ಶನಿವಾರ, ಸೆಪ್ಟೆಂಬರ್ 24, 2022
24 °C

ಆಕಾಶ ಏರ್ ಕಂಪನಿಯ ಮೊದಲ ವಿಮಾನ ಹಾರಾಟ: ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಚಾಲನೆ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಮುಂಬೈ: ಭಾರತೀಯ ಷೇರುಪೇಟೆಯ ರಾಕೇಶ್ ಜುಂಜನ್‌ವಾಲಾ ಮಾಲೀಕತ್ವದ ‘ಆಕಾಶ ಏರ್’ ಕಂಪನಿಯ ಮೊದಲ ವಿಮಾನ ಮುಂಬೈನಿಂದ ಹೊರಟು ಅಹಮದಾಬಾದ್‌ನ ವಿಮಾನ ನಿಲ್ದಾಣದಲ್ಲಿ ಇಳಿಯಿತು.

ಭಾನುವಾರ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನ ವಿಮಾನ ಸಂಚಾರಕ್ಕೆ ಚಾಲನೆ ನೀಡಿದರು. ಈ ವಿಮಾನ ಅಹಮದಾಬಾದ್‌ ಸರ್ದಾರ್ ವಲ್ಲಭಭಾಯ್ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಿತು.

‘ಆಕಾಶ ಏರ್’ ವಿಮಾನಯಾನ ಸಂಸ್ಥೆಯು ದೇಶದಲ್ಲೇ ಅತ್ಯಂತ ಅಗ್ಗದ ವಿಮಾನಯಾನ ದರವನ್ನು ಹೊಂದಿರಲಿದೆ ಎಂಬ ಭರವಸೆ ನೀಡಿದೆ. ಕೆಳ ವರ್ಗದವರು ಹಾಗೂ ಕೆಳ ಮಧ್ಯಮವರ್ಗದವರೂ ಪ್ರಯಾಣಿಸುವಂತೆ ದರವನ್ನು ನಿಗದಿ ಮಾಡಲಾಗುವುದು ಎಂದು ಕಂಪನಿ ಹೇಳಿದೆ. ಈ ಕಾರಣಕ್ಕೆ ‘ಇದು ನಿಮ್ಮ ಆಕಾಶ‘ ಎಂಬ ಟ್ಯಾಗ್‌ಲೈನ್ ಅನ್ನು ಕಂಪನಿ ಇಟ್ಟುಕೊಂಡಿದೆ.

ಕಳೆದ ಜುಲೈ 7ರಂದು ನಾಗರಿಕ ವಿಮಾನಯಾನ ಇಲಾಖೆಯಿಂದ ವಿಮಾನ ಸಂಚಾರಕ್ಕೆ ಅನುಮತಿ ಪಡೆದುಕೊಂಡಿತ್ತು. ಬೆಂಗಳೂರು-ಕೊಚ್ಚಿ ಮಾರ್ಗದಲ್ಲಿ ಆಗಸ್ಟ್ 13ರಿಂದ ವಿಮಾನ ಸಂಚಾರವನ್ನು ಕಂಪನಿ ಆರಂಭಿಸಲಿದೆ. ಈಗಾಗಲೇ ಈ ಸಂಸ್ಥೆಯು 72 ಮ್ಯಾಕ್ಸ್ ವಿಮಾನಗಳನ್ನು ಖರೀದಿಸಲು ಬೋಯಿಂಗ್ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡಿದೆ. ಮೊದಲ ಹಂತದಲ್ಲಿ ಕೆಲವು ವಿಮಾನಗಳನ್ನು ಕಂಪನಿ ಪಡೆದುಕೊಂಡಿದೆ.

ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಮಾನ ಸಂಚಾರ ನಡೆಯಲಿದೆ ಎಂದು ಆಕಾಶ ಏರ್‌ ಕಂಪನಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು