ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಆ್ಯಪ್‌ಗಳ ನಿಷೇಧದಿಂದ ಟಿಕ್‌ಟಾಕ್, ಹೆಲೋಗೆ ₹45000 ಕೋಟಿ ನಷ್ಟ!

ಅಕ್ಷರ ಗಾತ್ರ

ಬೀಜಿಂಗ್: ಭಾರತದಲ್ಲಿ ಟಿಕ್‌ಟಾಕ್, ಹೆಲೋ ನಿಷೇಧದಿಂದ ಚೀನಾದ ಬೈಟ್‌ಡ್ಯಾನ್ಸ್‌ ಕಂಪನಿಗೆ ₹45000 ಕೋಟಿ ವರೆಗೆ (6 ಶತಕೋಟಿ ಡಾಲರ್) ನಷ್ಟವಾಗುವ ಸಾಧ್ಯತೆ ಇದೆ.

ಕಳೆದ ಕೆಲವು ವರ್ಷಗಳಲ್ಲಿ ಕಂಪನಿಯು ಭಾರತದ ಮಾರುಕಟ್ಟೆಯಲ್ಲಿ ₹7 ಸಾವಿರ ಕೋಟಿಗೂ ಹೆಚ್ಚು (1 ಶತಕೋಟಿ ಡಾಲರ್‌ಗೂ ಹೆಚ್ಚು) ಹೂಡಿಕೆ ಮಾಡಿದೆ. ಈಗ ಆ್ಯಪ್‌ಗಳ ನಿಷೇಧದಿಂದಾಗಿ ಅಲ್ಲಿ ವಹಿವಾಟು ಸ್ಥಗಿತಗೊಳ್ಳಲಿದೆ. ಪರಿಣಾಮವಾಗಿ ₹45000 ಕೋಟಿ ವರೆಗೆ ನಷ್ಟವಾಗುವ ಸಾಧ್ಯತೆ ಇದೆ ಎಂದು ಬೈಟ್‌ಡ್ಯಾನ್ಸ್‌ ಮೂಲಗಳ ಹೇಳಿಕೆ ಉಲ್ಲೇಖಿಸಿ ಚೀನಾ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ ವರದಿ ಮಾಡಿದೆ.

ಟಿಕ್‌ಟಾಕ್ ಚೀನಾದ ಬೈಟ್‌ಡ್ಯಾನ್ಸ್ ಕಂಪನಿಯ ವಿಡಿಯೊ ಶೇರಿಂಗ್ ಪ್ಲಾಟ್‌ಫಾರ್ಮ್ ಆಗಿದ್ದರೆ ಹೆಲೋ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಆಗಿದೆ. ವಿಗೊ ವಿಡಿಯೊ ಸಹ ನಿಷೇಧಿತ ಪಟ್ಟಿಯಲ್ಲಿರುವ ಇನ್ನೊಂದು ಆ್ಯಪ್‌ ಆಗಿದ್ದು, ಇದೂ ಬೈಟ್‌ಡ್ಯಾನ್ಸ್ ಕಂಪನಿಯದ್ದಾಗಿದೆ.

ಮೊಬೈಲ್‌ ಆ್ಯಪ್ ಅನಾಲಿಸಿಸ್ ಕಂಪನಿ ಸೆನ್ಸಾರ್ ಟವರ್ ಪ್ರಕಾರ, ಮೇನಲ್ಲಿ ಟಿಕ್‌ಟಾಕ್ 11.2 ಕೋಟಿ ಬಾರಿ ಡೌನ್‌ಲೋಡ್ ಆಗಿದೆ. ಇದು ಭಾರತದ ಒಟ್ಟು ಮಾರುಕಟ್ಟೆಯ ಶೇ 20ರಷ್ಟಾಗಿದೆ. ಅಮೆರಿಕದ ಮಾರುಕಟ್ಟೆಯ ದುಪ್ಪಟ್ಟಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಚೀನಾದ 59 ಆ್ಯಪ್‌ಗಳನ್ನು ನಿಷಧಿಸಿರುವ ಭಾರತ ಸರ್ಕಾರವು ಅವುಗಳನ್ನು ಬ್ಲಾಕ್ ಮಾಡುವಂತೆ ಸ್ಥಳೀಯ ದೂರಸಂಪರ್ಕ ಆಪರೇಟರ್‌ಗಳಿಗೆ ಸೂಚಿಸಿದೆ. ಟಿಕ್‌ಟಾಕ್ ಮತ್ತು ಹೆಲೋ ಭಾರತದ ಆ್ಯಪ್‌ ಸ್ಟೋರ್‌ಗಳಲ್ಲಿ ಈಗಾಗಲೇ ಸಿಗುತ್ತಿಲ್ಲ. ಈ ಹಿಂದೆ ಡೌನ್‌ಲೋಡ್ ಮಾಡಿರುವವರ ಮೊಬೈಲ್‌ಗಳಲ್ಲೂ ಕಾರ್ಯನಿರ್ವಹಿಸುತ್ತಿಲ್ಲ.

ಜೂನ್ 15ರಂದು ಲಡಾಖ್‌ನ ಗಾಲ್ವನ್ ಕಣಿವೆ ಪ್ರದೇಶದಲ್ಲಿ ಭಾರತ–ಚೀನಾ ಸೇನಾ ಪಡೆಗಳ ನಡುವೆ ನಡೆದ ಸಂಘರ್ಷದಲ್ಲಿ ಭಾರತದ ಕರ್ನಲ್ ಶ್ರೇಣಿ ಅಧಿಕಾರಿ ಸೇರಿದಂತೆ 20 ಯೋಧರು ಹುತಾತ್ಮರಾಗಿದ್ದರು. ಅದಾದ ಬಳಿಕ ಭಾರತದಾದ್ಯಂತ ಚೀನಾ ವಿರುದ್ಧ ಆಕ್ರೋಶ ಹೆಚ್ಚಾಗಿತ್ತು. ಚೀನಾ ವಸ್ತುಗಳ ಬಹಿಷ್ಕಾರಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನ ನಡೆದಿತ್ತು. ಇದರ ಬೆನ್ನಲ್ಲೇ ಸರ್ಕಾರ ಚೀನಾದ 59 ಆ್ಯಪ್‌ಗಳನ್ನು ನಿಷೇಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT