ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Union Budget 2024 | ರೂಪಾಯಿಯಲ್ಲಿ ತೆರಿಗೆ ಪಾಲು 63 ಪೈಸೆ

Published 1 ಫೆಬ್ರುವರಿ 2024, 10:58 IST
Last Updated 1 ಫೆಬ್ರುವರಿ 2024, 10:58 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರದ ಬೊಕ್ಕಸ ಸೇರುವ ಪ್ರತಿ ಒಂದು ರೂಪಾಯಿಯಲ್ಲಿ ನೇರ ಹಾಗೂ ಪರೋಕ್ಷ ತೆರಿಗೆಯಿಂದ 63 ಪೈಸೆ ಹರಿದುಬರಲಿದೆ. ಸಾಲ ಮತ್ತು ಇತರ ಮೂಲಗಳಿಂದ 28 ಪೈಸೆ, ತೆರಿಗೆಯೇತರ ಆದಾಯ ಮೂಲಗಳಿಂದ 7 ಪೈಸೆ ಹಾಗೂ ಸಾಲವಲ್ಲದ ಬಂಡವಾಳದಿಂದ 1 ಪೈಸೆ ಸೇರಲಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ಹೇಳಲಾಗಿದೆ.

ಒಟ್ಟು ಆದಾಯದಲ್ಲಿ 36 ಪೈಸೆಯು– ಕಾರ್ಪೊರೇಟ್ ಹಾಗೂ ವೈಯಕ್ತಿಕ ಆದಾಯ ತೆರಿಗೆ ಒಳಗೊಂಡ ನೇರ ತೆರಿಗೆಯಿಂದ ಸಿಗಲಿದೆ. ಇದರಲ್ಲಿ ದುಡಿಮೆದಾರರು ನೀಡುವ ಆದಾಯ ತೆರಿಗೆಯ ಪಾಲು 19 ಪೈಸೆಯಾದರೆ, ಕಾರ್ಪೊರೇಟ್ ತೆರಿಗೆ 17 ಪೈಸೆ.

ಪರೋಕ್ಷ ತೆರಿಗೆಯಲ್ಲಿ– ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯು ಪ್ರತಿ ಒಂದು ರೂಪಾಯಿಯಲ್ಲಿ ಗರಿಷ್ಠ 18 ಪೈಸೆಯನ್ನು ಬೊಕ್ಕಸಕ್ಕೆ ತಂದುಕೊಡುತ್ತದೆ. ಇದರೊಂದಿಗೆ ಪ್ರತಿ ₹1 ರಲ್ಲಿ 5 ಪೈಸೆ ಅಬಕಾರಿ ಸುಂಕ ಹಾಗೂ 4 ಪೈಸೆ ಕಸ್ಟಮನ್ಸ್ ಲೆವಿಯಿಂದ ಬೊಕ್ಕಸ ಸೇರಲಿದೆ.

2024–25ರ ಕೇಂದ್ರ ಮಧ್ಯಂತರ ಬಜೆಟ್‌ನ ಆದಾಯ ಸಂಗ್ರಹ, ವ್ಯಯದ ರೂಪಾಯಿ ಲೆಕ್ಕಾಚಾರದ ಚಿತ್ರಣ

2024–25ರ ಕೇಂದ್ರ ಮಧ್ಯಂತರ ಬಜೆಟ್‌ನ ಆದಾಯ ಸಂಗ್ರಹ, ವ್ಯಯದ ರೂಪಾಯಿ ಲೆಕ್ಕಾಚಾರದ ಚಿತ್ರಣ

ಸಾಲ ಹಾಗೂ ಇನ್ನಿತರ ಮೂಲಗಳಿಂದ ರೂಪಾಯಿಗೆ 28 ಪೈಸೆಯನ್ನು ಬೊಕ್ಕಸಕ್ಕೆ ಸೇರಿಸಲಾಗುತ್ತದೆ. 

ಖರ್ಚಿನ ದಾರಿಯನ್ನು ಗಮನಿಸಿದಾಗ ರಾಜ್ಯಗಳ ತೆರಿಗೆಯ ಪಾಲು 20 ಪೈಸೆಯಾಗಿರಲಿದೆ. ರಕ್ಷಣಾ ಇಲಾಖೆಗೆ 8 ಪೈಸೆ, ಕೇಂದ್ರದ ವಿವಿಧ ಯೋಜನೆಗಳಿಗೆ 16 ಪೈಸೆ, ಕೇಂದ್ರ ಪುರಸ್ಕೃತ ಯೋಜನೆಗಳಿಗೆ 8 ಪೈಸೆ ಪ್ರತಿ ಒಂದು ರೂಪಾಯಿಯಲ್ಲಿ ಖರ್ಚಾಗಲಿದೆ.

ಆರ್ಥಿಕ ಆಯೋಗ ಹಾಗೂ ಇತರ ವರ್ಗಾವಣೆಗೆ 8 ಪೈಸೆ. ಸಬ್ಸಿಡಿ–6 ಪೈಸೆ ಹಾಗೂ ಪಿಂಚಣಿಗೆ 4 ಪೈಸೆ. ಇತರ ಖರ್ಚುಗಳಿಗೆ ಸರ್ಕಾರವು ಪ್ರತಿ ₹1 ರಲ್ಲಿ 9 ಪೈಸೆಯನ್ನು ಖರ್ಚು ಮಾಡುತ್ತದೆ.

ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ಬಂಡವಾಳ ವೆಚ್ಚ ಶೇ 11.1ರಷ್ಟು ಹೆಚ್ಚಿಸಲಾಗಿದೆ. ಇದು ಈಗ ₹ 11.11ಲಕ್ಷ ಕೋಟಿಗೆ ಏರಿಕೆಯಾಗಿದೆ.

ಭಾರೀ ಕೊಡುಗೆಗಳನ್ನು ಕಡಿತಗೊಳಿಸುವುದರ ಜತೆಗೆ ಸರ್ಕಾರವು ವಿತ್ತೀಯ ಕೊರತೆಯನ್ನು 2024–25ರಲ್ಲಿ ಜಿಡಿಪಿಯ ಶೇ 5.8ರಿಂದ 5.1ಕ್ಕೆ ಇಳಿಸುವ ಯೋಜನೆ ಹೊಂದಿದೆ.

ಈ ಆರ್ಥಿಕ ವರ್ಷದಲ್ಲಿ ಸರ್ಕಾರವು ₹ 14.13 ಟ್ರಿಲಿಯನ್‌ ಸಾಲವನ್ನು ಪಡೆಯಲಿದೆ. ಕಳೆದ ವರ್ಷ ₹ 15.43 ಟ್ರಿಲಿಯನ್ ಸಾಲ ಪಡೆಯಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT