ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Karnataka Budget | ಗಿಗ್‌ ಕಾರ್ಮಿಕರಿಗೆ ಬೆಲ್ಲ, ಬೀದಿಬದಿ ವ್ಯಾಪಾರಿಗಳಿಗೆ ಬೇವು

Published 17 ಫೆಬ್ರುವರಿ 2024, 0:12 IST
Last Updated 17 ಫೆಬ್ರುವರಿ 2024, 0:12 IST
ಅಕ್ಷರ ಗಾತ್ರ

ಬೆಂಗಳೂರು: ಸಾರಿಗೆ ಅಸಂಘಟಿತ ಕಾರ್ಮಿಕರಿಗೆ, ಗಿಗ್‌ ಕಾರ್ಮಿಕರಿಗೆ (ಸ್ವತಂತ್ರ ಕಾರ್ಮಿಕರು) ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು ಸರ್ಕಾರ ಮುಂದಡಿ ಇಟ್ಟಿದೆ. ಆದರೆ, ಬೀದಿಬದಿ ವ್ಯಾಪಾರಸ್ಥರ ಅಭಿವೃದ್ಧಿಗಾಗಿ ಯಾವುದೇ ಕಾರ್ಯಕ್ರಮಗಳು ಘೋಷಣೆಯಾಗಿಲ್ಲ.

ಪ್ಲಾಟ್‌ಫಾರ್ಮ್‌ ಆಧಾರಿತ ಗಿಗ್ ಕಾರ್ಮಿಕರ ನಿಧಿ ಮತ್ತು ಕಲ್ಯಾಣ ಶುಲ್ಕ ಮಸೂದೆಯನ್ನು ಮಂಡಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಆನ್‌ಲೈನ್‌ ವಹಿವಾಟುಗಳ ಮೇಲೆ ಸೆಸ್‌ ವಿಧಿಸಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ತಿಳಿಸಿದೆ.

ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ ಸಾರಿಗೆ ವಾಹನಗಳ ಕಾರ್ಮಿಕರಿಗೆ ಭದ್ರತಾ ಮತ್ತು ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು ಸರ್ಕಾರ ಹೊರಟಿದೆ. ವಾಣಿಜ್ಯ ಸಾರಿಗೆ ವಾಹನಗಳ ನೋಂದಣಿಯ ಮೇಲೆ ಸುಂಕವನ್ನು ವಿಧಿಸುವ ಮೂಲಕ ಅದಕ್ಕೆ ನಿಧಿ ಸಂಗ್ರಹಿಸಲು ನಿರ್ಧರಿಸಿದೆ. ಅಲ್ಲದೇ, ವಾಹನ ಚಾಲಕರಿಗೆ ನಿಲ್ದಾಣ/ಹೆದ್ದಾರಿ ಬದಿಯಲ್ಲಿ ಮೂಲಸೌಕರ್ಯ ಒದಗಿಸಲು ನಿರ್ಧರಿಸುವ ಮೂಲಕ ಲಾರಿ ಚಾಲಕರ ಬಹುಕಾಲದ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ.

ಆಶಾದೀಪ ಯೋಜನೆಯಡಿ ಅಪ್ರೆಂಟಿಸ್ ತರಬೇತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ನೀಡುವ ಸೌಲಭ್ಯಗಳನ್ನು ವಿಸ್ತರಿಸಲು ವಿವಿಧ ಕ್ರಮಗಳನ್ನು ಕೈಗೊಂಡಿದೆ. 

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ವಲಸೆ ಹೋದ ಸಂದರ್ಭದಲ್ಲಿ ಅವರಿಗೆ ತಾತ್ಕಾಲಿಕ ವಸತಿ ಸೌಲಭ್ಯ ಒದಗಿಸಲು ಆಯ್ದ 10 ಜಿಲ್ಲೆಗಳಲ್ಲಿ ₹100 ಕೋಟಿ ವೆಚ್ಚದಲ್ಲಿ ತಾತ್ಕಾಲಿಕ ವಸತಿ ಸಮುಚ್ಛಯಗಳನ್ನು ನಿರ್ಮಿಸಲು ನಿರ್ಧರಿಸುವ ಮೂಲಕ ಉತ್ತಮ ಹೆಜ್ಜೆ ಇಟ್ಟಿದೆ.

ಇ.ಎಸ್.ಐ ಯೋಜನೆಯಡಿ ₹311 ಕೋಟಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಸೇವೆ, ಡಿಜಿಟಲ್‌ ಡಯಾಗ್ನೊಸ್ಟಿಕ್‌ ಕಿಯೊಸ್ಕ್‌, ಮೊಬೈಲ್‌ ಹೆಲ್ತ್‌ ಯುನಿಟ್‌, 40 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ಸಮಗ್ರ ಆರೋಗ್ಯ ತಪಾಸಣೆ, ವಿಮಾದಾರರಿಗೆ ಟೆಟನಸ್‌ ಮತ್ತು ಹೆಪಟೈಟಿಸ್‌ ಲಸಿಕೆ ಕಾರ್ಯಕ್ರಮ ಹಾಗೂ ರೋಗಪತ್ತೆಗೆ ಅತ್ಯಾಧುನಿಕ ಕೇಂದ್ರ ಸ್ಥಾಪನೆ ಮುಂತಾದ ಯೋಜನೆ ಕಾರ್ಮಿಕರ ಆರೋಗ್ಯ ರಕ್ಷಣೆಗೆ ಪೂರಕವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT