ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ತೆರಿಗೆ ವ್ಯವಸ್ಥೆ: ಪಟ್ಟಿ ಬಿಡುಗಡೆ, ₹ 7 ಲಕ್ಷ ಆದಾಯಕ್ಕೆ ₹ 33,800 ತೆರಿಗೆ

Last Updated 3 ಫೆಬ್ರುವರಿ 2020, 8:41 IST
ಅಕ್ಷರ ಗಾತ್ರ

ನವದೆಹಲಿ:ಭಾನುವಾರ ಹಣಕಾಸು ಸಚಿವಾಲಯ ವಾರ್ಷಿಕ ಆದಾಯ ಮತ್ತು ಅದಕ್ಕೆ ನೀಡಬೇಕಾದ ತೆರಿಗೆಯ ಪಟ್ಟಿ ಬಿಡುಗಡೆ ಮಾಡಿದೆ. ಅದರ ಪ್ರಕಾರ, ₹ 7 ಲಕ್ಷ ವಾರ್ಷಿಕ ಆದಾಯ ಪಡೆಯುವವರು ₹ 33,800 ತೆರಿಗೆ ಪಾವತಿಸಬೇಕಾಗುತ್ತದೆ.

ವಾರ್ಷಿಕ ₹ 8 ಲಕ್ಷ ಆದಾಯ ಹೊಂದಿರುವವರು ₹ 46,800 ತೆರಿಗೆ ಪಾವತಿಸಬೇಕಾಗುತ್ತದೆ. ಹಳೇ ತೆರಿಗೆ ಪದ್ಧತಿಯ ಅನುಸರಿಸಿದರೆ ₹ 8 ಲಕ್ಷ ಆದಾಯವಿರುವ ವ್ಯಕ್ತಿ ಡಿಡಕ್ಷನ್‌ ನಂತರ ₹ 33,800 ತೆರಿಗೆ ಪಾವತಿಸಬೇಕಾಗುತ್ತದೆ.

ಹೊಸ ವೈಯಕ್ತಿಕ ಆದಾಯ ತೆರಿಗೆ ವ್ಯವಸ್ಥೆಯಿಂದ ನಿಜಕ್ಕೂ ಲಾಭವಾಗಿರುವುದು ಯಾರಿಗೆ? ವಾರ್ಷಿಕ ಎಷ್ಟು ಲಕ್ಷ ಗಳಿಕೆ ಇರುವವರಿಗೆ ಹೊಸ ತೆರಿಗೆ ದರ ಉಪಯುಕ್ತ? ಉಳಿತಾಯ, ಹೂಡಿಕೆಗಳ ಮೂಲಕ ವಿನಾಯಿತಿ ಪಡೆದರೆ ಹೊಸ ತೆರಿಗೆ ಅನ್ವಯ ಆಗುವುದಿಲ್ಲವೇ? ಇಂಥ ಎಲ್ಲ ಗೊಂದಲಗಳಿಗೆ ತೆರಿಗೆ ಪಟ್ಟಿಯ ಮೂಲಕ ಸರ್ಕಾರ ಪರಿಹಾರ ನೀಡುವ ಪ್ರಯತ್ನ ಮಾಡಿದೆ. ₹ 12 ಲಕ್ಷ ವಾರ್ಷಿಕ ವೇತನ ಪಡೆಯುವ ವ್ಯಕ್ತಿ ₹ 2 ಲಕ್ಷದಷ್ಟು ಡಿಡಕ್ಷನ್‌ ಪಡೆಯುತ್ತಿದ್ದರೆ ಹೊಸ ತೆರಿಗೆಯಿಂದ ಯಾವುದೇ ಪ್ರಯೋಜನೆ ಆಗುವುದಿಲ್ಲ!

ವಾರ್ಷಿಕ ₹ 13 ಲಕ್ಷದಿಂದ ₹ 32 ಲಕ್ಷ ಆದಾಯ ಪಡೆಯುತ್ತಿರುವವರು ₹ 2 ಲಕ್ಷದಷ್ಟು ಡಿಡಕ್ಷನ್‌ ಆಯ್ಕೆ ಮಾಡಿಕೊಂಡಿದ್ದರೆ, ಹೊಸ ತೆರಿಗೆ ವ್ಯವಸ್ಥೆಯಿಂದ ₹ 5,000ದಿಂದ ₹ 15,600 ವರೆಗೂ ಉಳಿತಾಯ ಮಾಡಬಹುದಾಗಿದೆ.ಸರ್ಕಾರದ ಉನ್ನತ ಮೂಲಗಳಿಂದ ಹೊಸ ತೆರಿಗೆ ವ್ಯವಸ್ಥೆ ಕುರಿತು ಸ್ಪಷ್ಟನೆ ದೊರೆತಿದೆ.

(ಬಿಡುಗಡೆಯಾಗಿರುವ ತೆರಿಗೆ ಪಟ್ಟಿ)

₹ 7.5 ಲಕ್ಷದವರೆಗೂ ವಾರ್ಷಿಕ ಆದಾಯ ಹೊಂದಿರುವ ವ್ಯಾಪಾರಿಗಳು ಹಾಗೂ ವೃತ್ತಿಪರರಿಗೆ ವಿನಾಯಿತಿಗಳ ಜತೆಗೆ ತೆರಿಗೆ ಲಾಭ ಪಡೆಯಲು ಹಳೆಯ ತೆರಿಗೆ ಪದ್ಧತಿ ಅನುಕೂಲಕರವಾಗಿದೆ.

ಪ್ರಸ್ತುತ ಚಾಲ್ತಿಯಲ್ಲಿರುವ ತೆರಿಗೆ ಪದ್ಧತಿ (ಹಳೆಯ ತೆರಿಗೆ ದರ) ಸೆಕ್ಷನ್‌ 80 ಅಡಿಯಲ್ಲಿ ವಿನಾಯಿತಿಗೆ ಅವಕಾಶ ನೀಡಿದ್ದು, ತೆರಿಗೆ ಉಳಿತಾಯ ಸಾಧ್ಯವಾಗಿದೆ. ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌ (ಪಿಪಿಎಫ್‌), ಎನ್‌ಪಿಎಸ್‌ ಹಾಗೂ ಈಕ್ವಿಟಿ ಆಧಾರಿತ ಉಳಿತಾಯ ಯೋಜನೆಗಳ ಮೂಲಕ ತೆರಿಗೆ ವಿನಾಯಿತಿ ಪಡೆಯುವುದು ಸಾಧ್ಯವಿದೆ. 2020–21ರ ಬಜೆಟ್‌ನಲ್ಲಿ ಮಂಡಿಸಲಾಗಿರುವ ತೆರಿಗೆ ವ್ಯವಸ್ಥೆ ಅಡಿಯಲ್ಲಿ ಸೆಕ್ಷನ್‌ 80ಸಿ ಸೇರಿದಂತೆ ಸುಮಾರು 70 ರೀತಿಯ ವಿನಾಯಿತಿ ಆಯ್ಕೆಗಳಿಗೆ ಅವಕಾಶವಿಲ್ಲ.

ಹೊಸ ತೆರಿಗೆ ವ್ಯವಸ್ಥೆಯಿಂದ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಆದಾಯ ತೆರಿಗೆದಾರರಿಗೆ ಹೊಡೆತ ಬೀಳಲಿದೆ ಎಂಬುದನ್ನು ಸರ್ಕಾರ ಒಪ್ಪಲಿಲ್ಲ. ಹೊಸ ತೆರಿಗೆ ವ್ಯವಸ್ಥೆ ಆಯ್ಕೆ ಮಾಡಿಕೊಳ್ಳುವುದು ಲಾಭದಾಯವಾಗಲಿದೆ ಹಾಗೂ ಕಡಿಮೆ ಆದಾಯ ಹೊಂದಿರುವವರಿಗೆ ಹೆಚ್ಚು ಉಪಯುಕ್ತವಾಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಭಾನುವಾರ ಹೇಳಿದ್ದಾರೆ.

₹ 32 ಲಕ್ಷ ವಾರ್ಷಿಕ ಆದಾಯ ಇದ್ದರೆ, ಪ್ರಸ್ತುತ ಸ್ಟಾಂಡರ್ಡ್‌ ಡಿಡಕ್ಷನ್‌ ಕಳೆದು ₹ 7.41 ಲಕ್ಷ ತೆರಿಗೆ ಪಾವತಿಸಬೇಕು. ಹೊಸ ತೆರಿಗೆ ವ್ಯವಸ್ಥೆಯಲ್ಲಿ ₹ 7.25 ಲಕ್ಷ ಪಾವತಿಸಬೇಕಾಗುತ್ತದೆ. ಅಂದರೆ, ₹ 15,600 ಉಳಿತಾಯ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT