ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯ ತೆರಿಗೆ ದಾರಿ ಯಾವುದಯ್ಯಾ?

ಆದಾಯ ತೆರಿಗೆ ಐಚ್ಛಿಕ; ಯಾವುದು ಹಿತ?
Last Updated 25 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಪ್ರ ತಿ ವರ್ಷ ಕೇಂದ್ರ ಸರ್ಕಾರ ಬಜೆಟ್ ಮಂಡನೆ ಮಾಡುವ ಸಂದರ್ಭದಲ್ಲಿ ಜನಸಾಮಾನ್ಯರು, ವೇತನ ವರ್ಗದವರು ಹಾಗೂ ವೈಯಕ್ತಿಕ ತೆರಿಗೆ ಪಾವತಿದಾರರು ಒಂದಿಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಅವುಗಳಲ್ಲಿ ಕೆಲವು ವಿಚಾರಗಳು ಸಿಹಿ-ಕಹಿ ಅನುಭವ ಕೊಟ್ಟರೆ, ಇನ್ನೊಂದಿಷ್ಟು ವಿಚಾರಗಳು ಜನರ ಭರವಸೆಗಳನ್ನು ಹುಸಿಯಾಗಿಸುತ್ತವೆ. ಯಾವುದೋ ಅನಿರೀಕ್ಷಿತ ಬದಲಾವಣೆಗೆ ನಾಂದಿ ಹಾಡಿ ಮತ್ತಷ್ಟು ಗೊಂದಲ ಸೃಷ್ಟಿಸಿ ಚರ್ಚೆಗೆ ಗ್ರಾಸವಾಗುತ್ತವೆ. 2020–21ನೇ ಹಣಕಾಸು ವರ್ಷದ ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯಿತಿಯ ಗರಿಷ್ಠ ಮೊತ್ತ ಒಂದಿಷ್ಟು ಅಧಿಕಗೊಳ್ಳಬಹುದು, ತೆರಿಗೆ ದರ ಇಳಿಯಬಹುದು ಎನ್ನುವ ನಿರೀಕ್ಷೆಗಳು ಹುಸಿಯಾಗಿವೆ.

ಏನಿದು ಹೊಸ ತೆರಿಗೆ ಪದ್ಧತಿ?

ಬಜೆಟ್‌ನಲ್ಲಿ ಎರಡು ಬಗೆಯ ಆದಾಯ ತೆರಿಗೆ ವ್ಯವಸ್ಥೆ ಪ್ರಸ್ತಾವಿಸಲಾಗಿದೆ. ಮೊದಲನೇಯದು– ಸದ್ಯಕ್ಕೆ ಜಾರಿಯಲ್ಲಿ ಇರುವ ವಿನಾಯ್ತಿ ಮತ್ತು ಕಡಿತ ಸೌಲಭ್ಯದ ಮುಂದುವರಿಕೆ. ಎರಡನೇಯದು– ವಿನಾಯ್ತಿ ಮತ್ತು ಕಡಿತ ಸೌಲಭ್ಯಗಳಿಲ್ಲದ ಹೊಸ ತೆರಿಗೆ ಹಂತ ಮತ್ತು ಅಗ್ಗದ ತೆರಿಗೆ ದರದ ವ್ಯವಸ್ಥೆ.

ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿರುವ ಎರಡನೇಯ ವ್ಯವಸ್ಥೆಯು ತೆರಿಗೆ ಹಂತಗಳನ್ನು ಹಿಗ್ಗಿಸಿ, ದರಗಳನ್ನು ತಗ್ಗಿಸಿದೆ. ಈ ಸೌಲಭ್ಯ ಪಡೆಯಲು ಇಚ್ಛಿಸುವವರು ಈ ಹಿಂದಿನ ವಿನಾಯ್ತಿ ಮತ್ತು ಕಡಿತಗಳನ್ನು ಬಿಟ್ಟುಕೊಡಬೇಕಾಗುತ್ತದೆ. ಶೇ 80ರಷ್ಟು ತೆರಿಗೆದಾರರು ಹೊಸ ವ್ಯವಸ್ಥೆಗೆ ಒಲವು ತೋರಲಿದ್ದಾರೆ ಎನ್ನುವುದು ಹಣಕಾಸು ಸಚಿವಾಲಯದ ನಿರೀಕ್ಷೆಯಾಗಿದೆ.

ಎರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಂಡರೆ ಒಳಿತು ಎನ್ನುವ ಅನುಮಾನ ಆದಾಯ ತೆರಿಗೆ ಪಾವತಿಸುವವರ ಮನದಲ್ಲಿ ಮೂಡಿದೆ. ಈ ಅನಿಶ್ಚಿತತೆ ಹೊರತಾಗಿಯೂ ಇದು ಹೊಸ ಅವಕಾಶಗಳನ್ನು ಕಲ್ಪಿಸಿರುವುದಂತೂ ನಿಜ. ಜನರು ತಮ್ಮ ಸ್ವಂತದ ಆಸಕ್ತಿಗಾಗಿ ಉಳಿತಾಯ ಮಾಡಬಹುದೇ ಹೊರತು ತೆರಿಗೆ ರಿಯಾಯ್ತಿಗಳನ್ನು ಪಡೆಯಲು ಅಲ್ಲ ಎನ್ನುವುದರ ಬಗ್ಗೆ ಸರ್ಕಾರ ಸ್ಪಷ್ಟ ಸಂಕೇತ ನೀಡಿದೆ. ಹೊಸದಾಗಿ ಉದ್ಯೋಗಕ್ಕೆ ಸೇರ್ಪಡೆಯಾಗುತ್ತಿರುವ ಯುವ ಸಮೂಹವು ಯಾವುದನ್ನು ಆಯ್ಕೆ ಮಾಡಿಕೊಂಡರೆ ಒಳಿತು ಎನ್ನುವ ಸಂದಿಗ್ಧತೆಗೆ ಸಿಲುಕಿದೆ.

ಬಜೆಟ್‍ನಲ್ಲಿ ಹೊಸ ತೆರಿಗೆ ಪದ್ಧತಿ ಜಾರಿ ಮಾಡಿದ್ದಾರೆ ಎನ್ನುವ ಕಾರಣದಿಂದ, ಈಗಿರುವ ತೆರಿಗೆ ನಿಯಮ ಮುಂದಿನ ಹಣಕಾಸು ವರ್ಷದಿಂದ ಜಾರಿಯಲ್ಲಿ ಇರುವುದಿಲ್ಲ ಎನ್ನುವ ಆತಂಕ ಬೇಡ. ಅನೇಕ ತೆರಿಗೆದಾರರು, ಹೂಡಿಕೆಯ ಉದ್ದೇಶವಲ್ಲದೆ ತೆರಿಗೆ ಉಳಿಸುವ ಉದ್ದೇಶದಿಂದಲೂ ವಿವಿಧ ರೀತಿಯ ಹೂಡಿಕೆಗಳಲ್ಲಿ ತಮ್ಮ ಹಣ ತೊಡಗಿಸಿರುತ್ತಾರೆ. ಹೀಗಾಗಿ, ಅಂತಹ ತೆರಿಗೆದಾರರಿಗೆ ತೊಂದರೆ ಆಗದ ರೀತಿಯಲ್ಲಿ ಈಗಿರುವ ತೆರಿಗೆ ವಿಧಾನವನ್ನು ಮುಂದುವರಿಸಿಕೊಂಡು ಹೋಗುವ ಅವಕಾಶ ಮಾಡಿಕೊಡಲಾಗಿದೆ.

ಇದಕ್ಕಾಗಿ ಹೊಸ ನಿಯಮ ‘115 ಬಿಎಸಿ’ಯನ್ನು ಆದಾಯ ತೆರಿಗೆ ಕಾನೂನಿನಲ್ಲಿ ಅಳವಡಿಸಲಾಗಿದ್ದು, ಮುಂದಿನ ಆರ್ಥಿಕ ವರ್ಷದಿಂದ ಈಗ ಇರುವ ತೆರಿಗೆ ನಿಯಮಕ್ಕೆ ಸಮಾನಾಂತರವಾಗಿ ಹೊಸ ಆದಾಯ ತೆರಿಗೆ ವ್ಯವಸ್ಥೆ ಮುಂದುವರಿಯಲಿದೆ. ತೆರಿಗೆದಾರರು ಎರಡೂ ಬಗೆಯ ಆದಾಯ ತೆರಿಗೆ ವ್ಯವಸ್ಥೆಗಳಡಿ ತೆರಿಗೆ ಮೊತ್ತವನ್ನು ತುಲನೆ ಮಾಡುವ ಮೂಲಕ ತಮಗೆ ಯಾವ ಪದ್ಧತಿ ಸೂಕ್ತವೋ ಅದನ್ನು ಆಯಾ ವರ್ಷಕ್ಕೆ ಅಳವಡಿಸಿಕೊಳ್ಳಬಹುದು.

ತೆರಿಗೆ ಪದ್ದತಿಯ ಆಯ್ಕೆ ನಿರ್ಧಾರ ಹೇಗೆ?

ಹೊಸದಾಗಿ ಸೇರಿಸಲಾದ ತೆರಿಗೆ ನಿಯಮಕ್ಕೆ ಸಂಬಂಧಪಟ್ಟಂತೆ ಹೇಳುವುದಾದರೆ, ಇದು ವೈಯಕ್ತಿಕ ತೆರಿಗೆದಾರರಿಗೆ ಹಾಗೂ ಅವಿಭಕ್ತ ಕುಟುಂಬಗಳಿಗೆ ನೀಡಿರುವ ಆಯ್ಕೆಯಾಗಿದೆ. ಹೀಗಾಗಿ ವೈಯಕ್ತಿಕ ಆದಾಯ ತೆರಿಗೆ ಪಾವತಿಸುವವರು ಪ್ರಸ್ತುತ ಚಾಲನೆಯಲ್ಲಿರುವ ನಿಯಮದಂತೆ ತೆರಿಗೆ ಲೆಕ್ಕ ಹಾಕಬೇಕು. ಅದೇ ರೀತಿ, ಹೊಸ ನಿಯಮದಂತೆ ವಿನಾಯಿತಿಗಳನ್ನು ಪರಿಗಣಿಸದೆ ಬರುವ ತೆರಿಗೆಯನ್ನು ಲೆಕ್ಕ ಹಾಕಿ ಯಾವುದು ಲಾಭದಾಯಕವೋ ಅದನ್ನು ಆಯ್ಕೆ ಮಾಡಬೇಕು. ವ್ಯವಹಾರಯೇತರ ಆದಾಯವುಳ್ಳವರು ಇದನ್ನು ಸ್ವತಃ ನಿರ್ಧರಿಸಬಹುದು. ಆದರೆ ವ್ಯವಹಾರ ಕ್ಷೇತ್ರದಲ್ಲಿ ಇರುವವರು ತಮ್ಮ ತೆರಿಗೆ ಸಲಹೆಗಾರರಿಂದ ಸೂಕ್ತ ಮಾಹಿತಿ ಪಡೆದೇ ನಿರ್ಣಯ ಕೈಗೊಳ್ಳುವುದು ಉಚಿತ.

ಯಾರಿಗೆ ಯಾವ ತೆರಿಗೆ ಪದ್ಧತಿ ಸೂಕ್ತ ?

ಯಾರಿಗೆ ಯಾವ ತೆರಿಗೆ ಪದ್ಧತಿ ಸೂಕ್ತ ಎನ್ನುವುದನ್ನು ನಿರ್ಧರಿಸಬೇಕಾದರೆ ಮೊದಲು ಆದಾಯ ತೆರಿಗೆ ಪಾವತಿಸುವವರು ತೆರಿಗೆ ವಿನಾಯಿತಿಗೆ ಸಂಬಂಧಿಸಿದ ಹೂಡಿಕೆ, ಪಾವತಿಗಳನ್ನು ಲೆಕ್ಕ ಹಾಕಬೇಕು. ಈ ಮೇಲೆ ಹೇಳಿರುವ ವಿನಾಯಿತಿ ಪಡೆಯುವ ಮೊದಲು ನಿಮ್ಮ ಆದಾಯ ಎಷ್ಟೆಂಬುದು ನಿಮಗೆ ತಿಳಿದಿರಲಿ. ನಂತರ ಪ್ರಸ್ತುತ ಚಾಲನೆಯಲ್ಲಿರುವ ಪದ್ಧತಿಯಂತೆ ಅಥವಾ ಹೊಸ ಪದ್ಧತಿಯಂತೆ ತೆರಿಗೆ ಉಳಿಕೆ ಅಧಿಕವೊ ಎಂಬುದನ್ನು ಆಯಾ ವ್ಯಕ್ತಿಯ ಆದಾಯ ಪ್ರಮಾಣಕ್ಕೆ ಅನುಗುಣವಾಗಿ ಲೆಕ್ಕ ಹಾಕಬೇಕು.

ತೆರಿಗೆ ದರ ಕಡಿತದ ಹೊಸ ನೀತಿಯು ಎಲ್ಲ ವರ್ಗದ ತೆರಿಗೆದಾರರಿಗೆ ಲಾಭ ಆಗುವಂತಹ ಉದ್ದೇಶದಿಂದ ರೂಪಿಸಲಾದ ಆದಾಯ ತೆರಿಗೆ ಪ್ರಸ್ತಾವವಲ್ಲ. ಜನರಲ್ಲಿ ಪರೋಕ್ಷವಾಗಿ ಹೂಡಿಕೆಯ ಹವ್ಯಾಸವನ್ನು ಕಡಿಮೆ ಮಾಡಿಸುವುದಕ್ಕೂ ಇಂತಹ ನೀತಿ ಕಾರಣವಾಗಬಹುದು. ಪ್ರಮುಖವಾಗಿ ಇದು ಹೊಸ ಹಾಗೂ ಯುವ ತೆರಿಗೆದಾರರ ಮೇಲೆ ಪರಿಣಾಮ ಬೀರಲಿದೆ. ವಿಮಾ ಕಂಪನಿ ಹಾಗೂ ತೆರಿಗೆ ಲಾಭ ಇರುವ ಹೂಡಿಕೆಗಳಲ್ಲಿ ವ್ಯವಹಾರ ಮಾಡುವ ಕಂಪನಿಗಳ ಮೇಲೂ ಬಹಳಷ್ಟು ಪರಿಣಾಮ ಬೀರಲಿದೆ.

ಪ್ರತಿ ತೆರಿಗೆದಾರರ ಹೂಡಿಕೆ ಅಭಿರುಚಿ ವಿಭಿನ್ನವಾಗಿರುವುದರಿಂದ ಅವರಿಗೆ ಸಿಗುವ ತೆರಿಗೆ ಲಾಭವನ್ನು ಪ್ರತ್ಯೇಕವಾಗಿಯೇ ಲೆಕ್ಕ ಹಾಕಬೇಕು. ಹೊರನೋಟಕ್ಕೆ ಸರ್ಕಾರ ಭಾರಿ ಪ್ರಮಾಣದ ತೆರಿಗೆ ಕಡಿತದ ಘೋಷಣೆ ಮಾಡಿದಂತೆ ಕಂಡರೂ, ಅವರವರ ಆದಾಯ - ಹೂಡಿಕೆ ಹಾಗೂ ಉದ್ದೇಶಗಳನ್ನು ಪರಿಗಣಿಸಿ ವಿಮರ್ಶಿಸಿದರೆ ಇಂತಹ ತೆರಿಗೆ ದರ ಕಡಿತದ ನಿಜವಾದ ಪ್ರಯೋಜನ ದೊರೆಯಲಿದೆ ಎಂದು ಖಚಿತವಾಗಿ ಹೇಳಲು ಬರುವುದಿಲ್ಲ. ಭವಿಷ್ಯಕ್ಕಾಗಿ ಯಾವುದೇ ಹೂಡಿಕೆಯನ್ನೂ ಮಾಡದೆ ಸುಲಭದಲ್ಲಿ ತೆರಿಗೆ ಲೆಕ್ಕ ಹಾಕುವವರಿಗಷ್ಟೇ ಇದು ಹೆಚ್ಚು ಪ್ರಯೋಜನಕರ. ನಿಯಮಿತವಾಗಿ ಹೂಡಿಕೆ ಮಾಡುತ್ತ ಕಾನೂನುಬದ್ಧವಾಗಿಯೇ ಲಭ್ಯ ಇರುವ ವಿನಾಯ್ತಿ ಮತ್ತು ಕಡಿತದ ಪ್ರಯೋಜನ ಪಡೆಯುವವರಿಗೆ ಎರಡನೇಯ ಪರ್ಯಾಯ ತೆರಿಗೆ ವ್ಯವಸ್ಥೆಯು ಹೆಚ್ಚು ಪ್ರಯೋಜನಕಾರಿ ಆಗಿರುವುದಿಲ್ಲ.

ವೈಯಕ್ತಿಕ ತೆರಿಗೆದಾರರು ಪ್ರತಿ ವರ್ಷ ಹಳೆಯದಿಂದ ಹೊಸ ವ್ಯವಸ್ಥೆಗೆ ಮತ್ತು ಹೊಸ ವ್ಯವಸ್ಥೆಯಿಂದ ಮತ್ತೆ ಹಳೆಯ ವ್ಯವಸ್ಥೆಗೆ ಬದಲಾಗುವ ಅವಕಾಶ ಕಲ್ಪಿಸಲಾಗಿದೆ. ವಹಿವಾಟು ನಡೆಸುವವರಿಗೆ ಈ ಬಗೆಯಲ್ಲಿ ಪ್ರತಿ ವರ್ಷ ಬದಲಾಗುವ ಸ್ವಾತಂತ್ರ್ಯ ನೀಡಲಾಗಿಲ್ಲ.

ಹೊಸ ವ್ಯವಸ್ಥೆ

ದೀರ್ಘಾವಧಿ ಹಣಕಾಸು ಸುರಕ್ಷತೆಗೆ ಆದ್ಯತೆ ನೀಡುವುದರ ಬದಲು ಸದ್ಯಕ್ಕೆ ವೆಚ್ಚ ಮಾಡಲು ಉತ್ತೇಜನ ನೀಡುತ್ತದೆ.

ವೈಯಕ್ತಿಕ ಆದಾಯ ತೆರಿಗೆದಾರರು ತಮ್ಮ ಭವಿಷ್ಯದ ಹಣಕಾಸು ಸುರಕ್ಷತೆ ಬಲಿಕೊಟ್ಟು ವೆಚ್ಚ ಮಾಡಲು ಮುಂದಾಗುತ್ತಾರೆ.

ಅಗ್ಗದ ತೆರಿಗೆ ದರಗಳು ಹೆಚ್ಚು ಆಕರ್ಷಕವಾಗಿಲ್ಲ. ಹೂಡಿಕೆ ಮಾಡಲು ನಿರುತ್ಸಾಹಗೊಳಿಸುತ್ತದೆ.

ಸಾಮಾನ್ಯವಾಗಿ ತೆರಿಗೆ ಪ್ರಯೋಜನಗಳು ಹೂಡಿಕೆ ನಿರ್ಧಾರವನ್ನು ಉತ್ತೇಜಿಸು ತ್ತವೆ. ವಿನಾಯ್ತಿಗಳನ್ನು ಬಿಟ್ಟುಕೊಡುವುದು ಉಳಿತಾಯ ಉತ್ತೇಜಿಸುವುದಕ್ಕೆ ವಿರುದ್ಧವಾದ ನಡೆಯಾಗಿದೆ. ಹೂಡಿಕೆಯಿಂದ ತೆರಿಗೆ ಪ್ರಯೋಜನಗಳನ್ನು ಪ್ರತ್ಯೇಕಗೊಳಿಸಿರುವುದು ಸರಿಯಾದ ಕ್ರಮವಾಗಿದೆ. ತೆರಿಗೆ ಉಳಿತಾಯದ ಹೆಸರಿನಲ್ಲಿ ಕೆಲವರು ಹೂಡಿಕೆ ತಪ್ಪು ಎಸಗುತ್ತಾರೆ. ಅಂತಹ ಪ್ರವೃತ್ತಿಗೆ ಇನ್ನು ಮುಂದೆ ಕಡಿವಾಣ ಬೀಳಲಿದೆ.

ತೆರಿಗೆದಾರರು ತಮ್ಮ ಹಣಕಾಸು ಪರಿಸ್ಥಿತಿ ಆಧರಿಸಿ ತೆರಿಗೆ ವ್ಯವಸ್ಥೆ ಆಯ್ಕೆ ಮಾಡಿಕೊಳ್ಳಲಿದ್ದಾರೆ.

ಹೊಸ ಪದ್ಧತಿ ಲೆಕ್ಕಾಚಾರ
ಆದಾಯ ಮಟ್ಟ;ಹೂಡಿಕೆ ಹಾಗೂ ತೆರಿಗೆ ವಿನಾಯಿತಿ;ತೆರಿಗೆಗೆ ಒಳಪಡುವ ಆದಾಯ;ಹೊಸ ತೆರಿಗೆ ದರ % **; ಒಟ್ಟು ತೆರಿಗೆ * %
₹ 2,50,000;0;₹ 2,50,000;0;0
₹ 5,00,000;0;₹ 5,00,000;5;0
₹ 7,50,000;0;₹ 7,50,000;10;37,500
₹ 10,00,000;0;₹ 10,00,000;15;₹ 75,000
₹ 12,50,000;0;₹ 12,50,000;20;₹ 1,25,000
₹ 15,00,000;0;₹ 15,00,000;25;₹ 1,87,500
₹ 20,00,000;0;₹ 20,00,000;30;₹ 3,37,500

* ಶೇಕಡಾ 4ರ ಸರ್ಚಾರ್ಜ್ ಪ್ರತ್ಯೇಕ
** ಅನ್ವಯವಾಗುವ ಗರಿಷ್ಠ ತೆರಿಗೆ ದರ

ಸದ್ಯ ಜಾರಿಯಲ್ಲಿ ಇರುವ ವ್ಯವಸ್ಥೆ

ಪ್ರಸ್ತುತ ಆದಾಯ ಮಟ್ಟ;ಹೂಡಿಕೆ ಹಾಗೂ ತೆರಿಗೆ ವಿನಾಯಿತಿ;**;ತೆರಿಗೆಗೆ ಒಳಪಡುವ ಆದಾಯ;ತೆರಿಗೆ ದರ *** %; ಒಟ್ಟು ತೆರಿಗೆ * %
₹ 2,50,000;0;₹ 2,50,000;0;0
₹ 5,00,000;0;₹ 5,00,000;5;0
₹ 7,50,000;₹ 15,00,000;₹ 6,00,000;20;₹ 32,500
₹ 10,00,000;₹ 35,00,000;₹ 6,50,000;20;₹ 42,500
₹ 12,50,000;₹ 35,00,000;₹ 9,00,000;20 ₹ 92,500
₹ 15,00,000;₹ 35,00,000;₹ 11,50,000;30;₹ 1,57,500
₹ 20,00,000;₹ 35,00,000;₹ ಚ16,50,000;30;₹ 3,07,500

* ಶೇಕಡಾ 4 ರ ಸರ್ಚಾರ್ಜ್ ಪ್ರತ್ಯೇಕ
** ಅಂದಾಜು ಹೂಡಿಕೆ
*** ಅನ್ವಯವಾಗುವ ಗರಿಷ್ಠ ತೆರಿಗೆ ದರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT