ಮಂಗಳವಾರ, ಆಗಸ್ಟ್ 3, 2021
28 °C

14 ರಿಂದ ಭಾರತ್‌ ಬಾಂಡ್‌ಇಟಿಎಫ್‌ 2ನೇ ಕಂತು ನೀಡಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದ ಮೊದಲ ಕಾರ್ಪೊರೇಟ್‌ ಬಾಂಡ್‌ ಆಗಿರುವ ಭಾರತ್‌ ಬಾಂಡ್‌ ಷೇರು ವಿನಿಮಯ ನಿಧಿಯ (ಇಟಿಎಫ್‌) ಎರಡನೇ ಕಂತಿನ ನೀಡಿಕೆಯು ಇದೇ 14ರಿಂದ ನಾಲ್ಕು ದಿನಗಳ ಕಾಲ ನಡೆಯಲಿದೆ.

ಈ ಬಾಂಡ್‌ ಇಟಿಎಫ್‌ ಮೂಲಕ ಸಂಗ್ರಹವಾಗುವ ಬಂಡವಾಳವನ್ನು ಕೇಂದ್ರೋದ್ಯಮಗಳಿಗೆ ಮೂಲಸೌಕರ್ಯಗಳನ್ನು ಒದಗಿಸಲು ಬಳಕೆ ಮಾಡಲಾಗುವುದು. ಇಡೆಲ್‌ವೈಸ್‌ ಅಸೆಟ್‌ ಮ್ಯಾನೇಜ್‌ಮೆಂಟ್‌, ಈ ನಿಧಿ ಕೊಡುಗೆಯನ್ನು ನಿರ್ವಹಿಸಲಿದೆ.

ಎರಡು ಹೊಸ ಇಟಿಎಫ್‌ ಸರಣಿಗಳು 2025ರ ಏಪ್ರಿಲ್‌ ಮತ್ತು 2031ರ ಏಪ್ರಿಲ್‌ನಲ್ಲಿ ಪರಿ‍ಪಕ್ವಗೊಳ್ಳಲಿವೆ. ಈ ಷೇರು ವಿನಿಮಯ ನಿಧಿಗಳನ್ನು ‘ಎಎಎ’ ಮಾನದಂಡದ ಕೇಂದ್ರೋದ್ಯಮಗಳನ್ನು ಒಳಗೊಂಡ ನಿಫ್ಟಿ ಭಾರತ್‌ ಬಾಂಡ್‌ ಷೇರುಗಳಲ್ಲಿ ತೊಡಗಿಸಲಾಗುವುದು. ಡಿಮ್ಯಾಟ್‌ ಖಾತೆ ಹೊಂದಿಲ್ಲದವರು ಭಾರತ್‌ ಬಾಂಡ್‌ ಫಂಡ್ಸ್‌ ಆಫ್‌ ಫಂಡ್ಸ್‌ನಲ್ಲಿ (ಎಫ್‌ಒಎಫ್‌)  ಹೂಡಿಕೆ ಮಾಡಬಹುದು.

‘ಸರ್ಕಾರ ಬಾಂಡ್‌ ಮಾರುಕಟ್ಟೆ ವಿಸ್ತರಿಸಲು ಉದ್ದೇಶಿಸಿರುವುದರಿಂದ ಕೇಂದ್ರೋದ್ಯಮಗಳ ‘ಎಎ’ ರೇಟಿಂಗ್‌ನ ಸಾಲಪತ್ರಗಳಲ್ಲೂ ಹೂಡಿಕೆ ಮಾಡಲು ಪರಿಶೀಲಿಸಲಾಗುವುದು. ಇಟಿಎಫ್‌ನಡಿ ನಿರ್ವಹಿಸುವ ಸಂಪತ್ತು ಹೆಚ್ಚಳಗೊಂಡಿರುವುದು ಈ ಹಣಕಾಸು ಉತ್ಪನ್ನದಲ್ಲಿನ ಹೂಡಿಕೆದಾರರ ವಿಶ್ವಾಸ ಹೆಚ್ಚಳದ ದ್ಯೋತಕವಾಗಿದೆ’ ಎಂದು ಹೂಡಿಕೆ ಮತ್ತು ಸರ್ಕಾರಿ ಆಸ್ತಿ ನಿರ್ವಹಣೆ ಇಲಾಖೆಯ (ಡಿಐಪಿಎಎಂ) ಕಾರ್ಯದರ್ಶಿ ಟಿ.ಕೆ. ಪಾಂಡೆ ಹೇಳಿದ್ದಾರೆ.

‘ಇಲ್ಲಿ ಹಣ ತೊಡಗಿಸುವವರು ತೆರಿಗೆ ಪಾವತಿ ನಂತರವೂ ಶೇ 2ರಷ್ಟು ಹೆಚ್ಚು ಆದಾಯ ಗಳಿಸಲಿದ್ದಾರೆ’ ಎಂದು ಇಡೆಲ್‌ವೈಸ್‌ ಗ್ರೂಪ್‌ ಅಧ್ಯಕ್ಷ ರಾಶೇಷ್‌ ಶಾ ಹೇಳಿದ್ದಾರೆ.

ನೀಡಿಕೆ ಮೂಲಕ ಸಂಗ್ರಹವಾದ  ಮೊತ್ತವನ್ನು ಇದುವರೆಗೆ ಕೇಂದ್ರೋದ್ಯಮಗಳ ‘ಎಎಎ’ ಮಾನದಂಡದ ಬಾಂಡ್ಸ್‌ಗಳಲ್ಲಿ ಮಾತ್ರ ತೊಡಗಿಸಲು ನಿರ್ಧರಿಸಲಾಗಿತ್ತು. ಎರಡನೇ ಕಂತಿನಲ್ಲಿ ಸಂಗ್ರಹವಾಗುವ ಮೊತ್ತವನ್ನು ‘ಎಎ’ ಮಾನದಂಡದ ಬಾಂಡ್ಸ್‌ಗಳಲ್ಲಿಯೂ ತೊಡಗಿಸಲು ಈ ಮೊದಲೇ ನಿರ್ಧರಿಸಲಾಗಿದೆ.

ಈ ಬಾಂಡ್‌ಗಳು 3 ವರ್ಷ ಮತ್ತು 10 ವರ್ಷಗಳ ಸ್ಥಿರ ಪರಿಪಕ್ವ ಅವಧಿ ಹೊಂದಿವೆ. 2019ರ ಡಿಸೆಂಬರ್‌ನಲ್ಲಿ ನಡೆದಿದ್ದ ಮೊದಲ ಕಂತಿನ ನೀಡಿಕೆಯಲ್ಲಿ ₹ 12,400 ಕೋಟಿ ಸಂಗ್ರಹವಾಗಿತ್ತು. ಹೆಚ್ಚುವರಿ ಹಣ ಸಂಗ್ರಹಕ್ಕೆ ಅವಕಾಶವೂ ಸೇರಿದಂತೆ ಈ ಬಾರಿ ಒಟ್ಟಾರೆ ₹ 14 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಉದ್ದೇಶಿಸಲಾಗಿದೆ.

ಅಂಕಿಅಂಶಗಳು

* ಬಂಡವಾಳ ಸಂಗ್ರಹದ ಮೂಲ ಉದ್ದೇಶ- ₹ 3,000 ಕೋಟಿ

* ಹೆಚ್ಚುವರಿ ಬಾಂಡ್ ನೀಡಿಕೆಗೆ ಅವಕಾಶ- ₹ 11,000 ಕೋಟಿ

* ಒಟ್ಟಾರೆ ಬಾಂಡ್‌ ನೀಡಿಕೆ ಮೊತ್ತ- ₹ 14,000 ಕೋಟಿ

* ಡಿಸೆಂಬರ್‌ನಲ್ಲಿನ ಮೊದಲ ಕಂತಿನಲ್ಲಿ ಸಂಗ್ರಹವಾದ ಮೊತ್ತ- ₹ 12,400 ಕೋಟಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು