ಬೆಂಗಳೂರು: ಜನಸಾಮಾನ್ಯರ ಅನುಕೂಲಕ್ಕಾಗಿ ಚಿಪ್ ಸಹಿತ ಇ ಪಾಸ್‌ಪೋರ್ಟ್‌ಗಳನ್ನು 2022–23ನೇ ಹಣಕಾಸು ವರ್ಷದಿಂದಲೇ ಜಾರಿಗೆ ತರಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಬಜೆಟ್ ಮಂಡಿಸಿದ ಅವರು, ಇ ಪಾಸ್‌ಪೋರ್ಟ್‌ಗಳ ಜತೆಗೆ, ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುವ ಮೂಲಕ ಜನರಿಗೆ ತ್ವರಿತ ಸೇವೆ ನೀಡಲು ವಿದೇಶಾಂಗ ಸಚಿವಾಲಯ ಕ್ರಮ ಕೈಗೊಳ್ಳಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಲಿ. ಜತೆಗಿನ ಒಪ್ಪಂದದ ಮೂಲಕ ಪಾಸ್‌ಪೋರ್ಟ್ ಸೇವಾ ಪ್ರೋಗ್ರಾಮ್ ವ್ಯವಸ್ಥೆಯಡಿ ಚಿಪ್ ಸಹಿತ ಇ ಪಾಸ್‌ಪೋರ್ಟ್ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಹೆಚ್ಚಿನ ಭದ್ರತಾ ವೈಶಿಷ್ಟ್ಯ ಮತ್ತು ಸುಲಲಿತ ಗ್ರಾಹಕ ಅನುಭವ ಇದರಿಂದ ಲಭ್ಯವಾಗಲಿದೆ.
ಬಯೋಮೆಟ್ರಿಕ್ಸ್ ಸುಧಾರಣೆ, ಕೃತಕ ಬುದ್ಧಿಮತ್ತೆ, ಅತ್ಯಾಧುನಿಕ ಡೇಟಾ ಅನಾಲಿಟಿಕ್ಸ್ ಮತ್ತು ಅಟೋ ರೆಸ್ಪಾನ್ಸ್‌ನಂತಹ ವೈಶಿಷ್ಟ್ಯಗಳನ್ನು ವಿದೇಶಾಂಗ ಸಚಿವಾಲಯ ಜಾರಿಗೆ ತರಲಿದ್ದು, ಜನರಿಗೆ ತ್ವರಿತ ಮತ್ತು ಗರಿಷ್ಠ ಸೇವೆಗಳನ್ನು ಒದಗಿಸಲು ಅನುಕೂಲವಾಗಲಿದೆ.