ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿತ್ತೀಯ ಕೊರತೆ: ಹೀಗೆಂದರೇನು, ಏನಿದರ ಪ್ರಾಮುಖ್ಯತೆ?

Last Updated 1 ಫೆಬ್ರುವರಿ 2021, 9:51 IST
ಅಕ್ಷರ ಗಾತ್ರ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ 2021ಅನ್ನುಫೆ.1ರಂದು ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ನಿರ್ಮಲಾ ಅವರು ಮಂಡಿಸುತ್ತಿರುವ ಮೂರನೇ ಬಜೆಟ್ ಇದಾಗಿದೆ.

ಬಜೆಟ್ ಕುರಿತಾಗಿ ಸಾಕಷ್ಟು ನಿರೀಕ್ಷೆಗಳು ಮತ್ತು ಅದನ್ನು ಅರ್ಥ ಮಾಡಿಕೊಳ್ಳುವ ವಿಧಾನಗಳ ಬಗ್ಗೆ ಕುತೂಹಲಗಳು ಹೆಚ್ಚಾಗುತ್ತಿರುವಂತೆಯೇ, ಬಜೆಟ್‌ನಲ್ಲಿ ಪ್ರಮುಖವಾಗಿ ಕೇಳಿಬರುವ ವಿತ್ತೀಯ ಕೊರತೆ ಎಂಬ ವಿಷಯದ ಬಗ್ಗೆ ಸಮಗ್ರ ಮಾಹಿತಿ ಇಲ್ಲಿದೆ.

ವಿತ್ತೀಯ ಕೊರತೆ ಎಂದರೇನು?
ವಿತ್ತೀಯ ಕೊರತೆ ಅಥವಾ ಹಣಕಾಸು ಕೊರತೆ (Fiscal Deficit) ಎಂದರೆ, ಸರ್ಕಾರದ ಒಟ್ಟು ಖರ್ಚು ಹಾಗೂ ಅದರ ಆದಾಯದ ನಡುವೆ ಇರುವ ವ್ಯತ್ಯಾಸ. ಈ ಆದಾಯದಲ್ಲಿ ಸಾಲ ಪಡೆದ ಹಣ ಒಳಗೊಂಡಿರುವುದಿಲ್ಲ.

ವಿತ್ತೀಯ ಕೊರತೆ ಹೆಚ್ಚಾದರೆ ಏನಾಗುತ್ತದೆ?
ಸರ್ಕಾರವು ಹೆಚ್ಚು ಸಾಲ ಮಾಡಬೇಕಾಗುತ್ತದೆ ಅಥವಾ ಹೆಚ್ಚು ಹಣವನ್ನು ಟಂಕಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಕೇಳಿಕೊಳ್ಳಬಹುದು. ಆದರೆ ಹಣವನ್ನು ಟಂಕಿಸುವುದು (ಮುದ್ರಿಸುವುದು) ಸಾಕಷ್ಟು ಅಡ್ಡ ಪರಿಣಾಮಗಳನ್ನು ಹೊಂದಿರುತ್ತದೆ. ಇದು ಹಣದುಬ್ಬರಕ್ಕೆ ಕಾರಣವಾಗುತ್ತದೆ ಮತ್ತು ಬಡ್ಡಿ ದರಗಳ ಏರಿಕೆಗೆ ಕಾರಣವಾಗುತ್ತದೆ. ಹೀಗಾಗಿ, ಹಣವನ್ನು ಮುದ್ರಿಸಿ ವಿತ್ತೀಯ ಕೊರತೆ ತುಂಬಲು ಯಾವುದೇ ಸರ್ಕಾರವೂ ಪ್ರಯತ್ನಿಸುವ ಗೋಜಿಗೆ ಹೋಗುವುದಿಲ್ಲ. ಬದಲಾಗಿ, ಸಾಲವನ್ನೇ ನೆಚ್ಚಿಕೊಳ್ಳುತ್ತದೆ.

ಸರ್ಕಾರ ಎಲ್ಲಿಂದ ಸಾಲ ಪಡೆಯತ್ತದೆ?
ಮಾರುಕಟ್ಟೆ, ಸಣ್ಣ ಉಳಿತಾಯ ನಿಧಿ, ರಾಜ್ಯ ಪಿಂಚಣಿ ನಿಧಿಗಳು, ಬಾಹ್ಯ ವಲಯ ಮತ್ತು ಕಿರು ಅವಧಿಯ ನಿಧಿಗಳಿಂದ ಸರ್ಕಾರ ಸಾಲ ಪಡೆಯುತ್ತದೆ. ಆದರೆ, ವಿತ್ತೀಯ ಆದಾಯ ಕೊರತೆಗೆ ಹಣಕಾಸು ಒದಗಿಸುವ ಪ್ರಧಾನ ಮೂಲವೆಂದರೆ ಮಾರುಕಟ್ಟೆಯಿಂದ ಪಡೆಯುವ ಸಾಲ.

ಸಾಲ ಪಡೆಯುವುದರಿಂದಲೂ ಪ್ರತಿಕೂಲ ಪರಿಣಾಮ ಆಗುವುದಿಲ್ಲವೇ?
ಹೌದು, ಆಗುತ್ತದೆ. ಸರ್ಕಾರ ಹೆಚ್ಚು ಸಾಲ ಪಡೆದಷ್ಟೂ ಖಾಸಗಿ ಉದ್ಯಮಗಳು ಮತ್ತು ಕಾರ್ಪೊರೇಟ್‌ಗಳಿಗೆ ಮಾರುಕಟ್ಟೆ ಪ್ರವೇಶಿಸುವ ಅವಕಾಶ ಕಡಿಮೆಯಾಗುತ್ತದೆ. ಅಲ್ಲದೆ, ಸರ್ಕಾರ ಹೆಚ್ಚು ಸಾಲ ಪಡೆದಲ್ಲಿ ಇತರ ಸಾಲಗಳ ಬಡ್ಡಿ ದರವೂ ಏರಿಕೆಯಾಗುತ್ತದೆ. ಇದರ ಜತೆಗೆ, ಅದು ಸರ್ಕಾರದ ಸಾಲ ಮರುಪಾವತಿಸಬೇಕಾದ ಹೊರೆಯನ್ನು ಹೆಚ್ಚಿಸುತ್ತದೆ ಮತ್ತು ಆರ್ಥಿಕತೆಯಲ್ಲಿ ಹೂಡಿಕೆ ಮಾಡಬೇಕಾದ ಪ್ರಮಾಣವನ್ನೂ ಹೆಚ್ಚಿಸುತ್ತದೆ. ಇದು ಆರ್ಥಿಕತೆ ಕುಸಿತಕ್ಕೆ (ಹಿಂಜರಿಕೆಗೆ) ಕಾರಣವಾಗುತ್ತದೆ.

ವಿತ್ತೀಯ ಕೊರತೆಯ ಸಂಖ್ಯೆಯ ಮೇಲೆ ಹೆಚ್ಚು ಗಮನ ಯಾಕೆ?
ಅದು ದೇಶದ ಆರ್ಥಿಕತೆಯ ಒಟ್ಟಾರೆ ಸಾಮರ್ಥ್ಯವನ್ನು ಪ್ರಕಟಪಡಿಸುತ್ತದೆ. ಜಾಗತಿಕ ಹೂಡಿಕೆದಾರರೂ ಇದೇ ಸಂಖ್ಯೆಯನ್ನು ಅವಲಂಬಿಸಿರುತ್ತಾರೆ. ವಿತ್ತೀಯ ಕೊರತೆ ಹೆಚ್ಚಾಗಿದ್ದರೆ ಮಾರುಕಟ್ಟೆಯಲ್ಲಿ ತಮ್ಮ ಮೇಲೆ ಒತ್ತಡ ಹೆಚ್ಚಾಗಬಹುದು, ಜೊತೆಗೆ ಹೆಚ್ಚಿನ ಹಣದುಬ್ಬರ ಮತ್ತು ಹೆಚ್ಚಿನ ಬಡ್ಡಿದರವು ತಮ್ಮ ಲಾಭದ ಮೇಲೆ ಪರಿಣಾಮ ಬೀರಬಹುದು ಎಂಬುದು ಅವರ ಆತಂಕಕ್ಕೆ ಕಾರಣವಾಗುತ್ತದೆ.

ದೇಶವು ಎಷ್ಟರವರೆಗಿನ ವಿತ್ತೀಯ ಕೊರತೆಯನ್ನು ತಾಳಿಕೊಳ್ಳಬಲ್ಲುದು?
ವಿತ್ತೀಯ ಕೊರತೆಯು ಶೇ.3-4ರಿಂದ ಹೆಚ್ಚು ಇರುವಂತಿಲ್ಲ. ತೆರಿಗೆ ಆದಾಯವು ಸರ್ಕಾರದ ಖರ್ಚನ್ನು ಪೂರೈಸಲು ಸಾಕಷ್ಟಿಲ್ಲದಿರುವ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ, ವಿತ್ತೀಯ ತೆರಿಗೆಯು ಸ್ವಲ್ಪ ಹೆಚ್ಚಾಗಿದ್ದರೂ ಪರವಾಗಿಲ್ಲ.

ಭಾರತಕ್ಕೆ ಸಂಬಂಧಿಸಿದಂತೆ ವಿತ್ತೀಯ ಕೊರತೆ ಹೇಗಿದೆ?
ಭಾರತವು 2008-09ರವೇಳೆಗೆ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ.3ಕ್ಕೆ ಇಳಿಸುವ ಗುರಿಯೊಂದಿಗೆ, 2003ರಲ್ಲಿ ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ (FRBM) ಕಾಯ್ದೆಯನ್ನು ಜಾರಿಗೆ ತಂದಿತ್ತು. ಈ ಗುರಿಯ ಪ್ರಕಾರ ಪ್ರತಿ ವರ್ಷ ಶೇ.0.3 ತಗ್ಗಿಸಬೇಕಿತ್ತು. ಆದರೆ ಇದು ಸಾಧ್ಯವಾಗಲಿಲ್ಲ ಮತ್ತು ಸರ್ಕಾರವು ವರ್ಷದಿಂದ ವರ್ಷಕ್ಕೆ ಈ ಗುರಿಯನ್ನೇ ಸಡಿಲಿಸುತ್ತಾ ಹೋಯಿತು. ಕಳೆದ ವರ್ಷ ಕೇಂದ್ರ ಸರ್ಕಾರವು FRBM ನಿಯಮಗಳಿಗೆ ತಿದ್ದುಪಡಿ ತಂದು, ವಿತ್ತೀಯ ಕೊರತೆಯನ್ನು ಶೇ.3ಕ್ಕೆ ಇಳಿಸುವ ಗುರಿಯ ಅವಧಿಯನ್ನು 2020-21ಕ್ಕೆ ವಿಸ್ತರಿಸಿತ್ತು.

ವಿತ್ತೀಯ ಕೊರತೆಯ ಗುರಿ ತಲುಪಲು ಭಾರತವು ಶ್ರಮಿಸಬೇಕೇ?
ಹೊಸ ಜಿಎಸ್‌ಟಿ ಜಾರಿಗೆ ಬಂದಿರುವುದರೊಂದಿಗೆ ಕೆಲವೊಂದು ಸಮಸ್ಯೆಗಳಿರುವುದರಿಂದ, ಸ್ವಲ್ಪ ಮಟ್ಟಿನ ಸಡಿಲಿಕೆಗೆ ಆರ್ಥಿಕ ತಜ್ಞರು ಒಪ್ಪುತ್ತಾರಾದರೂ, ರೇಟಿಂಗ್ ಏಜೆನ್ಸಿಗಳು ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್), ದೇಶವು ಈ ಗುರಿಗೆ ಕಟ್ಟುನಿಟ್ಟಿನ ಬದ್ಧತೆ ತೋರಬೇಕಿದೆ ಎಂದು ಬಯಸುತ್ತಿದೆ.

ವರ್ಷಗಳಿಂದೀಚೆಗೆ ಈ ಗುರಿ ಹೇಗೆ ಬದಲಾಗಿದೆ?
2011-12ರಲ್ಲಿ ಶೇ.5.9ರಷ್ಟನ್ನು ತಲುಪಿದ್ದ ವಿತ್ತೀಯ ಕೊರತೆಯು 2017-18ಕ್ಕೆ ಶೇ.3.5ರವರೆಗೆ ಇಳಿದು ಸಮಾಧಾನಕರ ಬೆಳವಣಿಗೆ ಕಂಡಿತ್ತು. 2018-19ರಲ್ಲಿ ಶೇ.3.3 ತಲುಪುವ ಗುರಿ ಇರಿಸಲಾಗಿತ್ತು. ಜುಲೈ 2019ರ ಬಜೆಟ್ ವೇಳೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2019-20ರ ಗುರಿಯನ್ನು ಶೇ.3.4ರಿಂದ ಶೇ.3.3ಕ್ಕೆ ಇಳಿಸಿರುವುದರೊಂದಿಗೆ, ಗುರಿ ಸಾಧಿಸಿ ಆರ್ಥಿಕತೆ ಸುಧಾರಿಸಲು ಸರ್ಕಾರಕ್ಕಿದ್ದ ಬದ್ಧತೆಯನ್ನು ಸ್ಪಷ್ಟಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT