ಸೌದಿ | ಡ್ರೋನ್, ಮಿಸೈಲ್ ದಾಳಿ: ಬ್ರೆಂಟ್ ತೈಲ ದರ ಬ್ಯಾರಲ್‌ಗೆ 70 ಡಾಲರ್

ಸಿಂಗಪುರ: ಸೌದಿ ಅರೇಬಿಯಾದ ತೈಲಾಗಾರಗಳ ಮೇಲೆ ಭಾನುವಾರ ಡ್ರೋನ್ ಮತ್ತು ಮಿಸೈಲ್ ದಾಳಿ ನಡೆದಿದೆ. ಇದಾದ ನಂತರ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೋಮವಾರ ಕಚ್ಚಾತೈಲ ದರಗಳು ಭಾರಿ ಏರಿಕೆ ಕಂಡವು.
ಬ್ರೆಂಟ್ ಕಚ್ಚಾ ತೈಲ ದರ ಬ್ಯಾರಲ್‌ಗೆ ಸೋಮವಾರ 70 ಡಾಲರ್ ಗಡಿ ದಾಟಿದೆ. ಕೋವಿಡ್–19 ಸಾಂಕ್ರಾಮಿಕ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಈ ಮಟ್ಟವನ್ನು ತಲುಪಿದೆ. ಅಮೆರಿಕದ ಡಬ್ಲ್ಯುಟಿಐ ದರ್ಜೆಯ ಕಚ್ಚಾ ತೈಲ ದರ ಎರಡು ವರ್ಷಗಳಿಗೂ ಹೆಚ್ಚಿನ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.
ಏಷ್ಯಾದ ಮಾರುಕಟ್ಟೆಯಲ್ಲಿ ಮೇನಲ್ಲಿ ವಿತರಿಸುವ ಬ್ರೆಂಟ್ ತೈಲ ದರ ಬ್ಯಾರಲ್‌ಗೆ 71.38 ಡಾಲರ್‌ಗೆ ತಲುಪಿತ್ತು. 2020ರ ಜನವರಿ 8ರ ಬಳಿಕದ ಗರಿಷ್ಠ ಮಟ್ಟ ಇದಾಗಿದೆ. ನಂತರ ಒಂದು ಬ್ಯಾರಲ್‌ಗೆ 70.47 ಡಾಲರ್‌ಗಳಿಗೆ ತಗ್ಗಿತು.
ಯೆಮೆನ್‌ನ ಹೂಥಿ ಪಡೆಗಳು ನಡೆಸಿದ ಡ್ರೋನ್ ಮತ್ತು ಮಿಸೈಲ್ ದಾಳಿಯು ಅತಿದೊಡ್ಡ ತೈಲ ಕಂಪನಿಯಾದ ಸೌದಿ ಅರಾಮ್ಕೊದ ಘಟಕದ ಮೇಲೆಯೂ ನಡೆದಿದೆ. ಮಾರ್ಚ್ 4ರಂದು ಜೆಡ್ಡಾದಲ್ಲಿ ನಡೆದ ದಾಳಿಯ ನಂತರದ ಎರಡನೇ ದಾಳಿ ಇದು ಎಂದು ವಿಶ್ಲೇಷಕರು ಹೇಳಿದ್ದಾರೆ.
ಮೇಲಿಂದ ಮೇಲೆ ಈ ರೀತಿಯ ದಾಳಿಗಳು ನಡೆಯುವುದರಿಂದ ಮಾರುಕಟ್ಟೆಯಲ್ಲಿ ತೈಲ ದರದಲ್ಲಿ ಇನ್ನಷ್ಟು ಏರಿಕೆ ಆಗಬಹುದು ಎಂದು ಅವರು ಹೇಳಿದ್ದಾರೆ.
ಈ ವರ್ಷದಲ್ಲಿ ಇಲ್ಲಿಯವರೆಗೆ ಕಚ್ಚಾ ತೈಲ ದರವು ಶೇಕಡ 30ರಷ್ಟು ಏರಿಕೆಯಾಗಿದೆ. ಒಪೆಕ್ ರಾಷ್ಟ್ರಗಳು ಏಪ್ರಿಲ್‌ನಲ್ಲಿಯೂ ತೈಲ ಉತ್ಪಾದನೆ ಕಡಿತ ಮುಂದುವರಿಸಲು ನಿರ್ಧರಿಸಿವೆ. ಇದರಿಂದಾಗಿ ಸತತ ನಾಲ್ಕನೇ ವಹಿವಾಟು ಅವಧಿಯಲ್ಲಿಯೂ ಬ್ರೆಂಟ್ ಮತ್ತು ಡಬ್ಲ್ಯುಟಿಐ ದರ ಏರಿಕೆಯಾಗಿದೆ.
ಹೊರೆ ಹೆಚ್ಚುವ ಸಂಭವ: ದೇಶದಲ್ಲಿ ಈಗಾಗಲೇ ಪೆಟ್ರೋಲ್, ಡೀಸೆಲ್ ದರಗಳು ಗರಿಷ್ಠ ಮಟ್ಟದಲ್ಲಿವೆ. ಕಚ್ಚಾ ತೈಲ ದರ ನಿರಂತರವಾಗಿ ಏರಿಕೆ ಆಗುತ್ತಿರುವುದರಿಂದ ದೇಶಿ ಮಾರುಕಟ್ಟೆಯಲ್ಲಿ ಇಂಧನ ದರ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಸೋಮವಾರ ಒಂದು ಲೀಟರ್ ಪೆಟ್ರೋಲ್ ದರ ₹ 94.22 ಇದ್ದರೆ, ಲೀಟರ್ ಡೀಸೆಲ್ ದರ ₹ 86.73 ಇದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.