ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಿಷ್ಠ ರಿಚಾರ್ಜ್‌ ಮೊತ್ತ ಹೆಚ್ಚಿಸಿದ ಏರ್‌ಟೆಲ್

Last Updated 24 ಜನವರಿ 2023, 22:57 IST
ಅಕ್ಷರ ಗಾತ್ರ

ನವದೆಹಲಿ, ಬೆಂಗಳೂರು: 28 ದಿನಗಳವರೆಗೆ ಸೇವೆಯನ್ನು ಒದಗಿಸುವ ರಿಚಾರ್ಜ್‌ನ ಶುಲ್ಕವನ್ನು ಭಾರ್ತಿ ಏರ್‌ಟೆಲ್‌ ಕಂಪನಿಯು ಕರ್ನಾಟಕ ಸೇರಿದಂತೆ ಒಟ್ಟು ಎಂಟು ದೂರಸಂಪರ್ಕ ವೃತ್ತಗಳಲ್ಲಿ ಹೆಚ್ಚಿಸಿದೆ. ಹೊಸ ಶುಲ್ಕ ₹ 155 ಆಗಿದೆ. ಇದು ಈ ಹಿಂದಿನ ಶುಲ್ಕಕ್ಕೆ ಹೋಲಿಸಿದರೆ ಶೇಕಡ 57ರಷ್ಟು ಹೆಚ್ಚು.

ಕಂಪನಿಯು ಇದುವರೆಗೆ ₹ 99ಕ್ಕೆ 28 ದಿನಗಳವರೆಗೆ ದೂರಸಂಪರ್ಕ ಸೇವೆಯನ್ನು ಒದಗಿಸುತ್ತಿತ್ತು. ಈ ಶುಲ್ಕ ಪಾವತಿಸಿ ರಿಚಾರ್ಜ್‌ ಮಾಡಿಸಿಕೊಂಡವರಿಗೆ 200 ಎಂ.ಬಿ. ಡೇಟಾ ಬಳಸಲು ಹಾಗೂ ಪ್ರತಿ ಸೆಕೆಂಡಿಗೆ 2.5 ಪೈಸೆಯಂತೆ ಕರೆ ಮಾಡಲು ಸಾಧ್ಯವಾಗುತ್ತಿತ್ತು. ಈಗ ಕಂಪನಿಯು ಕನಿಷ್ಠ ಆರಂಭಿಕ ಶುಲ್ಕವನ್ನು ₹ 155ಕ್ಕೆ ನಿಗದಿಪಡಿಸಿದೆ.

ಇದರ ಅಡಿಯಲ್ಲಿ ಗ್ರಾಹಕರಿಗೆ ಮಿತಿರಹಿತ ಕರೆ ಸೌಲಭ್ಯ, 1 ಜಿ.ಬಿ. ಡೇಟಾ ಹಾಗೂ 300 ಎಸ್‌ಎಂಎಸ್‌ ಸೌಲಭ್ಯ ಸಿಗಲಿದೆ. ‘ಗ್ರಾಹಕರಿಗೆ ಹೆಚ್ಚು ಉತ್ತಮವಾದ ಅನುಭವ ಒದಗಿಸುವ ಭಾಗವಾಗಿ ನಾವು ₹ 155ರ ರಿಚಾರ್ಜ್‌ ಯೋಜನೆಯನ್ನು ಆರಂಭಿಸಿದ್ದೇವೆ’ ಎಂದು ಏರ್‌ಟೆಲ್‌ ವಕ್ತಾರರೊಬ್ಬರು ಹೇಳಿದ್ದಾರೆ.

ಹೊಸ ರಿಚಾರ್ಜ್‌ ಯೋಜನೆಯನ್ನು ಕಂಪನಿಯು ದೇಶದ ಎಲ್ಲೆಡೆ ಹಂತ ಹಂತವಾಗಿ ಜಾರಿಗೆ ತರಲಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ವರ್ಷ ನಡೆದ 5ಜಿ ತರಂಗಾಂತರ ಖರೀದಿಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿರುವ ದೂರಸಂಪರ್ಕ ಕಂಪನಿಗಳು ಸೇವಾ ಶುಲ್ಕವನ್ನು ಹೆಚ್ಚಿಸುವ ನಿರೀಕ್ಷೆ ಇದೆ. ಏರ್‌ಟೆಲ್‌ ಕಂಪನಿಯು ತನ್ನ ಪ್ರತಿ ಗ್ರಾಹಕನಿಂದ ಪಡೆಯುವ ಆದಾಯ (ಎಆರ್‌ಪಿಯು) ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹ 190ಕ್ಕೆ ಏರಿಕೆ ಆಗಿದೆ.

ಎಆರ್‌ಪಿಯು ₹ 200ಕ್ಕೆ ಏರಿಕೆ ಆಗಬೇಕು ಹಾಗೂ ನಂತರದಲ್ಲಿ ₹ 300ಕ್ಕೆ ಹೆಚ್ಚಳ ಆಗಬೇಕು. ಆಗ ದೂರಸಂಪರ್ಕ ಉದ್ಯಮದ ಹಣಕಾಸಿನ ವಹಿವಾಟು ಆರೋಗ್ಯಕರ ಆಗುತ್ತದೆ ಎಂದು ಏರ್‌ಟೆಲ್‌ ಕಂಪನಿಯು 2021ರ ನವೆಂಬರ್‌ನಲ್ಲಿ ಹೇಳಿತ್ತು. ಜಿಯೊ ಕಂಪನಿಯ ಎಆರ್‌ಪಿಯು ಡಿಸೆಂಬರ್‌ ತ್ರೈಮಾಸಿಕದಲ್ಲಿ ₹ 178.2 ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT