ಶನಿವಾರ, ಏಪ್ರಿಲ್ 4, 2020
19 °C

ಸುಪ್ರೀಂಕೋರ್ಟ್ ಮಹತ್ವದ ತೀರ್ಪು: ಡಿಜಿಟಲ್‌ ಕರೆನ್ಸಿ ನಿಷೇಧ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಡಿಜಿಟಲ್‌ ಕರೆನ್ಸಿಗಳ ವಹಿವಾಟಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ವಿಧಿಸಿದ್ದ ನಿಷೇಧವನ್ನು ಸುಪ್ರೀಂಕೋರ್ಟ್‌ ರದ್ದುಪಡಿಸಿದೆ.

ಬಿಟ್‌ಕಾಯಿನ್‌ ಅಥವಾ ಕ್ರಿಪ್ಟೊ ಕರೆನ್ಸಿ ಎಂದೂ ಬಳಕೆಯಲ್ಲಿರುವ ಡಿಜಿಟಲ್‌ ಕರೆನ್ಸಿಗಳಿಗೆ ಸಂಬಂಧಿಸಿದಂತೆ ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳು ಸೇವೆ ಒದಗಿಸಲು ಪೀಠವು ಅನುಮತಿ ನೀಡಿದೆ.

ನ್ಯಾಯಮೂರ್ತಿ ಆರ್. ಎಫ್‌. ನರಿಮನ್‌ ನೇತೃತ್ವದಲ್ಲಿನ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್‌ ಮತ್ತು ವಿ. ರಾಮಸುಬ್ರಮಣಿಯನ್‌ ಅವರಿದ್ದ ಪೀಠವು, ಆರ್‌ಬಿಐ 2018ರ ಏಪ್ರಿಲ್‌ 6ರಂದು ಹೊರಡಿಸಿದ್ದ ಸುತ್ತೋಲೆಯನ್ನು ರದ್ದುಪಡಿಸಿದೆ.

ಡಿಜಿಟಲ್‌ ಕರೆನ್ಸಿಗಳ ಬಗ್ಗೆ ಕೇಂದ್ರ ಸರ್ಕಾರ ರಚಿಸಿದ್ದ ಹಲವಾರು ಸಮಿತಿಗಳು ಅನೇಕ ಸಲಹೆಗಳನ್ನು ಮುಂದಿಟ್ಟಿವೆ. ಎರಡು ಕರಡು ಮಸೂದೆಗಳನ್ನು ಸಿದ್ಧಪಡಿಸಿದ್ದರೂ ಸರ್ಕಾರ ಯಾವುದೇ ಖಚಿತ ನಿರ್ಧಾರಕ್ಕೆ ಬಂದಿಲ್ಲ. ಬ್ಲಾಕ್‌ಚೇನ್‌ ತಂತ್ರಜ್ಞಾನ ಸ್ವೀಕಾರಾರ್ಹವಾಗಿರುವ ಆರ್‌ಬಿಐಗೆ, ಕ್ರಿಪ್ಟೊ ಕರೆನ್ಸಿ ಬೇಕಾಗಿಲ್ಲ. ತರ್ಕದ ಆಧಾರದಲ್ಲಿ ವಿರೋಧಾಭಾಸದ ನಿಲುವು ತಳೆದಿದೆ. ಹೀಗಾಗಿ ಈ ನಿಷೇಧ ನಿರ್ಧಾರವು ಸೂಕ್ತ ಎನಿಸುವುದಿಲ್ಲ ಎಂದು ಪೀಠ ಹೇಳಿದೆ.

ತನ್ನ ನಿಯಂತ್ರಣಕ್ಕೆ ಒಳಪಡುವ ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳು ಡಿಜಿಟಲ್‌ ಕರೆನ್ಸಿಗಳಿಗೆ ಸಂಬಂಧಿಸಿದಂತೆ ಯಾವುದೇ ಬಗೆಯ ವಹಿವಾಟಿಗೆ ಅವಕಾಶ ನೀಡಬಾರದು ಎಂದು ಆರ್‌ಬಿಐ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ಡಿಜಿಟಲ್‌ ಕರೆನ್ಸಿಗಳ ಬಳಕೆ ನಿರ್ಬಂಧಿಸಲು ಕೇಂದ್ರೀಯ ಬ್ಯಾಂಕ್‌ ಈ ಕ್ರಮ ಕೈಗೊಂಡಿತ್ತು.

ಭಾರತದ ಇಂಟರ್‌ನೆಟ್‌ ಮೊಬೈಲ್‌ ಸಂಘವು (ಐಎಂಎಐ), ಆರ್‌ಬಿಐ ಸುತ್ತೋಲೆಯನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಕೇಂದ್ರೀಯ ಬ್ಯಾಂಕ್‌, ನೈತಿಕ ನೆಲೆಗಟ್ಟಿನ ಮೇಲೆ ಡಿಜಿಟಲ್ ಕರೆನ್ಸಿಗಳ ಮೇಲೆ ನಿಷೇಧ ವಿಧಿಸಿದೆ. ಈ ಪರ್ಯಾಯ ಕರೆನ್ಸಿಗಳಿಂದ ಆರ್ಥಿಕತೆ ಮೇಲೆ ಆಗಿರುವ ಪರಿಣಾಮಗಳ ಅಧ್ಯಯನ ನಡೆದಿಲ್ಲ ಎಂದು ಸಂಘದ ಪರವಾಗಿ ವಾದಿಸಲಾಗಿತ್ತು. ಡಿಜಿಟಲ್‌ ಕರೆನ್ಸಿಗಳ ವಹಿವಾಟಿನಲ್ಲಿ ತೊಡಗುವವರು ಹಣಕಾಸು, ಕಾನೂನು, ಸುರಕ್ಷತೆಗೆ ಸಂಬಂಧಿಸಿದಂತೆ ಅಪಾಯಗಳಲ್ಲಿ ಸಿಲುಕುವ ಸಾಧ್ಯತೆ ಬಗ್ಗೆ ಆರ್‌ಬಿಐ 2013ರಲ್ಲಿಯೇ ಬಳಕೆದಾರರಿಗೆ ಎಚ್ಚರಿಸಿತ್ತು.

ಏನಿದು ಬಿಟ್ ಕಾಯಿನ್?
ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿ ಇರುವ ಕರೆನ್ಸಿಗಳಿಗೆ (ಡಾಲರ್, ಪೌಂಡ್, ರೂಪಾಯಿ) ಪರ್ಯಾ­ಯವಾಗಿ ಡಿಜಿಟಲ್ ರೂಪದಲ್ಲಿ ಇರುವ ಮತ್ತು ಇಂಟರ್‌ನೆಟ್‌ನಲ್ಲಿ ಮಾತ್ರ ವಹಿವಾಟು ನಡೆಸಬಹುದಾದ ಕರೆನ್ಸಿ­ಗಳಿಗೆ ‘ಬಿಟ್ ಕಾಯಿನ್’ ಎನ್ನುತ್ತಾರೆ.

ಕ್ರಿಪ್ಟೊ ಕರೆನ್ಸಿ, ಬಿಟ್‌ ಕಾಯಿನ್‌ ಹೀಗೆ ಬೇರೆ, ಬೇರೆ ಹೆಸರಿನಲ್ಲಿ ಇಂತಹ ಕರೆನ್ಸಿಗಳು ಬಳಕೆಯಲ್ಲಿ ಇವೆ. ನಾವು ಪ್ರತಿ ದಿನ ಬಳಸುವ ನಾಣ್ಯ ಅಥವಾ ನೋಟುಗಳಂತೆ ಈ ಕರೆನ್ಸಿಗೆ ಭೌತಿಕ ಸ್ವರೂಪ ಇಲ್ಲ. ಇದು ಅಂತರ್ಜಾಲದಲ್ಲಿ ಮಾತ್ರ ಅಸ್ತಿತ್ವದಲ್ಲಿ ಇರುತ್ತದೆ. ಆರ್‌ಬಿಐ ಸೇರಿದಂತೆ ಇತರ ಕೇಂದ್ರೀಯ ಬ್ಯಾಂಕ್‌ ಮತ್ತು ಸರ್ಕಾರಗಳು ಇವುಗಳನ್ನು ಮುದ್ರಿಸುವುದಿಲ್ಲ.

ಅಂದರೆ, ಇವು ಚಲಾವಣೆಯಲ್ಲಿ ಇರುವ ಮಾನ್ಯತೆ ಪಡೆದ ಕರೆನ್ಸಿ ಆಗಿರುವುದಿಲ್ಲ. ಹೂಡಿಕೆದಾರರ ಖರೀದಿ ಮತ್ತು ಮಾರಾಟ ಆಧರಿಸಿ ಇವುಗಳ ಬೆಲೆ ನಿಗದಿಯಾಗುತ್ತದೆ. ತೆರಿಗೆ ಪಾವತಿಸಲು, ಸಾಲ ಮರುಪಾವತಿಸಲೂ ಇವುಗಳನ್ನು ಬಳಸುವಂತಿಲ್ಲ. ಯುರೋಪಿನ ಕೆಲ ದೇಶಗಳಲ್ಲಿ ಬಿಟ್‌ಕಾಯಿನ್‌ ಎಟಿಎಂಗಳಿವೆ. ಈ ಎಟಿಎಂಗಳು ವರ್ಚುವಲ್‌ ಟೋಕನ್ಸ್‌ ನೀಡುತ್ತವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು