ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಮಾರುಕಟ್ಟೆ | ಸಹಕಾರ ಬ್ಯಾಂಕ್: ಹೂಡಿಕೆಗೆ ಮುನ್ನ...

Published 31 ಜುಲೈ 2023, 0:20 IST
Last Updated 31 ಜುಲೈ 2023, 0:20 IST
ಅಕ್ಷರ ಗಾತ್ರ

ಸಹಕಾರ ಬ್ಯಾಂಕುಗಳು ಹಣಕಾಸಿನ ಸಂಕಷ್ಟಕ್ಕೆ ಮೇಲಿಂದ ಮೇಲೆ ಸಿಲುಕುತ್ತಿರುವುದು ಗ್ರಾಹಕರನ್ನು ಚಿಂತೆಗೀಡುಮಾಡಿದೆ. ಬೆಂಗಳೂರಿನ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕಿನಲ್ಲಿ ಅವ್ಯವಹಾರ ನಡೆದ ಕೆಲವೇ ಸಮಯದಲ್ಲಿ ಬೆಂಗಳೂರಿನ ನ್ಯಾಷನಲ್ ಕೋ–ಆಪರೇಟಿವ್ ಬ್ಯಾಂಕಿನ ವ್ಯವಹಾರಗಳ ಮೇಲೆ ಆರ್‌ಬಿಐ ನಿರ್ಬಂಧ ಹೇರಿದೆ. ಈ ವಿದ್ಯಮಾನಗಳು, ಆರ್‌ಬಿಐ ಅಡಿಯಲ್ಲಿ ಸಹಕಾರ ಬ್ಯಾಂಕುಗಳು ಕಾರ್ಯನಿರ್ವಹಿಸಿದರೂ ಗ್ರಾಹಕರ ಪಾಲಿಗೆ ಅವು ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಮೂಡಿಸಿವೆ.

ಹಾಗಾದರೆ, ಸಹಕಾರ ಬ್ಯಾಂಕುಗಳಲ್ಲಿ ಹಣ ಹೂಡಿಕೆ ಮಾಡುವ ಮುನ್ನ ಯಾವೆಲ್ಲ ವಿಚಾರಗಳನ್ನು ಗಮನಿಸಬೇಕು?

ಠೇವಣಿ ಹಣಕ್ಕೆ ರಾಷ್ಟ್ರೀಕೃತ ಬ್ಯಾಂಕುಗಳಿಗಿಂತ ಹೆಚ್ಚಿನ ಬಡ್ಡಿ ಲಾಭವನ್ನು ಹಲವು ಸಹಕಾರ ಬ್ಯಾಂಕುಗಳು ನೀಡುತ್ತವೆ. ಹೆಚ್ಚುವರಿ ಬಡ್ಡಿಯ ಲಾಭದ ಆಸೆಗೆ ಬೀಳುವ ಗ್ರಾಹಕರು ಪೂರ್ವಾಪರ ಯೋಚಿಸದೆ ಸಹಕಾರ ಬ್ಯಾಂಕುಗಳಲ್ಲಿ ಠೇವಣಿ ಇಡುವುದಿದೆ. ಉದಾಹರಣೆಗೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿಯ ಸದ್ಯದ ಬಡ್ಡಿ ದರ ಶೇ 7ರಿಂದ ಶೇ 7.25ರಷ್ಟಿದೆ. ಸಹಕಾರ ಬ್ಯಾಂಕುಗಳಲ್ಲಿ ಶೇ 8ರಿಂದ ಶೇ 10ರವರೆಗೂ ಬಡ್ಡಿ ಇದೆ. ಈ ಕಾರಣದಿಂದಾಗಿ ತಿಂಗಳ ಆದಾಯಕ್ಕೆ ಠೇವಣಿಗಳ ಮೇಲಿನ ಬಡ್ಡಿ ಗಳಿಕೆಯನ್ನು ಅವಲಂಬಿಸಿರುವವರು, ನಿವೃತ್ತ ನೌಕರರು ಸೇರಿದಂತೆ ಅನೇಕರು ಸಹಕಾರ ಬ್ಯಾಂಕುಗಳಲ್ಲಿ ದೊಡ್ಡ ಮೊತ್ತದ ಹಣ ಹೂಡಿಕೆ ಮಾಡುವುದಿದೆ. ಹೀಗೆ ಹೂಡಿಕೆ ಮಾಡಿದವರು ಬ್ಯಾಂಕ್ ಸಂಕಷ್ಟಕ್ಕೆ ಸಿಲುಕಿದಾಗ ಹಣ ಕಳೆದುಕೊಳ್ಳುವ ಅಪಾಯ ಇರುತ್ತದೆ.

ಹೆಚ್ಚು ಲಾಭ ಹೆಚ್ಚು ರಿಸ್ಕ್: ಸಹಕಾರ ಬ್ಯಾಂಕುಗಳಲ್ಲಿ ಬಡ್ಡಿ ದರವು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಬಡ್ಡಿ ದರಕ್ಕಿಂತ ಸಾಮಾನ್ಯವಾಗಿ ಶೇ 1ರಿಂದ ಶೇ 1.5ರಷ್ಟು ಹೆಚ್ಚಿಗೆ ಇರುತ್ತದೆ. ಇನ್ನೂ ಹೆಚ್ಚು ಬಡ್ಡಿ ನೀಡುವ ನಿದರ್ಶನಗಳೂ ಇದ್ದಿರಬಹುದು. ಹೆಚ್ಚಿನ ಬಡ್ಡಿಯ ಲಾಭ ಠೇವಣಿದಾರರಿಗೆ ಸಿಕ್ಕಿದರೆ ಸಮಸ್ಯೆ ಇಲ್ಲ. ಆದರೆ, ಮಾರುಕಟ್ಟೆಯಲ್ಲಿ ಸಹಜವಾಗಿರುವ ‍ಪ್ರಮಾಣಕ್ಕಿಂತ ಬಹಳ ಹೆಚ್ಚು ಬಡ್ಡಿ ಕೊಡುತ್ತೇವೆ ಎನ್ನುವ ಯಾವುದೇ ಸಹಕಾರ ಬ್ಯಾಂಕಿನ ಪೂರ್ವಾಪರವನ್ನು ಸರಿಯಾಗಿ ಪರಿಶೀಲಿಸಬೇಕಾಗುತ್ತದೆ. ಠೇವಣಿಗೆ ಹೆಚ್ಚು ಬಡ್ಡಿ ನೀಡಲು ಬ್ಯಾಂಕ್ ಸಿದ್ಧವಿದೆ ಎಂದಾದರೆ ಸಾಲ ಪಡೆಯುವ ವ್ಯಕ್ತಿಯಿಂದ ಆ ಬ್ಯಾಂಕ್ ಹೆಚ್ಚಿನ ಬಡ್ಡಿ ಪಡೆದುಕೊಳ್ಳುತ್ತದೆ ಎಂದು ಅರ್ಥ. ಹೆಚ್ಚಿನ ಬಡ್ಡಿಯನ್ನು ಬ್ಯಾಂಕ್ ಪಡೆಯುತ್ತಿದೆ ಎಂದಾದರೆ ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ವ್ಯಕ್ತಿಗೆ ಅದು ಸಾಲ ಕೊಟ್ಟಿಲ್ಲ ಎಂದೂ ಭಾವಿಸಬಹುದು. ಹಣಕಾಸಿನ ಸ್ಥಿತಿ ಸರಿಯಿಲ್ಲದ ವ್ಯಕ್ತಿಗೆ ಹೆಚ್ಚಿನ ಬಡ್ಡಿಗೆ ಸಾಲ ನೀಡಿದಾಗ, ಆ ವ್ಯಕ್ತಿ ಸಾಲ ಮರುಪಾವತಿ ಮಾಡದಿದ್ದರೆ ಬ್ಯಾಂಕಿನ ವಸೂಲಾಗದ ಸಾಲದ (ಎನ್‌ಪಿಎ) ಪ್ರಮಾಣ ಹೆಚ್ಚಾಗುತ್ತದೆ. ಕಾಲಕಾಲಕ್ಕೆ ಎನ್‌ಪಿಎ ಹೆಚ್ಚಾದರೆ ಬ್ಯಾಂಕಿನ ಹಣಕಾಸಿನ ಸ್ಥಿತಿ ಕೆಟ್ಟು, ಠೇವಣಿದಾರರ ಹಣಕ್ಕೆ ಗ್ಯಾರಂಟಿ ಇಲ್ಲದಂತಾಗುತ್ತದೆ.

ಸಹಕಾರ ಬ್ಯಾಂಕುಗಳು ಆರ್‌ಬಿಐ ನಿಯಂತ್ರಣಕ್ಕೆ ಒಳಪಡುತ್ತವೆ, ನಿಜ. ಆದರೆ ಆರ್‌ಬಿಐ ನಿಯಂತ್ರಣ ಇದೆ ಎಂದಾಕ್ಷಣ ಬ್ಯಾಂಕಿನ ಎಲ್ಲ ವ್ಯವಹಾರಗಳು ಪಕ್ಕಾ ಇವೆ ಎಂದಲ್ಲ. ಬ್ಯಾಂಕಿನ ಲೆಕ್ಕಪತ್ರಗಳನ್ನು ಪರಿಶೀಲಿಸುವಾಗ ಕೆಲವೊಮ್ಮೆ ಅಧಿಕಾರಿಗಳಿಂದಲೇ ಲೋಪ ಆಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಬ್ಯಾಂಕಿನ ಆಡಳಿತ ಮಂಡಳಿಯಲ್ಲಿ ಯಾರಿದ್ದಾರೆ, ಅವರು ಆರ್ಥಿಕವಾಗಿ ಎಷ್ಟು ಉತ್ತಮ ಸ್ಥಿತಿಯಲ್ಲಿದ್ದಾರೆ, ಎಷ್ಟು ವರ್ಷದಿಂದ ಬ್ಯಾಂಕ್ ಉತ್ತಮವಾಗಿ ನಡೆಯುತ್ತಿದೆ ಎನ್ನುವುದನ್ನು ಗಮನಿಸಿ ಮುಂದುವರಿಯಬೇಕು.

ಸಾಲ ಕೊಡುವ ಪ್ರಕ್ರಿಯಲ್ಲಿನ ಸಮಸ್ಯೆ: ಸಹಕಾರ ಬ್ಯಾಂಕುಗಳಲ್ಲಿ, ಯಾರಿಗೆ ಸಾಲ ಕೊಡಬೇಕು ಎನ್ನುವ ನಿರ್ಧಾರವನ್ನು ನಿರ್ದೇಶಕರ ಮಂಡಳಿ ತೆಗೆದುಕೊಳ್ಳುತ್ತದೆ. ನಿರ್ದೇಶಕರ ಮಂಡಳಿಯ ತೀರ್ಮಾನಗಳನ್ನು ಬಹುತೇಕ ಸಂದರ್ಭಗಳಲ್ಲಿ ಬ್ಯಾಂಕಿನ ಸದಸ್ಯರು ಪ್ರಶ್ನಿಸುವುದಿಲ್ಲ. ಇನ್ನೊಂದು ವಿಚಿತ್ರ ಅಂದ್ರೆ, ಈ ಬ್ಯಾಂಕುಗಳಲ್ಲಿ ಠೇವಣಿ ಇಡುವ ವ್ಯಕ್ತಿಗೆ ಸದಸ್ಯತ್ವದ ಖಾತರಿ ಇಲ್ಲ. ಅವರಿಗೆ ‘ಸಹ ಸದಸ್ಯತ್ವ’ ನೀಡುವುದಿದೆ. ‘ಸಹ ಸದಸ್ಯ’ನಿಗೆ ಮತದಾನದ ಹಕ್ಕಿರುವುದಿಲ್ಲ. ನಿರ್ದೇಶಕರ ಮಂಡಳಿಯ ನಿರ್ಧಾರಗಳನ್ನು ‘ಸಹ ಸದಸ್ಯ’ ಪ್ರಶ್ನಿಸಲು ಬರುವುದಿಲ್ಲ. ಅಲ್ಲದೆ, ಸಹಕಾರ ಬ್ಯಾಂಕುಗಳಲ್ಲಿ ರಾಜಕೀಯ ಹಸ್ತಕ್ಷೇಪ ಇರುವುದೂ ಇದೆ.

ಉದಾಹರಣೆಗಾಗಿ ಹೇಳಬೇಕು ಎಂದಾದರೆ, ₹100 ಕೋಟಿ ಸಾಲವನ್ನು ಬ್ಯಾಂಕ್ ನೂರು ಮಂದಿಗೆ ಕೊಟ್ಟಿದ್ದರೆ ಸಮಸ್ಯೆ ಹೆಚ್ಚಿರುವುದಿಲ್ಲ. ಒಬ್ಬನ ಸಾಲ ಬಾಕಿಯಾದರೆ ಇನ್ನುಳಿದ 99 ಮಂದಿ ಸಾಲ ಕಟ್ಟುತ್ತಾರೆ. ಆದರೆ ₹100 ಕೋಟಿ ಸಾಲವನ್ನು ಇಬ್ಬರಿಗೆ ಮಾತ್ರ ಕೊಟ್ಟಿದ್ದು, ಒಬ್ಬ ಸಾಲ ಕಟ್ಟದಿದ್ದರೂ ಬ್ಯಾಂಕ್ ತೀವ್ರ ಸಂಕಷ್ಟಕ್ಕೆ ಸಿಲುಕಬಹುದು. ಕಡಿಮೆ ಜನರ ಕೈಯಲ್ಲಿ ಬ್ಯಾಂಕಿನ ದೊಡ್ಡ ಮೊತ್ತ ಇದ್ದರೆ ಅದು ಅಷ್ಟು ಸುರಕ್ಷಿತವಲ್ಲ.

₹5 ಲಕ್ಷಕ್ಕೆ ಮಾತ್ರ ವಿಮೆ: ಯಾವುದೇ ಬ್ಯಾಂಕಿನಲ್ಲಿ ಠೇವಣಿ ಹಣಕ್ಕೆ ವಿಮೆ ಖಾತರಿ ಇರುವುದು ₹5 ಲಕ್ಷದವರೆಗಿನ ಮೊತ್ತಕ್ಕೆ ಮಾತ್ರ. ಬ್ಯಾಂಕ್ ಒಂದೊಮ್ಮೆ ದಿವಾಳಿಯಾದರೆ ಎಷ್ಟೇ ಹಣ ಠೇವಣಿ ಇಟ್ಟಿದ್ದರೂ ವಿಮೆ ರಕ್ಷಣೆಯ ಅಡಿಯಲ್ಲಿ ಸಿಗುವುದು ₹5 ಲಕ್ಷ ಮಾತ್ರ. ಬ್ಯಾಂಕಿಗೆ ಸ್ವತ್ತುಗಳಿದ್ದು, ಅವುಗಳನ್ನು ಮಾರಾಟ ಮಾಡಿದಾಗ ಹಣ ಬಂದರೆ ಠೇವಣಿಯ ಇನ್ನುಳಿದ ಹಣ ಸಿಗುತ್ತದೆ. ಹಾಗಾಗಿ ಭಾರಿ ಮೊತ್ತವನ್ನು ಠೇವಣಿಯಾಗಿ ಇಡುವಾಗ ಯಾವ ಸಹಕಾರ ಬ್ಯಾಂಕ್ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದೆ ಎನ್ನುವುದನ್ನು ಮನಗಂಡು ಮುಂದುವರಿಯಿರಿ.

ಅಲ್ಪ ಕುಸಿತ ದಾಖಲಿಸಿದ ಷೇರುಪೇಟೆ

ಸತತ ನಾಲ್ಕು ವಾರಗಳ ಕಾಲ ಗಳಿಕೆಯ ಹಾದಿಯಲ್ಲಿದ್ದ ಷೇರುಪೇಟೆ ಸೂಚ್ಯಂಕಗಳು ಜುಲೈ 28ಕ್ಕೆ ಕೊನೆಗೊಂಡ ವಾರದಲ್ಲಿ ಕುಸಿತ ಕಂಡಿವೆ. 66,160 ಅಂಶಗಳಲ್ಲಿ ವಹಿವಾಟು ಮುಗಿಸಿದ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 0.78ರಷ್ಟು ಕುಸಿದಿದೆ. 19,646 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 0.50ರಷ್ಟು ತಗ್ಗಿದೆ.

ಇಂಗ್ಲೆಂಡ್ ಸೆಂಟ್ರಲ್ ಬ್ಯಾಂಕಿನಿಂದ ಬಡ್ಡಿ ದರ ಹೆಚ್ಚಳ, ಅಮೆರಿಕದ ಫೆಡರಲ್ ಬ್ಯಾಂಕ್‌ನಿಂದ ಬಡ್ಡಿ ದರ ಏರಿಕೆ, ಪ್ರಮುಖ ಮಾರುಕಟ್ಟೆಗಳಲ್ಲಿ ಕಂಡುಬಂದ ಅನಿಶ್ಚಿತತೆ, ಕಂಪನಿಗಳ ತ್ರೈಮಾಸಿಕ ವರದಿಗಳಲ್ಲಿ ಕಂಡುಬಂದ ಮಿಶ್ರ ಫಲಿತಾಂಶ, ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಮಾರಾಟದ ಒತ್ತಡ ಸೇರಿ ಹಲವು ಅಂಶಗಳು ಮಾರುಕಟ್ಟೆ ಇಳಿಕೆಗೆ ಕಾರಣವಾಗಿವೆ.

ವಲಯವಾರು ಪ್ರಗತಿಯಲ್ಲಿ ರಿಯಲ್ ಎಸ್ಟೇಟ್ ಸೂಚ್ಯಂಕ ಶೇ 5ರಷ್ಟು, ಫಾರ್ಮಾ ಸೂಚ್ಯಂಕ ಶೇ 4.8ರಷ್ಟು, ನಿಫ್ಟಿ ಆರೋಗ್ಯ ಸೂಚ್ಯಂಕ ಶೇ 4.3ರಷ್ಟು, ನಿಫ್ಟಿ ಮಾಧ್ಯಮ ಮತ್ತು ಲೋಹ ಸೂಚ್ಯಂಕ ತಲಾ ಶೇ 3.5ರಷ್ಟು ಗಳಿಸಿಕೊಂಡಿವೆ. ನಿಫ್ಟಿ ಬ್ಯಾಂಕ್, ಐ.ಟಿ ಮತ್ತು ಎಫ್ಎಂಸಿಜಿ ಸೂಚ್ಯಂಕಗಳು ತಲಾ ಶೇ 1ರಷ್ಟು ಕುಸಿತ ಕಂಡಿವೆ.

ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹3,074.71 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹5,233.79 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಬಿಎಸ್‌ಇ ಲಾರ್ಜ್ ಕ್ಯಾಪ್‌ನಲ್ಲಿ ಪೇಟಿಎಂ, ಟೆಕ್ ಮಹೀಂದ್ರ, ಕೋಟಕ್ ಮಹೀಂದ್ರ ಬ್ಯಾಂಕ್, ಭಾರತ್ ಪೆಟ್ರೋಲಿಯಂ, ಐಟಿಸಿ, ಇಂಡಿಯನ್ ಆಯಿಲ್ ಕುಸಿದಿವೆ. ಟಾಟಾ ಮೋಟರ್ಸ್ ಡಿವಿಆರ್, ಸಿಪ್ಲಾ, ಅದಾನಿ ಗ್ರೀನ್ ಎನರ್ಜಿ, ಅಂಬುಜಾ ಸಿಮೆಂಟ್ಸ್ , ಜೊಮಾಟೊ, ಟಾಟಾ ಪವರ್ ಮತ್ತು ಎನ್‌ಟಿಪಿಸಿ ಗಳಿಕೆ ದಾಖಲಿಸಿವೆ.

ಮುನ್ನೋಟ: ಈ ವಾರ ಜೆಕೆ ಟೈರ್ಸ್, ಅದಾನಿ ಗ್ರೀನ್, ಅದಾನಿ ಪವರ್, ಬಾಷ್ ಲಿ., ಬಟರ್ ಫ್ಲೈ, ಗೇಲ್, ಗೋ ಕಲರ್ಸ್, ಮಾರುತಿ ಸುಜುಕಿ, ಟಿಸಿಐ, ಪಿವಿಆರ್ ಐನಾಕ್ಸ್, ಐಷರ್ ಮೋಟರ್ಸ್, ಲುಪಿನ್, ಎಂಆರ್‌ಎಫ್, ಕರ್ಣಾಟಕ ಬ್ಯಾಂಕ್, ನೀಲ್ ಕಮಲ್, ಎಲ್‌ಐಸಿ ಹೌಸಿಂಗ್ ಫೈನಾನ್ಸ್, ಇಂಡಿಗೊ ಪೇಂಟ್ಸ್, ಟೈಟನ್, ಕೆಇಐ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ವರದಿ ಪ್ರಕಟಿಸಲಿವೆ.

ಆಗಸ್ಟ್ 8ರಿಂದ 10ರವರೆಗೆ ಆರ್‌ಬಿಐ ಹಣಕಾಸು ಸಮಿತಿ ಸಭೆ ನಡೆಯಲಿದ್ದು ರೆಪೊ ದರ ಹೆಚ್ಚಳದ ಸಾಧ್ಯತೆಯಿದೆ.

(ಲೇಖಕಿ ಚಾರ್ಟರ್ಡ್ ಅಕೌಂಟೆಂಟ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT