ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ಖರೀದಿಗೆ 'ಏರ್‌ಬಸ್‌'ನಿಂದ ಲಂಚ ಆರೋಪ: ಸ್ಥಾನ ತೊರೆದ ಏರ್‌ಏಷಿಯಾ ಸಿಇಒ 

Last Updated 4 ಫೆಬ್ರುವರಿ 2020, 8:16 IST
ಅಕ್ಷರ ಗಾತ್ರ
ADVERTISEMENT
""
""

ಕೌಲಾಲಂಪುರ:ವಿಮಾನಯಾನ ಉದ್ಯಮದಲ್ಲಿ ಗುರುತಿಸಿಕೊಂಡಿರುವ ಟೋನಿ ಫರ್ನಾಂಡಿಸ್‌ಏರ್‌ಏಷಿಯಾ ಗ್ರೂಪ್‌ನ ಸಿಇಒ ಸ್ಥಾನದಿಂದ ಹೊರಬಂದಿದ್ದಾರೆ. ಲಂಚ ಪ್ರಕರಣದಲ್ಲಿ ಫರ್ನಾಂಡಿಸ್‌ ಸಹ–ಮಾಲೀಕತ್ವ ಹೊಂದಿದ್ದ ಫಾರ್ಮುಲಾ 1 ರೇಸಿಂಗ್‌ ತಂಡ ಮತ್ತುಏರ್‌ಬಸ್‌ ನಡುವಿನ ಸಂಬಂಧದ ಬಗ್ಗೆ ತನಿಖೆ ನಡೆಯುತ್ತಿದೆ.

ಏರ್‌ಏಷಿಯಾದಿಂದ ವಿಮಾನ ಪೂರೈಕೆಗೆ ಬೇಡಿಕೆ ಪಡೆಯಲು 'ಕ್ಯಾಟರ್‌ಹ್ಯಾಮ್‌ ಎಫ್‌1' ತಂಡದ ಪ್ರಾಯೋಜಕತ್ವದ ಮೂಲಕ 'ಏರ್‌ಬಸ್‌' 50 ಮಿಲಿಯನ್‌ ಡಾಲರ್‌ (ಸುಮಾರು ₹ 355 ಕೋಟಿ) ಲಂಚ ನೀಡಿರುವ ಆರೋಪದ ತನಿಖೆ ನಡೆಯುತ್ತಿದೆ.

ಏರ್‌ಏಷಿಯಾ ಅಧ್ಯಕ್ಷ ಕಮರುದಿನ್‌ ಮೆರನುನ್‌ ಕೂಡ ಸ್ಥಾನದಿಂದ ಕೆಳಗಿಳಿದಿದ್ದಾರೆ. ಟೋನಿ ಫರ್ನಾಂಡಿಸ್‌ ಮತ್ತು ಕಮರುದಿನ್‌ ಸಂಸ್ಥೆಯ ಸಲಹೆಗಾರರಾಗಿ ಮುಂದುವರಿಯಲಿದ್ದಾರೆ.2011ರಲ್ಲಿ ಏರ್‌ಏಷಿಯಾ ಸಹ–ಸಂಸ್ಥಾಪಕರು ಕ್ಯಾಟರ್‌ಹ್ಯಾಮ್‌ (ಫಾರ್ಮುಲಾ 1 ಕಾರು ರೇಸ್‌ನಲ್ಲಿ ಸ್ಪರ್ಧಿಸುವ ಕಂಪನಿ) ಖರೀದಿಸಿದ್ದರು. ಮಂಗಳವಾರ ಜಂಟಿ ಪ್ರಕಟಣೆ ಬಿಡುಗಡೆ ಮಾಡಿ, 'ನಾವು ಯಾವುದೇ ತಪ್ಪೆಸಗಿಲ್ಲ' ಎಂದಿದ್ದಾರೆ.

'ಕ್ಯಾಟರ್‌ಹ್ಯಾಮ್‌ ಕಂಪನಿಯಲ್ಲಿ ನಾವು ಷೇರುದಾರರಾಗಿದ್ದೆವು. ಕಂಪನಿಯು ಯಾವುದೇ ಲಾಭ ಗಳಿಸಲಿಲ್ಲ ಹಾಗೂ 2014ರಲ್ಲಿ ಅದನ್ನು 1 ಪೌಂಡ್‌ ಸ್ಟೆರ್ಲಿಂಗ್‌ಗೆ ಹಸ್ತಾಂತರಿಸಲಾಯಿತು. ಆರಂಭದಿಂದ ಕೊನೆಯವರೆಗೂ ಇದೊಂದು ಬ್ರ್ಯಾಂಡ್‌ ಬೆಳೆಸುವ ಭಾಗವಾಗಿತ್ತು, ಲಾಭ ಗಳಿಸಲು ನಡೆಸಿದ ಉದ್ಯಮವಾಗಿರಲಿಲ್ಲ' ಎಂದು ಫರ್ನಾಂಡಿಸ್‌ ಮತ್ತು ಕಮರುದಿನ್‌ ಪ್ರಕಟಣೆಯಲ್ಲಿ ಹೇಳಿಕೊಂಡಿದ್ದಾರೆ.

'ಫಾರ್ಮುಲಾ 1 ರೇಸ್ ಕಂಪನಿ ಕ್ಯಾಟರ್‌ಹ್ಯಾಮ್‌ಗೆ ಸರಿಯಲ್ಲದ ಮಾರ್ಗದಲ್ಲಿ 'ಏರ್‌ಬಸ್‌' ಪ್ರಾಯೋಕತ್ವ ವಹಿಸಿತ್ತು ಎಂದು ಆರೋಪಿಸಲಾಗಿದೆ. ಫಾರ್ಮುಲಾ 1 ರೇಸಿಂಗ್‌ ತಂಡ ಜಗತ್ತಿನಾದ್ಯಂತ ಸುತ್ತಾಡಿ ಏರ್‌ಏಷಿಯಾ, ಏರ್‌ಏಷಿಯಾ ಎಕ್ಸ್‌, ಜಿಇ ಹಾಗೂ ಏರ್‌ಬಸ್‌ನ ಪ್ರಚಾರ ನಡೆಸಿತ್ತು' ಎಂದಿದ್ದಾರೆ.

2012ರಲ್ಲಿ ಕ್ಯಾಟರ್‌ಹ್ಯಾಮ್‌ (ಪ್ರಸ್ತುತ ರೇಸಿಂಗ್‌ನಿಂದ ದೂರ ಉಳಿದಿರುವ ತಂಡ) ಮತ್ತು ಏರ್‌ಬಸ್‌ನ ಆಗಿನ ಮಾತೃ ಸಂಸ್ಥೆ ಇಎಡಿಎಸ್‌ ನಡುವೆ ನಡೆದಿರುವ ಪ್ರಾಯೋಜಕತ್ವ ಒಪ್ಪಂದದ ಕುರಿತು ಬ್ರಿಟನ್‌ನ ಸರ್ಕಾರಿ ತನಿಖಾ ಸಂಸ್ಥೆ 'ಸೀರಿಯಸ್‌ ಫ್ರಾಡ್‌ ಆಫೀಸ್‌' ಆರೋಪ ವರಿಸಿದೆ.

ಏರ್‌ಏಷಿಯಾ ವಿಮಾನಯಾನ ಸಂಸ್ಥೆಯ 274 ವಿಮಾನಗಳು 'ಏರ್‌ಬಸ್‌' ವಿಮಾನಗಳೇ ಆಗಿವೆ. ಏರ್‌ಬಸ್‌ನ ಎ321ನಿಯೊ ಮಾದರಿಯ ವಿಮಾನಗಳನ್ನು ಖರೀದಿಸುತ್ತಿರುವ ಜಗತ್ತಿನ ಅತಿ ದೊಡ್ಡ ಗ್ರಾಹಕ ಸಂಸ್ಥೆ ಏರ್‌ಏಷಿಯಾ ಆಗಿದೆ.

ಮಂಗಳವಾರ ಮಲೇಷ್ಯಾ ಷೇರುಪೇಟೆಯಲ್ಲಿ ಏರ್‌ಏಷಿಯಾ ಷೇರು ಶೇ 5ರಷ್ಟು ಕುಸಿತ ಕಂಡಿದೆ. ಅಂಗಸಂಸ್ಥೆ ಏರ್‌ಏಷಿಯಾ ಎಕ್ಸ್‌ ಬಿಎಚ್‌ಡಿ ಷೇರು ಶೇ 8ರಷ್ಟು ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT