ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಫೋನ್‌ಗೆ ಕುತಂತ್ರಾಂಶ ದಾಳಿ: ಆಯ್ದ ಬಳಕೆದಾರರಿಗೆ ಆ್ಯಪಲ್‌ನಿಂದ ಎಚ್ಚರಿಕೆ ಸಂದೇಶ

Published 11 ಏಪ್ರಿಲ್ 2024, 15:54 IST
Last Updated 11 ಏಪ್ರಿಲ್ 2024, 15:54 IST
ಅಕ್ಷರ ಗಾತ್ರ

ನವದೆಹಲಿ: ಇಸ್ರೇಲ್‌ ಎನ್‌ಎಸ್‌ಒ ಗ್ರೂಪ್‌ನ ಪೆಗಾಸಸ್‌ ಕುತಂತ್ರಾಂಶ ಹಾಗೂ ಅತ್ಯಾಧುನಿಕ ಗೂಢಚರ್ಯೆ ತಂತ್ರಾಂಶದ (ಸ್ಪೈವೇರ್) ದಾಳಿ ಬಗ್ಗೆ ತನ್ನ ಆಯ್ದ ಬಳಕೆದಾರರ ಇ–ಮೇಲ್‌ಗಳಿಗೆ, ಐಫೋನ್‌ ತಯಾರಿಕಾ ಕಂಪನಿಯಾದ ಆ್ಯಪಲ್ ಎಚ್ಚರಿಕೆಯ ಸಂದೇಶವನ್ನು ಕಳುಹಿಸಿದೆ. 

ಭಾರತ ಸೇರಿ ವಿಶ್ವದ 91 ರಾಷ್ಟ್ರಗಳಲ್ಲಿರುವ ತನ್ನ ಬಳಕೆದಾರರಿಗೆ ಬುಧವಾರ ಈ ಸಂದೇಶ ರವಾನಿಸಿದೆ. ಪತ್ರಕರ್ತರು, ಆ್ಯಕ್ಟಿವಿಸ್ಟ್‌, ರಾಜಕಾರಣಿಗಳು ಹಾಗೂ ರಾಯಭಾರಿಗಳು ಈ ತಂತ್ರಾಂಶದ ದಾಳಿಗೆ ಸಿಲುಕಿದ್ದಾರೆ ಎಂದು ಹೇಳಿದೆ. 

ಕಂಪನಿಯು ಈ ಹಿಂದೆಯೂ ಇಂತಹ ದಾಳಿ ಬಗ್ಗೆ ಸಂಶೋಧನೆ ನಡೆಸಿತ್ತು. ಇದರ ಆಧಾರದ ಮೇಲೆ ಸರ್ಕಾರ ಅಥವಾ ಸರ್ಕಾರಿ ಪ್ರಾಯೋಜಿತ ಸಂಸ್ಥೆಗಳು ಈ ದಾಳಿಯ ಹಿಂದೆ ಇರಬಹುದು ಎಂದು ಸಂದೇಶದಲ್ಲಿ ಹೇಳಿದೆ. ಆದರೆ, ಯಾರ ಹೆಸರನ್ನೂ ಬಹಿರಂಗಪಡಿಸಿಲ್ಲ.

‘ಕೆಲವು ಬಳಕೆದಾರರು ಪೆಗಾಸಸ್‌ ಕುತಂತ್ರಾಂಶ ಹಾಗೂ ಮರ್ಸಿನರಿ ಸ್ಪೈವೇರ್‌ ದಾಳಿಗೆ ಒಳಗಾಗಿರಬಹುದಾಗಿದೆ. ಈ ದಾಳಿಯು ಸೈಬರ್‌ ಅಪರಾಧ ಚಟುವಟಿಕೆ ಹಾಗೂ ಕುತಂತ್ರಾಂಶಕ್ಕಿಂತಲೂ ಹೆಚ್ಚು ಸಂಕೀರ್ಣವಾದುದು. ಈ ಸ್ಕೈವೇರ್‌ ನಿರ್ದಿಷ್ಟ ವ್ಯಕ್ತಿಗಳ ಐಫೋನ್‌ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಿದೆ. ಉಳಿದ ಬಳಕೆದಾರರಿಗೆ ಇದರಿಂದ ತೊಂದರೆ ಇಲ್ಲ’ ಎಂದು ತಿಳಿಸಿದೆ.

ಈ ದಾಳಿಯನ್ನು ತಡೆಗಟ್ಟುವುದು ಹಾಗೂ ಸುಲಭವಾಗಿ ಪತ್ತೆ ಹಚ್ಚುವುದು ಸವಾಲಿನಿಂದ ಕೂಡಿದೆ. ವಾಟ್ಸ್‌ಆ್ಯಪ್‌ ಕರೆಯ ಮೂಲಕ ಬಳಕೆದಾರರ ಫೋನ್‌ನಲ್ಲಿ ಈ ಕುತಂತ್ರಾಂಶವನ್ನು ಸ್ಥಾಪಿಸಬಹುದಾಗಿದೆ. ಇದು ಇತ್ತೀಚಿನ ಸುಧಾರಿತ ಡಿಜಿಟಲ್‌ ದಾಳಿಯಾಗಿದೆ ಎಂದು ಹೇಳಿದೆ.

ಈ ಬಗ್ಗೆ ಬಳಕೆದಾರರು ಎಚ್ಚರಿಕೆಯಿಂದ ಇರಬೇಕು. ಅನಾಮಧೇಯರು ಕಳುಹಿಸುವ ಲಿಂಕ್‌ಗಳನ್ನು ತೆರೆಯಬಾರದು. ಐಫೋನ್‌ ದಾಳಿಗೆ ಒಳಗಾಗಿದ್ದರೆ ಲಾಕ್‌ಡೌನ್‌ ಮೋಡ್‌ ಅನ್ನು ಸಕ್ರಿಯಗೊಳಿಸಬೇಕು ಎಂದು ಸೂಚಿಸಿದೆ.

‘ಸುಪ್ರೀಂ’ ಮೆಟ್ಟಿಲೇರಿದ್ದ ವಿವಾದಪೆಗಾಸಸ್‌ ವಿವಾದವು ಭಾರತಕ್ಕೆ ಹೊಸದೇನಲ್ಲ. ಈ ಕುತಂತ್ರಾಂಶವನ್ನು ಆ್ಯಕ್ಟಿವಿಸ್ಟ್‌ಗಳು ಪತ್ರಕರ್ತರು ಹಾಗೂ ರಾಜಕಾರಣಿಗಳ ಮೊಬೈಲ್‌ ಫೋನ್‌ಗೆ ನುಸುಳುವಂತೆ ಮಾಡಿ ಅವರ ಚಲನವಲನದ ಮೇಲೆ ನಿಗಾ ಇಡಲಾಗಿದೆ ಎಂದು ಆರೋಪ ಕೇಳಿಬಂದಿತ್ತು. 2021ರಲ್ಲಿ ಈ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಹಲವು ಮಂದಿ ಅರ್ಜಿ ಸಲ್ಲಿಸಿದ್ದರು. ಇದರ ಬಗ್ಗೆ ತನಿಖೆ ನಡೆಸುವಂತೆ ಕೋರಿದ್ದರು.‌ ಆರೋಪಗಳ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲು ಸುಪ್ರೀಂ ಕೋರ್ಟ್‌ ತಾಂತ್ರಿಕ ಪರಿಣತರ ಸಮಿತಿಯನ್ನು ರಚಿಸಿತ್ತು. ಪರಿಶೀಲನೆ ನಡೆಸಿದ್ದ ಸಮಿತಿಯು ಮೊಬೈಲ್‌ ಫೋನ್‌ಗಳಲ್ಲಿ ಕುತಂತ್ರಾಂಶ ನುಸುಳಿರುವ ಬಗ್ಗೆ ನಿರ್ಣಾಯಕ ಪುರಾವೆಗಳು ಲಭಿಸಿಲ್ಲ. ಆದರೆ ಕೇಂದ್ರ ಸರ್ಕಾರವು ಈ ವಿವಾದಕ್ಕೆ ಸಂಬಂಧಿಸಿದಂತೆ ಸಮಿತಿಯೊಂದಿಗೆ ಸಹಕರಿಸಲಿಲ್ಲ ಎಂದು ವರದಿಯಲ್ಲಿ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT