ಬುಧವಾರ, ಫೆಬ್ರವರಿ 19, 2020
23 °C

ಬಜೆಟ್‌ 2020 | ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ₹22,000 ಕೋಟಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ನಿರಂತರ ವಿದ್ಯುತ್‌ ಪೂರೈಸುವ ಗುರಿ ಸಾಧಿಸಲು ಮತ್ತು ಪೂರೈಕೆದಾರರನ್ನು ಹಾಗೂ ದರ ಆಯ್ಕೆಯ ಸ್ವಾತಂತ್ರ್ಯವನ್ನು ಗ್ರಾಹಕರಿಗೆ ಒದಗಿಸಲು ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ 2020–2021ರ ಅವಧಿಗೆ ₹22,000 ಕೋಟಿ ಅನುದಾನವನ್ನು ಶನಿವಾರ ಮಂಡಿಸಿದ ಬಜೆಟ್‌ನಲ್ಲಿ ಒದಗಿಸಲಾಗಿದೆ. 

ಮುಂದಿನ ಮೂರು ವರ್ಷಗಳಲ್ಲಿ ಸಾಂಪ್ರದಾಯಿಕ ವಿದ್ಯುತ್‌ ಮೀಟರ್‌ಗಳನ್ನು ಸ್ಮಾರ್ಟ್‌ ಮೀಟರ್‌ಗಳಾಗಿ ಪರಿವರ್ತಿಸಬೇಕು ಎಂದು ಎಲ್ಲ ರಾಜ್ಯಗಳಿಗೆ ಸೂಚಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಇದರಿಂದಾಗಿ ಗ್ರಾಹಕರಿಗೆ ಸೇವಾ ಪೂರೈಕೆದಾರರ ಆಯ್ಕೆ ಮತ್ತು ಸೂಕ್ತ ವಿದ್ಯುತ್‌ ದರ ಒದಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಪ್ರೀಪೇಯ್ಡ್‌ ಸ್ಮಾರ್ಟ್‌ ಮೀಟರ್‌ಗಳ ಅಳವಡಿಕೆಯಿಂದ ಸಾಂಪ್ರದಾಯಿಕ ಮೀಟರ್‌ನಿಂದ ಬಿಲ್‌ ನೀಡುವುದು ಮತ್ತು ಸಂಗ್ರಹಿಸುವ ವೆಚ್ಚ ಉಳಿತಾಯವಾಗಲಿದೆ. ಇದು ಸಾರ್ವಜನಿಕ ದಕ್ಷತೆಯನ್ನೂ ಸುಧಾರಿಸಲಿದೆ. ಇಂಧನ ಸಚಿವಾಲಯ ಸಹ ವಿದ್ಯುತ್‌ ದರ ಕಡಿಮೆ ಮಾಡುವಂತೆ ರಾಜ್ಯಗಳಿಗೆ ಕೋರಿಕೆ ಸಲ್ಲಿಸಿದೆ. 

ಪ್ರತಿಯೊಂದೂ ಮನೆಗೆ ವಿದ್ಯುತ್‌ ಪೂರೈಸುವುದು ಸರ್ಕಾರದ ಪ್ರಮುಖ ಯಶಸ್ಸು ಎಂದು ಹೇಳಬಹುದು ಎಂದ ಸಚಿವರು, ಸೌಭಾಗ್ಯ ಯೋಜನೆ ಉಲ್ಲೇಖಿಸಿದರು. ಈ ಯೋಜನೆ ಅಡಿಯಲ್ಲಿ 2.66 ಕೋಟಿ ಕುಟುಂಬಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ದುರ್ಗಮ ಪ್ರದೇಶಗಳಲ್ಲಿ ಮತ್ತು ನಕ್ಸಲ್‌ ಪೀಡಿತ ಜಿಲ್ಲೆಗಳಲ್ಲಿನ ಕೆಲವು ಮನೆಗಳನ್ನು ಹೊರತುಪಡಿಸಿ ಉಳಿದ ಕಡೆ ವಿದ್ಯುತ್‌ ಸಂಪರ್ಕ ಒದಗಿಸಲಾಗಿದೆ ಎಂದು ಹೇಳಿದರು. 

ಹಳೆಯ ಉಷ್ಣ ವಿದ್ಯುತ್‌ ಸ್ಥಾವರಗಳನ್ನು ಬಂದ್‌ ಮಾಡುವ ಮೂಲಕ 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಶುದ್ಧ ಗಾಳಿಯನ್ನು ಒದಗಿಸುವ ಕಾರ್ಯಕ್ರಮಕ್ಕಾಗಿ ₹4,400 ಕೋಟಿ ಅನುದಾನ ಒದಗಿಸಲಾಗಿದೆ. ಸ್ಥಗಿತಗೊಂಡಿರುವ ಉಷ್ಣ  ವಿದ್ಯುತ್‌ ಸ್ಥಾವರಗಳ ಭೂಮಿಯನ್ನು ಪರ್ಯಾಯ ಉದ್ದೇಶಗಳಿಗೆ ಬಳಸಬಹುದು. ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವ ರಾಜ್ಯಗಳಿಗೆ ಪ್ರಯೋಜನಗಳನ್ನು ಒದಗಿಸಲು ಪರಿಸರ ಸಚಿವಾಲಯ ಮಾನದಂಡ ರೂಪಿಸಲಿದೆ ಎಂದು ಸಚಿವರು ತಿಳಿಸಿದರು.

ನಿಗದಿತ ಮಟ್ಟಕ್ಕಿಂತ ಹೆಚ್ಚಿಗೆ ತ್ಯಾಜ್ಯ ಹೊರಸೂಸುವ ಎಲ್ಲ ಉಷ್ಣ ವಿದ್ಯುತ್‌ ಸ್ಥಾವರಗಳನ್ನು ರಾಜ್ಯಗಳು ಬಂದ್‌ ಮಾಡಬಹುದು.

ವಿದ್ಯುತ್‌ ವಿತರಿಸುವ ಕಂಪನಿಗಳ (ಡಿಸ್ಕಾಮ್ಸ್‌) ಒತ್ತಡವನ್ನು ಪ್ರಸ್ತಾಪಿಸಿದ ಅವರು, ಸಾಲದ ಹೊರೆಯಲ್ಲಿರುವ ವಿತರಣಾ ಕಂಪನಿಗಳ ಪುನರುಜ್ಜೀವನಕ್ಕಾಗಿ ಯಾವುದೇ ಹೊಸ ಅಥವಾ ಪರಿಷ್ಕೃತ ಯೋಜನೆ ಬಗ್ಗೆ ನಿರ್ದಿಷ್ಟವಾಗಿ ಅವರು ಉಲ್ಲೇಖಿಸಲಿಲ್ಲ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು