ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಆರ್‌ ಲೈಫ್‌’ನ ಆರೋಗ್ಯ ಸೇವೆ

Last Updated 9 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಉಡುಪಿ ಬಳಿಯ ಪುಟ್ಟ ಹಳ್ಳಿ ಕಾಪುನಿಂದ 1973ರಲ್ಲಿ ಉದ್ಯೋಗ ಅರಸಿ ದುಬೈಗೆ ತೆರಳಿದ್ದ, ಕಿಸೆ ಖಾಲಿ ಇದ್ದ, ಬಳಿಯಲ್ಲಿ ಫಾರ್ಮಸಿ ಪದವಿ ಮಾತ್ರ ಇದ್ದ ಬವಗುತು ರಘುರಾಂ ಶೆಟ್ಟಿ ಅವರು, ತಮ್ಮ ಪರಿಶ್ರಮ, ಉತ್ಸಾಹ, ಕೆಲಸದಲ್ಲಿನ ಶ್ರದ್ಧೆ – ಬದ್ಧತೆಯಿಂದ ವರ್ಷಗಳು ಉರುಳುತ್ತಿದ್ದಂತೆ ವಿಶ್ವದಾದ್ಯಂತ ತಮ್ಮ ಉದ್ದಿಮೆ ಸಾಮ್ರಾಜ್ಯವನ್ನು ದೊಡ್ಡದಾಗಿ ಕಟ್ಟಿ ಬೆಳೆಸಿದ್ದಾರೆ.

ಯುನೈಟೆಡ್‌ ಅರಬ್‌ ಎಮಿರೈಟ್ಸ್ (ಯುಎಇ) ಅಸ್ತಿತ್ವಕ್ಕೆ ಬಂದ ಆರಂಭಿಕ ವರ್ಷಗಳಲ್ಲಿ ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ಇದ್ದ ವಿಪುಲ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಲು 1975ರಲ್ಲಿ ಇವರು ಆರಂಭಿಸಿದ್ದ ನ್ಯೂ ಮೆಡಿಕಲ್‌ ಸೆಂಟರ್‌ (ಎನ್‌ಎಂಸಿ) ಸದ್ಯಕ್ಕೆ ಅಲ್ಲಿನ ಅತಿದೊಡ್ಡ ಆರೋಗ್ಯ ಸೇವಾ ಸಂಸ್ಥೆಯಾಗಿ ಬೆಳೆದಿದೆ. ಕೊಲ್ಲಿ ರಾಷ್ಟ್ರದಿಂದ ಲಂಡನ್‌ ಷೇರುಪೇಟೆಯಲ್ಲಿ ವಹಿವಾಟು ಆರಂಭಿಸಿದ ಮೊದಲ ಸಂಸ್ಥೆಯೂ ಇದಾಗಿದೆ.

‘ಎನ್‌ಎಂಸಿ’ಯು ಕ್ರಮೇಣ ಔಷಧಿ ವಿತರಣೆ, ವೈದ್ಯಕೀಯ ಉಪಕರಣ, ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನ, ಶಿಕ್ಷಣ ಪರಿಕರಗಳ ತಯಾರಿಕೆಗೆ ಗಮನ ಕೇಂದ್ರೀಕರಿಸಿತು. ಸರಕುಗಳ ವಿತರಣೆಗಾಗಿ ಎನ್‌ಎಂಸಿ ಟ್ರೇಡಿಂಗ್‌ ಅನ್ನು 1981ರಲ್ಲಿ ಸ್ಥಾಪಿಸಲಾಯಿತು. ಪ್ರವರ್ಧಮಾನಕ್ಕೆ ಬರುತ್ತಿದ್ದ ದೇಶಗಳಲ್ಲಿ ಉದ್ದಿಮೆ ವಹಿವಾಟು ವಿಸ್ತರಣೆಗೆ ಇದ್ದ ಅವಕಾಶಗಳನ್ನು ಬಾಚಿಕೊಳ್ಳಲು ಬಿಆರ್‌ಎಸ್‌ ವೆಂಚರ್ಸ್‌ ಸ್ಥಾಪಿಸಲಾಯಿತು. ಇದರ ಖ್ಯಾತಿ ಮತ್ತು ಜನಪ್ರಿಯತೆ ಈಗ 17 ದೇಶಗಳಿಗೆ ವಿಸ್ತರಿಸಿದೆ.

ಅಬುಧಾಬಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಬಿಆರ್‌ಎಸ್‌ ವೆಂಚರ್ಸ್‌ನ ಆರೋಗ್ಯ ರಕ್ಷಣೆಯ ಅಂಗಸಂಸ್ಥೆಯಾಗಿರುವ ಬಿಆರ್‌ ಲೈಫ್‌ ಈಗ ಭಾರತದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳ ಸ್ಥಾಪನೆ, ನಿರ್ವಹಣೆಗೆ ಮುಂದಾಗಿದೆ. ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಆರೋಗ್ಯ ಕ್ಷೇತ್ರದಲ್ಲಿ ಜನಸಾಮಾನ್ಯರಿಗೆ ಅಗ್ಗದ ದರದಲ್ಲಿ ಗುಣಮಟ್ಟದ ಸೇವೆ ನೀಡುವುದು ಅದರ ಧ್ಯೇಯವಾಗಿದೆ.

ವಿಶ್ವದ ಮೂರನೇ ಅತಿದೊಡ್ಡ ಆರೋಗ್ಯ ಸೇವಾ ಸಂಸ್ಥೆಯಾಗಿ ಬೆಳೆದಿರುವ ಬಿಆರ್‌ಎಸ್‌ ವೆಂಚರ್ಸ್‌, ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಆರೋಗ್ಯ ಸೇವಾ ಕ್ಷೇತ್ರಕ್ಕೆ ಕಾಲಿಡುತ್ತಿದೆ. ‘ಯುಎಇ’ನಲ್ಲಿನ ಗುಣಮಟ್ಟದ ಸೇವೆಯನ್ನೇ ಭಾರತದಲ್ಲಿಯೂ ಒದಗಿಸಲು ಮುಂದಾಗಿದೆ.
ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಬಿಆರ್‌ ಲೈಫ್‌, ಬೆಂಗಳೂರಿನ ರಾಜರಾಜೇಶ್ವರಿ ನಗರ ( ಓಝೋನ್‌ ಅರ್ಬಾನಾ ಆಸ್ಪತ್ರೆ) ಮತ್ತು ತಿರುವನಂತಪುರ, ಭುವನೇಶ್ವರದಲ್ಲಿ ಆಸ್ಪತ್ರೆಗಳನ್ನು ಹೊಂದಿದೆ. ಈಜಿಪ್ಟ್‌ ಮತ್ತು ಆಫ್ಗಾನಿಸ್ತಾನದಲ್ಲಿಯೂ ಆಸ್ಪತ್ರೆಗಳನ್ನು ನಿರ್ವಹಿಸುತ್ತಿದೆ.

ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಉಮೇದಿನಿಂದ 1973ರಲ್ಲಿ ‘ಯುಎಐ’ಗೆ ತೆರಳಿದ್ದ ಬಿ. ಆರ್‌. ಶೆಟ್ಟಿ ಅವರು, ನಾಲ್ಕು ದಶಕಕ್ಕೂ ಹೆಚ್ಚಿನ ಅವಧಿಯಲ್ಲಿ ಯಶಸ್ವಿ ಉದ್ಯಮಿಯಾಗಿ ನವೋದ್ಯಮಿಗಳ ಪಾಲಿಗೆ ಆದರ್ಶವಾಗಿ ಬೆಳೆದಿದ್ದಾರೆ. ತಾಯ್ನಾಡಿಗೆ ವಿಶಿಷ್ಟ ಕೊಡುಗೆ ನೀಡಬೇಕು ಎನ್ನುವ ತತ್ವದಲ್ಲಿ ನಂಬಿಕೆ ಇಟ್ಟಿರುವ ಶೆಟ್ಟಿ ಅವರು, ಬಿಆರ್‌ ಲೈಫ್‌ ಬ್ರ್ಯಾಂಡ್‌ ಹೆಸರಿನಡಿ ಅತ್ಯಾಧುನಿಕ ಸೂಪರ್‌ ಸ್ಪೆಷಾಲಿಟಿ ಆರೋಗ್ಯ ಸೇವೆ ಒದಗಿಸಲು ಮುಂದಾಗಿದ್ದಾರೆ. ಸರ್ಕಾರದ ಜತೆಗಿನ ಸಹಭಾಗಿತ್ವದಲ್ಲಿ ಹೊಸ ಆಸ್ಪತ್ರೆಗಳ ಸ್ಥಾಪನೆ, ಆಸ್ಪತ್ರೆಗಳ ಸ್ವಾಧೀನ ಮೂಲಕ ಸೇವೆ ವಿಸ್ತರಿಸುವುದು ಅವರ ಉದ್ದೇಶವಾಗಿದೆ.

ಸಂಸ್ಥೆಯು ಸದ್ಯಕ್ಕೆ ದೇಶದಲ್ಲಿ ಐದು ಆಸ್ಪತ್ರೆಗಳನ್ನು ನಿರ್ವಹಿಸುತ್ತಿದೆ. ಉಡುಪಿಯಲ್ಲಿನ ಸರ್ಕಾರಿ ಆಸ್ಪತ್ರೆಯನ್ನು (ಮದರ್‌ ಆ್ಯಂಡ್‌ ಚೈಲ್ಡ್‌) ತನ್ನ ವಶಕ್ಕೆ ತೆಗೆದುಕೊಂಡು ಉಚಿತ ವೈದ್ಯಕೀಯ ಸೇವೆ ಒದಗಿಸುತ್ತಿದೆ. ‘ಪಿಪಿಪಿ’ಯ ಯಶಸ್ಸಿಗೆ ಇದೊಂದು ಮಾದರಿಯಾಗಿ ಗಮನ ಸೆಳೆಯುತ್ತಿದೆ. ಸದ್ಯಕ್ಕೆ ಬಿಆರ್‌ ಲೈಫ್‌ ಒಡೆತನದ ಆಸ್ಪತ್ರೆಗಳು 1,500 ಹಾಸಿಗೆಗಳ ಸಾಮರ್ಥ್ಯ ಹೊಂದಿವೆ. ಇದನ್ನು ಮೂರು ವರ್ಷಗಳಲ್ಲಿ 3 ಸಾವಿರಕ್ಕೆ ಹೆಚ್ಚಿಸುವ ಉದ್ದೇಶವನ್ನು ಶೆಟ್ಟಿ ಅವರು ಹೊಂದಿದ್ದಾರೆ.

‘ಕೆಲವರಿಗೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವುದು ಎಂದರೆ ಹಣ ಮಾಡುವ ದಂದೆಯಾಗಿದೆ. ಬಿಆರ್‌ ಲೈಫ್‌– ಗುಣಮಟ್ಟ, ಅಗ್ಗದ ದರ ಮತ್ತು ನೈತಿಕ ತತ್ವಗಳ ತಳಹದಿ ಆಧರಿಸಿ ಸೇವೆ ಸಲ್ಲಿಸುವ ಧ್ಯೇಯ ಹೊಂದಿದೆ. ವೈದ್ಯಕೀಯ ಸೇವೆ ಮೂಲಕ ಹಣ ಗಳಿಸುವ ಉದ್ದೇಶ ನನಗೆ ಇಲ್ಲ. ಸಮಾಜಕ್ಕೆ ಏನನ್ನಾದರೂ ಮರಳಿ ಕೊಡಬೇಕು. ಜನರ ನೋವು ಕಡಿಮೆ ಮಾಡಬೇಕು ಎನ್ನುವ ಉದ್ದೇಶ ಸಾಕಾರಗೊಳಿಸಲು ಈ ಯೋಜನೆ ಹಮ್ಮಿಕೊಳ್ಳಲಾಗಿದೆ’ ಎಂದು ಶೆಟ್ಟಿ ಅವರು ಹೇಳುತ್ತಾರೆ.

‘ವೈದ್ಯಕೀಯ ಕ್ಷೇತ್ರದಲ್ಲಿ ಸರ್ಕಾರ, ಖಾಸಗಿ ಪಾಲುದಾರಿಕೆಗೆ ವಿಪುಲ ಅವಕಾಶಗಳು ಇವೆ. ಸರ್ಕಾರವು ತನ್ನ ಆಸ್ಪತ್ರೆಗಳನ್ನು ನಿರ್ವಹಿಸಲು ಒಳ್ಳೆಯ ಜನರಿಗೆ ಕೊಡಲು ಮುಂದಾಗಲಿ. ನನಗೆ ಯಾವುದೇ ಗಡಿ ನಿರ್ಬಂಧಗಳಿಲ್ಲ. ಆಫ್ಗಾನಿಸ್ತಾನದಲ್ಲಿಯೂ ಎರಡು ಆಸ್ಪತ್ರೆಗಳಿವೆ. ವಹಿವಾಟಿನಲ್ಲಿ ಹಣಕ್ಕಿಂತ ಸಂಬಂಧಗಳು ಮುಖ್ಯವಾಗುತ್ತವೆ ಎನ್ನುವುದು ನನ್ನ ಅನುಭವದಿಂದ ಸಾಬೀತಾಗಿದೆ. ವಹಿವಾಟಿನಲ್ಲಿ ಪ್ರಾಮಾಣಿಕತೆ, ಶ್ರದ್ಧಾ ಮನೋಭಾವ ಇದ್ದರೆ ಹಣಕಾಸಿನ ನೆರವು ನೀಡುವವರು ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ.

‘ಸರ್ಕಾರದ ನೆರವಿನಿಂದ ತಾಲ್ಲೂಕು ಸ್ಥಳಗಳಲ್ಲಿ 130 ಡಯಾಲಿಸಿಸ್‌ ಕೇಂದ್ರಗಳನ್ನು ನಿರ್ವಹಿಸಲಾಗುತ್ತಿದೆ. ಆಂಧ್ರಪ್ರದೇಶದ ಅಮರಾವತಿಯ 100 ಎಕರೆ ಪ್ರದೇಶದಲ್ಲಿ ದಂತ, ವೈದ್ಯಕೀಯ, ಪಂಚತಾರಾ ಹೋಟೆಲ್‌, ಮಾಲ್‌ ಒಳಗೊಂಡಂತೆ ಮೆಡಿಸಿಟಿ ನಿರ್ಮಾಣ ಮಾಡಲಿದೆ. ರಾಜ್ಯದ ಕೋಲಾರ್‌ದಲ್ಲಿ 25 ಎಕರೆ ಪ್ರದೇಶದಲ್ಲಿ ವೈದ್ಯಕೀಯ ಕಾಲೇಜ್‌ ಮತ್ತು ಆಸ್ಪತ್ರೆ ಸ್ಥಾಪಿಸಲಾಗುವುದು. ಆರೋಗ್ಯ ಸೇವಾ ಕ್ಷೇತ್ರದಲ್ಲಿ ಗುಣಮಟ್ಟ, ಅಗ್ಗದ ದರ, ನೈತಿಕತೆ ಪಾಲಿಸುವುದು ಮುಖ್ಯವಾಗಿರುತ್ತದೆ. ಉತ್ಸಾಹ, ಸಮಾಜಕ್ಕೆ ಒಳಿತು ಮಾಡುವ ಮನೋಭಾವದ ಬದ್ಧತೆ ಇದ್ದರೆ, ನೇರ ಮಾರ್ಗದಲ್ಲಿಯೇ ಹಣ ನಿಮ್ಮನ್ನು ಹಿಂಬಾಲಿಸಿಕೊಂಡು ಬರುತ್ತದೆ’ ಎಂದೂ ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT