ಗುರುವಾರ , ಜುಲೈ 29, 2021
26 °C

ಜೂನ್ ಅಂತ್ಯದ ಗಡುವು ಮರೆಯಬೇಡಿ

ಅವಿನಾಶ್ ಕೆ.ಟಿ. Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌ನಿಂದ ಉಂಟಾಗಿರುವ ಪ್ರತಿಕೂಲ ಪರಿಣಾಮಗಳಿಂದ ಜನಸಾಮಾನ್ಯರು ಕೊಂಚ ನಿರಾಳರಾಗುವಂತೆ ಮಾಡಲು ಕೇಂದ್ರ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಂಡಿತ್ತು. ಸಣ್ಣ ಹೂಡಿಕೆ, ತೆರಿಗೆ ಉಳಿತಾಯ, ರಿಟರ್ನ್ಸ್ ಸಲ್ಲಿಕೆ, ಆಧಾರ್ ಕಾರ್ಡ್ ಜೋಡಣೆ ಸೇರಿ ವಿವಿಧ ನಿಯಮಗಳನ್ನು ಸಡಿಲಿಸಿ ಗಡುವು ವಿಸ್ತರಿಸಿತ್ತು. ಇದೀಗ ಜೂನ್ 30 ರ ಒಳಗಾಗಿ ಹಣಕಾಸು ನಿರ್ವಹಣೆಗೆ ಸಂಬಂಧಿಸಿದಂತೆ 8 ಪ್ರಮುಖ ಕೆಲಸಗಳನ್ನು ನೀವು ಮಾಡಬೇಕಿದೆ. ಅದರ ವಿವರ ಇಲ್ಲಿದೆ.

1. ಆಧಾರ್ ಕಾರ್ಡ್ ಜತೆ ಪ್ಯಾನ್ ಕಾರ್ಡ್ ಜೋಡಣೆ: ಪ್ಯಾನ್‌ ಕಾರ್ಡ್ ಅನ್ನು ಆಧಾರ್ ಜತೆ ಜೋಡಣೆ ಮಾಡಲು ನಿಗದಿ ಮಾಡಿದ್ದ ಮಾರ್ಚ್ 31ರ ಗಡುವನ್ನು ಕೋವಿಡ್ ಕಾರಣದಿಂದಾಗಿ ಜೂನ್ 30 ರವರೆಗೆ ವಿಸ್ತರಿಸಲಾಗಿದೆ. ನೀವು ಪ್ಯಾನ್ ಕಾರ್ಡ್ ಅನ್ನು ಆಧಾರ್ ಜತೆ ಲಿಂಕ್ ಮಾಡದಿದ್ದರೆ ಅದು ಅಮಾನ್ಯವಾಗಲಿದೆ. ಸಿಂಧುತ್ವ ಕಳೆದುಕೊಂಡ ಪ್ಯಾನ್‌ನಿಂದ ನೀವು ಹಣಕಾಸು ವ್ಯವಹಾರಗಳನ್ನು ನಡೆಸಲು ಸಾಧ್ಯವಿಲ್ಲ. ಇಷ್ಟೇ ಅಲ್ಲ ಐಟಿ ರಿಟರ್ನ್ಸ್ ಸಲ್ಲಿಸುವುದಕ್ಕೂ ಪ್ಯಾನ್‌ ಕಾರ್ಡ್ ಅಗತ್ಯ.

2. ತಡವಾಗಿ / ಪರಿಷ್ಕೃತ ರಿಟರ್ನ್ಸ್ ಸಲ್ಲಿಕೆ: 2018-19 ನೇ ಸಾಲಿನ ಐಟಿ ರಿಟರ್ನ್ಸ್ ಅನ್ನು ತಡವಾಗಿ / ಪರಿಷ್ಕೃತಗೊಳಿಸಿ ಸಲ್ಲಿಸಲು ಜೂನ್ 30 ರವರೆಗೆ ಕಾಲಾವಕಾಶ ನೀಡಲಾಗಿದೆ. ನೀವು 2018-19 ನೇ ಸಾಲಿನ ಐಟಿ ರಿಟರ್ನ್ಸ್ ಸಲ್ಲಿಕೆ ಮಾಡಿಲ್ಲ ಎಂದಾದಲ್ಲಿ ಕೂಡಲ್ಲೇ ಪ್ರಕ್ರಿಯೆ ಪೂರ್ಣಗೊಳಿಸಿ. ಇಲ್ಲವಾದಲ್ಲಿ ದಂಡ ಕಟ್ಟಬೇಕಾಗುತ್ತದೆ.

3. ಫಾರಂ 16: ಜೂನ್ 30 ರ ಒಳಗಾಗಿ ಉದ್ಯೋಗಿಗಳಿಗೆ ಫಾರಂ-16 (ಸ್ಯಾಲರಿ ಟಿಡಿಎಸ್ ಸರ್ಟಿಫಿಕೆಟ್) ಒದಗಿಸಬೇಕು ಎಂದು ಸರ್ಕಾರ ಸೂಚಿಸಿದೆ. ಈ ಹಿಂದೆ ಜೂನ್ 15 ವರೆಗೆ ನೀಡಲಾಗಿದ್ದ ಕಾಲಾವಕಾಶವನ್ನು ಜೂನ್ 30 ರವರೆಗೆ ವಿಸ್ತರಿಸಲಾಗಿದೆ.

4. ತೆರಿಗೆ ಉಳಿತಾಯದ ಹೂಡಿಕೆಗಳು: 2019-20 ನೇ ಸಾಲಿನಲ್ಲಿ ನೀವು ಯಾವುದೇ ತೆರಿಗೆ ಉಳಿತಾಯದ ಹೂಡಿಕೆಗಳನ್ನು ಮಾಡಿಲ್ಲ ಎಂದಾದಲ್ಲಿ ಜೂನ್ 30 ರ ವರೆಗೆ ನಿಮಗೆ ಅವಕಾಶವಿದೆ. ಪಿಪಿಎಫ್, ಜೀವ ವಿಮೆ, ಆರೋಗ್ಯ ವಿಮೆ, ಎನ್ ಪಿಎಸ್, (ಸೆಕ್ಷನ್ 80 ಸಿ , ಸೆಕ್ಷನ್ 80 ಡಿ) ಸೇರಿದಂತೆ ತೆರಿಗೆ ಉಳಿತಾಯಕ್ಕೆ ಇರುವ ಹೂಡಿಕೆ ಆಯ್ಕೆಗಳನ್ನು ಬಳಸಿಕೊಳ್ಳಲು ಇದು ಕೊನೆಯ ಅವಕಾಶ.

5. ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್): ಫೆಬ್ರುವರಿ - ಏಪ್ರಿಲ್ 2020ರ ಅವಧಿಯಲ್ಲಿ ನಿವೃತ್ತಿ ಹೊಂದಿರುವವರಿಗೆ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಲು ಜೂನ್ 30 ರ ವರೆಗೆ ಕಾಲಾವಕಾಶ ನೀಡಲಾಗಿದೆ. 55 ರಿಂದ 60 ವರ್ಷದೊಳಗಿನ ನಿವೃತ್ತ ಹಿರಿಯ ನಾಗರಿಕರು ‘ಎಸ್‌ಸಿಎಸ್‌ಎಸ್’ ಯೋಜನೆಯಲ್ಲಿ ಹಣ ತೊಡಗಿಸಬಹುದು. ನಿವೃತ್ತಿಯ ಅನುಕೂಲಗಳು ಸಿಕ್ಕ ಒಂದು ತಿಂಗಳ ಒಳಗಾಗಿ ಹೂಡಿಕೆ ಮಾಡಬೇಕು.

6 . ಸಣ್ಣ ಉಳಿತಾಯ ಯೋಜನೆಗಳು: ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆ , ಹಿರಿಯ ನಾಗರಿಕರ ಉಳಿತಾಯ ಯೋಜನೆ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಪೈಕಿ ಆಯ್ಕೆ ಮಾಡಿಕೊಂಡ ಯೋಜನೆಗಳಲ್ಲಿ ನಿಗದಿಯಂತೆ ಕನಿಷ್ಠ ಮೊತ್ತ ತೊಡಗಿಸದಿದ್ದರೆ ಅದಕ್ಕೆ ದಂಡ ವಿಧಿಸಲಾಗುತ್ತಿತ್ತು. ಜೂನ್‌ ಅಂತ್ಯದವರೆಗೆ ಈ ದಂಡ ರದ್ದುಗೊಳಿಸಲಾಗಿದೆ.

7. ಪಿಪಿಎಫ್ , ಸುಕನ್ಯಾ ಸಮೃದ್ಧಿ ಯೋಜನೆ ವಿಸ್ತರಣೆ: ಪಿಪಿಎಫ್ ಅಥವಾ ಸುಕನ್ಯಾ ಸಮೃದ್ಧಿ ಯೋಜನೆ ಮಾರ್ಚ್ 31 , 2020 ರಲ್ಲಿ ಮೆಚ್ಯುರಿಟಿ ಕಂಡಿದ್ದು ಅದರ ವಿಸ್ತರಣೆಗೆ ನೀವು ಮನಸ್ಸು ಮಾಡಿದ್ದರೆ ಜೂನ್ ಅಂತ್ಯದವರೆಗೆ ಸಮಯವಿದೆ.

8. ಫಾರಂ 15 ಜಿ / 15 ಎಚ್: ಕೇಂದ್ರೀಯ ನೇರ ತೆರಿಗೆ ಮಂಡಳಿ 2019-20 ನೇ ಸಾಲಿನ ಫಾರಂ 15 ಜಿ / 15 ಎಚ್ ಸಲ್ಲಿಕೆ ಜೂನ್ 30ರವರೆಗೆ ಮಾನ್ಯವಾಗಲಿದೆ.

ಷೇರುಪೇಟೆಯಲ್ಲಿ ಅನಿಶ್ಚಿತತೆಯ ಆಟ

ಕೋವಿಡ್ ಪ್ರಕರಣಗಳ ಹೆಚ್ಚಳ, ಜಾಗತಿಕ ಮಾರುಕಟ್ಟೆಗಳಲ್ಲಿ ಅನಿಶ್ಚಿತತೆ, ಆರ್ಥಿಕ ಪ್ರಗತಿ ಬಗ್ಗೆ ರೇಟಿಂಗ್ ಸಂಸ್ಥೆಗಳು ನೀಡಿರುವ ನಿರಾಶಾದಾಯಕ ಮುನ್ನೋಟ, ಸಮಗ್ರ ಅರ್ಥಶಾಸ್ತ್ರದ ಸೂಚಕಗಳಲ್ಲೂ ನಕಾರಾತ್ಮಕ ನೋಟ, ಅಮೆರಿಕದಲ್ಲೂ ಕುಂಠಿತದ ಅಂದಾಜು ಸೇರಿ ಹಲವು ಕಾರಣಗಳಿಂದ ಈ ವಾರವೂ ಷೇರು ಪೇಟೆ ಸೂಚ್ಯಂಕಗಳು ಕುಸಿತ ದಾಖಲಿಸಿವೆ.

33,780 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ಶೇ 1.48 ರಷ್ಚು ಕುಸಿತ ದಾಖಲಿಸಿದೆ. 9,972 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 1.68 ರಷ್ಟು ಕುಸಿತ ಕಂಡಿದೆ.

ವಲಯವಾರು: ವಲಯವಾರು ಪ್ರಗತಿಯಲ್ಲಿ ನಿಫ್ಟಿ ಮಾಧ್ಯಮ ವಲಯ ಶೇ 7.3, ಲೋಹ ವಲಯ ಶೇ 4.1, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 2.5, ಬ್ಯಾಂಕ್ ಶೇ 1.8, ಮಾಹಿತಿ ತಂತ್ರಜ್ಞಾನ ವಲಯ ಶೇ 1.5, ಎಫ್ಎಂಸಿಜಿ ಶೇ 1.3, ಫಾರ್ಮಾ ವಲಯ ಶೇ 1.0, ವಾಹನ ತಯಾರಿಕಾ ವಲಯ ಶೇ 1.0 ರಷ್ಟು ಕುಸಿದಿವೆ. ನಿಫ್ಟಿ ರಿಯಲ್ ಎಸ್ಟೇಟ್ ಮಾತ್ರ ಶೇ 1.3 ರಷ್ಟು ಏರಿಕೆ ಕಂಡಿದೆ.

ಏರಿಕೆ- ಇಳಿಕೆ: ಇಂಡಸ್‌ಇಂಡ್ ಬ್ಯಾಂಕ್, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಬಜಾಜ್ ಫೈನಾನ್ಸ್ ಗಳಿಕೆಯಲ್ಲಿ ಮುಂಚೂಣಿಯಲ್ಲಿವೆ. ಜೀ ಎಂಟರ್‌ಟೇನ್‌ಮೆಂಟ್‌, ಕೋಲ್ ಇಂಡಿಯಾ, ಯುಪಿಎಲ್, ಟಾಟಾ ಸ್ಟೀಲ್ ಈ ವಾರ ಗಳಿಕೆಯಲ್ಲಿ ಹಿನ್ನಡೆ ಅನುಭವಿಸಿವೆ.

ಮುನ್ನೋಟ: ಜೆಕೆ ಟೈಯರ್ಸ್, ಶಾಪರ್ಸ್ ಸ್ಟಾಪ್, ಟಾಟಾ ಮೋಟರ್ಸ್, ವಿನೈಲ್ ಇಂಡಿಯಾ, ಫೋರ್ಟೀಸ್, ಜೆಕೆ ಸಿಮೆಂಟ್, ಮುತ್ತೂಟ್ ಫೈನಾನ್ಸ್, ಪಿಡಿಲೈಟ್ ಇಂಡಸ್ಟ್ರೀಸ್, ಬ್ರಿಗೇಡ್, ಎಲ್‌ಐಸಿ ಹೌಸಿಂಗ್ ಫೈನಾನ್ಸ್, ಜುವಾರಿ, ಸೆಂಚುರಿ ಪ್ಲೈ, ಅಮೃತಾಂಜನ್ ಸೇರಿ ಪ್ರಮುಖ ಕಂಪನಿಗಳು ಈ ವಾರ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.

ಭಾರತ ಸೇರಿ ಜಾಗತಿಕವಾಗಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮತ್ತೊಂದು ಲಾಕ್‌ಡೌನ್ ಜಾರಿಗೆ ತರುವ ಸಾಧ್ಯತೆ ಇದೆ ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದರ ಜತೆ ಜಾಗತಿಕ ಮಾರುಕಟ್ಟೆಗಳು ಹೇಗೆ ವರ್ತಿಸಲಿವೆ ಎನ್ನುವುದು ನೇರವಾಗಿ ಭಾರತೀಯ ಷೇರುಪೇಟೆ ಮೇಲೆ ಪ್ರಭಾವ ಬೀರಲಿದೆ. ಜಾಗತಿಕವಾಗಿ ಮತ್ತು ದೇಶಿಯವಾಗಿ ಅನಿಶ್ಚಿತ ವಾತಾವರಣ ಇರುವುದರಿಂದ ಸದ್ಯದ ಮಟ್ಟಿಗೆ ಉತ್ತಮ ಸಾಧನೆ ತೋರುತ್ತಿರುವ ಕಂಪನಿಗಳಲ್ಲಿ ಮಾತ್ರ ಹೂಡಿಕೆ ಮಾಡುವುದು ಒಳಿತು. ಕಳೆದ ವಾರದಲ್ಲಿ ಕಂಡಂತೆ ಈ ವಾರವೂ ನಾಟಕೀಯ ಏರಿಳಿತದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

(ಲೇಖಕ; ಇಂಡಿಯನ್ ಮನಿಡಾಟ್‌ಕಾಂನ ಹಣಕಾಸು ಸಲಹೆ ವಿಭಾಗದ ಮುಖ್ಯಸ್ಥ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು