ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಮಾರುಕಟ್ಟೆ | ಕಾರು ಖರೀದಿಗೆ ನೆರವಾಗುವ 20/4/10 ಸೂತ್ರ!

Published 20 ನವೆಂಬರ್ 2023, 0:18 IST
Last Updated 20 ನವೆಂಬರ್ 2023, 0:18 IST
ಅಕ್ಷರ ಗಾತ್ರ

ಮನೆ ಖರೀದಿ ಹೊರತುಪಡಿಸಿದರೆ ಕುಟುಂಬವೂಂದರಲ್ಲಿ ಮಾಡುವ ಅತ್ತಿ ದೊಡ್ಡ ವೆಚ್ಚ ಕಾರು ಖರೀದಿ. ಕಾರು ತೆಗೆದುಕೊಳ್ಳುವಾಗ ಖರೀದಿ ಸಾಮಥ್ಯ ಎಷ್ಟಿದೆ ಎನ್ನುವುದರ ಲೆಕ್ಕಾಚಾರ ಮಾಡದೆ ಅನೇಕರು ಅತಿಯಾದ ಸಾಲ ಮಾಡಿಕೊಂಡು ಸಂಕಷ್ಟಕ್ಕೆ ಸಿಲುಕುತ್ತಾರೆ. ಇದನ್ನು ತಪ್ಪಿಸಲು ಸರಳ ನಿಯಮವೊಂದಿದೆ. ಅದೇ 20/4/10 ಸೂತ್ರ.

ಏನಿದು ಸೂತ್ರ: ಕಾರು ಖರೀದಿಸುವ ಮುನ್ನ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಲೇಬೇಕಾದ ಒಂದು ಸರಳ ಸೂತ್ರವಿದೆ. ಅದೇ 20/4/10 ನಿಯಮ. ಈ ಲೆಕ್ಕಾಚಾರವನ್ನು ಅಳವಡಿಸಿಕೊಂಡರೆ ನಿಮ್ಮ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಎಷ್ಟು ಮೌಲ್ಯದ ಕಾರು ಖರೀದಿಸಬೇಕು, ಕಾರು ಕೊಳ್ಳಲು ಎಷ್ಟು ಡೌನ್ ಪೇಮೆಂಟ್ ಮಾಡಬೇಕು, ಕಾರು ಸಾಲದ ಮಾಸಿಕ ಕಂತು ಎಷ್ಟಿರಬೇಕು ಮತ್ತು ಕಾರಿನ ವಾರ್ಷಿಕ ನಿರ್ವಹಣಾ ಮೊತ್ತ ಎಷ್ಟಿರಬೇಕು ಎಂಬ ಮಾಹಿತಿ ತಿಳಿಯುತ್ತದೆ. 20/4/10 ನಿಯಮದಲ್ಲಿ 20 ಅಂದರೆ ಕಾರಿನ ಒಟ್ಟು ಮೌಲ್ಯದಲ್ಲಿ ಶೇ 20 ರಷ್ಟು ಡೌನ್ ಪೇಮೆಂಟ್ ಮಾಡಬೇಕು ಅಂತ. ಕಾರು ಖರೀದಿಗೆ ಕೊಳ್ಳುವ ಸಾಲ ಅವಧಿ 4 ವರ್ಷಗಳನ್ನು ಮೀರಬಾರದು ಎನ್ನುವುದನ್ನು 4 ಸೂಚಿಸುತ್ತದೆ. ಹಾಗೆಯೇ 10 ಎಂಬುದು ಕಾರಿನ ನಿರ್ವಹಣಾ ವೆಚ್ಚವು ವ್ಯಕ್ತಿಯ ವಾರ್ಷಿಕ ಆದಾಯದ ಶೇ 10 ರಷ್ಟನ್ನು ಮೀರಬಾರದು ಎಂದು ಹೇಳುತ್ತದೆ. ವಾರ್ಷಿಕ ವೆಚ್ಚದಲ್ಲಿ ಕಾರು ಸಾಲದ ಮಾಸಿಕ ಕಂತು, ಪೆಟ್ರೋಲ್ ವೆಚ್ಚ, ಇನ್ಶುರೆನ್ಸ್, ಸರ್ವೀಸ್ ಎಲ್ಲವೂ ಸೇರಿರುತ್ತದೆ. ಈ 20/4/10 ಸೂತ್ರ ಅಳವಡಿಸಿಕೊಂಡು ಕಾರು ಖರೀದಿಸಿದರೆ ನಿಮ್ಮ ಹಣಕಾಸಿನ ನಿರ್ವಾಹಣೆ ಹಳಿ ತಪ್ಪುವುದಿಲ್ಲ.

ಪ್ರಾಯೋಗಿಕ ವಿವರಣೆ 1: ಉದಾಹರಣೆಗೆ ನಿಮ್ಮ ವಾರ್ಷಿಕ ಆದಾಯ ₹ 15 ಲಕ್ಷವಾಗಿದ್ದು ₹ 6 ಲಕ್ಷ ಮೌಲ್ಯದ ಕಾರು ಖರೀದಿಸಲು ಮುಂದಾಗಿದ್ದೀರಿ ಎಂದು ಭಾವಿಸಿ. ಆಗ 20/4/10 ಸೂತ್ರದಂತೆ ₹ 1.5 ಲಕ್ಷವನ್ನು ನೀವು ಡೌನ್ ಪೇಮೆಂಟ್ ಆಗಿ ಮಾಡಬೇಕು. ಉಳಿದ ₹ 4.5 ಲಕ್ಷವನ್ನು ಶೇ 8 ರ ಬಡ್ಡಿ ದರದಲ್ಲಿ ಸಾಲವಾಗಿ ಪಡೆದರೆ ಮಾಸಿಕ ₹ 10,986 ಇಎಂಐ ಬರುತ್ತದೆ. ಈ ಲೆಕ್ಕಾಚಾರ 20/4/10 ಸೂತ್ರಕ್ಕೆ ಅನುಗುಣವಾಗೇ ಇದೆ.

ಪ್ರಾಯೋಗಿಕ ವಿವರಣೆ 2: ಉದಾಹರಣೆಗೆ ನಿಮ್ಮ ವಾರ್ಷಿಕ ಆದಾಯ ₹12 ಲಕ್ಷವಾಗಿದ್ದು ₹ 6 ಲಕ್ಷ ಮೌಲ್ಯದ ಕಾರು ಖರೀದಿಸಲು ಮುಂದಾಗಿದ್ದೀರಿ ಎಂದು ಭಾವಿಸಿ. ಆಗ 20/4/10 ಸೂತ್ರದಂತೆ ₹1.2 ಲಕ್ಷವನ್ನು ನೀವು ಡೌನ್ ಪೇಮೆಂಟ್ ಆಗಿ ಮಾಡಬೇಕು. ಉಳಿದ ₹ 4.8 ಲಕ್ಷವನ್ನು ಶೇ 8 ರ ಬಡ್ಡಿ ದರದಲ್ಲಿ ಸಾಲವಾಗಿ ಪಡೆದರೆ ಮಾಸಿಕ ₹ 11,718 ಇಎಂಐ ಬರುತ್ತದೆ. ಈ ಲೆಕ್ಕಾಚಾರ 20/4/10 ಸೂತ್ರಕ್ಕೆ ಅನುಗುಣವಾಗಿ ಇಲ್ಲ. ಇಲ್ಲಿ ಕಾರಿನ ನಿರ್ವಹಣಾ ವೆಚ್ಚ ಶೇ 10 ನ್ನು ಮೀರುತ್ತದೆ. ಇಂತಹ ಸಂದರ್ಭದಲ್ಲಿ ಕಾರು ಖರೀದಿಸುವಾಗ ಡೌನ್ ಪೇಮೆಂಟ್ ಹೆಚ್ಚಳ ಮಾಡುವುದು ಇಲ್ಲವೇ ಸಂಪೂರ್ಣ ಪೇಮೆಂಟ್ ಮಾಡಿ ಕಾರು ಖರೀದಿಸಲು ಮುಂದಾಗುವುದು ಒಳಿತು. ಅದು ಸಾಧ್ಯವಾಗುವುದಿಲ್ಲ ಎಂದಾದಲ್ಲಿ 6 ಲಕ್ಷಕ್ಕಿಂತ ಕಡಿಮೆ ಬಜೆಟ್‌ನ ಕಾರು ಖರೀದಿಸಬಹುದು. ಮತ್ತೊಂದು ಆಯ್ಕೆ ಎಂದರೆ ಸೆಕೆಂಡ್ ಹ್ಯಾಂಡ್ ಕಾರಿನ ಮೊರೆ ಹೋಗುವುದು.

ಕೊನೆಯ ಮಾತು: ಸರಳವಾಗಿ ಹೇಳುವುದಾದರೆ ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವುದನ್ನು 20/4/10 ಸೂತ್ರ ಪ್ರತಿಪಾದಿಸುತ್ತದೆ. ಸಾಲ ಸಿಗುತ್ತದೆ ಎನ್ನುವ ಕಾರಣಕ್ಕೆ ಅಳತೆ ಅಂದಾಜಿಲ್ಲದೆ ಬಹತ್ ಸಾಲ ಮಾಡಿ ದೊಡ್ಡ ದೊಡ್ಡ ಕಾರುಗಳನ್ನು ಖರೀದಿಸಿ ಇಎಂಐ ಕಟ್ಟಲು ಪರದಾಡಬಾರದು ಎನ್ನುವುದು ಈ 20/4/10 ನಿಯಮದ ಉದ್ದೇಶ. ಇದನ್ನು ನಿಮ್ಮ ಅಗತ್ಯ ಅನುಕೂಲಕ್ಕೆ ತಕ್ಕಂತೆ ಲೆಕ್ಕಾಚಾರ ಮಾಡಿ ಮಾರ್ಪಾಡು ಮಾಡಿಕೊಳ್ಳಬಹುದು.

(ಲೇಖಕಿ ಚಾರ್ಟರ್ಡ್ ಅಕೌಂಟೆಂಟ್ )

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಷೇರುಪೇಟೆ: ಸತತ ಮೂರನೇ ವಾರ ಗಳಿಕೆ

ಷೇರುಪೇಟೆ ಸೂಚ್ಯಂಕಗಳು ಸತತ ಮೂರನೇ ವಾರವೂ ಗಳಿಕೆ ಕಂಡಿವೆ. ನವೆಂಬರ್ 17ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಗಳಿಕೆ ದಾಖಲಿಸಿವೆ. 65794 ಅಂಶಗಳಲ್ಲಿ ವಹಿವಾಟು ಮುಗಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 1.37 ರಷ್ಟು ಗಳಿಸಿಕೊಂಡಿದೆ. 19731 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ನಿಫ್ಟಿ ಶೇ 1.57 ರಷ್ಟು ಜಿಗಿದಿದೆ. ತೈಲ ಬೆಲೆ ಇಳಿಕೆ ವಿವಿಧ ದೇಶಗಳ ಸೆಂಟ್ರಲ್ ಬ್ಯಾಂಕ್ ಗಳಿಂದ ಬಡ್ಡಿ ದರ ಹೆಚ್ಚಳಕ್ಕೆ ಅಲ್ಪ ವಿರಾಮ ಸೇರಿದಂತೆ ಹಲವು ಅಂಶಗಳು ಮಾರುಕಟ್ಟೆ ಮೇಲೆ ಪರಿಣಾಮ ಬೀರಿವೆ. ವಲಯವಾರು ಪ್ರಗತಿಯಲ್ಲಿ ನಿಫ್ಟಿ ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಶೇ 5 ರಿಯಲ್ ಎಸ್ಟೇಟ್ ಸೂಚ್ಯಂಕ ಶೇ 4.7 ಆಟೊ ಸೂಚ್ಯಂಕ ಶೇ 4 ಮತ್ತು ನಿಫ್ಟಿ ಮೆಟಲ್ ಸೂಚ್ಯಂಕ ಶೇ 3 ರಷ್ಟು ಗಳಿಸಿಕೊಂಡಿವೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 404.82 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ದೇಶಿಯ ಸಾಂಸ್ಥಿಕ ಹೂಡಿಕೆದಾರರು ₹ 1675.7 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಬಿಎಸ್ಇ ಲಾರ್ಜ್ ಕ್ಯಾಪ್‌ನಲ್ಲಿ ನೈಕಾ ಐಷರ್ ಮೋಟರ್ಸ್ ಹಿರೊ ಮೋಟೊಕಾರ್ಪ್‌ ಐಸಿಐಸಿಐ ಲೋಂಬಾರ್ಡ್‌ ಜನರಲ್ ಇನ್ಶುರೆನ್ಸ್ ಕೋಲ್ ಇಂಡಿಯಾ ಇನ್ಫೊ ಎಡ್ಜ್ ಟೆಕ್ ಮಹೀಂದ್ರ ಐಸಿಐಸಿಐ ಪ್ರೂಡೆನ್ಶಿಯಲ್ ಲೈಫ್ ಇನ್ಶೂರೆನ್ಸ್ ಕಂಪನಿ ಮತ್ತು ಬಾಷ್ ಗಳಿಕೆ ಕಂಡಿವೆ. ಮಿಡ್ ಕ್ಯಾಪ್‌ನಲ್ಲಿ ಸೋಲಾರ್ ಇಂಡಸ್ಟ್ರೀಸ್ ಇಂಡಿಯಾ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಪವರ್ ಫೈನಾನ್ಸ್ ಕಾರ್ಪೊರೇಷನ್ ಭಾರತ್ ಹೆವಿ ಇಲೆಕ್ಟ್ರಿಕಲ್ಸ್ ಪಿಬಿ ಫಿನ್ ಟೆಕ್ ಟೊರೆಂಟ್ ಪವರ್ ಟಿವಿಎಸ್ ಮೋಟಾರ್ ಕಂಪನಿ ಮತ್ತು ಒಬೆರಾಯ್ ರಿಯಾಲಿಟಿ ಗಳಿಕೆ ಕಂಡಿವೆ. ಬಿಎಸ್ಇ ಸ್ಮಾಲ್ ಕ್ಯಾಪ್ ನಲ್ಲಿ ವೆರಾಂಡಾ ಲರ್ನಿಂಗ್ ಸಲ್ಯೂಷನ್ಸ್ ಅಪೋಲೊ ಮೈಕ್ರೋ ಸಿಸ್ಟಮ್ಸ್ ಓರಿಯಂಟ್ ಗ್ರೀನ್ ಪವರ್ ಜಿಇ ಪವರ್ ಇಂಡಿಯಾ ಟಾಟಾ ಇನ್ವೆಸ್ಟ್‌ಮೆಂಟ್‌ ಕಾರ್ಪೊರೇಷನ್ ಸೇರಿ ಕೆಲ ಕಂಪನಿಗಳು ಶೇ 20 ರಿಂದ ಶೇ 41 ರಷ್ಟು ಗಳಿಸಿಕೊಂಡಿವೆ. ಮುನ್ನೋಟ: ನವೆಂಬರ್ 22 ರಂದು ಟಾಟಾ ಟೆಕ್ನಾಲಜೀಸ್ ಐಪಿಒ (ಆರಂಭಿಸ ಸಾರ್ವಜನಿಕ ಹೂಡಿಕೆ) ಬಿಡ್ಡಿಂಗ್ ಪ್ರಕ್ರಿಯೆ ಆರಂಭವಾಗಲಿದೆ.

20 ವರ್ಷಗಳ ಬಳಿಕ ಟಾಟಾ ಸಮೂಹದ ಕಂಪನಿಯೊಂದು ಐಪಿಒಗೆ ಮುಂದಾಗಿದೆ. ಉಳಿದಂತೆ ಈ ವಾರ ಅಶಿನಾ ಇಸ್ಪ್ಯಾಟ್ ಲಿ. ವಿಜೆಟಿಎಫ್ ಎಜು ಸರ್ವೀಸಸ್ ಲಿ. ಕ್ಲಿಯೊ ಇನ್ಫೊಟೆಕ್ ಲಿ. ಮಚಿನೋ ಪ್ಲಾಸ್ಟಿಕ್ಸ್ ಲಿ. ಯುನಿಸ್ಟಾರ್ ಮಲ್ಟಿಮಿಡಿಯಾ ಲಿ ಬ್ರಹ್ಮಪುತ್ರ ಇನ್ಫ್ರಾಸ್ಟ್ರಕ್ಚರ್ ಲಿ ಸೇರಿ ಕೆಲ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT