ನವದೆಹಲಿ: 2023-24ನೇ ಆರ್ಥಿಕ ವರ್ಷದಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು (ಎಎಐ) ದೇಶದ 101 ವಿಮಾನ ನಿಲ್ದಾಣಗಳ ದುರಸ್ತಿ ಮತ್ತು ನಿರ್ವಹಣೆ ಕಾರ್ಯಕ್ಕೆ ₹796 ಕೋಟಿ ವೆಚ್ಚ ಮಾಡಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ರಾಜ್ಯಸಭೆಗೆ ತಿಳಿಸಿದೆ.
ಹಿಂದಿನ ಹಣಕಾಸು ವರ್ಷದ ಅವಧಿಗೆ ಹೋಲಿಸಿದರೆ ವೆಚ್ಚದ ಪ್ರಮಾಣವು ಶೇ 20ರಷ್ಟು ಏರಿಕೆಯಾಗಿದೆ. 2022–23ರಲ್ಲಿ ₹663 ಕೋಟಿ ಹಾಗೂ 2021–22ರಲ್ಲಿ ₹535 ಕೋಟಿ ಖರ್ಚು ಮಾಡಲಾಗಿದೆ ಎಂದು ಹೇಳಿದೆ.
ಒಟ್ಟು 121 ವಿಮಾನ ನಿಲ್ದಾಣಗಳ ವೆಚ್ಚದ ಬಗ್ಗೆ ಮಾಹಿತಿ ನೀಡಿದ್ದು, ಉಳಿದ 20 ವಿಮಾನ ನಿಲ್ದಾಣಗಳ ನಿರ್ವಹಣೆಗೆ ಯಾವುದೇ ಹಣ ಖರ್ಚು ಮಾಡಿಲ್ಲ ಎಂದು ತಿಳಿಸಿದೆ.
‘ವಿಮಾನ ನಿಲ್ದಾಣದಲ್ಲಿರುವ ಕಟ್ಟಡಗಳ ಸ್ಥಿತಿಗತಿ ಮತ್ತು ಮೂಲ ಸೌಕರ್ಯ ಕುರಿತಂತೆ ಮೂರನೇ ವ್ಯಕ್ತಿಯಿಂದ ಆಡಿಟ್ ನಡೆಸುವಂತೆ ನಿಲ್ದಾಣಗಳ ಆಪರೇಟರ್‌ಗಳಿಗೆ ನಿರ್ದೇಶಿಸಲಾಗಿದೆ’ ಎಂದು ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳೀಧರ್ ಮೊಹೋಲ್, ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಪರವಾನಗಿ ಪಡೆದ ವಿಮಾನ ನಿಲ್ದಾಣಗಳ ತಪಾಸಣೆ ನಡೆಸಲಿದೆ.