ನವದೆಹಲಿ (ಪಿಟಿಐ): ಆನ್‌ಲೈನ್ ಮೂಲಕ ಶೈಕ್ಷಣಿಕ ಕೋರ್ಸ್‌ಗಳನ್ನು ಒದಗಿಸುತ್ತಿರುವ ಬೈಜುಸ್ ಕಂಪನಿಯು ಹೊಸ ವಸ್ತುವಿಷಯವನ್ನು ಸೃಷ್ಟಿಸುವ ಸಾಮರ್ಥ್ಯವಿರುವ ಕೃತಕ ಬುದ್ಧಿಮತ್ತೆಯನ್ನು ತನ್ನ ಕಲಿಕಾ ಮಾದರಿಗಳಲ್ಲಿ ಅಳವಡಿಕೆ ಮಾಡಿದೆ. ಆದರೆ, ಹೊಸ ತಂತ್ರಜ್ಞಾನಗಳು ಶಿಕ್ಷಕರ ಅಗತ್ಯವನ್ನು ಇಲ್ಲವಾಗಿಸುವುದಿಲ್ಲ ಎಂದು ಹೇಳಿದೆ.
ವಿದ್ಯಾರ್ಥಿಗಳು ಕಲಿಯುವ ರೀತಿ ಹೇಗಿರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಕಂಪನಿಯು ಮೂರು ಬಗೆಯ ಕೃತಕ ಬುದ್ಧಿಮತ್ತೆ ಮಾದರಿಗಳನ್ನು ಅಳವಡಿಸಿಕೊಂಡಿದೆ. ಇವು ವಿದ್ಯಾರ್ಥಿಗಳಿಗೆ ಕಲಿಕೆಯನ್ನು ಉತ್ತಮ ಆಗಿಸಿಕೊಳ್ಳುವ ವಿಧಾನವೊಂದನ್ನು ತಾವಾಗಿಯೇ ರೂಪಿಸಿಕೊಡಲಿವೆ.
ಕೃತಕ ಬುದ್ಧಿಮತ್ತೆಯನ್ನು ಅಳವಡಿಸಿಕೊಳ್ಳುತ್ತಿರುವುದು ಶಿಕ್ಷಕರಿಗೆ ಈಗ ಇರುವ ಸ್ಥಾನವನ್ನು ಮುಂದೆ ಇಲ್ಲವಾಗಿಸುವ ಉದ್ದೇಶದಿಂದ ಅಲ್ಲ. ಬದಲಿಗೆ, ಕಂಪನಿಯ ಸಾಮರ್ಥ್ಯವನ್ನು ಹೆಚ್ಚಿಸಿ, ಶಿಕ್ಷಕರಿಗೆ ಇನ್ನಷ್ಟು ಉತ್ತಮವಾದ ಗುರಿಗಳ ಮೇಲೆ ಗಮನ ಕೊಡಲು ನೆರವಾಗುವ ಉದ್ದೇಶದಿಂದ ಇದನ್ನು ಅಳವಡಿಸಲಾಗಿದೆ ಎಂದು ಕಂಪನಿಯ ಸಹ ಸಂಸ್ಥಾಪಕಿ ದಿವ್ಯಾ ಗೋಕುಲನಾಥ್ ಹೇಳಿದ್ದಾರೆ.
‘ಶಿಕ್ಷಕರು ತರಗತಿಗಳಲ್ಲಿ ಮಾಡುವ ಕೆಲಸಕ್ಕೆ ಅಥವಾ ಬೈಜುಸ್ ಕಂಪನಿಯ ಟ್ಯೂಷನ್ ಕೇಂದ್ರಗಳಲ್ಲಿ ಮಾಡುವ ಕೆಲಸಕ್ಕೆ ಯಾವ ಕೃತಕ ಬುದ್ಧಿಮತ್ತೆಯೂ ಸಾಟಿಯಲ್ಲ. ಆದರೆ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಶಿಕ್ಷಕರಿಗೆ ನೆರವು ನೀಡಬಲ್ಲದು’ ಎಂದು ಅವರು ವಿವರಿಸಿದ್ದಾರೆ.
ಕಂಪನಿಯು ಬಳಕೆಗೆ ತಂದಿರುವ ಮ್ಯಾತ್‌ಜಿಪಿಟಿ ಮಾದರಿಯು ಗಣಿತದ ಸಂಕೀರ್ಣ ಸಮಸ್ಯೆಗಳನ್ನು ಕೂಡ ನಿಖರವಾಗಿ ಪರಿಹರಿಸಬಲ್ಲದು. ಇದು ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ನೆರವಾಗಲು ತಾನಾಗಿಯೇ ಪ್ರಶ್ನೆಗಳನ್ನು ಕೇಳಬಲ್ಲದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.