ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2021-22ರಲ್ಲಿ ದಾಖಲೆ ಪ್ರಮಾಣದ ಸರಕು ಸಾಗಣೆ

Last Updated 26 ಏಪ್ರಿಲ್ 2022, 14:38 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಕೋವಿಡ್ ನಡುವೆಯೂ 2021–22ರ ಆರ್ಥಿಕ ವರ್ಷದಲ್ಲಿ ಅತ್ಯಂತ ಹೆಚ್ಚು ಸರಕು ಸಾಗಣೆ ಮಾಡಿದೆ. ಆರ್ಥಿಕ ವರ್ಷದ ಆರಂಭಿಕ ದಿನದಿಂದ 4,11,513 ಟನ್‌ ಸರಕು ಸಾಗಣೆ ಮಾಡಿದ್ದು ಈ ನಿಲ್ದಾಣದ ಮಟ್ಟಿಗೆ ಸಾರ್ವಕಾಲಿಕ ದಾಖಲೆ.

2020–21 ನೇ ಸಾಲಿಗೆ ಹೋಲಿಸಿದರೆ ಸರಕು ಸಾಗಣೆಯಲ್ಲಿ ಶೇ26ರಷ್ಟು ಹೆಚ್ಚಳವಾಗಿದೆ. ವಿಮಾನ ನಿಲ್ದಾಣವು 2020–21ರಲ್ಲಿ 3,26,643 ಟನ್‌ ಸರಕು ಸಾಗಿಸಿತ್ತು. ಅಂತರರಾಷ್ಟ್ರೀಯ ಸರಕು ಸಾಗಣೆ ಶೇ.31.1ರಷ್ಟು ಹಾಗೂ ಸ್ಥಳೀಯ ಸರಕು ಸಾಗಣೆಯು ಶೇ.17ರಷ್ಟು ವೃದ್ಧಿಸಿದೆ. ಕೋವಿಡ್‌ ಪೂರ್ವದ ಮಟ್ಟದ ಪ್ರಗತಿ ಸಾಧಿಸಿದ ದೇಶದ ಏಕೈಕ ಪ್ರಮುಖ ವಿಮಾನನಿಲ್ದಾಣ ಎಂಬ ಹೆಗ್ಗಳಿಕೆಗೆ ವಿಮಾನ ನಿಲ್ದಾಣವು ಪಾತ್ರವಾಗಿದೆ.

ಹಣ್ಣು, ತರಕಾರಿಗಳ ಸಾಗಣೆಯಲ್ಲಿ ವಿಮಾನ ನಿಲ್ದಾಣವು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ದೇಶದ ಒಟ್ಟು ಹಣ್ಣು ತರಕಾರಿಗಳ ಸಾಗಣೆಯಲ್ಲಿ ಶೇ.31ರಷ್ಟು ಪಾಲನ್ನು ಈ ವಿಮಾನ ನಿಲ್ದಾಣವೇ ನಿರ್ವಹಿಸುತ್ತಿದೆ.

ಅಂತಾರಾಷ್ಟ್ರೀಯ ಸರಕು ಸಾಗಣೆ (ಆಮದು ಮತ್ತು ರಫ್ತು) ಅಕ್ಟೋಬರ್ 2021ರಲ್ಲಿ ಅತ್ಯಂತ ಹೆಚ್ಚು (25,695 ಟನ್‌ ) ದಾಖಲಾಗಿತ್ತು. ಈ ವಿಮಾನ ನಿಲ್ದಾಣವು ದೇಶದ ಸರಕು ಸಾಗಣೆಯಲ್ಲಿ ಶೇ.13ರಷ್ಟು ಪಾಲನ್ನು ಮತ್ತು ದಕ್ಷಿಣ ಭಾರತದದಲ್ಲಿ ನಡೆಯುವ ಸರಕು ಸಾಗಣೆಯಲ್ಲಿ ಶೇ.45ರಷ್ಟು ಪಾಲನ್ನು ನಿರ್ವಹಿಸುತ್ತದೆ.

ಪ್ರಯಾಣಿಕರ ಪ್ರಮಾಣ ಹೆಚ್ಚಳ:

ಈ ವಿಮಾನನಿಲ್ದಾಣವನ್ನು ಬಳಸುವ ಪ್ರಯಾಣಿಕರ ಪ್ರಮಾಣವು ಮತ್ತೆ ಚೇತರಿಕೆಯ ಹಾದಿ ಹಿಡಿದಿದೆ. 2020–21ಕ್ಕೆ ಹೋಲಿಸಿದರೆ 2021–22ರಲ್ಲಿ ದೇಶದೊಳಗಿನ ನಗರಗಳ ಪ್ರಯಾಣದಲ್ಲಿ ಶೇ.45ರಷ್ಟು ಹಾಗೂ ಅಂತಾರಾಷ್ಟ್ರೀಯ ಪ್ರಯಾಣದಲ್ಲಿ ಶೇ 136ರಷ್ಟು ಪ್ರಗತಿ ದಾಖಲಾಗಿದೆ. ವಿಮಾನ ನಿಲ್ದಾಣವು 2021–22ರಲ್ಲಿ 1.63 ಕೋಟಿ ಪ್ರಯಾಣಿಕರನ್ನು ಬರಮಾಡಿಕೊಂಡಿದೆ. 2020–21ರಲ್ಲಿ 1.09 ಕೋಟಿ ಪ್ರಯಾಣಿಕರನ್ನು ಬರಮಾಡಿಕೊಂಡಿತ್ತು. 2019–20ರಲ್ಲಿನ ಪ್ರಯಾಣಿಕರ ನಿರ್ವಹಣೆಗೆ ಹೋಲಿಸಿದರೆ, ವಿಮಾನ ನಿಲ್ದಾಣವು ಶೇ 54ರಷ್ಟು ಪುನಃಶ್ಚೇತನ ಕಂಡಿದೆ. ದೇಶದೊಳಗಿನ ವಿಮಾನನಿಲ್ದಾಣಗಳ ಪ್ರಯಾಣಿಕರ ನಿರ್ವಹಣೆಯಲ್ಲಿ ಶೇ.55ರಷ್ಟು ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರ ನಿರ್ವಹಣೆಯಲ್ಲಿ ಶೇ.24ರಷ್ಟು ಪುನಃಶ್ಚೇತನ ಕಂಡಿದೆ.

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ (ಬಿಐಎಎಲ್‌) ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹರಿಮರಾರ್, ‘ಸುಸ್ಥಿರ ಆವಿಷ್ಕಾರಗಳು ಮತ್ತು ತಾಂತ್ರಿಕ ಸುಧಾರಣೆಗಳ ಮೂಲಕ ಉತ್ಕೃಷ್ಟ ಸೇವೆ ಒದಗಿಸುವ ನಮ್ಮ ಬದ್ಧತೆಯನ್ನು ಈ ಸಾಧನೆಯು ಪ್ರತಿಫಲಿಸುತ್ತದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ವಿಮಾನ ನಿಲ್ದಾಣದಿಂದ ದೇಶದೊಳಗಿನ ನಗರಗಳಿಗೆ ನೇರ ಸೇವೆಯು ಹಿಂದಿನ ವರ್ಷಕ್ಕೆ (ಶೇ 54) ಹೋಲಿಸಿದರೆ ಈ ಬಾರಿ ವೃದ್ಧಿಸಿದೆ (ಶೇ 76ಕ್ಕೆ). ಎರಡನೇ ಮತ್ತು ಮೂರನೇ ಹಂತದ ನಗರಗಳಿಗೆ ಸಂಪರ್ಕ ಹೆಚ್ಚಿದ್ದರಿಂದ ಈ ಪ್ರಗತಿ ಸಾಧ್ಯವಾಗಿದೆ.

ಒಟ್ಟು ವಾಯುಯಾನದಲ್ಲಿ ಪ್ರಗತಿ:

2020–21ಕ್ಕೆಹೋಲಿಸಿದರೆ, 2021–22ರಲ್ಲಿ ವಿಮಾನ ನಿಲ್ದಾಣದಲ್ಲಿ ವಾಯುಯಾನ ಶೇ.64ರಷ್ಟು ಪುನಶ್ಚೇತನ ಕಂಡಿದೆ. ದೇಶದೊಳಗಿನ ನಗರಗಳ ಸಂಪರ್ಕವು ಶೇ 66ರಷ್ಟು ಹಾಗೂ ಅಂತರರಾಷ್ಟ್ರೀಯ ಸಂಪರ್ಕವು ಶೇ.51ರಷ್ಟು ಪುನಃಶ್ಚೇತನ ಕಂಡಿದೆ.

ಅಂತರರಾಷ್ಟ್ರೀಯ ವಿಮಾನಯಾನ ಕಾರ್ಯಾಚರಣೆಗಳು 2022ರ ಮಾರ್ಚ್ 27ರಂದು ಪುನರಾರಂಭವಾಗಿವೆ. 2022ರ ಎರಡನೆಯ ತ್ರೈಮಾಸಿಕದ ವೇಳೆಗೆ ವಿಮಾನ ನಿಲ್ದಾಣವು ‌ಬಹುತೇಕ ಎಲ್ಲ ಅಂತರರಾಷ್ಟ್ರೀಯ ನಗರಗಳಿಗೆ ಕೋವಿಡ್‌ ಪೂರ್ವದಲ್ಲಿದ್ದ ಪ್ರಮಾಣದಲ್ಲೇ ಸೇವೆ ಒದಗಿಸಲಿದೆ.

ಅಂತರರಾಷ್ಟ್ರೀಯ ಸರಕು ಸಾಗಣೆ (ಟನ್‌ಗಳಲ್ಲಿ)

2021–22;2020–21; ಹೆಚ್ಚಳ ಪ್ರಮಾಣ (ಶೇ)

2,71,988; 207,518; 31.1 ರಷ್ಟುವೃದ್ಧಿಸಿದೆ.

ಸ್ಥಳೀಯ ಸರಕು ಸಾಗಣೆ

2021–22; 2020–21; ಹೆಚ್ಚಳ ಪ್ರಮಾಣ (ಶೇ)

1,39,525;1,19,125; 17

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT