
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು ಮಂಡಿಸಿರುವ ಬಜೆಟ್ ಕುರಿತು ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಕ್ಷೇತ್ರಗಳ ಪ್ರಮುಖರು, ವಿಷಯ ತಜ್ಞರು ನೀಡಿರುವ ಪ್ರತಿಕ್ರಿಯೆಗಳು ಇಲ್ಲಿವೆ.
ಇದು ದೂರದೃಷ್ಟಿ ಇಲ್ಲದ, ನಿರಾಶಾದಾಯಕ ಬಜೆಟ್. ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ರಾಜ್ಯಕ್ಕೆ ಬರೀ ಚೊಂಬು ಕೊಟ್ಟಿದೆ. ಕೇವಲ ಕರ್ನಾಟಕವಲ್ಲ, ಇಡೀ ದಕ್ಷಿಣ ಭಾರತಕ್ಕೇ ಏನೂ ಕೊಟ್ಟಿಲ್ಲ. ಇಡೀ ಬಜೆಟ್ ತುಂಬ ವಿಕಸಿತ ಭಾರತದ ಬಗೆಗೆ ಪ್ರಸ್ತಾಪವಿದೆ. ಅದು ಬರೀ ಮಾತಿನಲ್ಲಿದೆ. ಅದನ್ನು ಕೃತಿಗೆ ಇಳಿಸುವ ಯಾವುದೇ ಯೋಜನೆಗಳಿಲ್ಲ. ಭದ್ರಾ ಮೇಲ್ದಂಡೆ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳಾಗಿ ಘೋಷಿಸುವಂತೆ ನಾವು ಕೇಳಿದ್ದೆವು. ಅದರ, ಬಗೆಗೆ ಒಂದೂ ಪದವಿಲ್ಲ. 2023–24ರಲ್ಲಿ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್, ಭದ್ರಾ ಮೇಲ್ದಂಡೆ ಯೋಜನೆಗೆ ₹ 5,300 ಕೋಟಿ ಘೋಷಿಸಿದ್ದರು. ಈತನಕ ಒಂದೂ ರೂಪಾಯಿ ಕೊಟ್ಟಿಲ್ಲ- ಸಿದ್ದರಾಮಯ್ಯ, ಮುಖ್ಯಮಂತ್ರಿ
ವಿಕಸಿತ ಭಾರತ ಸಾಕಾರಕ್ಕೆ ಬಜೆಟ್ ಪೂರಕವಾಗಿದೆ. ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ ರಾಜ್ಯಕ್ಕೆ ವರದಾನವಾಗಲಿದೆ. 16ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ಶೇ 4.13ರಷ್ಟು ತೆರಿಗೆ ಪಾಲು ಹಂಚಿಕೆಗೆ ಶಿಫಾರಸು ಮಾಡಿದೆ. 15ನೇ ಹಣಕಾಸು ಆಯೋಗವು ಶೇ 3.64 ಹಂಚಿಕೆ ಮಾಡಿತ್ತು. ಹೊಸದಾಗಿ ಹಂಚಿಕೆ ಆಗಿರುವುದರ ಮೂಲಕ ರಾಜ್ಯಕ್ಕೆ 2026–27ನೇ ಸಾಲಿನಲ್ಲಿ ₹63,049 ಕೋಟಿ ತೆರಿಗೆ ಪಾಲು ದೊರೆಯಲಿದೆ. ಇನ್ನು ಮುಂದೆ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ರಾಜಕೀಯವಾಗಿ ಕೇಂದ್ರವನ್ನು ಟೀಕೆ ಮಾಡುವುದನ್ನು ಬಿಡಬೇಕು..– ಎಚ್.ಡಿ. ಕುಮಾರಸ್ವಾಮಿ, ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ
ಯುವ ಜನತೆಗೆ ವಿಪುಲ ಅವಕಾಶ, ರೈತರಿಗೆ ರಕ್ಷಣೆ, ಉದ್ಯಮಿಗಳಿಗೆ ಪ್ರೋತ್ಸಾಹ ಹಾಗೂ ಮಧ್ಯಮ ವರ್ಗದವರಿಗೆ ನಿರಾಳತೆ ಒದಗಿಸುವುದರ ಜತೆಗೆ ಕಾರ್ಮಿಕರಿಗೆ ಗೌರವ ತಂದುಕೊಟ್ಟ ಬಜೆಟ್ ಇದಾಗಿದೆ. ಉತ್ಪಾದನೆ, ಉದ್ಯೋಗಕ್ಕೆ ಹೊಸ ವೇಗ ನೀಡಿದೆ.– ಯೋಗಿ ಆದಿತ್ಯನಾಥ, ಉತ್ತರಪ್ರದೇಶ ಮುಖ್ಯಮಂತ್ರಿ
ಆಡಳಿತಾರೂಢ ಪಕ್ಷದ ನೀತಿ, ಉದ್ದೇಶಗಳ ಪ್ರತಿಬಿಂಬದಂತಿರುವ ಈ ಬಜೆಟ್ ನಿಜಕ್ಕೂ ಬಡವರ ಪರವಾದ ಹಾಗೂ ರಾಷ್ಟ್ರೀಯ ಹಿತಾಸಕ್ತಿಯ ನಿಲುವು ಹೊಂದಿದೆಯೇ? ಅಥವಾ ಬಂಡವಾಳಶಾಹಿ ಮನಃಸ್ಥಿತಿಯಲ್ಲಿ ಸ್ಥಿತಿವಂತರ ಪರವಾಗಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.– ಮಾಯಾವತಿ, ಬಿಎಸ್‌ಪಿ ಮುಖ್ಯಸ್ಥೆ
ಸಮಾಜದ ಎಲ್ಲಾ ಸ್ತರಗಳಿಗೂ ಅನ್ವಯವಾಗುವಂತಹ ಬಜೆಟ್ ಇದಾಗಿದ್ದು, ವ್ಯಾಪಾರ ಮತ್ತು ಉದ್ಯಮದಲ್ಲಿ ಹೊಸ ಆಯಾಮಗಳನ್ನು ಅನ್ವೇಷಿಸಲು ಉತ್ತೇಜನ ನೀಡಿದೆ. ವಿಶೇಷವಾಗಿ ಯುವಜನತೆಗೆ ಉದ್ಯೋಗ ಸೃಷ್ಟಿಸಲು ಒತ್ತು ನೀಡಲಾಗಿದೆ.– ರೇಖಾ ಗುಪ್ತಾ, ದೆಹಲಿ ಮುಖ್ಯಮಂತ್ರಿ
ನಿರುದ್ಯೋಗಿ ಯುವಜನತೆ, ರೈತರು, ಶ್ರಮಿಕರು, ಎಸ್‌ಸಿ–ಎಸ್‌ಟಿ, ಒಬಿಸಿಗಳ ಬಗ್ಗೆ ಬಜೆಟ್‌ನಲ್ಲಿ ಸೊಲ್ಲೆತ್ತಿಲ್ಲ.ಕಾರ್ಮಿಕ ವಲಯ, ಸಾಮಾಜಿಕ ವಲಯ, ವಿರೋಧ ಪಕ್ಷ ಆಡಳಿತವಿರುವ ರಾಜ್ಯಗಳ ಕುರಿತು ಒಂದೂ ಮಾತು ಆಡಿಲ್ಲ.– ರಣದೀಪ್ ಸುರ್ಜೇವಾಲ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಬಜೆಟ್‌ಗೆ ಸಂಬಂಧಿಸಿದಂತೆ ಸೃಷ್ಟಿಸಿದ್ದ ನಿರೀಕ್ಷೆ ಹುಸಿಯಾಗಿದೆ. ಇದೊಂದು ನೀರಸ ಮತ್ತು ಪಾರದರ್ಶಕವಲ್ಲದ ಬಜೆಟ್. ಪ್ರಮುಖ ಯೋಜನೆಗಳು, ಕಾರ್ಯಕ್ರಮಗಳಿಗೆ ಎಷ್ಟೆಷ್ಟು ಅನುದಾನ ಹಂಚಿಕೆಯಾಗಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.– ಜೈರಾಮ್ ರಮೇಶ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಉತ್ಪಾದನಾ ಕ್ಷೇತ್ರದಲ್ಲಿ ನಮ್ಮ ಸ್ಥಾನ ಬಲಪಡಿಸಿ, ಸ್ವಾವಲಂಬನೆ ಸಾಧಿಸಲು ಪೂರಕವಾಗಿರುವ ಬಜೆಟ್ ಇದಾಗಿದ್ದು, ಎಂಎಸ್ಎಂಇ ಗಳನ್ನು ಉತ್ತೇಜಿಸುವಲ್ಲಿ ಮಹತ್ತರ ಪಾತ್ರ ವಹಿಸಲಿದೆ. ರೈತರು, ಯುವಕರು ಮತ್ತು ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ.– ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶ ಮುಖ್ಯಮಂತ್ರಿ
ಕೇಂದ್ರ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ವಿಕಸಿತ ಭಾರತ ನಿರ್ಮಾಣ ಹಾಗೂ ದೇಶದಲ್ಲಿನ ರೈಲ್ವೆ ಸಂಪರ್ಕ ಹೆಚ್ಚಳದ ದೃಷ್ಟಿಯಿಂದ 7 ಹೈ ಸ್ಪೀಡ್ ರೈಲ್ವೆ ಕಾರಿಡಾರ್‌ಗಳನ್ನು ಘೋಷಣೆ ಮಾಡಿದ್ದಾರೆ. ಈ ಕಾರಿಡಾರ್‌ಗಳನ್ನು ದೇಶದ ಪಶ್ಚಿಮ, ದಕ್ಷಿಣ ಮತ್ತು ಪೂರ್ವ ಭಾರತದಾದ್ಯಂತ ಸಾರಿಗೆ ಸಂಪರ್ಕವನ್ನು ಬಲಪಡಿಸಲು ವಿನ್ಯಾಸಗೊಳಿಸಲಾಗಿದ್ದು, ತಂತ್ರಜ್ಞಾನ ಕೇಂದ್ರಗಳನ್ನು ಉತ್ಪಾದನಾ ಕೇಂದ್ರಗಳು ಮತ್ತು ಪ್ರಮುಖ ಜನಸಂಖ್ಯಾ ಸಮೂಹಗಳೊಂದಿಗೆ ಸಂಪರ್ಕಿಸುತ್ತದೆ.– ವಿ. ಸೋಮಣ್ಣ, ರೈಲ್ವೆ ಖಾತೆ ರಾಜ್ಯ ಸಚಿವ
ಇದು ಜನಹಿತದ ಬಜೆಟ್. ಕೈಗಾರಿಕೆ, ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಪ್ರತಿ ಜಿಲ್ಲೆಯಲ್ಲಿ ವಿದ್ಯಾರ್ಥಿನಿಯರ ವಿದ್ಯಾರ್ಥಿ ನಿಲಯ ನಿರ್ಮಿಸಲು ಕೇಂದ್ರ ಸರ್ಕಾರವೇ ಮುಂದೆ ಬಂದಿರುವುದು ಇದೇ ಮೊದಲು. ಈ ಬಜೆಟ್‌ನಿಂದ ರಾಜ್ಯಕ್ಕೆ ಸಾಕಷ್ಟು ಅನುಕೂಲಗಳಿವೆ. ಶ್ರೀಗಂಧ, ತೆಂಗಿನ ಬೆಳೆ ಉತ್ತೇಜನಕ್ಕೆ ಹಾಗೂ ಮೌಲ್ಯವರ್ಧನೆಗೆ ಹೊಸ ಕ್ರಮಗಳನ್ನು ಘೋಷಿಸಲಾಗಿದೆ. ಪ್ರವಾಸಿ ಮಾರ್ಗದರ್ಶಕರಿಗೆ ತರಬೇತಿ ನೀಡುವ ಯೋಜನೆಯಿಂದಲೂ ಕರ್ನಾಟಕಕ್ಕೆ ಲಾಭವಾಗಲಿದೆ.– ಆರ್.ಅಶೋಕ, ವಿಧಾನಸಭೆ ವಿರೋಧ ಪಕ್ಷದ ನಾಯಕ
ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಬೆಂಗಳೂರು–ಹೈದರಾಬಾದ್ ಮತ್ತು ಬೆಂಗಳೂರು– ಚೆನ್ನೈ ನಡುವೆ ಹೈಸ್ಪೀಡ್ ರೈಲು ಕಾರಿಡಾರ್ ಅಭಿವೃದ್ಧಿ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಆದರೆ ಇದರಿಂದ ಕರ್ನಾಟಕಕ್ಕೆ ಹೆಚ್ಚು ಪ್ರಯೋಜನವೇನೂ ಇಲ್ಲ. ಇದರ ಬದಲು ಬೆಂಗಳೂರು–ಪುಣೆ ನಡುವೆ ಇಂಥ ಕಾರಿಡಾರ್ ಬರಬೇಕು. ಇದಕ್ಕಾಗಿ ರಾಜ್ಯದ ಮತ್ತು ಮಹಾರಾಷ್ಟ್ರದ ಸಂಸದರು ಪಕ್ಷಾತೀತವಾಗಿ ಧ್ವನಿ ಎತ್ತಬೇಕು– ಎಂ.ಬಿ ಪಾಟೀಲ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ
ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತದ ಸಂಕಲ್ಪಕ್ಕೆ ಪೂರಕವಾಗಿ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಿದ್ದಾರೆ. ಮೂರು ಕರ್ತವ್ಯ ಶಕ್ತಿಗಳ ಆಧಾರದ ಮೇಲೆ ಮಂಡಿಸಿದ ಬಜೆಟ್ ಇದಾಗಿದೆ. ಕೈಗಾರಿಕೆ, ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಘೋಷಿಸಿದ್ದಾರೆ. ಉತ್ಪಾದನೆ ಹೆಚ್ಚಳ, ಜನರ ಆಶೋತ್ತರಗಳ ಈಡೇರಿಕೆ ಹಾಗೂ ಎಲ್ಲರ ಜತೆ ಎಲ್ಲರ ವಿಕಾಸದ ಅಂಶಗಳಿಗೆ ಒತ್ತು ನೀಡಲಾಗಿದೆ.– ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯನ್ನಾಗಿಸುವ ಬಜೆಟ್ ಇದು. ವಿಶ್ವದ ಬಹುತೇಕ ದೇಶಗಳು ಆರ್ಥಿಕ ಬಿಕ್ಕಟ್ಟಿನಲ್ಲಿ ಇರುವಂತಹ ಸಂದರ್ಭದಲ್ಲಿ, ಭಾರತವು ಆರ್ಥಿಕ ಪ್ರಗತಿಯಲ್ಲಿ ಮುಂದುವರಿಯುವಂತಹ ಅಭಿವೃದ್ಧಿ ಪರವಾದ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಸರ್ವರ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಶೇ 7.4ರಷ್ಟು ಆರ್ಥಿಕ ಬೆಳವಣಿಗೆ ದರ ಕಾಯ್ದುಕೊಳ್ಳುವುದು ಮತ್ತು ವಿತ್ತೀಯ ಕೊರತೆಯನ್ನು ಶೇ4.3ಕ್ಕೆ ನಿಯಂತ್ರಿಸುವುದು ಸಾಧನೆಯೇ ಸರಿ. ಆರ್ಥಿಕ ಶಿಸ್ತನ್ನು ಕಾಯ್ದುಕೊಂಡಿರುವ ಬಜೆಟ್ ಇದು.– ಬಸವರಾಜ ಬೊಮ್ಮಾಯಿ, ಬಿಜೆಪಿ ಸಂಸದ
ದೇಶದ ಖಜಾನೆಗೆ ಅತೀ ಹೆಚ್ಚು ಕೊಡುಗೆ ನೀಡುವ ಮಹಾರಾಷ್ಟ್ರವನ್ನು ನಿರ್ಲಕ್ಷಿಸಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯು ವಿಫಲಗೊಂಡು ದಶಕದ ಬಳಿಕ ಸಿಇಆರ್ ಅಭಿವೃದ್ಧಿ ಯೋಜನೆಯನ್ನು ಘೋಷಿಸಲಾಗಿದೆ. ಇದರಲ್ಲೂ ಯಾವುದೇ ಸ್ಪಷ್ಟತೆ ಇಲ್ಲ. ಇದು ಹಾಸ್ಯಾಸ್ಪದ ಸಂಗತಿ. ಹೈ ಸ್ಪೀಡ್ ಯೋಜನೆಯ ಅನುಷ್ಠನದ ಬಗ್ಗೆಯೂ ಸ್ಪಷ್ಟತೆ ಬೇಕು. ಈ ಯೋಜನೆಗೆ ಹಣ ನೀಡುವವರು ಕೇಂದ್ರ ಸರ್ಕಾರವೋ ಅಥವಾ ರಾಜ್ಯ ಸರ್ಕಾರವೋ?– ಆದಿತ್ಯ ಠಾಕ್ರೆ, ಶಿವಸೇನಾ(ಉದ್ಧವ್ ಬಣ) ನಾಯಕ
ಬೆಲೆ ಏರಿಕೆಯನ್ನು ತಹಬಂದಿಗೆ ತರುವ, ರೂಪಾಯಿಯ ಅಪಮೌಲ್ಯ ತಡೆಗಟ್ಟುವ, ಉದ್ಯೋಗ ಸೃಷ್ಟಿಯ ಯಾವ ಮುನ್ನೋಟಗಳೂ ಇಲ್ಲದ ಬಜೆಟ್. ಜನರ ಸಂಬಳ ಏರಿಕೆಯಾಗದ, ಅವಕಾಶಗಳು ಕಡಿಮೆಯಾಗುತ್ತಿರುವ ಈ ಹೊತ್ತಿನಲ್ಲೂ ಆದಾಯ ಹೆಚ್ಚಿಸುವ ಯಾವ ಕ್ರಮವನ್ನು ಬಜೆಟ್ ಒಳಗೊಂಡಿಲ್ಲ. ಮಧ್ಯಮ ವರ್ಗ, ರೈತರು ಮತ್ತು ಸಣ್ಣ–ಮಧ್ಯಮ ಕೈಗಾರಿಕೆಗಳಿಗೆ ಯಾವುದೇ ಪರಿಹಾರಗಳಿಲ್ಲ. ಆಕರ್ಷಕ ಘೋಷಣೆಗಳ ವೇಷದಲ್ಲಿ ಈ ಎಲ್ಲವನ್ನೂ ಕಡೆಗಣಿಸಿರುವ ಬಜೆಟ್ ಇದು.– ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ
ವಿರಳ ಲೋಹಗಳ ನಿಕ್ಷೇಪ ಕಾರಿಡಾರ್ ಸ್ಥಾಪನೆಯ ಪ್ರಸ್ತಾಪ ಸ್ವಾಗತಾರ್ಹವಾದ್ದದ್ದು. ಖನಿಜಯುಕ್ತ ಪ್ರದೇಶಗಳನ್ನು ಸಂಪರ್ಕಿಸಲು ರಾಷ್ಟ್ರೀಯ ಜಲಮಾರ್ಗ ಆರಂಭಿಸುವ ಘೋಷಣೆಯನ್ನು ಮತ್ತೊಮ್ಮೆ ಮಾಡಲಾಗಿದೆ. ಈ ಪ್ರಸ್ತಾವ ಸಾಕಷ್ಟು ಹಳೆಯದು. ಒಡಿಶಾ ಜನರಿಗೆ ಉಪಯೋಗವಾಗುವ ಯಾವುದೇ ಕೊಡುಗೆಯನ್ನು ನೀಡಿಲ್ಲ– ನವೀನ್ ಪಟ್ನಾಯಕ್, ಬಿಜೆಡಿ ಮುಖ್ಯಸ್ಥ
ಕೇಂದ್ರ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕೇವಲ ಅನುದಾನ ಹಂಚಿಕೆ ಮಾಡದೇ ಫಲಿತಾಂಶ ಆಧರಿತ ಚಟುವಟಿಕೆಗಳಿಗೆ ಒತ್ತು ನೀಡಿರುವುದು ಶ್ಲಾಘನೀಯ. ಮೂಲಸೌಕರ್ಯ, ಕೌಶಲ ಅಭಿವೃದ್ದಿಗೆ ಮಹತ್ವವನ್ನು ನೀಡಲಾಗಿದೆ. ಪಿಇಎಸ್ ಸಂಸ್ಥೆಯು ಐದು ದಶಕಕ್ಕೂ ಹೆಚ್ಚು ಕಾಲದಿಂದ ಇದೇ ದಿಕ್ಕಿನಲ್ಲಿ ಕಾರ್ಯನಿರ್ವಹಿಸುತ್ತಿದೆ.– ಜವಾಹರ್ ದೊರೆಸ್ವಾಮಿ, ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ.
ಬಜೆಟ್ ಹಲವು ಅಂಶಗಳಿಗೆ ಒತ್ತು ನೀಡಿದೆ. ಎಐ ಸಾಧನವಾದ ಭಾರತ್ ವಿಸ್ತಾರ್ ಸಣ್ಣ ರೈತರೊಂದಿಗಿನ ಮಾಹಿತಿ ಅಂತರ ತಗ್ಗಿಸಲಿದೆ. ‘ಶೀ ಮಾರ್ಟ್ಸ್’ ಮಹಿಳಾ ಉದ್ಯಮಿಗಳಿಗೆ ತಳಮಟ್ಟದ ಆರ್ಥಿಕ ಸಬಲೀಕರಣದ ಭರವಸೆ ನೀಡಲಿದೆ. ಸ್ವಾವಲಂಬಿ ಭಾರತ ನಿಧಿಗೆ ₹ 2,000 ಕೋಟಿ ಹೆಚ್ಚುವರಿ ಅನುದಾನವು ಉದ್ಯಮಗಳಿಗೆ ಬಲ ನೀಡಬಹುದು.– ನಾರಾಯಣಿ ರಾಮಚಂದ್ರನ್, ಅರ್ಥಶಾಸ್ತ್ರ ಪ್ರಾಧ್ಯಾಪಕಿ, ಎಸ್‌ವಿಕೆಂ, ಎನ್‌ಎಂಐಎಂಎಸ್, ಬೆಂಗಳೂರು
ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಕೇಂದ್ರ ಬಜೆಟ್ ದೇಶದ ನೈಜ ಆರ್ಥಿಕ ಪರಿಸ್ಥಿತಿಯ ಪ್ರತಿಬಿಂಬವಾಗಿರದೇ, ಪ್ರಶ್ನಾರ್ಹ ರೀತಿಯಲ್ಲಿ ಸಂಗ್ರಹಿಸಲಾದ ನಕಲಿ ಅಂಕಿ–ಅಂಶಗಳಿಂದ ಕೂಡಿದೆ. ಇದು ಬಿಜೆಪಿ ಸರ್ಕಾರದ ‘ಅದ್ಭುತ’ ಕಾರ್ಯಕ್ಷಮತೆಯ ಬಗ್ಗೆ ಅಂದವಾಗಿ ರೂಪಿಸಿರುವ ಸ್ವಯಂ ಪ್ರಶಂಸೆಯ ದಾಖಲೆಯಾಗಿದೆ. ವಲಯವಾರು ಅನುದಾನದ ಹಂಚಿಕೆಯನ್ನು ವಿವರಿಸಿಲ್ಲ. ದೊಡ್ಡ ಉದ್ಯಮಿಗಳಿಗೆ ಮತ್ತು ತೆರಿಗೆ ಕಳ್ಳರಿಗೆ ಹೆಚ್ಚಿನ ರಿಯಾಯಿತಿ ಮತ್ತು ಸೌಲಭ್ಯಗಳನ್ನು ನೀಡುವ ಸ್ಪಷ್ಟ ಸೂಚನೆ ನೀಡಿದೆ.– ಕೆ. ಉಮಾ, ರಾಜ್ಯ ಕಾರ್ಯದರ್ಶಿ, ಎಸ್‌ಯುಸಿಐ (ಕಮ್ಯುನಿಸ್ಟ್)
ಕೃಷಿ ಮತ್ತು ಅದಕ್ಕೆ ಪೂರಕವಾದ ವಲಯಗಳ ಬಲವರ್ಧನೆಗೆ ಕೇಂದ್ರ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಸಣ್ಣ ಮತ್ತು ಅತಿಸಣ್ಣ ರೈತರ ಆದಾಯ ಭದ್ರತೆ, ಉತ್ಪಾದಕತೆ ಹೆಚ್ಚಳ ಮತ್ತು ಸುಸ್ಥಿರ ಗ್ರಾಮೀಣ ಜೀವನೋಪಾಯಕ್ಕೆ ಒತ್ತು ನೀಡಲಾಗಿದೆ. ಪ್ರಸ್ತುತ ಕೃಷಿ ವಲಯದಿಂದ ದೇಶದ ಜಿಡಿಪಿಗೆ ಶೇ 18ರಷ್ಟು ಕೊಡುಗೆ ನೀಡಲಾಗುತ್ತಿದೆ. ಕೇಂದ್ರ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ ಶೇ 3ರಷ್ಟು ಅನುದಾನ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಈ ವಲಯಕ್ಕೆ ಹೆಚ್ಚು ಅನುದಾನ ಒದಗಿಸಬೇಕು.– ಎಸ್.ವಿ. ಸುರೇಶ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ
ಗ್ರಾಮೀಣ ಮತ್ತು ಕರಾವಳಿ ಪ್ರದೇಶಗಳ ಆರ್ಥಿಕ ಅಭಿವೃದ್ಧಿಯನ್ನು ವೇಗಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮತ್ಸ್ಯೋದ್ಯಮ, ಪಶುಪಾಲನೆ ಮತ್ತು ಕೃಷಿ ಕ್ಷೇತ್ರಗಳಿಗೆ ವಿಶೇಷ ಪ್ರೋತ್ಸಾಹ ನೀಡಿದೆ. ಅಮೃತ್ ಸರೋವರಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದು, ಕರಾವಳಿ ಪ್ರದೇಶಗಳಲ್ಲಿ ಮತ್ಸ್ಯ ಮೌಲ್ಯ ಸರಪಳಿಯನ್ನು ಬಲಪಡಿಸಿ, ಸ್ಟ್ರಾರ್ಟ್‌ಅಪ್‌ಗಳು, ಮಹಿಳಾ ನೇತೃತ್ವದ ಸಂಘ–ಸಂಸ್ಥೆಗಳು ಹಾಗೂ ಮತ್ಸ್ಯ ಕೃಷಿಕ ಉತ್ಪಾದಕರ ಸಂಘಗಳು (ಎಫ್‌ಪಿಒ) ಭಾಗವಹಿಸುವಂತೆ ಮಾರುಕಟ್ಟೆ ಸಂಪರ್ಕಗಳ ಸುಧಾರಣೆಗೆ ಆದ್ಯತೆ ನೀಡಿದೆ.– ಹುಸೇನಸಾಬ ನದಾಫ್, ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ, ಕೆಎಲ್‌ಇ ಸೊಸೈಟಿಯ ಎಸ್. ನಿಜಲಿಂಗಪ್ಪ ಕಾಲೇಜು ರಾಜಾಜಿನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.