ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Union Budget 2023: ಆನ್‌ಲೈನ್‌ ಆಟ: ಗಳಿಕೆಗೆ ಶೇ 30 ತೆರಿಗೆ

ಹಣಕಾಸು ವರ್ಷದ ಕೊನೆಯಲ್ಲಿ ಟಿಡಿಎಸ್‌ ಕಡಿತ
Last Updated 1 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ಆನ್‌ಲೈನ್‌ ಆಟಗಳಲ್ಲಿ ಗೆಲುವು ಸಾಧಿಸಿದವರಿಗೆ ಸಿಗುವ ಮೊತ್ತಕ್ಕೆ ಶೇಕಡ 30ರಷ್ಟು ತೆರಿಗೆ ವಿಧಿಸುವ ಪ್ರಸ್ತಾವನೆಯು 2023–24ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿದೆ. ಅಲ್ಲದೆ, ಈಗ ಚಾಲ್ತಿಯಲ್ಲಿ ಇರುವ ಮಿತಿಯಾಗಿರುವ ₹ 10 ಸಾವಿರವನ್ನು ತೆಗೆದುಹಾಕುವ ಪ್ರಸ್ತಾವ ಕೂಡ ಇದೆ.

ಆನ್‌ಲೈನ್‌ ಆಟಗಳಿಗೆ ಸಂಬಂಧಿಸಿದ, ಮೂಲದಲ್ಲಿ ತೆರಿಗೆ ಕಡಿತದ (ಟಿಡಿಎಸ್‌) ನಿಯಮಗಳಲ್ಲಿ ಎರಡು ಹೊಸ ಅಂಶಗಳನ್ನು ಸೇರಿಸುವ ಪ್ರಸ್ತಾವವು ಬಜೆಟ್‌ನಲ್ಲಿ ಇದೆ. ಹಣಕಾಸು ವರ್ಷವೊಂದರಲ್ಲಿ ಆನ್‌ಲೈನ್‌ ಆಟದಲ್ಲಿ ಗೆಲ್ಲುವ ಮೂಲಕ ಪಡೆಯುವ ಹಣಕ್ಕೆ ಶೇ 30ರಷ್ಟು ತೆರಿಗೆ ಹಾಗೂ ಈಗ ತೆರಿಗೆಗೆ ಪರಿಗಣಿಸುವ ₹ 10 ಸಾವಿರದ ಮಿತಿಯನ್ನು ತೆಗೆಯಲಾಗುವುದು ಎಂದು ಈ ಪ್ರಸ್ತಾವನೆಗಳು ಹೇಳುತ್ತವೆ.

ಆಟ ಆಡಿದವರು ತಮ್ಮ ಖಾತೆಯಿಂದ ಹಣವನ್ನು ಹಿಂಪಡೆಯದೆ ಇದ್ದರೆ, ಹಣಕಾಸು ವರ್ಷದ ಕೊನೆಯಲ್ಲಿ ಟಿಡಿಎಸ್ ಕಡಿತ ಮಾಡಲಾಗುತ್ತದೆ.

‘ಆನ್‌ಲೈನ್‌ ಆಟದ ಸೇವೆ ಒದಗಿಸುವ ಕೆಲವು ಕಂಪನಿಗಳು ಗೆದ್ದವರಿಗೆ ನೀಡುವ ಮೊತ್ತವನ್ನು ₹ 10 ಸಾವಿರಕ್ಕಿಂತ ಕಡಿಮೆ ಇರಿಸುತ್ತಿದ್ದುದು ಗಮನಕ್ಕೆ ಬಂದಿತ್ತು. ಹಾಗೆ ಮಾಡುವ ಮೂಲಕ ಅವು ಈ ಮೊತ್ತವನ್ನು ಟಿಡಿಎಸ್‌ ವ್ಯಾಪ್ತಿಯಿಂದ ಹೊರಕ್ಕೆ ಇರಿಸುತ್ತಿದ್ದವು. ಹೀಗಾಗಿ ಈ ಮಿತಿಯನ್ನು ತೆಗೆಯುವ ತೀರ್ಮಾನ ಮಾಡಲಾಗಿದೆ’ ಎಂದು ಕೇಂದ್ರ ರೆವಿನ್ಯು ಕಾರ್ಯದರ್ಶಿ ಸಂಜಯ್
ಮಲ್ಹೋತ್ರ ಅವರು ಬಜೆಟ್‌ ಮಂಡನೆ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಆನ್‌ಲೈನ್‌ ಆಟಗಳ ಉದ್ಯಮವು ಭಾರತದಲ್ಲಿ ಭಾರಿ ಪ್ರಮಾಣದಲ್ಲಿ ಬೆಳೆದಿದೆ. 2025ರ ಸುಮಾರಿಗೆ ಈ ಉದ್ಯಮದ ವಹಿವಾಟು ಮೊತ್ತವು ₹ 40 ಸಾವಿರ ಕೋಟಿಗೆ ತಲುಪುವ ಅಂದಾಜು ಇದೆ. ಆನ್‌ಲೈನ್‌ ಆಟಗಳಿಗೆ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ (ಜಿಎಸ್‌ಟಿ) ಅಡಿಯಲ್ಲಿ ತೆರಿಗೆ ವಿಧಿಸುವುದು ಹಾಗೂ ಆದಾಯ ತೆರಿಗೆ ವಿಧಿಸುವುದು ಸರ್ಕಾರಗಳ ಮಟ್ಟದಲ್ಲಿ ಪರಿಶೀಲನೆಗೆ ಕೂಡ ಒಳಗಾಗಿದೆ ಎಂದು ತೆರಿಗೆ ತಜ್ಞ ಸುದಿನ್ ಸಬ್ನಿಸ್ ಹೇಳಿದ್ದಾರೆ.

‘ಈಗ ಇಂತಹ ಆಟಗಳ ಮೂಲಕ ಗೆದ್ದುಕೊಂಡ ಮೊತ್ತಕ್ಕೆ ತೆರಿಗೆಯನ್ನು ಕಡಿತ ಮಾಡುವ ಪ್ರಸ್ತಾವನೆಯು ಬಜೆಟ್‌ನಲ್ಲಿ ಇದೆ’ ಎಂದು ಅವರು ವಿವರಿಸಿದ್ದಾರೆ.

ಭೌತಿಕ ಚಿನ್ನ

ಭೌತಿಕ ಚಿನ್ನವನ್ನು ಎಲೆಕ್ಟ್ರಾನಿಕ್ ರೂಪಕ್ಕೆ ಪರಿವರ್ತಿಸಿಕೊಂಡರೆ ಅದಕ್ಕೆ ಬಂಡವಾಳ ವೃದ್ಧಿ ತೆರಿಗೆ ಪಾವತಿ ಮಾಡಬೇಕಿಲ್ಲ ಎಂದು ಕೇಂದ್ರ ಹೇಳಿದೆ.

‘ಭೌತಿಕ ಚಿನ್ನವನ್ನು ಎಲೆಕ್ಟ್ರಾನಿಕ್‌ ಗೋಲ್ಡ್ ರಿಸಿಪ್ಟ್‌ (ಇಜಿಆರ್) ಆಗಿ ಪರಿವರ್ತಿಸಿಕೊಂಡರೆ ಅಥವಾ ಇಜಿಆರ್‌ ಅನ್ನು ಭೌತಿಕ ಚಿನ್ನವನ್ನಾಗಿ ಪರಿವರ್ತಿಸಿಕೊಂಡರೆ ಅದಕ್ಕೆ ಬಂಡವಾಳ ವೃದ್ಧಿ ತೆರಿಗೆ ಅನ್ವಯವಾಗುವುದಿಲ್ಲ’ ಎಂದು ಬಜೆಟ್‌ನಲ್ಲಿ ಹೇಳಲಾಗಿದೆ.

ಇದರಿಂದಾಗಿ ಡಿಜಿಟಲ್ ಚಿನ್ನದ ಮೇಲಿನ ಹೂಡಿಕೆಗೆ ಉತ್ತೇಜನ ಸಿಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇಜಿಆರ್ ಅನ್ನು ಡಿ–ಮ್ಯಾಟ್ ಖಾತೆಗಳಲ್ಲಿ ಇರಿಸಿಕೊಳ್ಳಬಹುದು. ಇಜಿಆರ್‌ ಖರೀದಿ ಹಾಗೂ ಮಾರಾಟ ಮೊದಲು ಆರಂಭವಾಗಿದ್ದು ಮುಂಬೈ ಷೇರುಪೇಟೆಯಲ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT