ಮುಂಬೈ: ಕ್ಯಾಬಿನ್ ಒಳಗೆ ಗಾಳಿಯ ಒತ್ತಡ ಕಡಿಮೆಯಾದ್ದರಿಂದ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು, ಬುಧವಾರ ಮುಂಬೈ ವಿಮಾನ ನಿಲ್ದಾಣಕ್ಕೆ ವಾಪಸ್ ಮರಳಿದೆ.
354 ಪ್ರಯಾಣಿಕರಿದ್ದ ಈ ವಿಮಾನವು ಬೆಳಿಗ್ಗೆ 8.36ಕ್ಕೆ ಲಂಡನ್‌ಗೆ ಹಾರಾಟ ನಡೆಸಿತ್ತು. ವಿಮಾನದಲ್ಲಿ ಇದ್ದಕ್ಕಿದ್ದಂತೆ ಗಾಳಿಯ ಒತ್ತಡ ಕಡಿಮೆಯಾದ ಬಗ್ಗೆ ಕಮಾಂಡೊ ಪೈಲಟ್ ಮಾಹಿತಿ ನೀಡಿದ್ದಾರೆ. ಹಾಗಾಗಿ, ಬೆಳಿಗ್ಗೆ 11.30ಕ್ಕೆ ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೆಲವು ತಾಂತ್ರಿಕ ಸಮಸ್ಯೆಯಿಂದಾಗಿ ಮುಂಬೈ–ಲಂಡನ್ ನಡುವಿನ ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಿದೆ. ಪ್ರಯಾಣಿಕರಿಗೆ ಪರ್ಯಾಯ ವಿಮಾನ ಸೇವೆಯನ್ನು ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ಏರ್ ಇಂಡಿಯಾ ಕಂಪನಿಯು ತಿಳಿಸಿದೆ.
ಟಿಕೆಟ್ ರದ್ದುಪಡಿಸಿರುವ ಪ್ರಯಾಣಿಕರಿಗೆ ಸಂಪೂರ್ಣ ಹಣವನ್ನು ಹಿಂದಿರುಗಿಸಲಾಗುವುದು. ಪ್ರಯಾಣಿಕರು ಒಪ್ಪಿದರೆ ಮತ್ತೊಂದು ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ತಿಳಿಸಿದೆ.
ವಿಮಾನದಲ್ಲಿ ಇದ್ದಕ್ಕಿದ್ದಂತೆ ಗಾಳಿಯ ಒತ್ತಡ ಕಡಿಮೆಯಾದರೆ ಪ್ರಯಾಣಿಕರು ಆಮ್ಲಜನಕದ ಮಾಸ್ಕ್ ಧರಿಸಬೇಕಾಗುತ್ತದೆ. ವಿಮಾನದಲ್ಲಿ ಸಾಕಷ್ಟು ಆಮ್ಲಜನಕದ ಪೂರೈಕೆ ಸೌಲಭ್ಯ ಇಲ್ಲದಿದ್ದರೆ ಪ್ರಯಾಣಿಕರು ತೊಂದರೆಗೆ ಸಿಲುಕಲಿದ್ದಾರೆ ಎಂದು ತಜ್ಞರು ಹೇಳಿದ್ದಾರೆ.