ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್ ವಿಶ್ಲೇಷಣೆ | ಸೀಮಿತ ಸಂಪನ್ಮೂಲದ ಮಿತಿ: ಕನಸು ಬಿತ್ತುವ ಕಸರತ್ತು

ವಿಡಿಯೊ ಸ್ಟೋರಿ | ಜನಪ್ರಿಯತೆಯ ಜೊತೆಗೆ ವಿತ್ತೀಯ ಶಿಸ್ತು ಕಾಯ್ದುಕೊಳ್ಳುವ ಸವಾಲು
Last Updated 5 ಮಾರ್ಚ್ 2020, 13:26 IST
ಅಕ್ಷರ ಗಾತ್ರ

ಆರ್ಥಿಕ ಹಿಂಜರಿತ, ಪ್ರವಾಹದಿಂದಾದ ನಷ್ಟ ಮತ್ತು ಕೇಂದ್ರದಿಂದ ಬಾರದ ರಾಜ್ಯದ ಪಾಲಿನ ಅನುದಾನದಿಂದಾಗಿ ಸಂಕಷ್ಟ ಸ್ಥಿತಿಯಲ್ಲಿದೆ ರಾಜ್ಯ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಮಂಡಿಸಿದ ಬಜೆಟ್ ರಾಜ್ಯದ ಪ್ರಗತಿಗೆ, ಉತ್ತಮ ಭವಿಷ್ಯಕ್ಕೆಪೂರಕವಾಗಿದೆಯೇ? ಬಜೆಟ್ ಮಾಹಿತಿಯನ್ನು ವಿಶ್ಲೇಷಿಸಿದ್ದಾರೆ ಪ್ರಜಾವಾಣಿ ಕಾರ್ಯನಿರ್ವಹಕ ಸಂಪಾದಕರಾದ ರವೀಂದ್ರ ಭಟ್ಟ ಮತ್ತು ಬೆಂಗಳೂರು ಬ್ಯೂರೊ ಮುಖ್ಯಸ್ಥ ವೈ.ಗ.ಜಗದೀಶ್.

---

ಜಗದೀಶ್: ರೈತರಿಗೆ ದೊಡ್ಡಮಟ್ಟದ ಕೊಡುಗೆ ಕೊಡ್ತಾರೆ ಅಂತ ಇತ್ತು. ಆರ್ಥಿಕ ಹಿಂಜರಿತ ಮತ್ತು ಸಂಕಷ್ಟಗಳ ನಡುವೆ ಕೊಟ್ಟ ಬಜೆಟ್ ಇದು. ಈ ಬಜೆಟ್ ನೋಡಿದ್ರೆ ನಿಮಗೆ ಏನನ್ನಿಸುತ್ತೆ?

ರವೀಂದ್ರ ಭಟ್ಟ: ಇದರಲ್ಲಿ ಬಹಳ ಹೊಸದೇನೋ ಇದೆ ಅಂತ ಅನ್ನಿಸಲ್ಲ. ಯಡಿಯೂರಪ್ಪ ಅಥವಾ ಅವರ ಜಾಗದಲ್ಲಿ ಬೇರೆ ಯಾರೇ ಇದ್ರೂ ಇಂಥದ್ದೇ ಬಜೆಟ್ ಮಂಡನೆಯಾಗ್ತಿತ್ತು ಅಂತಅನ್ನಿಸುತ್ತೆ. ಹಣಕಾಸು ಪರಿಸ್ಥಿತಿ ಅವರಕೈ ಕಟ್ಟಿಹಾಕಿತ್ತು.ಜಿಎಸ್‌ಟಿ ಬಂದ ಮೇಲೆ ಬೇರೆ ತೆರಿಗೆ ಹೆಚ್ಚಳಕ್ಕೆ ಅವಕಾಶ ಇರಲಿಲ್ಲ. ಮುಖ್ಯವಾಗಿ ಇರೋದು ಎರಡೇ ಆದಾಯ ಮೂಲಗಳು. ಒಂದು ಪೆಟ್ರೋಲ್, ಡೀಸೆಲ್ ಮೇಲೆ ಸೆಸ್ ಹೆಚ್ಚು ಮಾಡುವುದು. ಇನ್ನೊಂದು ಅಬಕಾರಿಯಿಂದ ಆದಾಯ ಪಡೆದುಕೊಳ್ಳುವುದು. ಅವನ್ನು ಯಡಿಯೂರಪ್ಪ ಈ ಬಜೆಟ್‌ನಲ್ಲಿಯೂ ಮಾಡಿದ್ದಾರೆ. ಮೊದಲೆಲ್ಲಾ ಇಲಾಖಾವಾರು ವಿವರ ಕೊಡ್ತಿದ್ರು. ಹೊಸ ಯೋಜನೆಗಳನ್ನು ಘೋಷಣೆ ಮಾಡ್ತಿದ್ರು. ಈ ಸಲ ಇಲಾಖೆಗಳಲ್ಲಿ ಆದ್ಯತಾ ವಲಯಗಳನ್ನು ಗುರುತಿಸಿಕೊಂಡು ಅದರ ಮೂಲಕ ಒಂದಿಷ್ಟು ಪ್ರಯತ್ನಮಾಡಿದ್ದಾರೆ. ಆರ್ಥಿಕ ಶಿಸ್ತು ತರಲು ಹೆಚ್ಚು ಅದ್ಯತೆ ಕೊಟ್ಟಿದ್ದಾರೆ ಅಂತ ನನಗೆ ಅನ್ನಿಸ್ತಿಲ್ಲ. ಇದು ನನ್ನ ತಕ್ಷಣದ ಪ್ರತಿಕ್ರಿಯೆ. ಬಜೆಟ್ ದಾಖಲೆಗಳನ್ನು ಪೂರ್ತಿ ಓದಿದ ಮೇಲೆ ಹೆಚ್ಚು ಸ್ಪಷ್ಟವಾಗಬಹುದು. ಒಟ್ಟಾರೆ ಬಜೆಟ್ ಹೇಗಿರಬೇಕೋ ಹಾಗಿದೆ. ಜನಪ್ರಿಯತೆ ಕಾಪಾಡಿಕೊಳ್ಳೋದು, ಎಲ್ಲರನ್ನೂ ಸಮಾಧಾನ ಮಾಡಲು ಪ್ರಯತ್ನಪಟ್ಟಿದ್ದಾರೆ.

ಜಗದೀಶ್:ಸಂಕಷ್ಟದಲ್ಲಿ ಬಜೆಟ್ ಮಂಡಿಸಿದಂತೆ ಕಾಣುತ್ತೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳೇ ಇವೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಒಂದು ಮತ ಹಾಕಿ, ಎರಡು ಸರ್ಕಾರ ಬರುತ್ತೆ ಅಂತ ಹೇಳಿದ್ರು. ಅದರ ಫಲ ಏನಾದ್ರೂ ಸಿಕ್ಕಿದೆ ಅನ್ಸುತ್ತಾ ನಿಮಗೆ?

ರವೀಂದ್ರ ಭಟ್ಟ: ಅದರ ಫಲ ಸಿಕ್ಕಿದೆ ಅಂತ ನನಗೆ ಅನ್ನಿಸಲ್ಲ. ಒಬ್ಬ ಬಿಜೆಪಿ ಮುಖ್ಯಮಂತ್ರಿ ಕೇಂದ್ರದಿಂದ ನನಗೆ ಇಷ್ಟು ಅನುದಾನ ಬಂದಿಲ್ಲ ಅಂತ ಬಜೆಟ್‌ನಲ್ಲಿ ಘೋಷಣೆ ಮಾಡುವ ಧೈರ್ಯ ವ್ಯಕ್ತಪಡಿಸಿದ್ದಾರೆ.

ಜಗದೀಶ್:ಬಿಜೆಪಿ ಅಧಿಕಾರಕ್ಕೆ ಬಂದರೆಅಭಿವೃದ್ಧಿಯ ದೊಡ್ಡ ದಾರಿ ತೆರೆದುಕೊಳ್ಳುತ್ತೆ ಅಂತ ಹೇಳಿದ್ರು. ಕಳೆದ ವರ್ಷ ಜಿಎಸ್‌ಟಿ ಪಾಲು ಮತ್ತು ನಷ್ಟದ ರೂಪದಲ್ಲಿ ₹11887 ಕೋಟಿ ನಷ್ಟವಾಗಿದೆ ಅಂತ ಹೇಳ್ತಿದ್ದಾರೆ. ಕೇಂದ್ರ ಕೊಡಬೇಕಾದ ಪಾಲನ್ನು ಕೊಡಲಿಲ್ಲ. ಅತಿಹೆಚ್ಚು ತೆರಿಗೆ ಪಾವತಿಸುವ ಮತ್ತು ವಿದೇಶಿ ವಿನಿಮಯ ಗಳಿಸಿಕೊಡುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಅದಕ್ಕೆ ತಕ್ಕಂತೆ ರಾಜ್ಯಕ್ಕೆ ಕೇಂದ್ರದ ಅನುದಾನ ಬರುತ್ತಿಲ್ಲ.

ರವೀಂದ್ರ ಭಟ್ಟ: ಜಿಎಸ್‌ಟಿ ಅನುಷ್ಠಾನದ ದೃಷ್ಟಿಯಿಂದಲೂ ಕರ್ನಾಟಕ ಬಹಳ ಮುಂದಿದೆ. ದೇಶದಲ್ಲಿಯೇ 2ನೇ ಸ್ಥಾನದಲ್ಲಿದೆಕರ್ನಾಟಕ. ಅಂಥ ರಾಜ್ಯವನ್ನು ಕೇಂದ್ರ ನಿರ್ಲಕ್ಷಿಸುವುದು ಸರಿಯಲ್ಲ.ಬಜೆಟ್‌ನಲ್ಲಿ ಯಡಿಯೂರಪ್ಪ ಕೇಂದ್ರದ ಪಾಲು ಬಂದಿಲ್ಲ ಎಂದುಒಪ್ಪಿಕೊಂಡಿದ್ದಾರೆ. ಅದು ತಪ್ಪು ಎಂದಲ್ಲ. ಒಬ್ಬ ಮುಖ್ಯಮಂತ್ರಿ ರಾಜ್ಯದ ಹಿತ ಬಯಸಿ, ಕೇಂದ್ರದಿಂದ ಬರಬೇಕಿದ್ದ ಅನುದಾನದ ಪಾಲು ಕೇಳೋದ್ರಲ್ಲಿ ತಪ್ಪಿಲ್ಲ. ರಾಜ್ಯದ ಪಾಲು ಕೇಳುವುದು ನಮ್ಮ ಹಕ್ಕು ಕೇಳ್ತೀವಿ.

ಜಗದೀಶ್: ಈ ಸಾಲಿನಲ್ಲಿಯೂ 15ನೇ ಹಣಕಾಸು ಆಯೋಗದ ಲೆಕ್ಕಾಚಾರದ ಪ್ರಕಾರ ₹ 11,215 ಕೋಟಿ ಕೊರತೆ ಆಗುತ್ತೆ ಅಂತ ಯಡಿಯೂರಪ್ಪ ಹೇಳಿದ್ದಾರೆ. ಮುಂದಿನ 12 ತಿಂಗಳು ಸರ್ಕಾರ ನಡೆಸಲು ಬೇಕಾಗಿರುವಷ್ಟು ಹಣ ಬರ್ತಿಲ್ಲ. ಯಾಕೆ ನರೇಂದ್ರ ಮೋದಿ ಅಥವಾ ಕರ್ನಾಟಕವನ್ನೇ ಪ್ರತಿನಿಧಿಸುವ ನಿರ್ಮಲಾ ಸೀತಾರಾಮನ್ ಹೀಗೆ ಮಾಡಿದ್ದಾರೆ ಅನ್ನೋ ಪ್ರಶ್ನೆ ಬರುತ್ತೆ...

ರವೀಂದ್ರ ಭಟ್ಟ: ರಾಜ್ಯ ಸರ್ಕಾರ ಬಜೆಟ್ ಮಂಡಿಸಿದ ತಕ್ಷಣ, ಅದರಲ್ಲೂ ಯಡಿಯೂರಪ್ಪ ಮಂಡಿಸಿದ ತಕ್ಷಣ ರೈತರಿಗೆ, ನೀರಾವರಿಗೆ ದೊಡ್ಡ ಕೊಡುಗೆ ಕೊಡ್ತಾರೆ ಅನ್ನೋದು ಮನಸ್ಸಿಗೆ ಬರುತ್ತೆ. ಈ ಹಿಂದೆಯೂ ಸಾಕಷ್ಟು ಕೊಟ್ಟಿದ್ದಾರೆ. ಎತ್ತಿನಹೊಳೆಯನ್ನು ಇನ್ನೆರೆಡು ವರ್ಷಗಳಲ್ಲಿ ಮುಗಿಸಬೇಕು. ಇಲ್ಲದಿದ್ದರೆ ನಾವು ಸಂಕಷ್ಟಕ್ಕೆ ಸಿಲುಕ್ತೀವಿ. ಆದರೆ ಸಾಲಮನ್ನಾಕ್ಕೆ ಸಂಬಂಧಿಸಿದಂತೆ ಸಹ ಬಜೆಟ್‌ನಲ್ಲಿ ನಿರ್ದಿಷ್ಟವಾಗಿ ಏನನ್ನೂ ಹೇಳಿಲ್ಲ. ಅದೂ ಕೂಡ ರೈತರಿಗೆ ಬೇಸರ ತರಬಹುದು. ಸಾಲಮನ್ನಾ ಅನ್ನೋದು ಆರ್ಥಿಕ ಶಿಸ್ತಿನ ಹಿನ್ನೆಲೆಯಲ್ಲಿ ಒಳ್ಳೇ ಕ್ರಮ ಅಲ್ಲ. ಆದರೆ ಜನಪ್ರಿಯತೆ ದೃಷ್ಟಿಯಿಂದ ಬಹಳ ಮುಖ್ಯವಾದದ್ದು. ಒಂದೇ ಒಂದು ಸಂತೋಷ ಅಂದ್ರೆ, ಸಬ್ಸಿಡಿ ಯೋಜನೆಯನ್ನು ಇನ್ನಷ್ಟು ಹೆಚ್ಚು ಮಾಡಿಲ್ಲ. ಈಗಾಗಲೇ ಇರೋ ಜನಪ್ರಿಯ ಯೋಜನೆಗಳ ಸಂಖ್ಯೆಯನ್ನು ಜಾಸ್ತಿ ಮಾಡಿಲ್ಲ. ಇದು ಚುನಾವಣೆ ವರ್ಷ ಅಲ್ಲಎನ್ನುವುದು ಇದಕ್ಕೆಕಾರಣವಾಗಿರಬಹುದು.

ಜಗದೀಶ್: ಮಹದಾಯಿ ಯೋಜನೆಗೆ ₹ 2000 ಕೋಟಿ ಬೇಕು. ಆದರೆ ಯಡಿಯೂರಪ್ಪನವರು ಆರಂಭದ ಕಂತಾಗಿ ₹ 500 ಕೋಟಿ ಮಂಜೂರು ಮಾಡಿದ್ದಾರೆ. ಮಹದಾಯಿ ನೀರು ಕೊಡ್ತೀನಿ ಅಂತ ಮಾಡಿದ್ದ ಶಪಥಕ್ಕೆ ಯಡಿಯೂರಪ್ಪ ಬದ್ಧರಾಗಿ ಉಳಿಯುವಂತೆ ಕಾಣ್ತಾರೆ. ಅದೇ ಯಡಿಯೂರಪ್ಪನವರು ಹಿಂದೆ (2009–10) ಮುಖ್ಯಮಂತ್ರಿಯಾಗಿದ್ದಾಗ ಕೃಷ್ಣ ನ್ಯಾಯಾಧಿಕರಣದ ತೀರ್ಪು ಬಂದಿತ್ತು. ಅವತ್ತು ಯಡಿಯೂರಪ್ಪ ಮುಂದಿನ ದಶಕವನ್ನು ನೀರಾವರಿ ದಶಕವಾಗಿ ಘೋಷಣೆ ಮಾಡ್ತೀನಿ ಅಂತ ಹೇಳಿದ್ರು. ಆದರೆ ಅದಾದ ಮೇಲೆ ಯಡಿಯೂರಪ್ಪ ಅಧಿಕಾರದಲ್ಲಿ ಉಳೀಲಿಲ್ಲ. ಈಗ ಮತ್ತೆ ಅಧಿಕಾರಕ್ಕೆ ಬಂದಿದ್ದಾರೆ.. ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಕ್ಕೆ ಬರಲು ಕಾರಣವಾದ ಉತ್ತರ ಕರ್ನಾಟಕ ಜನರ ಬೇಡಿಕೆಯ ಬಗ್ಗೆ ಬಜೆಟ್‌ ಗಮನಕೊಟ್ಟಿಲ್ಲ. ತಿಂತಿಣಿ ಸೇತುವೆ ಸಮೀಪ ಜಲಾಶಯಕ್ಕೆಡಿಪಿಆರ್ ಮಾಡ್ತೀವಿ ಅನ್ನೋದು ಬಿಟ್ಟರೆ ಕೃಷ್ಣೆಯ ಮಕ್ಕಳ ಬೇಡಿಕೆಗೆ ಹೆಚ್ಚಿನ ಸ್ಪಂದನೆ ಇಲ್ಲ ಅನ್ನಿಸ್ತಿದೆ. ಎತ್ತಿನಹೊಳೆ ಯೋಜನೆ 2012ರಲ್ಲಿ ಬಂದಿದ್ದು. ಆಗ ₹ 12,912 ಕೋಟಿ ಅಂದಾಜು ವೆಚ್ಚ ಮಾಡಲಾಗಿತ್ತು.ಈಗ ಅದು ₹ 24,982 ಕೋಟಿಗೆ ಹೋಗಿದೆ. ₹ 1500 ಕೋಟಿ ಈ ಬಾರಿ ಘೋಷಿಸಿದ್ದಾರೆ.ಈಗಾಗಲೇ ₹ 957 ಕೋಟಿ ಮೊತ್ತದ ಬಿಲ್ ಬಾಕಿಯಿವೆ. ಉಳಿದ ದುಡ್ಡಿನಲ್ಲಿ ಕಾಮಗಾರಿ ಮುಂದೂ ಹೋಗಲ್ಲ, ಹಿಂದೂ ಹೋಗಲ್ಲ. ನಿಂತಲ್ಲೇ ನಿಂತಿರುತ್ತೆ. ಎತ್ತಿನಹೊಳೆಗೂ ನಿರೀಕ್ಷಿತ ಅನುದಾನ ಕೊಟ್ಟಿಲ್ಲ. ಇನ್ನಷ್ಟು ಕೊಡಬೇಕಿತ್ತು.

ರವೀಂದ್ರ ಭಟ್ಟ: ಪ್ರತಿಬಾರಿಯೂ ಇಂಥ ಯೋಜನೆಗಳು ಬಂದಾಗ ಒಂದು ಬದ್ಧತೆಯಿಟ್ಟುಕೊಂಡು ಬೇರೆ ಕಡೆಗೆ ಕಡಿತ ಮಾಡಿ ಇಲ್ಲಿ ಕೊಡ್ತೀನಿ ಅನ್ನೋ ಸೂಚನೆಗಳು ಇರಬೇಕಿತ್ತು. ಅಂಥದ್ದೇನೂ ಈ ಬಾರಿಯ ಬಜೆಟ್‌ನಲ್ಲಿ ಕಾಣ್ತಿಲ್ಲ. ಕಾಣಬೇಕಿತ್ತು ಅನ್ನೋದು ರಾಜ್ಯದ ಜನರ ಬಯಕೆಯಾಗಿತ್ತು.

ಜಗದೀಶ್: ದೀರ್ಘಕಾಲೀನ ಯೋಜನೆಗಳ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ತುಂಬಾ ಜನಪ್ರಿಯ ಘೋಷಣೆಗಳಿಟ್ಟುಕೊಂಡು ಎಲ್ಲರನ್ನೂ ಮೆಚ್ಚಿಸಲು. ನನ್ನ ಬಳಿ ಇರುವ 100 ರೂಪಾಯಿಯನ್ನು ಎಲ್ಲರಿಗೂ ಇಷ್ಟಿಷ್ಟು ಎಂದು ಹಂಚುವ ಪ್ರಯತ್ನದಂತೆ ಈ ಬಜೆಟ್ ಕಾಣಿಸುತ್ತೆ.

ರವೀಂದ್ರ ಭಟ್ಟ: ಬಜೆಟ್ ಅಂದ್ರೆ ಹಾಗೇನೇ ಅಲ್ವಾ? ಹಂಚುವುದೇ ಅಲ್ಲಿ ಮುಖ್ಯ. ಆದರೆ ನೀವು ಯಾವ ಆದ್ಯತೆ ಇಟ್ಕೊಂಡು ಯಾರಿಗೆ ಹಂಚ್ತೀರಿ? ಹೇಗೆ ಹಂಚ್ತೀರಿ ಅನ್ನೋದು ಮುಖ್ಯ. ಎಷ್ಟು ಆದಾಯ ಬರುತ್ತೆ? ಅದನ್ನು ಹೇಗೆ ಖರ್ಚು ಮಾಡ್ತೀವಿ ಅನ್ನೋದು ಲೆಕ್ಕಾಚಾರ.ಎಲ್ಲರಿಗೂ ಹಂಚು ಮತ್ತು ಎಲ್ಲರಿಗೂ ಕೊಡುವ ಕ್ರಮ. ಹಾಗೆ ಮಾಡುವುದರಲ್ಲಿಏನೋ ತಪ್ಪಿದೆ ಅಂತ ಅನ್ನಿಸಲ್ಲ ನನಗೆ. ಯಡಿಯೂರಪ್ಪ ರೈತಪರ ಹೋರಾಟಗಳಿಂದ ಬಂದವರಾದ ಕಾರಣ, ರೈತರ ಕಲ್ಯಾಣ ಮತ್ತುನೀರಾವರಿ ಯೋಜನೆ ಬಗ್ಗೆ ಹೆಚ್ಚು ನಿರೀಕ್ಷೆಗಳನ್ನು ಜನರು ಇಟ್ಟುಕೊಡಿದ್ದರು.. ಅದುಇಲ್ಲಿ ಸಫಲವಾಗಿಲ್ಲ.

ಜಗದೀಶ್: ಹಿಂದೆ ಇಲಾಖಾವಾರು ಅನುದಾನ ಕೊಡ್ತಿದ್ರು ಅಂತ ಹೇಳಿದ್ರಿ. ಈ ಸಲ ಆರು ವಲಯಗಳನ್ನು ಮಾಡಿಕೊಂಡಿದ್ದಾರೆ. ಇದು ದಿಕ್ಕುತಪ್ಪಿಸುವ ಕ್ರಮ ಅಂತ ನನಗೆ ಅನ್ನಿಸುತ್ತೆ. ಯಾವುದಕ್ಕೆ ಎಲ್ಲಿ ಎಷ್ಟು ಅನುದಾನ ಹಂಚಿಕೆ ಆಗುತ್ತೆ ಅಂತ ಸ್ಪಷ್ಟ ವಿವರಣೆ ಸಿಗ್ತಿಲ್ಲ. ಮಹಿಳಾ ಮತ್ತುಮಕ್ಕಳ ಬಜೆಟ್ ಮಾಡಿದ್ದೀವಿ ಅಂತ ಹೇಳಿದ್ದಾರೆ. ₹ 37,783 ಕೋಟಿ ಅನುದಾನವನ್ನು 953 ಕಾರ್ಯಕ್ರಮಕ್ಕೆಕೊಟ್ಟಿದ್ದೀನಿ ಅಂತಾರೆ. ಎಲ್ಲಿವೆ ಆ ಕಾರ್ಯಕ್ರಮಗಳು ಅಂತ ವಿವರಣೆ ಇಲ್ಲ. ಇದು ವಿವರವಾದ ಪುಸ್ತಕದಲ್ಲಿ ಸಿಗುತ್ತಾ ಗೊತ್ತಿಲ್ಲ. ಮಕ್ಕಳಿಗಾಗಿ 279 ಕಾರ್ಯಕ್ರಮಗಳಡಿ ₹ 36,340 ಕೋಟಿ ಕೊಟ್ಟಿದ್ದಾರೆ. ಶಿಕ್ಷಣ ಮತ್ತು ಇತರ ಕಾರ್ಯಕ್ರಮಗಳ ಭಾಗವಾಗಿ ಅವು ಬಂದಿವೆಯಾ ಅಂತ ಸ್ಪಷ್ಟನೆ ಇಲ್ಲ.

ಕಳೆದ ಬಜೆಟ್‌ ಗಾತ್ರ ₹ 2.34 ಲಕ್ಷ ಕೋಟಿ ಇತ್ತು. ದೊಡ್ಡ ಯೋಜನೆಗಳನ್ನು ಘೋಷಣೆ ಮಾಡಿದ್ರೆ ಶೇ 20ರಷ್ಟು ಬಜೆಟ್ ಮೊತ್ತದಲ್ಲಿ ಏರಿಕೆಯಾಗುತ್ತೆ ಅನ್ನೋದು ತಜ್ಞರ ಮಾತು. ಅದರ ಈ ಸಲ ಬಜೆಟ್ ಗಾತ್ರ ಕೇವಲ ₹ 3700 ಕೋಟಿ ಮಾತ್ರ ಹೆಚ್ಚಾಗಿದೆ.

ರವೀಂದ್ರ ಭಟ್ಟ: ಬಜೆಟ್ ಗಾತ್ರ ಹೆಚ್ಚಾಗದಿರಲುಆರ್ಥಿಕ ಹಿನ್ನಡೆಯೇ ಕಾರಣ. ಈಗ ಇಡೀ ದೇಶದಲ್ಲಿ ಅಂಥ ಪರಿಸ್ಥಿತಿ ಇದೆ. ಅದು ಬಹಳ ಆಕ್ಷೇಪಾರ್ಹ ಅಂತ ನನಗೆ ಅನ್ನಿಸಲ್ಲ. ಆದರೆ ನಮ್ಮ ರಾಜ್ಯ ಸರ್ಕಾರ ಬದಲಿ ಆದಾಯ ಮೂಲಗಳನ್ನು ಹುಡುಕುವ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ಪ್ರಯತ್ನ ಪಡಬೇಕಿತ್ತು.

ಜಗದೀಶ್: ಕುಮಾರಸ್ವಾಮಿ ಅವರು ಬಜೆಟ್ ಮಂಡಿಸಿದಾಗ ಬೇರೆಬೇರೆ ಮೂಲಗಳಿಂದ ಆದಾಯತರ್ತೀವಿ. ತೆರಿಗೆ ಸಂಗ್ರಹವನ್ನು ಕಟ್ಟುನಿಟ್ಟಾಗಿ ಮಾಡ್ತೀವಿಅಂತ ಹೇಳಿದ್ರು.

ರವೀಂದ್ರ ಭಟ್ಟ:ಅವರು ಹಾಗೆ ಹೇಳಿದ್ದು ನಿಜ. ಆದರೆ ಬೇರೆ ಮೂಲ ಯಾವುದು ಅಂತ ಕುಮಾರಸ್ವಾಮಿಯೂ ಗುರುತಿಸಲಿಲ್ಲ. ಯಡಿಯೂರಪ್ಪನವರೂ ಕೈಹಾಕಲಿಲ್ಲ.

ಜಗದೀಶ್: ಯಡಿಯೂರಪ್ಪನವರು ಒಂದಿಷ್ಟು ಸಮುದಾಯಗಳಿಗೆ ಸಣ್ಣಪುಟ್ಟ ಕೊಡುಗೆಗಳನ್ನು ಕೊಟ್ಟಿದ್ದಾರೆ. ಆದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚು ಮಾಡಿದ್ದಾರೆ. ಇದು ಒಂದು ರೀತಿಯಲ್ಲಿ ಹೀಗೆ ಕೊಟ್ಟು ಹಾಗೆ ಹಿಂತೆಗೆದುಕೊಳ್ಳುವ ಬಗೆ.

ರವೀಂದ್ರ ಭಟ್ಟ: ಇಂಧನದ ಬೆಲೆ ಜಾಸ್ತಿಯಾದ ತಕ್ಷಣ ಎಲ್ಲ ವಸ್ತುಗಳ ಬೆಲೆ ಹೆಚ್ಚಾಗುತ್ತೆ. ಹೀಗಾಗಿಯೇ ಅದನ್ನು ಜನಸ್ನೇಹಿ ನಿರ್ಣಯ ಅಂತ ಹೇಳಲು ಆಗಲ್ಲ.

ಜಗದೀಶ್: ಆಟೊಮೊಬೈಲ್ ಉದ್ಯಮ ಕುಸಿದಿದೆ. ಇಂಧನ ಬೆಲೆ ಹೆಚ್ಚಳವಾದ್ರೆ ಅದೂ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಬಹುದು ಎಂಬ ಭೀತಿ ವ್ಯಕ್ತವಾಗಿದೆ.

ರವೀಂದ್ರ ಭಟ್ಟ: ಇಂಧನ ದರ ಹೆಚ್ಚಳದಿಂದ ಎಷ್ಟು ಹಣ ಬರುತ್ತೆ ಅಂತ ಹೇಳಿಲ್ಲ. ಶೇ 6ರಷ್ಟು ಅಬಕಾರಿ ಸುಂಕ ಹೆಚ್ಚಳದಿಂದ ಸುಮಾರು ₹3000 ಕೋಟಿ ಬರಬಹುದು ಅಂತ ಲೆಕ್ಕ ಹೇಳಿದ್ದಾರೆ.

ಜಗದೀಶ್: ಕಳೆದ ವರ್ಷ ಸಾರಿಗೆ ಇಲಾಖೆಯಿಂದ ₹ 7100 ಕೋಟಿ ಆದಾಯ ನಿರೀಕ್ಷೆ ಮಾಡಿದ್ದರು. ಈ ವರ್ಷ ₹ 7115 ಕೋಟಿ ಆದಾಯ ಬರ್ತಿದೆ. ಅಂದ್ರೆ ಒಂದು ವರ್ಷದಲ್ಲಿ ಕೇವಲ ₹ 15 ಕೋಟಿ ಮಾತ್ರ ಹೆಚ್ಚಾಗಿದೆ. ಹಿಂಜರಿತದ ನಡುವೆ ಆದಾಯ ಕುಸಿಯಲಿಲ್ಲ. ಆದರೆ ಮತ್ತೆ ಪೆಟ್ರೋಲ್ ಡೀಸೆಲ್ ಬೆಲೆ ಜಾಸ್ತಿ ಆದರೆ ನಷ್ಟವೂ ಹೆಚ್ಚಾಗುತ್ತೆ. ₹ 20 ಲಕ್ಷ ಮೌಲ್ಯದ ಅಪಾರ್ಟ್‌ಮೆಂಟ್ ತಗೊಂಡ್ರೆ ನೋಂದಣಿ ಶುಲ್ಕ 5ರಿಂದ ಶೇ 2ಕ್ಕೆ ಇಳಿಸ್ತೀವಿ ಅಂತ ಹೇಳಿದ್ದಾರೆ. ಯಾವುದೇ ಮಹಾನಗರಗಳಲಲ್ಲಿ ₹ 20 ಲಕ್ಷದೊಳಗೆ ಅಪಾರ್ಟ್‌ಮೆಂಟ್ ಮುಖ್ಯಮಂತ್ರಿ ಊರಲ್ಲಿಯೂ (ಶಿವಮೊಗ್ಗ) ಅಪಾರ್ಟ್‌ಮೆಂಟ್‌ಗಳ ದರ ₹ 40 ಲಕ್ಷ ದಾಟಿದೆ.

ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಬೆಳವಣಿಗೆ ಪ್ರಮಾಣ ಕಳೆದ ವರ್ಷ ಶೇ 7.8ರಷ್ಟು ಆಗುತ್ತೆ ಅಂತ ನಿರೀಕ್ಷೆ ಇತ್ತು. ಈಗ ಯಡಿಯೂರಪ್ಪ 6.8ರಷ್ಟು ಕುಸಿಯುವ ಅಂದಾಜಿದೆ ಎಂದಿದ್ದಾರೆ. ಕೃಷಿಯಿಂದ ಶೇ 4.8ರ ಪ್ರಗತಿ ನಿರೀಕ್ಷೆಯಿತ್ತು. ಅದು 3.9ಕ್ಕೆ ಕುಸಿಯಬಹುದು ಅಂತ ಇದೆ. ಕೈಗಾರಿಕೆಯಲ್ಲಿಯೂ ಇದೇ ಪರಿಸ್ಥಿತಿ ಇದೆ. ಅಲ್ಲಿ ಶೇ 7.4ರ ನಿರೀಕ್ಷೆ ಮಾಡಿದ್ರು, ಶೇ 5.6ಕ್ಕೆ ಇಳೀತು. ಈ ಸಲ ಶೇ 4.8 ತಲುಪಬಹುದು ಎಂದು ಅಂತ ಯಡಿಯೂರಪ್ಪ ಹೇಳ್ತಿದ್ದಾರೆ. ಸೇವಾ ವಲಯದಲ್ಲಿ ಪ್ರಗತಿ ನಿರೀಕ್ಷೆ ಶೇ 9.8 ನಿರೀಕ್ಷೆ ಇತ್ತು. ಅದು ಶೇ 7.9ಕ್ಕೆ ಇಳಿದಿದೆ. ಇಳಿಕೆಯಲ್ಲಿ ಇದು ಗಮನಾರ್ಹ. ಸೇವಾ ವಲಯದ ಪ್ರಗತಿಶೇ 2ರಷ್ಟು ಇಳಿದಿದೆ ಎನ್ನವುದು ಸಣ್ಣ ಮಾತಲ್ಲ.ಕೇಂದ್ರ–ರಾಜ್ಯ ಸರ್ಕಾರಕ್ಕೆ ಆದಾಯ ತರೋದುಸೇವಾ ವಲಯ.ಇದರಲ್ಲಿ ಹೊಟೆಲ್ ಸೇರಿದಂತೆ ಸಾಕಷ್ಟು ವಲಯಗಳು ಸೇರುತ್ತವೆ. ಅಲ್ಲಿ ಕುಸಿತ ದಾಖಲಾದರೆ ಅದರ ಅರ್ಥ ತುಂಬಾ ದೊಡ್ಡದು.

ರವೀಂದ್ರ ಭಟ್ಟ: ಸೇವಾ ವಲಯದ ಕುಸಿತ ತುಂಬಾ ಆತಂಕಕಾರಿ ಬೆಳವಣಿಗೆ. ಅದು ಹೆಚ್ಚುಕಡಿಮೆಯಾದರೆ ನಿಮ್ಮ ಬದುಕಿನ ಮೇಲೆ ಪರಿಣಾಮ ಬೀರುತ್ತೆ.ನಿರುದ್ಯೋಗ ನಿವಾರಣೆಯತ್ತ ಅಗತ್ಯ ಗಮನ ಕೊಡಬೇಕು.ಇಡೀ ಜಗತ್ತಿನಲ್ಲಿ ಹೀಗಾಗ್ತಿದೆ ಅಂತ ಹೇಳಿ ನಾವು ತಪ್ಪಿಸಿಕೊಳ್ಳಬಹುದು. ಆದರೆ ಅದು ಸಮರ್ಪಕ ಉತ್ತರವಾಗುವುದಿಲ್ಲ. ಸಂಪನ್ಮೂಲ ಕ್ರೋಡೀಕರಣಕ್ಕೆ ಬೇಕಾದ ಮೂಲಗಳನ್ನು ನಾವು ಶೋಧಿಸಬೇಕು. ಸ್ಟಾಂಪಿಂಗ್, ಸಾರಿಗೆ ಇತ್ಯಾದಿಗಳಲ್ಲಿ ಸಂಪನ್ಮೂಲ ಹೆಚ್ಚಳಕ್ಕೆ ಹೊಸ ಮಾರ್ಗ ಶೋಧಿಸಲು ಯೋಚಿಸಬೇಕಿತ್ತು.ಆಗ ಯಡಿಯೂರಪ್ಪ ಅವರಿಗೆ ಇನ್ನೂ ಒಳ್ಳೇಬಜೆಟ್ ಮಂಡಿಸಲುಸಾಧ್ಯವಾಗ್ತಿತ್ತು.

ಜಗದೀಶ್:ಸಂಪನ್ಮೂಲ ಹೆಚ್ಚಳದ ಬಗ್ಗೆ ಬಜೆಟ್ ದಾಖಲೆಗಳಲ್ಲಿ ಒಂದು ಪ್ರಸ್ತಾವವಿದೆ. ರಾಜ್ಯದಲ್ಲಿರುವ ಖನಿಜ ಸಂಪನ್ಮೂಲ ಶೋಧನೆ ಮಾಡಬೇಕು. ಅದಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಖನಿಜಾನ್ವೇಷಣವಿಭಾಗ ಸ್ಥಾಪಿಸುತ್ತೇವೆ. ಅದರಿಂದ ಹೆಚ್ಚಿನ ರಾಜಸ್ವ ನಿರೀಕ್ಷಿಸಬಹುದಾಗಿದೆ ಎಂದು ಯಡಿಯೂರಪ್ಪ ಹೇಳುತ್ತಾರೆ.

ರವೀಂದ್ರ ಭಟ್ಟ:ನಿರ್ದಿಷ್ಟವಾಗಿ ಏನು ಮಾಡಲು ಹೊರಟಿದ್ದೇವೆ ಎಂದು ಹೇಳಬೇಕಿತ್ತು. ಮೇಲೆಮೇಲೆ ಹೇಳಿದರೆ ಏನನ್ನೂ ಹೇಳಿದಂತೆ ಆಗುವುದಿಲ್ಲ.

ಜಗದೀಶ್: ರಾಜ್ಯದ ಸಾಲದ ಪ್ರಮಾಣದ ಬಗ್ಗೆ ಯೋಚಿಸಬೇಕು. ಕಳೆದ ವರ್ಷ ₹ 3.27 ಲಕ್ಷ ಕೋಟಿ ಸಾಲ ಇತ್ತು. ಮಾರ್ಚ್ ಹೊತ್ತಿಗೆ ₹ 3.68 ಲಕ್ಷ ಕೋಟಿಗೆ ಹೋಗುತ್ತೆ. ಅಂದ್ರೆ ₹41ಸಾವಿರ ಕೋಟಿ ಸಾಲ ಹೆಚ್ಚಾಗುತ್ತೆ. ಬಜೆಟ್ ಗಾತ್ರ ₹ 3700 ಕೋಟಿ ಹೆಚ್ಚಾದರೆ,ಸಾಲದ ಪ್ರಮಾಣ ₹ 41 ಸಾವಿರ ಕೋಟಿ ಹೆಚ್ಚಾಗಿದೆ. ಇದೇನು ಅಂಥ ಒಳ್ಳೇ ಬೆಳವಣಿಗೆ ಅನ್ನಿಸಲ್ಲ.

ರವೀಂದ್ರ ಭಟ್ಟ: ಸಾಲ ಪಡೆಯಲುಇರುವಮಿತಿಗಳೊಳಗೇಸಾಲ ಮಾಡ್ತಿದ್ದೀವಿ ಅನ್ನೋದು ಸರ್ಕಾರ ನಡೆಸುವವರ ಮಾತು.ಆದರೆ ಸಾಲ ಹೆಚ್ಚಾಗುವುದು ಯಾರ ದೃಷ್ಟಿಯಲ್ಲಿಯೂ ಒಳ್ಳೇದಲ್ಲ.

ಜಗದೀಶ್: ಹಿಂದೆ ಜಿಡಿಪಿಯ ಶೇ 3ರ ಒಳಗೆ ಸಾಲ ಪಡೆಯಲು ಅವಕಾಶವಿದೆ. ಈ ಸಲ ಅದನ್ನು ಶೇ 2.5ಕ್ಕೆ ಇಳಿಸಿದ್ದಾರೆ. ಆದರೆ ಕೆಲವರು ಒಟ್ಟಾರೆ ಜಿಡಿಪಿಯ ಲೆಕ್ಕವೇ ತಪ್ಪು ಅಂತ ಹೇಳ್ತಾರೆ.

ಈ ಬಾರಿಯ ಬಜೆಟ್‌ನಲ್ಲಿರೈತರ ಪರವಾದ ಅನೇಕ ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ.ಕಿಸಾನ್ ಸನ್ಮಾನ್‌ ಯೋಜನೆಯಡಿ ಕೇಂದ್ರದ₹ 6000 ಕೋಟಿಯ ಜೊತೆಗೆ ರಾಜ್ಯದಿಂದ ₹ 4000 ಕೋಟಿ ಕೊಡ್ತೀವಿ ಅಂತ ಯಡಿಯೂರಪ್ಪ ಘೋಷಿಸಿದ್ದಾರೆ. ಅದಕ್ಕಾಗಿ ₹ 2600 ಕೋಟಿ ಮೀಸಲಿಟ್ಟಿದ್ದಾರೆ. ಈ ಹಣವು ನೇರವಾಗಿ ರೈತರಿಗೆ ಹೋಗುತ್ತೆ. ಸಣ್ಣ ಮತ್ತು ಅತಿಸಣ್ಣ ರೈತರಿಗೆ,ಮಾಮೂಲು ಬೆಳೆಗಳಿಂದ ತೋಟಗಾರಿಕೆ ಬೆಳೆಗಳಿಗೆ ಹೋಗುವವರಿಗೆ ಹೆಕ್ಟೇರ್‌ಗೆ ₹5ರಿಂದ ₹10 ಸಾವಿರ ಕೊಡಲು ಯೋಚನೆ ಮಾಡಿದ್ದಾರೆ.ರೈತ ಸಿರಿ ಮುಂದುವರಿಸಿದ್ದಾರೆ. ಏತ ನೀರಾವರಿಗೆ ₹ 5 ಸಾವಿರ ಕೋಟಿ ಇಟ್ಟಿದ್ದಾರೆ.

ಸಾಮಾನ್ಯವಾಗಿ ಬಿಜೆಪಿಯವರು ಅಲ್ಪಸಂಖ್ಯಾತರಿಗೆ ಏನೂ ಕೊಡುವುದಿಲ್ಲ ಎನ್ನುವ ಮಾತಿದೆ. ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಅಲ್ಪಸಂಖ್ಯಾತರಿಗೆ ಮನೆಕಟ್ಟಿಕೊಡಲು ₹ 200 ಕೋಟಿ ಮೀಸಲಿಟ್ಟಿದ್ದಾರೆ. ಆದರೆ ಅದು ಯಾರಿಗೆ ಅಂತ ಹೇಳಿಲ್ಲ. ಅದನ್ನು ನಾವು ಮುಸ್ಲಿಮರಿಗೆ ಅಥವಾ ಕ್ರಿಶ್ಚಿಯನ್ನರಿಗೆ ಎಂದು ಅಂದುಕೊಳ್ಳಬಹುದು.ಅಲ್ಪಸಂಖ್ಯಾತರ ಇಲಾಖೆ ವ್ಯಾಪ್ತಿಯ 5 ಮೊರಾರ್ಜಿ ಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳಿಗೆ ಮೇಲ್ದರ್ಜೆಗೆ ಏರಿಸುತ್ತಿದ್ದಾರೆ.ರಾಜೀವ್ ಗಾಂಧಿ ವಸತಿ ನಿಗಮದಿಂದ 10 ವರ್ಷದವರೆಗೆ ಸಾಲ ಕೊಡ್ತಿದ್ದರು. 10 ವರ್ಷವಾದರೂ ಸಾಲ ತೀರದವರಿಗೆ ಮನೆ ಬಿಟ್ಟುಕೊಡ್ತಾರಂತೆ. ಹಲವರಿಗೆ ಮನೆಗಳ ಮೇಲೆ ಹಕ್ಕು ಬಿಟ್ಟುಕೊಡುವ ಕಾರ್ಯಕ್ರಮ ಅದು.

ರವೀಂದ್ರ ಭಟ್ಟ: ಅಂಥ ಒಳ್ಳೇ ಕಾರ್ಯಕ್ರಮಗಳು ಎಲ್ಲ ಬಜೆಟ್‌ಗಳಲ್ಲಿಯೂ ಇದ್ದೇ ಇರ್ತಾವೆ. ಒಟ್ಟಾರೆಯಾಗಿ ವಿಶ್ಲೇಷಣೆ ಮಾಡುವಾಗ ನಮ್ಮ ರಾಜ್ಯವನ್ನು ಮುನ್ನಡೆಸುವ ಯೋಜನೆಗಳು ಎಷ್ಟಿವೆ ಅಂತ ಆಲೋಚನೆ ಮಾಡಬೇಕಾಗುತ್ತೆ.ಯಡಿಯೂರಪ್ಪ ಅವರ ಬಜೆಟ್‌ನಲ್ಲಿ ಮಠಗಳಿಗೆ ಹಣ ಕೊಡ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು. ಆದರೆ ಈಸಲ ಯಡಿಯೂರಪ್ಪ ಅದರಿಂದ ಹೊರಗೆ ಬಂದಿದ್ದಾರೆ.

ಜಗದೀಶ್: ‘ಮಠ ಮತ್ತು ದೇಗುಲಗಳಿಗೆ ಈ ಸಲ ನಾನು ಹಣ ಕೊಟ್ಟಿಲ್ಲ. ಆದರೆ ಅವುಗಳ ಕಡೆಗೆನನ್ನ ಬದ್ಧತೆ ಎಂದಿಗೂ ಬದಲಾಗುವುದಿಲ್ಲ’ ಎಂದು ಯಡಿಯೂರಪ್ಪ ಹೇಳಿದ್ದಾರೆ.ಅನುಭವ ಮಂಟಪ, ಶಿಶುನಾಳ ಷರೀಫರ ಸಮಾಧಿ, ಲಂಬಾಣಿ ಭಾಷೆ ಅಭಿವೃದ್ಧಿ, ಎಸ್‌.ಎಲ್.ಬೈರಪ್ಪನವಸಂತೆ ಶಿವರ, ಅಂಬಿಗರ ಚೌಡಯ್ಯ ಮತ್ತು ಆರ್ಯವೈಶ್ಯರಿಗೆ ₹ 10ರಿಂದ 50 ಕೋಟಿಯಷ್ಟು ಅನುದಾನಕೊಟ್ಟಿದ್ದಾರೆ.

ಒಟ್ಟಾರೆ ಬಜೆಟ್ ನೋಡಿದಾಗ ರಾಜ್ಯದಲ್ಲಿದೊಡ್ಡಮಟ್ಟದ ಸಂಪನ್ಮೂಲ ಇಲ್ಲ ಎನ್ನುವುದು ಎದ್ದು ಕಾಣಿಸುತ್ತದೆ. ಇರುವ ಸಂಪನ್ಮೂಲದಲ್ಲೇ ಚಂದದ ಗುಡಿ ಕಟ್ಟುವಕನಸು ಕಾಣಿಸುವ ಬಜೆಟ್ ಕೊಟ್ಟಿದ್ದಾರೆ. ದೂರದರ್ಶಿತ್ವ ಇಲ್ಲ. ಬಜೆಟ್ ಮೇಲಿನ ಚರ್ಚೆ ಮತ್ತು ಧನ ವಿನಿಯೋಗಕ್ಕೆ ಅನುಮೋದನೆ ಪಡೆದುಕೊಳ್ಳುವಾಗ ಹೊಸದಾಗಿ ಅಂಥ ಘೋಷಣೆಗಳು ಹೊರಬೀಳುತ್ತಾವೇನೋ ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT