ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9 ತಿಂಗಳ ಬಳಿಕ ಷೇರುಪೇಟೆಯಲ್ಲಿ ಮತ್ತೆ ವಿದೇಶಿ ಹೂಡಿಕೆ

ಜೂನ್‌ನಲ್ಲಿ ₹ 4,989 ಕೋಟಿ ಮೌಲ್ಯದ ಷೇರುಗಳ ಖರೀದಿ
Last Updated 31 ಜುಲೈ 2022, 11:20 IST
ಅಕ್ಷರ ಗಾತ್ರ

ನವದೆಹಲಿ: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಒಂಬತ್ತು ತಿಂಗಳ ಬಳಿಕ ಭಾರತದ ಬಂಡವಾಳ ಮಾರುಕಟ್ಟೆಯತ್ತ ಮತ್ತೆ ಮುಖ ಮಾಡಿದ್ದಾರೆ. ಜುಲೈನಲ್ಲಿ ₹ 4,989 ಕೋಟಿ ಮೌಲ್ಯದ ಷೇರುಗಳನ್ನು ಅವರು ಖರೀದಿಸಿದ್ದಾರೆ.

ಡಾಲರ್‌ ಸೂಚ್ಯಂಕ ತುಸು ಇಳಿಕೆ ಆಗಿರುವುದು ಹಾಗೂ ಕಾರ್ಪೊರೇಟ್‌ ವಲಯದ ಜೂನ್‌ ತ್ರೈಮಾಸಿಕದ ಫಲಿತಾಂಶ ಉತ್ತಮವಾಗಿರುವ ಕಾರಣ ಬಂಡವಾಳ ಹೂಡಿಕೆ ಮಾಡಿದ್ದಾರೆ.

ನ್ಯಾಷನಲ್‌ ಸೆಕ್ಯುರಿಟೀಸ್ ಡೆಪಾಸಿಟರಿ ಲಿಮಿಟೆಡ್‌ನಲ್ಲಿ (ಎನ್‌ಎಸ್‌ಡಿಎಲ್‌) ಇರುವ ಮಾಹಿತಿಯ ಪ್ರಕಾರ, ಜೂನ್‌ ತಿಂಗಳಿನಲ್ಲಿ ₹ 50,145 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು. 2020ರ ಮಾರ್ಚ್‌ ಬಳಿಕ ಆಗಿರುವ ಗರಿಷ್ಠ ಹಿಂತೆಗೆತ ಇದು. 2020ರ ಮಾರ್ಚ್‌ನಲ್ಲಿ ₹ 61,973 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದರು.

2021ರ ಅಕ್ಟೋಬರ್‌ನಿಂದ 2022ರ ಜೂನ್‌ವರೆಗಿನ ಅವಧಿಯಲ್ಲಿ ₹ 2.46 ಲಕ್ಷ ಕೋಟಿ ಮೌಲ್ಯದ ಷೇರುಗಳನ್ನು ವಿದೇಶಿ ಹೂಡಿಕೆದಾರರು ಮಾರಾಟ ಮಾಡಿದ್ದಾರೆ. ಜೂನ್‌ನಲ್ಲಿ ಸಾಲಪತ್ರ ಮಾರುಕಟ್ಟೆಯಿಂದ ₹ 2,056 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ.

‘ರೂಪಾಯಿ ಮೌಲ್ಯವು ತೀವ್ರ ಕುಸಿತ ಕಾಣುವ ಕೆಟ್ಟ ದಿನಗಳು ಮುಗಿದಂತೆ ಕಾಣುತ್ತಿದೆ. ಕಚ್ಚಾ ತೈಲ ದರವು ಒಂದು ಹಂತದಲ್ಲಿ ಸ್ಥಿರತೆ ಕಂಡುಕೊಳ್ಳುವ ಸಾಧ್ಯತೆ ಇದೆ. ಈ ಕಾರಣಗಳಿಂದಾಗಿ ಆಗಸ್ಟ್‌ನಲ್ಲಿಯೂ ವಿದೇಶಿ ಬಂಡವಾಳ ಒಳಹರಿವು ಸಕಾರಾತ್ಮಕವಾಗಿ ಇರುವ ವಿಶ್ವಾಸವಿದೆ’ ಎಂದು ಯೆಸ್‌ ಸೆಕ್ಯುರಿಟೀಸ್‌ನ ಮುಖ್ಯ ವಿಶ್ಲೇಷಕ ಹಿತೇಶ್‌ ಜೈನ್‌ ಹೇಳಿದ್ದಾರೆ.

‘ವಿದೇಶಿ ಹೂಡಿಕೆದಾರರು ದೇಶದ ಷೇರುಪೇಟೆಗಳತ್ತ ಪೂರ್ತಿಯಾಗಿ ಮರಳಿದ್ದಾರೆ ಎನ್ನಲು ಆಗದು. ಹೀಗಿದ್ದರೂ ಅವರ ಈ ನಡೆ ಸ್ವಾಗತಾರ್ಹ. ಹೂಡಿಕೆದಾರು ಹಿಂದಿರುಗಿರುವ ಬಗ್ಗೆ ಸ್ಪಷ್ಟತೆ ಸಿಗಲು ಇನ್ನೂ ಸ್ವಲ್ಪ ಸಮಯ ಹಿಡಿಯಲಿದೆ’ ಎಂದು ಮಾರ್ನಿಂಗ್‌ಸ್ಟಾರ್‌ ಇಂಡಿಯಾದ ಸಹಾಯಕ ನಿರ್ದೇಶಕ ಹಿಮಾಂಶು ಶ್ರೀವಾಸ್ತವ ತಿಳಿಸಿದ್ದಾರೆ.

ಒಳಹರಿವಿಗೆ ಕಾರಣಗಳು

ಸದ್ಯ, ಅಮೆರಿಕವು ಆರ್ಥಿಕ ಹಿಂಜರಿತದಲ್ಲಿ ಇಲ್ಲ ಎಂದು ಫೆಡರಲ್ ರಿಸರ್ವ್‌ ಅಧ್ಯಕ್ಷ ಜೆರೋಮ್‌ ಪಾವೆಲ್‌ ಹೇಳಿಕೆ

ಕಾರ್ಪೊರೇಟ್‌ ವಲಯದ ಜೂನ್‌ ತ್ರೈಮಾಸಿಕದ ಫಲಿತಾಂಶ ಉತ್ತಮವಾಗಿರುವುದು

ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ ಚೇತರಿಕೆ

ದೇಶಿ ಷೇರುಪೇಟೆಯಲ್ಲಿ ಸಕಾರಾತ್ಮಕ ವಹಿವಾಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT