ಶನಿವಾರ, ಜುಲೈ 2, 2022
20 °C

ರಿಲಯನ್ಸ್ ಪವರ್, ಇನ್‌ಫ್ರಾ ನಿರ್ದೇಶಕ ಸ್ಥಾನಕ್ಕೆ ಅನಿಲ್ ಅಂಬಾನಿ ರಾಜೀನಾಮೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ರಿಲಯನ್ಸ್ ಸಮೂಹದ ಅಧ್ಯಕ್ಷ ಅನಿಲ್ ಅಂಬಾನಿ ಶುಕ್ರವಾರ ರಿಲಯನ್ಸ್ ಪವರ್ ಹಾಗೂ ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್‌ನ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಾರುಕಟ್ಟೆ ನಿಯಂತ್ರಕ ಸೆಬಿ ಆದೇಶದ ಮೇರೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

'ಸೆಬಿ (ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ) ಮಧ್ಯಂತರ ಆದೇಶವನ್ನು ಅನುಸರಿಸುವ ಭಾಗವಾಗಿ ನಾನ್-ಎಕ್ಸಿಕ್ಯೂಟಿವ್ ಡೈರೆಕ್ಟರ್ ಅನಿಲ್ ಡಿ ಅಂಬಾನಿ ಅವರು ರಿಲಯನ್ಸ್ ಪವರ್ ಮಂಡಳಿಯಿಂದ ಕೆಳಗಿಳಿದಿದ್ದಾರೆ' ಎಂದು ರಿಲಯನ್ಸ್ ಪವರ್ ಬಿಎಸ್‌ಇ ಫೈಲಿಂಗ್‌ನಲ್ಲಿ ತಿಳಿಸಿದೆ.

ಸೆಬಿ ಫೆಬ್ರವರಿಯಲ್ಲಿ ಕಂಪನಿಯಿಂದ ಹಣ ದುರುಪಯೋಗ ಮಾಡಿಕೊಂಡ ಆರೋಪದ ಮೇಲೆ ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್, ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಮತ್ತು ಇತರ ಮೂವರನ್ನು ಸೆಕ್ಯುರಿಟೀಸ್ ಮಾರುಕಟ್ಟೆಯಿಂದ ನಿರ್ಬಂಧಿಸಿತ್ತು.

ಅಂಬಾನಿ ಮತ್ತು ಇತರ ಮೂವರು 'ಸೆಬಿಯಲ್ಲಿ ನೋಂದಾಯಿತ ಯಾವುದೇ ಮಧ್ಯವರ್ತಿ, ಸಾರ್ವಜನಿಕ ಕಂಪನಿ ಅಥವಾ ಸಾರ್ವಜನಿಕರಿಂದ ಹಣ ಸಂಗ್ರಹಿಸಲು ಉದ್ದೇಶಿಸಿರುವ ಯಾವುದೇ ಕಂಪನಿಯೊಂದಿಗೆ ನಿರ್ದೇಶಕರಾಗಿ ಮುಂದಿನ ಆದೇಶದವರೆಗೆ ಗುರುತಿಸಿಕೊಳ್ಳುವಂತಿಲ್ಲ' ಎಂದು ಹೇಳಿತ್ತು.

ರಿಲಯನ್ಸ್ ಪವರ್ ಮತ್ತು ರಿಲಯನ್ಸ್ ಇನ್‌ಫ್ರಾ ಮಂಡಳಿಗಳಲ್ಲಿ ಐದು ವರ್ಷಗಳ ಅವಧಿಗೆ ರಾಹುಲ್ ಸರಿನ್ ಅವರನ್ನು ಹೆಚ್ಚುವರಿ ನಿರ್ದೇಶಕರಾಗಿ ನೇಮಿಸಲಾಗಿದೆ. ಈ ನೇಮಕಾತಿಗೆ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರ ಒಪ್ಪಿಗೆ ದೊರೆಯಬೇಕಿದೆ ಎಂದು ಎರಡು ರಿಲಯನ್ಸ್ ಸಮೂಹ ಕಂಪನಿಗಳು ತಿಳಿಸಿವೆ.

ಅಂಬಾನಿ ಅವರ ನಾಯಕತ್ವದಲ್ಲಿ ನಂಬಿಕೆಯನ್ನಿಟ್ಟಿರುವ ಮಂಡಳಿಗಳು, ಮುಂಬರುವ ದಿನಗಳಲ್ಲಿ ಮತ್ತೆ ಅವರನ್ನು ನಿರ್ದೇಶಕ ಸ್ಥಾನಕ್ಕೆ ಕರೆತರುವ ಇರಾದೆಯನ್ನು ಹೊಂದಿರುವುದಾಗಿ ತಿಳಿಸಿವೆ. ಕಳೆದ ಒಂದು ವರ್ಷದಲ್ಲಿ ಕಂಪನಿಯು ತನ್ನ ಸುಮಾರು 8 ಲಕ್ಷ ಷೇರುದಾರರಿಗೆ ಅಪಾರ ಮೌಲ್ಯವನ್ನು ಸೃಷ್ಟಿಸಿದೆ. ಸ್ಟಾಕ್ ಬೆಲೆಯು ಕನಿಷ್ಠ ₹ 32 ರಿಂದ ಗರಿಷ್ಠ ₹ 150 (ಶೇ 469) ವರೆಗೆ ಏರಿಕೆಯಾಗಿದೆ ಎಂದು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು