ಶನಿವಾರ, ಮೇ 15, 2021
26 °C

ಬಜೆಟ್ ವಿಶ್ಲೇಷಣೆ | ನಗರದ ಪುನಃಶ್ಚೇತನ– ಚಿಗುರಿದ ಕನಸು?

ಶ್ರೀನಿವಾಸ ಅಲವಿಲ್ಲಿ Updated:

ಅಕ್ಷರ ಗಾತ್ರ : | |

Prajavani

ಸಮೂಹ ಸಾರಿಗೆ ಬಗ್ಗೆ ಹೆಚ್ಚಿನ ಗಮನ ಹರಿಸುವ ಮೂಲಕ ಸರ್ಕಾರ ಕೊನೆಗೂ ನಗರದ ಸಂಚಾರ ಹಾಗೂ ಮಾಲಿನ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆ ಬಗ್ಗೆ ಕಣ್ಣು ತೆರೆದಂತೆ ತೋರುತ್ತಿದೆ. ನಗರದಲ್ಲಿ ಈಗಿರುವ ಸಮೂಹ ಸಾರಿಗೆ ಬಳಕೆಯ ಪ್ರಮಾಣವನ್ನು (ಈಗಿರುವುದು ಶೇ 48ರಷ್ಟು) ಶೇ 73ಕ್ಕೆ ಹೆಚ್ಚಿಸುವ ಗುರಿ ನಿಗದಿಪಡಿಸಿದ್ದಷ್ಟೇ ಅಲ್ಲ, ಅದನ್ನು ಈಡೇರಿಸುವ ಕಾರ್ಯಕ್ರಮಗಳ ಬಗ್ಗೆಯೂ ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ.

ರಸ್ತೆ ವಿಸ್ತರಣೆ, ಮೇಲ್ಸೇತುವೆಗಳ ನಿರ್ಮಾಣ, ಎಲಿವೇಟೆಡ್‌ ಕಾರಿಡಾರ್‌ಗಳ ನಿರ್ಮಾಣ ಮುಂತಾದ ಕಾಂಕ್ರೀಟ್ ಆಧರಿತ ಪರಿಹಾರೋಪಾಯಗಳು ತೀರಾ ಹಳೆಯವು; ಅಷ್ಟೇ ಅಲ್ಲ, ಅವುಗಳು ಸಮಸ್ಯೆಯನ್ನು ಇನ್ನಷ್ಟು ವಿಕೋಪಕ್ಕೆ ಕೊಂಡೊಯ್ಯಬಲ್ಲವು. ಎಲಿವೇಟೆಡ್‌ ಕಾರಿಡಾರ್‌ ಯೋಜನೆ ಬಗ್ಗೆ ಪ್ರಸ್ತಾಪ ಮಾಡದೇ ಇರುವುದು, ಹೆಚ್ಚುವರಿಯಾಗಿ 12 ಬಸ್‌ ಆದ್ಯತಾ ಪಥಗಳನ್ನು ಆರಂಭಿಸುತ್ತಿರುವುದು, ಹೊಸದಾಗಿ 1500 ಬಸ್‌ಗಳನ್ನು (ಎಲೆಕ್ಟ್ರಿಕ್‌ ಬಸ್‌ಗಳು ಹಾಗೂ ಮೆಟ್ರೊ ಸಂಪರ್ಕ ಸಾರಿಗೆ ಬಸ್‌ಗಳು ಸೇರಿದಂತೆ 870 ಬಸ್‌ಗಳ ಖರೀದಿ ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿದ್ದು, ಇವುಗಳ ಹೊರತಾಗಿ ಖರೀದಿಸಲು ಅನುದಾನ ನೀಡಲಾಗುತ್ತಿದೆ) ಖರೀದಿಸುತ್ತಿರುವುದು, ಉಪನಗರ ರೈಲು ಯೋಜನೆಗೆ ₹ 500 ಕೋಟಿ ಅನುದಾನ ಒದಗಿಸಿದ್ದು, ಹೊರ ವರ್ತುಲ ರಸ್ತೆ ಮೂಲಕ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಮೆಟ್ರೊ ಸಂಪರ್ಕ ಕಲ್ಪಿಸುತ್ತಿರುವುದು.. ನಮ್ಮ ನಗರವು ಪುನಃಶ್ಚೇತನದ ಹಾದಿಗೆ ಮರಳಿದೆ ಎಂಬುದರ ಆರಂಭಿಕ ಸೂಚನೆಗಳು.

ಬಸ್‌ ಸಾರಿಗೆ ಮೇಲೆ ಭಾರಿ ಪ್ರಮಾಣದ ಹೂಡಿಕೆ ಮಾಡದ ಹೊರತು ನಗರದ ಸಂಚಾರ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಸಾಧ್ಯವೇ ಇಲ್ಲ. ಬಸ್‌ಗಳು ವೇಗವಾಗಿ, ನಂಬಿಕಾರ್ಹವಾಗಿ ಸಂಚರಿಸುವಂತಾಗಬೇಕು ಮತ್ತು ಅವುಗಳ ಪ್ರಯಾಣ ದರ ಕೈಗೆಟಕುವಂತಿರಬೇಕು. ಪ್ರಯಾಣ ದರ ಕಡಿಮೆ ಮಾಡುವ ಸಲುವಾಗಿ ಬಿಎಂಟಿಸಿಗೆ ಯಾವುದೇ ಬಜೆಟ್‌ನಲ್ಲೂ ಹಣ ಒದಗಿಸಿಲ್ಲ ಎಂಬ ಅಂಶ ನಿರಾಶದಾಯಕವಾದುದು. ಆದರೆ, ಈ ನಡುವೆಯೇ ಗಾರ್ಮೆಂಟ್ಸ್‌ ಕಾರ್ಖಾನೆಗಳ ಮಹಿಳಾ ಕಾರ್ಮಿಕರು ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು 1 ಲಕ್ಷದಷ್ಟು ಪಾಸ್‌ ನೀಡುತ್ತಿರುವುದು ಸ್ವಾಗತಾರ್ಹ ನಡೆ. ಹೊರ ವರ್ತುಲ ರಸ್ತೆಯಲ್ಲಿ ಸಿಲ್ಕ್‌ ಬೋರ್ಡ್‌ನಿಂದ ಕೆ.ಆರ್‌.ಪುರ ನಡುವೆ ಆರಂಭಿಸಿದ ಮೊದಲ ಬಸ್‌ ಆದ್ಯತಾ ಪಥ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲಿಲ್ಲ. ಆದರೆ, ಆದ್ಯತಾ ಪಥದಿಂದ ಏನೆಲ್ಲ ಪ್ರಯೋಜನಗಳಾಗುತ್ತವೆ ಎಂಬುದು ಸ್ಪಷ್ಟವಾಗಿ ಗೋಚರಿಸಿದೆ. ಸಂಚಾರ ದಟ್ಟನೆ ಹೆಚ್ಚು ಇರುವ ಎಲ್ಲ 12 ಕಾರಿಡಾರ್‌ಗಳಲ್ಲೂ ಬಸ್‌ಗಳಿಗೆ ಆದ್ಯತಾ ಪಥ ಹೊಂದಲು ಸಾಧ್ಯವಾದರೆ, ಅದರಿಂದ ನಗರದ ಸಂಚಾರ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ ಕಾಣಲು ಸಾಧ್ಯ.

ಬೈಯಪ್ಪನಹಳ್ಳಿ– ಹೊಸೂರು– ಯಶವಂತಪುರ ನಡುವಿನ ರೈಲು ಮಾರ್ಗದಲ್ಲಿ ಜೋಡಿ ಹಳಿ ನಿರ್ಮಾಣ ವೆಚ್ಚದಲ್ಲಿ ಶೇ 50ರಷ್ಟು ಪಾಲನ್ನು ರಜ್ಯ ಸರ್ಕಾರವೇ ಭರಿಸಲು ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ. ಹೊರವರ್ತುಲ ರಸ್ತೆ ಆಸುಪಾಸಿನಲ್ಲಿರುವ ಮಾಹಿತಿ ತಂತ್ರಜ್ಞಾನ ಹಬ್‌ ಜೊತೆಗೆ ಹಾಗೂ ಎಲೆಕ್ಟ್ರಾನಿಕ್‌ ಸಿಟಿ ಜೊತೆಗೆ ಇಡೀ ನಗರವನ್ನು ಈ ರೈಲು ಮಾರ್ಗವು (ನಮ್ಮ ಮೆಟ್ರೊ ಮೂಲಕ) ಜೋಡಿಸುತ್ತದೆ. ಕಾರುಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ಓಡಾಡುವುದು ಇಲ್ಲಿಯೇ! ಉಪನಗರ ರೈಲು ಯೋಜನೆ ಈಗಲೂ ಕೇಂದ್ರ ಸರ್ಕಾರದಲ್ಲಿ ಸಿಕ್ಕಿಹಾಕಿಕೊಂಡಿದೆ. ಈ ಸಣ್ಣ ಯೋಜನೆ ಜಾರಿಯಾಯಿತೆಂದರೆ ಅದರಿಂದ ಭಾರಿ ಪರಿಣಾಮವನ್ನೇ ಕಾಣಬಹುದು.

ಒಳ್ಳೆ ಸುದ್ದಿಗಳನ್ನು ಕೇಳಿದಾಗ ಮೈಮರೆಯುವುದು ಸುಲಭ. ಆದರೆ, ಕಟು ಸತ್ಯವೇನೆಂದರೆ ಇವತ್ತಿನವರೆಗೂ ನಗರಕ್ಕೆ ಒಂದು ಸಮಗ್ರ ಸಂಚಾರ ಯೊಜನೆಯೇ ಇಲ್ಲ. ಬೆಂಗಳೂರಿನಂತಹ ವಿಶ್ವವಿಖ್ಯಾತ ನಗರಕ್ಕೆ ಏಕೀಕೃತ ಸಾರಿಗೆ ಯೋಜನಾ ಪ್ರಾಧಿಕಾರದ ಅಗತ್ಯವಿದೆ.

ಕಸದ ಮಾಫಿಯಾವನ್ನು ಹತ್ತಿಕ್ಕುವ ಹಾಗೂ ಕಸದ ನಿರ್ವಹಣೆಯನ್ನು ವಿಕೇಂದ್ರೀಕರಣಗೊಳಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ ಎಂಬುದನ್ನು ಕಸದಿಂದ ವಿದ್ಯುತ್‌ ಉತ್ಪಾದಿಸುವ ಯೋಜನೆ ತೋರಿಸುತ್ತದೆ. ಕಸವನ್ನು ಬೇರೆಡೆಗೆ ಒಯ್ಯುವ ಪರಿಪಾಠವನ್ನು ಕಡಿಮೆಗೊಳಿಸುವ ಬದಲು ಕಸವನ್ನು ಬಿಡದಿಗೆ ಕೊಂಡೊಯ್ಯಲು ಸಿದ್ಧತೆ ನಡೆಸುತ್ತಿರುವುದು ವಿಪರ್ಯಾಸ.

ಕಾವೇರಿ ನೀರಿನ ಮೇಲೆ ಅತಿಯಾದ ಅವಲಂಬನೆ ನಿಜಕ್ಕೂ ಕಿರಿಕಿರಿದಾಯಕವಾದುದು. ನಮ್ಮ ಕೆರೆಗಳನ್ನು ಕುಡಿಯುವ ನೀರಿನ ಮೂಲಗಳನ್ನಾಗಿ ಪರಿವರ್ತಿಸುವುದಕ್ಕೆ ಇನ್ನೂ ಹೆಚ್ಚಿನ ಅನುದಾನದ ಅಗತ್ಯವಿದೆ. ಆದರೆ, ಈ ಬಜೆಟ್‌ನಲ್ಲಿ ಪ್ರಸ್ತಾಪಿಸಿರುವ ಅಂಶಗಳನ್ನು ನೋಡಿದರೆ ಕೆರೆ ಪುನಶ್ಚೇತನವೆಂದರೆ ಹಸಿರು ತಾಣಗಳ ಸೃಷ್ಟಿ ಎಂಬ ಭಾವನೆ ಮೂಡುತ್ತದೆ. ರಾಜಕಾಲುವೆಗಳೂ ಈ ಬಜೆಟ್‌ನಲ್ಲಿ ಕಡೆಗಣನೆಗೆ ಒಳಗಾಗಿವೆ.

ಬೆಂಗಳೂರು ಮುನ್ಸಿಪಲ್‌ ಕಾಯ್ದೆ ಬಗ್ಗೆ ಉಲ್ಲೇಖ ಮಾಡಿರುವುದು ವಿಕೇಂದ್ರೀಕೃತ ಹಾಗೂ ಉತ್ತಮ ಆಡಳಿತ ವ್ಯವಸ್ಥೆ ಹೊಂದಿರುವ ಬೆಂಗಳೂರಿನ ಬಗ್ಗೆ ಆಶಾವಾದ ಮೂಡಿಸಿದೆ. ಮೇಯರ್‌ ಹಾಗೂ ಚುನಾಯಿತ ಕೌನ್ಸಿಲ್‌ ಇನ್ನಷ್ಟು ಬಲಗೊಳ್ಳುತ್ತದೆ ಹಾಗೂ ನಗರದ ವಾರ್ಷಿಕ ಬಜೆಟ್‌ ಕೂಡಾ ರಾಜ್ಯ ಸರ್ಕಾರದ ಬಜೆಟ್‌ನಷ್ಟೇ ಕುತೂಹಲ ಸೃಷ್ಟಿಸುತ್ತದೆ ಎಂಬುದೇ ಇದರ ಅರ್ಥ ಎಂದು ನಾನು ಭಾವಿಸಿದ್ದೇನೆ. ಅದು ನಿಜಕ್ಕೂ ಸಾಕಾರಗೊಳ್ಳುತ್ತದೆಯೇ?

(ಲೇಖಕರು, ಸಿಟಿಜನ್ಸ್‌ ಫಾರ್‌ ಬೆಂಗಳೂರು ಸಂಘಟನೆಯ ಸಹ ಸಂಸ್ಥಾಪಕ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು