ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಕ್‌ ಚಾಲಕರ ಪ್ರತಿಭಟನೆ: ಪೆಟ್ರೋಲ್‌, ಡೀಸೆಲ್‌ ಖರೀದಿಗೆ ನೂಕುನುಗ್ಗಲು

ಟ್ರಕ್‌ ಚಾಲಕರ ಪ್ರತಿಭಟನೆ: 2 ಸಾವಿರ ಬಂಕ್‌ನಲ್ಲಿ ದಾಸ್ತಾನು ಖಾಲಿ
Published 2 ಜನವರಿ 2024, 15:44 IST
Last Updated 2 ಜನವರಿ 2024, 15:44 IST
ಅಕ್ಷರ ಗಾತ್ರ

ನವದೆಹಲಿ: ‘ಅಪಘಾತ ನಡೆಸಿ ಪರಾರಿ’ಯಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾರಿಯಾಗಲಿರುವ ಹೊಸ ಕಾನೂನು ವಿರೋಧಿಸಿ ದೇಶದ ವಿವಿಧ ರಾಜ್ಯಗಳಲ್ಲಿ ಟ್ರಕ್‌, ಟ್ಯಾಂಕರ್‌ ಮತ್ತು ವಾಣಿಜ್ಯ ವಾಹನಗಳ ಚಾಲಕರು ನಡೆಸುತ್ತಿರುವ ಪ್ರತಿಭಟನೆಯು ಎರಡನೇ ದಿನವಾದ ಮಂಗಳವಾರ ತೀವ್ರಗೊಂಡಿದೆ.

ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್‌, ಮಧ್ಯಪ್ರದೇಶ, ಪಂಜಾಬ್‌, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರದ ವಿವಿಧೆಡೆ ಹೋರಾಟ ತೀವ್ರ ಸ್ವರೂಪ ಪಡೆದಿದ್ದು, ಸರಕು ಸಾಗಣೆ ಸೇವೆಯು ಅಸ್ತವ್ಯಸ್ತಗೊಂಡಿದೆ.

ಈ ಪ್ರದೇಶಗಳ ವ್ಯಾಪ್ತಿಯಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇಂಧನದ ಅಭಾವ ತಲೆದೋರಬಹುದು ಎಂಬ ಭೀತಿಯಿಂದ ಪೆಟ್ರೋಲ್‌ ಬಂಕ್‌ಗಳ ಬಳಿ ಖರೀದಿಗೆ ಗ್ರಾಹಕರ ನೂಕುನುಗ್ಗಲು ಉಂಟಾಗಿತ್ತು. 

‘ಪಶ್ಚಿಮ ಮತ್ತು ಉತ್ತರ ಭಾರತ ಭಾಗದ ಎರಡು ಸಾವಿರಕ್ಕೂ ಹೆಚ್ಚು ಪೆಟ್ರೋಲ್‌ ಬಂಕ್‌ಗಳಲ್ಲಿ ದಾಸ್ತಾನು ಖಾಲಿಯಾಗಿದ್ದು, ಗ್ರಾಹಕರು ಪರದಾಡುವಂತಾಗಿದೆ’ ಎಂದು ಸಾರಿಗೆ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವು ಬಂಕ್‌ಗಳ ಮುಂಭಾಗ ‘ಇಂಧನ ಖಾಲಿಯಾಗಿದೆ’ ಎಂದು ಬರೆದಿರುವ ಫಲಕಗಳನ್ನು ತೂಗು ಹಾಕಲಾಗಿತ್ತು. 

ದೇಶದಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಂದ ಪೆಟ್ರೋಲ್‌, ಡೀಸೆಲ್‌ ಮತ್ತು ಅಡುಗೆ ಅನಿಲ ಸಿಲಿಂಡರ್‌ ಪೂರೈಸುವ ಒಂದು ಲಕ್ಷಕ್ಕೂ ಹೆಚ್ಚು ಟ್ರಕ್‌ ಮತ್ತು ಟ್ಯಾಂಕರ್‌ಗಳಿವೆ.

ಬುಧವಾರವರೆಗೆ ಹೋರಾಟ ನಡೆಸಲು ಚಾಲಕರು ನಿರ್ಧರಿಸಿದ್ದಾರೆ. ಅಲ್ಲದೇ, ಹೋರಾಟವು ರಾಷ್ಟ್ರ ವ್ಯಾಪಿ ವಿಸ್ತರಣೆಯಾಗುವ ಸಾಧ್ಯತೆಯಿದೆ. ಅನಿರ್ದಿಷ್ಟಾವಧಿವರೆಗೆ ಮುಂದುವರಿದರೆ ತರಕಾರಿ, ಹಣ್ಣುಗಳು, ಹಾಲು ಪೂರೈಕೆಯಲ್ಲಿ ವ್ಯತ್ಯಯವಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಲಾರಿ ಚಾಲಕರ ಸಂಘವಾದ ಆಲ್‌ ಇಂಡಿಯಾ ಮೋಟರ್‌ ಟ್ರಾನ್ಸ್‌ಪೋರ್ಟ್‌ ಅಸೋಸಿಯೇಷನ್‌  ದೇಶದಾದ್ಯಂತ ಹೋರಾಟಕ್ಕೆ ಕರೆ ನೀಡಿಲ್ಲ. ಗೃಹ ಸಚಿವಾಲಯದ ಅಧಿಕಾರಿಗಳ ಸಭೆಯಲ್ಲಿ ಚಾಲಕರ ಸಮಸ್ಯೆ ಮಂಡಿಸಿ ಪರಿಹಾರ ಕೋರಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ರಾಜಸ್ಥಾನ: ಪೊಲೀಸ್‌ ವಾಹನಕ್ಕೆ ಬೆಂಕಿ ರಾಜಸ್ಥಾನದ ಕೆಕ್ರಿ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು ಉದ್ರಿಕ್ತ ಗುಂಪೊಂದು ಪೊಲೀಸ್‌ ವಾಹನಕ್ಕೆ ಬೆಂಕಿ ಹಚ್ಚಿದೆ. ಈ ವೇಳೆ ನಡೆದ ಕಲ್ಲು ತೂರಾಟದಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT