ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್‌ ಖರೀದಿಗೆ ಒಂದೇ ಕ್ಲಿಕ್!

Last Updated 20 ಮೇ 2020, 6:16 IST
ಅಕ್ಷರ ಗಾತ್ರ

ಕೋವಿಡ್‌ ಲಾಕ್‌ಡೌನ್‌ ಕಾರಣಕ್ಕೆ ಬಹುತೇಕ ಕಾರ್‌ ತಯಾರಿಕಾ ಕಂಪನಿಗಳು ಆನ್‌ಲೈನ್‌ ಖರೀದಿ ಸೌಲಭ್ಯ ಪರಿಚಯಿಸಿವೆ. ಕಾರ್‌ ಖರೀದಿದಾರರು ಟೆಸ್ಟ್‌ ಡ್ರೈವ್‌ ಹೊರತುಪಡಿಸಿ ಕಾರ್‌ ಖರೀದಿಯ ಎಲ್ಲ ಪ್ರಕ್ರಿಯೆಗಳನ್ನು ಮನೆಯಲ್ಲಿ ಕುಳಿತುಕೊಂಡೇ ಆನ್‌ಲೈನ್‌ನಲ್ಲಿಯೇ ಪೂರ್ಣಗೊಳಿಸಬಹುದು.

***

ಲಾಕ್‌ಡೌನ್ ಕಾರಣಕ್ಕೆ ಕಾರ್ ಕಂಪನಿಗಳ ಷೋರೂಂಗಳು ತಿಂಗಳ ಕಾಲ ಬಾಗಿಲು ಹಾಕಿದ್ದವು. ಈಗ ಒಂದೊಂದಾಗಿ ಬಾಗಿಲು ತೆರೆಯುತ್ತಿವೆ. ಕಾರ್‌ ಕೊಳ್ಳಬೇಕು ಎಂಬ ಆಸೆ ನಿಮ್ಮದಾಗಿದ್ದರೆ ಸುಮ್ಮನೆ ಮನೆಯಲ್ಲಿ ಕೂರಬೇಕು ಎಂದೇನಿಲ್ಲ. ಕಾರ್‌ ಕೊಳ್ಳುವುದು ಈಗ ಮುಂಚಿಗಿಂತಲೂ ಸುಲಭ. ಮನೆಯಲ್ಲೇ ಕುಳಿತು ಒಂದೇ ಕ್ಲಿಕ್‌ನಲ್ಲಿ ಕಾರ್‌ನ್ನು ಮನೆ ಬಾಗಿಲಿಗೇ ತರಿಸಬಹುದು!

ಬಹುತೇಕ ಪ್ರಯಾಣಿಕ ಕಾರು ತಯಾರಿಕಾ ಕಂಪನಿಗಳು ಈಗ ಆನ್‌ಲೈನ್ ಕಾರು ಖರೀದಿ ಪ್ಲಾಟ್‌ಫಾರ್ಮ್‌ಗಳನ್ನು ಪರಿಚಯಿಸಿವೆ. ಕಾರು ಖರೀದಿಯ ಅನುಭವವನ್ನು ಕೆಲವೇ ಕೆಲವು ಸುಲಭ ಹಂತಗಳಲ್ಲಿ ಇದರಿಂದ ಪಡೆಯಬಹುದಾಗಿದೆ. ಕೋವಿಡ್ 19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸರ್ಕಾರ ಲಾಕ್‌ಡೌನ್‌ ಘೋಷಿಸಿದ್ದ ಕಾರಣ ಈ ಕಂಪನಿಗಳಿಗೆ ಸಾಕಷ್ಟು ನಷ್ಟವಾಗಿದ್ದು ನಿಜ. ಇದರಿಂದ ಹೊರಬರಲು ಈ ಕಂಪನಿಗಳು ಸಂಪರ್ಕರಹಿತ ಕಾರ್‌ ಮಾರಾಟ ವ್ಯವಸ್ಥೆ ಜಾರಿಗೊಳಿಸಿವೆ. ಕಾರು ತಯಾರಿಕಾ ಕಂಪನಿಗಳಾದ ಮಾರುತಿ ಸುಜುಕಿ, ಮರ್ಸಿಡಿಸ್ ಬೆಂಜ್‌, ಟೊಯೋಟ ಕಿರ್ಲೋಸ್ಕರ್, ಹೋಂಡಾ, ಹುಂಡೈ, ಮಹೀಂದ್ರಾ ಆ್ಯಂಡ್ ಮಹಿಂದ್ರಾ, ಬಿಎಂಡಬ್ಲ್ಯು ಮತ್ತು ಟಾಟಾ ಮೋಟರ್ಸ್ ಈಗ ವಿಶೇಷವಾದ ಕೊಡುಗೆಗಳನ್ನು ಪರಿಚಯಿಸಿವೆ.

ಈ ಮುಂಚೆಯೂ ಹಲವು ಕಾರ್‌ ಕಂಪನಿಗಳು 360 ಡಿಗ್ರಿಯಲ್ಲಿ ತಮ್ಮ ವಾಹನಗಳನ್ನು ವೀಕ್ಷಿಸುವ ಸೌಲಭ್ಯವನ್ನು ನೀಡಿದ್ದವು. ಕಂಪ್ಯೂಟರ್ ಮೌಸ್‌ ಹಿಡಿದು ಅಲುಗಾಡಿಸಿದಂತೆ ಕಾರ್‌ನ್ನು ಎಲ್ಲ ದಿಕ್ಕುಗಳಲ್ಲೂ ವೀಕ್ಷಿಸಬಹುದಾದ ಸೌಲಭ್ಯವಿತ್ತು. ಇದನ್ನು ಮೊಬೈಲ್‌ ಫೋನ್ ಬಳಸಿಯೂ ಮಾಡಬಹುದು. ಈ ಅನುಭವಕ್ಕೆ ಈಗ ಮತ್ತಷ್ಟು ರಂಗುಬಂದಿದೆ. ಕಾರ್‌ನ್ನು ಎಲ್ಲ ದಿಕ್ಕುಗಳಿಂದಲೂ ಹತ್ತಿರ – ದೂರದಿಂದಲೂ ವೀಕ್ಷಿಸಬಹುದಾಗಿದೆ. ಅಷ್ಟೇ ಅಲ್ಲದೇ, ಕಾರ್‌ನ ಒಳಾಂಗಣವನ್ನೂ ನೋಡಬಹುದಾಗಿದೆ. ಆದರೆ, ಟೆಸ್ಟ್‌ಡ್ರೈವ್‌ಗೆ ಮಾತ್ರ ಅವಕಾಶ ಇರುವುದಿಲ್ಲ. ಇದೊಂದನ್ನು ಬಿಟ್ಟು ಮಿಕ್ಕೆಲ್ಲ ಕಾಗದ ಪತ್ರ ವ್ಯವಹಾರಗಳೂ ಸಂಪರ್ಕರಹಿತವಾಗಿಯೇ ನಡೆಯುವುದು ಈಗಿನ ವಿಶೇಷವಾಗಿದೆ.

‘ಡೆಲಾಯ್ಟ್’ ಸಂಸ್ಥೆಯು ಇತ್ತೀಚೆಗೆ ನಡೆಸಿದ ಸಮೀಕ್ಷೆಯ ವರದಿಯ ಪ್ರಕಾರ, ಗ್ರಾಹಕರು ಆನ್‌ಲೈನ್‌ ಖರೀದಿಗೇ ಹೆಚ್ಚಿನ ಒಲವು ತೋರಿಸಿದ್ದಾರೆ. ‘ವಾಹನವನ್ನು ಆನ್‌ಲೈನ್‌ನಲ್ಲಿ ಖರೀದಿಸುತ್ತೇವೆ. ಷೋರೂಂಗೆ ಹೋಗಲು ಇಷ್ಟವಿಲ್ಲ’ ಎಂದು ಗ್ರಾಹಕರು ಹೇಳಿದ್ದಾರೆ.

ಈ ನಿಟ್ಟಿನಲ್ಲಿ ಟೊಯೋಟ ಕಿರ್ಲೋಸ್ಕರ್ ತನ್ನ ಮಾರಾಟ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಿದೆ. ಕಾರ್‌ಗಳ 360 ಡಿಗ್ರಿ ವರ್ಚುವಲ್‌ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದೆ.

‘ಗ್ರಾಹಕರು ತಮ್ಮ ಆಯ್ಕೆಯನ್ನು ಅಂತಿಮಗೊಳಿಸಿ ಹಣ ಸಂದಾಯ ಮಾಡಿದ ಬಳಿಕ, ಗ್ರಾಹಕರ ಆಯ್ಕೆಯ ಕಾರು ನೇರವಾಗಿ ಅವರ ಮನೆಯ ಮುಂದೆಯೇ ಬಂದು ನಿಲ್ಲುತ್ತದೆ. ಈ ಬಗೆಯ ಖರೀದಿಯಲ್ಲಿ ಗ್ರಾಹಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ’ ಎಂದು ಟೊಯೋಟ ಹೇಳಿಕೊಂಡಿದೆ.

‘ನಮಗೆ ಗ್ರಾಹಕರ ಸುರಕ್ಷತೆಯೇ ಮೊದಲ ಆದ್ಯತೆ. ನಮ್ಮ ಕಾರ್ಖಾನೆಯಿಂದ ಆರಂಭವಾಗಿ ಡೀಲರ್‌ಶಿಪ್‌, ಷೋರೂಂಗಳವರೆಗೂ ನಾವು ಶುಚಿತ್ವ ಹಾಗೂ ಸುರಕ್ಷೆಗೆ ಆದ್ಯತೆ ನೀಡಿದ್ದೇವೆ. ಇದೀಗ ಲಾಕ್‌ಡೌನ್‌ ಸಮಯದಲ್ಲಿ ಗ್ರಾಹಕರ ಸುರಕ್ಷತೆ ಕಾಪಾಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ’ ಎಂದು ಕಂಪನಿ ಹೇಳಿಕೊಂಡಿದೆ.

ದೇಶದಲ್ಲಿ ಪ್ರೀಮಿಯಂ ಕಾರುಗಳ ತಯಾರಕರಾದ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ ತನ್ನ ಕಾರ್ಪೊರೇಟ್ ವೆಬ್‌ಸೈಟ್ ಮೂಲಕ ‘ಹೋಂಡಾ ಫ್ರಮ್ ಹೋಮ್’ ಆನ್‌ಲೈನ್ ಬುಕಿಂಗ್ ಸೌಲಭ್ಯ ಪರಿಚಯಿಸಿದೆ. ಇದರ ಮೂಲಕ ಗ್ರಾಹಕರು ತಮ್ಮ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಕಾರ್ ಬುಕ್‌ ಮಾಡಬಹುದು. ಗ್ರಾಹಕರಿಗೆ ಹತ್ತಿರವಿರುವ ಷೋರೂಂನಿಂದ ಅವರ ಮನೆ ಬಾಗಿಲಿಗೆ ಕಾರ್ ಬಂದು ನಿಲ್ಲುತ್ತದೆ. ‘ಕಾರ್‌ ವ್ಯಾಪಾರವನ್ನು ಸಂಪೂರ್ಣವಾಗಿ ಡಿಜಿಟಲೀಕರಿಸುವುದು ನಮ್ಮ ಮುಖ್ಯ ಪ್ರಯತ್ನವಾಗಿದೆ’ ಎಂದು ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್‌ನ ಹಿರಿಯ ಉಪಾಧ್ಯಕ್ಷ ರಾಜೇಶ್ ಗೋಯೆಲ್ ಹೇಳಿದ್ದಾರೆ.

‘ಗ್ರಾಹಕರು ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿ ‘ಬುಕ್ ನೌ’ ಆಯ್ಕೆ ಆರಿಸಿಕೊಳ್ಳಬಹುದು. ಹಣ ಪಾವತಿ ಮಾಡುವುದಷ್ಟೇ ಗ್ರಾಹಕರ ಕೆಲಸ. ಮಿಕ್ಕೆಲ್ಲಾ ಜವಾಬ್ದಾರಿ ನಮ್ಮದು’ ಎಂದಿದ್ದಾರೆ. ಬುಕ್ ಮಾಡಿದ ಕೂಡಲೇ ಗ್ರಾಹಕರ ಮೊಬೈಲ್‌ ಸಂಖ್ಯೆಗೆ ಒಂದು ಸಂದೇಶ ಬರುತ್ತದೆ. ಕೂಡಲೇ ಹೋಂಡಾದ ಪ್ರತಿನಿಧಿಯೊಬ್ಬರು ಕರೆ ಮಾಡಿ ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳುತ್ತಾರೆ. ದಾಖಲೆ ಹಾಗೂ ಹಣ ಪಾವತಿ ಹಂತಗಳು ಮುಗಿದ ಕೂಡಲೇ ಕಾರ್‌ ಗ್ರಾಹಕರಿಗೆ ರವಾನೆಯಾಗುತ್ತದೆ.

ಹುಂಡೈ ಇಂಡಿಯಾ ಲಿಮಿಟೆಡ್ (ಎಚ್‌ಎಂಐಎಲ್‌‌) ಇದೇ ರೀತಿಯ ಅನುಭವವನ್ನು ಗ್ರಾಹಕರಿಗೆ ನೀಡಿದೆ. ಕಂಪನಿಯ ವೆಬ್‌ಸೈಟ್‌ ಸಂಪರ್ಕಿಸಿದ ಬಳಿಕ ಕಾರ್‌ನ ಆಯ್ಕೆಯನ್ನು ತೋರಿಸಬಹುದು. ಕೂಡಲೇ ವಿಡಿಯೊ ಕಾನ್ಫರೆನ್ಸ್ ಶುರುವಾಗುತ್ತದೆ. ಅದರಲ್ಲಿ ಕಾರ್‌ನ ಸಂಪೂರ್ಣ ವಿಡಿಯೊ ಪ್ರಸಾರವಾಗುತ್ತದೆ. ಜತೆಗೆ ಕಂಪನಿಯ ಪ್ರತಿನಿಧಿಯೂ ಚರ್ಚೆಗೆ ಸಿಗುತ್ತಾರೆ. ಇದರ ಜತೆಗೆ ಕಾರ್‌ನ 360 ಡಿಗ್ರಿ ವೀಕ್ಷಣೆಯ ಸೌಲಭ್ಯವೂ ಇದೆ. ಹುಂಡೈನ ಮೊಬೈಲ್ ಅಪ್ಲಿಕೇಷನ್‌, ವಾಟ್ಸ್ಆ್ಯಪ್ ಮೂಲಕ ಸಂಪರ್ಕ ಸೌಲಭ್ಯವೂ ಇದೆ. ‘ಅತ್ಯಂತ ಕಡಿಮೆ ಗ್ರಾಹಕ ಶ್ರಮ, ಕಡಿಮೆ ಮಾತುಕತೆ, ಸಂಪರ್ಕ ಶೂನ್ಯ ಪದ್ಧತಿ ಇದಾಗಿದೆ. ಅತ್ಯಂತ ಸುರಕ್ಷಿತವಾಗಿ ಹಣ ಸಂದಾಯ ಮಾಡುವ ಅವಕಾಶವನ್ನೂ ನೀಡಲಾಗಿದೆ ಎಂದು ಹುಂಡೈ ಹೇಳಿಕೊಂಡಿದೆ.

ಐಷಾರಾಮಿ ಕಾರ್‌ಗಳನ್ನು ತಯಾರಿಸುವ ಬಿಎಂಡಬ್ಲ್ಯೂ ಆನ್‌ಲೈನ್‌ ಖರೀದಿಗಾಗಿ www.bmw-contactless.in ಎಂಬ ವೆಬ್‌ಸೈಟ್‌ನ್ನೇ ಶುರುಮಾಡಿದೆ. ‘ಗ್ರಾಹಕರು ತಮ್ಮ ಮೊಬೈಲ್‌ ಫೋನ್‌, ಲ್ಯಾಪ್‌ಟಾಪ್‌, ಕಂಪ್ಯೂಟರ್ ಅಥವಾ ಟ್ಯಾಬ್ಲೆಟ್‌ ಮೂಲಕ ನಮ್ಮ ಕಾರ್‌ಗಳನ್ನು 360 ಡಿಗ್ರಿಯಲ್ಲಿ ವೀಕ್ಷಿಸಬಹುದು. ಹೊರಾಂಗಣ, ಒಳಾಂಗಣ ನೋಟ ಸಿಗಲಿದೆ. ವಾಹನದ ತಾಂತ್ರಿಕ ಮಾಹಿತಿ, ಡಿಜಿಟಲ್‌ ಬ್ರೌಷರ್‌ಗಳನ್ನು ಆನ್‌ಲೈನ್‌ ಮೂಲಕವೇ ಗ್ರಾಹಕರಿಗೆ ತಲುಪಿಸುವ ಕೆಲಸ ಮಾಡಿದ್ದೇವೆ’ ಎಂದು ಬಿಎಂಡಬ್ಲ್ಯೂ ಮೂಲಗಳು ತಿಳಿಸಿವೆ.

ಟಾಟಾ ಮೋಟರ್ಸ್ ‘ಕ್ಲಿಕ್‌ ಟು ಡ್ರೈವ್‌’ ಎಂಬ ಆನ್‌ಲೈನ್‌ ವೇದಿಕೆ ಶುರುಮಾಡಿದೆ. ತನ್ನ ಎಲ್ಲ ಕಾರ್‌ಗಳನ್ನು ಅಂಗೈಗಲ್ಲೇ ವೀಕ್ಷಿಸುವ ಸೌಲಭ್ಯವನ್ನು ಟಾಟಾ ಮೋಟರ್ಸ್‌ ನೀಡಿದೆ. ಈ ಸೇವೆಯನ್ನು ಪಡೆಯಲು ಗ್ರಾಹಕರು ತಮ್ಮ ಹೆಸರನ್ನು ನೋಂದಾಯಿಸಿಕೊಂಡರೆ ಸಾಕು. ಇದರಲ್ಲಿ ವಿಡಿಯೊ ಬ್ರೌಷರ್‌ ಗ್ರಾಹಕರಿಗೆ ಸಿಗುತ್ತದೆ. ಅದನ್ನು ವೀಕ್ಷಿಸಿ ತಮ್ಮ ಇಷ್ಟದ ಕಾರ್‌ ಕೊಳ್ಳುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು.

ಈಚೆಗಷ್ಟೇ ಬಿಡುಗಡೆಯಾಗಿದ್ದ ಟಾಟಾ ‘ಆಲ್ಟ್ರೋಜ್’ ಕಾರ್‌ ವೀಕ್ಷಣೆ ಅದ್ಭುತವಾಗಿದೆ. ಇಲ್ಲಿ ‘ಇಮ್ಯಾಜಿನೇಟರ್‌’ ಎಂಬ ಸೌಲಭ್ಯ ನೀಡಲಾಗಿದ್ದು, ತಮಗೆ ಬೇಕಾದಂತೆ ಬಣ್ಣ ಬದಲಿಸಿ ನೋಡುವ, ಬಿಡಿಭಾಗಗಳನ್ನು ಬದಲಿಸುವ, ಜೋಡಿಸುವ ಅವಕಾಶ ನೀಡಲಾಗಿದೆ. ಬಳಿಕ ಕಾರ್‌ನ ಹಣ ಸಂದಾಯ ಮಾಡಿದರೆ ಕಾರ್‌ ಮನೆಗೆ ಬರುತ್ತದೆ.

ಇದೇ ರೀತಿ ಮಹಿಂದ್ರಾ ಮತ್ತು ಮಹಿಂದ್ರಾ ಸಹ ‘ಔನ್‌ ಆನ್‌ಲೈನ್‌’ ಎಂಬ ಸೇವೆ ಆರಂಭಿಸಿದೆ. ಗ್ರಾಹಕರು ಪರಿಪೂರ್ಣವಾಗಿ ವಾಹನ ಮಾದರಿ ವೀಕ್ಷಿಸಿ ಷೋರೂಂಗೆ ಹೋಗುವ ತೊಂದರೆ ತೆಗೆದುಕೊಳ್ಳದೆ ಮನೆಯಿಂದಲೇ ಖರೀದಿಸುವ ಅವಕಾಶ ಪಡೆದಿದ್ದಾರೆ.

* ಷೋರೂಂಗೆ ತೆರಳದೆ ಮನೆಯಲ್ಲಿ ಕುಳಿತುಕೊಂಡೇ ಖರೀದಿ

* ಮಾರಾಟ ಪ್ರಕ್ರಿಯೆ ಸಂಪೂರ್ಣ ಡಿಜಿಟಲೀಕರಣ

* ವಿಡಿಯೊ ಕಾನ್ಫರೆನ್ಸ್‌ನಲ್ಲಿ ಕಾರ್‌ನ ಸಂಪೂರ್ಣ ವಿಡಿಯೊ ಪ್ರಸಾರ

* ಗ್ರಾಹಕರ ಸುರಕ್ಷತೆಗೆ ಮೊದಲ ಆದ್ಯತೆ ಮಂತ್ರ ಪಾಲನೆ

* ದಾಖಲೆಪತ್ರ, ಹಣ ಪಾವತಿ ಪ್ರಕ್ರಿಯೆ ಕೊನೆಗೊಳ್ಳುತ್ತಿದ್ದಂತೆ ಗ್ರಾಹಕರಿಗೆ ಕಾರ್‌ ರವಾನೆ

* ಟೆಸ್ಟ್‌ ಡ್ರೈವ್‌ ಇಲ್ಲದಿರುವುದೊಂದೇ ಇದರ ಇತಿಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT