್ಬಲ್‌ ಎಂಜಿನ್‌ ಎಂದು ಹೇಳಿಕೊಳ್ಳುವ ಸರ್ಕಾರ ಇದ್ದರೂ ರಾಜ್ಯಕ್ಕೆ ನ್ಯಾಯ ದೊರಕಿರಲಿಲ್ಲ’ ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

‘ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ, ₹5,300 ಕೋಟಿ ಅನುದಾನ ಕೊಡುವುದಾಗಿ ಕೇಂದ್ರ ಸರ್ಕಾರ 2023–24ರ ಬಜೆಟ್‌ನಲ್ಲಿ ಘೋಷಿತ್ತು. ಆಗಿನ ರಾಜ್ಯ ಸರ್ಕಾರವು ಪ್ರಧಾನಿಯವರಿಗೆ ತನ್ನ ಬಜೆಟ್‌ನಲ್ಲೇ ಅಭಿನಂದನೆ ಹೇಳಿತ್ತು. ಆದರೆ, ಆ ಭರವಸೆ ಹುಸಿಯಾಗಿಯೇ ಉಳಿದಿದೆ’ ಎಂದು ಟೀಕಾಪ್ರಹಾರ ಮಾಡಿದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಾನವ ದಿನಗಳನ್ನು ಹೆಚ್ಚಿಸದಿರುವುದು, ಬರ ಪರಿಹಾರ ಬಿಡುಗಡೆಯಲ್ಲಿ ವಿಳಂಬ, ಭಾರತೀಯ ಆಹಾರ ನಿಗಮದಿಂದ ಅಕ್ಕಿ ಪೂರೈಕೆಗೆ ನಿರಾಕರಿಸಿರುವ ಸಂಗತಿಗಳನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಿದ ಮುಖ್ಯಮಂತ್ರಿ, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT