ಬೆಂಗಳೂರು: ಹುರುನ್ ಇಂಡಿಯಾ 35 ವರ್ಷದೊಳಗಿನ 150 ಯುವ ಉದ್ಯಮಿಗಳ 2024ರ ಪಟ್ಟಿಯನ್ನು ಗುರುವಾರ ಬಿಡುಗಡೆಗೊಳಿಸಿದ್ದು, ಈ ಪಟ್ಟಿಯಲ್ಲಿ ಬೆಂಗಳೂರಿನ 29 ಯುವ ಉದ್ಯಮಿಗಳು ಸ್ಥಾನ ಪಡೆದಿದ್ದಾರೆ.
ದೇಶದ 41 ನಗರಗಳ ಪೈಕಿ ಅತಿಹೆಚ್ಚು ಉದ್ಯಮಿಗಳನ್ನು ಹೊಂದಿರುವ ಪಟ್ಟಿಯಲ್ಲಿ ಬೆಂಗಳೂರು ಪ್ರಥಮ ಸ್ಥಾನದಲ್ಲಿದೆ. ಮುಂಬೈನಲ್ಲಿ 26 ಉದ್ಯಮಿಗಳಿದ್ದು, ಎರಡನೇ ಸ್ಥಾನ ಪಡೆದಿದೆ.
ಶೇರ್‌ಚಾಟ್‌ನ ಅಂಕುಶ್ ಸಚದೇವ್ (31) ಅತಿ ಕಿರಿಯ ವಯಸ್ಸಿನ ಉದ್ಯಮಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಟಾಡಲ್‌ನ ಪರಿತಾ ಪರೇಖ್ ಮತ್ತು ಉದ್ಯಮಿ ಮುಕೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ (32) ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿ ಅತಿ ಕಿರಿಯರಾಗಿದ್ದಾರೆ.
ಕನಿಷ್ಠ 50 ಮಿಲಿಯನ್ ಡಾಲರ್ (₹418 ಕೋಟಿ) ವ್ಯವಹಾರ ಹೊಂದಿರುವ ಕಂಪನಿಯನ್ನು ಆಧರಿಸಿ ಈ ಪಟ್ಟಿ ಸಿದ್ಧಪಡಿಸಲಾಗಿದೆ.
ಈ ಪಟ್ಟಿಯಲ್ಲಿ ಐಐಟಿ ಮದ್ರಾಸ್‌ನಲ್ಲಿ ಪದವಿ ಪಡೆದ 13 ಉದ್ಯಮಿಗಳು ಸ್ಥಾನ ಪಡೆದಿದ್ದಾರೆ. ನಂತರ ಐಐಟಿ ಬಾಂಬೆ (11), ಐಐಟಿ ದೆಹಲಿ ಮತ್ತು ಐಐಟಿ ಖರಗ್‌ಪುರದಲ್ಲಿ ವ್ಯಾಸಂಗ ಮಾಡಿದ ತಲಾ 10 ವಿದ್ಯಾರ್ಥಿಗಳು ಇದ್ದಾರೆ.
ಐಐಟಿ ಮದ್ರಾಸ್‌ನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿದ 7 ವಿದ್ಯಾರ್ಥಿಗಳು, ಐಐಟಿ ಖರಗ್‌ಪುರದ 6 ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ ಎಂದು ಹುರುನ್ ಇಂಡಿಯಾ ತಿಳಿಸಿದೆ.