ಅದಾನಿ ಎಂಟರ್‌ಪ್ರೈಸಸ್ ಎಫ್‌ಪಿಒ ಬದಲಿಲ್ಲ: ಸಮೂಹದ ವಕ್ತಾರ

ಮುಂಬೈ: ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಷೇರು ಮಾರಾಟವು (ಎಫ್‌ಪಿಒ) ಪೂರ್ವ ನಿಗದಿಯಂತೆಯೇ ನಡೆಯಲಿದೆ. ಇದರಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ ಎಂದು ಅದಾನಿ ಸಮೂಹದ ವಕ್ತಾರರೊಬ್ಬರು ಶನಿವಾರ ಸ್ಪಷ್ಟಪಡಿಸಿದ್ದಾರೆ.
ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್ ರಿಸರ್ಚ್‌ನ ವರದಿ ಪ್ರಕಟವಾದ ನಂತರ ಅದಾನಿ ಸಮೂಹದ ಕಂಪನಿಗಳ ಷೇರು ಮೌಲ್ಯದಲ್ಲಿ ತೀವ್ರ ಕುಸಿತ ಕಾಣುತ್ತಿದೆ. ಹೀಗಾಗಿ, ಬ್ಯಾಂಕ್‌ಗಳು ಎಫ್‌ಪಿಒ ಅವಧಿಯನ್ನು ನಾಲ್ಕು ದಿನಗಳವರೆಗೆ ವಿಸ್ತರಿಸುವ ಅಥವಾ ಷೇರಿನ ನೀಡಿಕೆ ದರವನ್ನು ಶೇ 10ರಷ್ಟು ಕಡಿಮೆ ಮಾಡುವ ಕುರಿತು ಪರಿಶೀಲನೆ ನಡೆಸುತ್ತಿವೆ ಎಂದು ಮೂಲಗಳು ಹೇಳಿವೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಮೂಹದ ವಕ್ತಾರ, ‘ಅವಧಿ ವಿಸ್ತರಿಸುವ ಅಥವಾ ಷೇರಿನ ನೀಡಿಕೆ ದರ ಕಡಿಮೆ ಮಾಡುವ ಪ್ರಶ್ನೆಯೇ ಇಲ್ಲ. ಈ ವರದಿಯು ಎಫ್‌ಪಿಒ ಪ್ರಕ್ರಿಯೆಯನ್ನು ಹಾಳುಮಾಡುವ ದುರುದ್ದೇಶದಿಂದ ಕೂಡಿದ್ದಾಗಿದೆ’ ಎಂದು ಹೇಳಿದ್ದಾರೆ.
ಎಫ್‌ಪಿಒ ಜನವರಿ 27ರಂದು ಆರಂಭ ಆಗಿದ್ದು 31ರವರೆಗೆ ಇರಲಿದೆ. ‘ಬ್ಯಾಂಕ್‌ಗಳು ಮತ್ತು ಹೂಡಿಕೆದಾರರನ್ನು ಒಳಗೊಂಡು ನಮ್ಮ ಎಲ್ಲಾ ಪಾಲುದಾರರು ಎಪ್‌ಪಿಒದಲ್ಲಿ ಸಂಪೂರ್ಣ ನಂಬಿಕೆ ಹೊಂದಿದ್ದಾರೆ. ಎಫ್‌ಪಿಒ ಯಶಸ್ವಿಯಾಗಲಿದೆ ಎನ್ನುವ ಆತ್ಮವಿಶ್ವಾಸ ನಮಗಿದೆ’ ಎಂದು ಅವರು ತಿಳಿಸಿದ್ದಾರೆ.
ಅದಾನಿ ಸಮೂಹವು ಪ್ರತಿ ಷೇರಿಗೆ ₹3,112 ರಿಂದ ₹3,276 ಬೆಲೆ ನಿಗದಿ ಮಾಡಿದೆ. ಆದರೆ ಶುಕ್ರವಾರದ ವಹಿವಾಟಿನ ಅಂತ್ಯದ ವೇಳೆಗೆ ಅದಾನಿ ಎಂಟರ್‌ಪ್ರೈಸಸ್‌ನ ಒಂದು ಷೇರಿನ ಬೆಲೆ ₹2,761.45ಕ್ಕೆ ಇಳಿಕೆ ಕಂಡಿದೆ.
ಎಫ್‌ಪಿಒದ ಮೊದಲ ದಿನ ಶುಕ್ರವಾರ ಶೇ 1ರಷ್ಟು ಷೇರುಗಳಿಗೆ ಮಾತ್ರವೇ ಬಿಡ್ ಸಲ್ಲಿಕೆ ಆಗಿದೆ. ರಿಟೇಲ್ ಹೂಡಿಕೆದಾರರು ತಮಗೆ ಮೀಸಲಿಟ್ಟಿದ್ದ 2.29 ಕೋಟಿ ಷೇರುಗಳಲ್ಲಿ 4.70 ಲಕ್ಷ ಷೇರುಗಳಿಗೆ ಬಿಡ್ ಸಲ್ಲಿಸಿದ್ದಾರೆ.
ಎಫ್‌ಪಿಒದಲ್ಲಿ ಬದಲಾವಣೆ ಮಾಡುವ ಕುರಿತು ಷೇರು ಮಾರಾಟ ಪ್ರಕ್ರಿಯೆಯನ್ನು ನಿರ್ವಹಿಸುತ್ತಿರುವ ಜೆಫ್ರೀಸ್, ಎಸ್‌ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ಮತ್ತು ಐಸಿಐಸಿಐ ಸೆಕ್ಯುರಿಟೀಸ್ ಪ್ರತಿಕ್ರಿಯೆ ನೀಡಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.