ಗುರುವಾರ , ಜುಲೈ 7, 2022
23 °C

ಬಜೆಟ್ ಅಧಿವೇಶನ: ಮೋದಿ ಸರ್ಕಾರದ ಯೋಜನೆಗಳನ್ನು ಶ್ಲಾಘಿಸಿದ ರಾಷ್ಟ್ರಪತಿ ಕೋವಿಂದ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕಲ್ಯಾಣ ಯೋಜನೆಗಳನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶ್ಲಾಘಿಸಿದರು.

ಬಜೆಟ್ ಅಧಿವೇಶನ ಆರಂಭದ ದಿನವಾದ ಸೋಮವಾರ ಸಂಸತ್‌ನ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು ಲಸಿಕಾ ಅಭಿಯಾನದ ಯಶಸ್ಸು, ಆರೋಗ್ಯ ಮೂಲಸೌಕರ್ಯ ವೃದ್ಧಿ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು.

ರಾಷ್ಟ್ರಪತಿ ಭಾಷಣದ ಮುಖ್ಯಾಂಶಗಳು...

* ಇದು ಕೋವಿಡ್-19 ಸಾಂಕ್ರಾಮಿಕದ ಮೂರನೇ ವರ್ಷ. ಕೊರೊನಾ ವೈರಸ್‌ ಎದುರಿಸುವಲ್ಲಿ ಭಾರತವು ಪ್ರಬಲವಾಗಿ ಹೊರಹೊಮ್ಮಿದ್ದನ್ನು ನಾವು ನೋಡಿದ್ದೇವೆ. ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ ಸಂದರ್ಭದಲ್ಲಿ ನಾನು ಪ್ರತಿಯೊಬ್ಬ ಭಾರತೀಯನನ್ನೂ ಅಭಿನಂದಿಸುತ್ತೇನೆ. ತನ್ನ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಪಡೆಯಲು ಭಾರತಕ್ಕೆ ಸಹಾಯ ಮಾಡಿದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ನಾನು ಗೌರವವನ್ನು ಸಲ್ಲಿಸುತ್ತೇನೆ

* ಹಿಂದೆ ಆಗಿ ಹೋಗಿರುವುದನ್ನು ನೆನಪಿಸಿಕೊಳ್ಳುವುದು ಮತ್ತು ಅದರಿಂದ ಕಲಿಯುವುದು ದೇಶದ ಭವಿಷ್ಯಕ್ಕೆ ಬಹಳ ಮುಖ್ಯ ಎಂಬುದರಲ್ಲಿ ಸರ್ಕಾರ ನಂಬಿಕೆ ಇರಿಸಿದೆ.

* ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾಗಿಯಾದ ಎಲ್ಲ ಮುಂಚೂಣಿ ಹಾಗೂ ಆರೋಗ್ಯ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ. ಶೇ 75ಕ್ಕೂ ಹೆಚ್ಚು ಮಂದಿಗೆ ಕೋವಿಡ್‌ ಲಸಿಕೆಯ ಎರಡೂ ಡೋಸ್ ನೀಡಿದ ದೇಶಗಳ ಸಾಲಿಗೆ ನಾವೂ ಸೇರಿದ್ದೇವೆ. ಸಾಂಕ್ರಾಮಿಕವನ್ನು ಸೋಲಿಸಲು ಎಲ್ಲ ರಾಜ್ಯಗಳು ಹಾಗೂ ಕೇಂದ್ರ ಸರ್ಕಾರ ಅವಿಶ್ರಾಂತವಾಗಿ ಕೆಲಸ ಮಾಡಿವೆ.

ಇದನ್ನೂ ಓದಿ: 

* ಸರ್ಕಾರವು ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳಲ್ಲಿ ನಂಬಿಕೆ ಇರಿಸಿದೆ. ಅಂಬೇಡ್ಕರ್ ಆದರ್ಶವು ಅವರ ಬಡವರ ಪರ ನೀತಿಗಳಿಂದ ವ್ಯಕ್ತಗೊಂಡಿದೆ.

* 2 ಕೋಟಿಗೂ ಹೆಚ್ಚು ಬಡ ಕುಟುಂಬಗಳಿಗೆ ಸರ್ಕಾರವು ಮನೆಗಳನ್ನು ನೀಡಿದೆ. ಹಳ್ಳಿಗಳಲ್ಲಿರುವ 6 ಕೋಟಿ ಕುಟುಂಬಗಳಿಗೆ ಕುಡಿಯುವ ನೀರಿನ ಸಂಪರ್ಕವನ್ನು ಕಲ್ಪಿಸಿದೆ. ಬಡವರು ಹಸಿವಿನಿಂದ ಬಳಲದೇ ಇರುವುದನ್ನು ಖಾತರಿಪಡಿಸಿಕೊಂಡಿದೆ.

* ಕಷ್ಟದಲ್ಲಿರುವ ರೈತರಿಗೆ ₹1 ಲಕ್ಷ ಕೋಟಿ ಪರಿಹಾರ ನೀಡಲಾಗಿದೆ. 1,900 ಕಿಸಾನ್ ರೈಲುಗಳು 6 ಲಕ್ಷ ಟನ್‌ಗಳಷ್ಟು ಆಹಾರ ಧಾನ್ಯಗಳನ್ನು ಸಾಗಾಟ ಮಾಡಿವೆ.

* ಮಹಿಳಾ ಸಬಲೀಕರಣವು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಸರ್ಕಾರವು ಸಮಾಜವನ್ನು ತ್ರಿವಳಿ ತಲಾಕ್‌ ಮುಕ್ತಗೊಳಿಸಿದೆ.

* ಕಳೆದ ಕೆಲವು ತಿಂಗಳುಗಳಲ್ಲಿ ₹1 ಲಕ್ಷ ಕೋಟಿಗೂ ಹೆಚ್ಚು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವಾಗಿದೆ.

* ಮಧ್ಯಮ, ಸಣ್ಣ ಹಾಗೂ ಅತಿಸಣ್ಣ ಉದ್ದಿಮೆಗಳಿಗೆ ₹3 ಲಕ್ಷ ಕೋಟಿ ಮೇಲಾಧಾರ ಮುಕ್ತ ಸಾಲ ನೀಡಲಾಗಿದೆ.

* ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ ಸ್ಥಳೀಯ ಭಾಷೆಗಳಿಗೆ ಉತ್ತೇಜನ ನೀಡಲಾಗುತ್ತಿದೆ.

* ದಾಖಲೆಯ ಸಂಖ್ಯೆಯಲ್ಲಿ ಪದಕಗಳನ್ನು ಗೆಲ್ಲುವ ಮೂಲಕ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಯುವ ಶಕ್ತಿ ಆನಾವರಣಗೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು