ರಾಜ್ಯಗಳಿಗೆ ₹12 ಸಾವಿರ ಕೋಟಿ ಬಡ್ಡಿರಹಿತ ಸಾಲ ಘೋಷಿಸಿದ ಕೇಂದ್ರ

ನವದೆಹಲಿ: ಬಂಡವಾಳ ಯೋಜನೆಗಳಿಗಾಗಿ ರಾಜ್ಯ ಸರ್ಕಾರಗಳಿಗೆ 50 ವರ್ಷಗಳ ಅವಧಿಗೆ ₹12 ಸಾವಿರ ಕೋಟಿ ಬಡ್ಡಿರಹಿತ ಸಾಲ ನೀಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಘೋಷಿಸಿದ್ದಾರೆ. ಆರ್ಥಿಕತೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು ಮೊತ್ತದ ಪೈಕಿ ₹1,600 ಕೋಟಿ ಸಾಲವನ್ನು ಈಶಾನ್ಯ ರಾಜ್ಯಗಳಿಗೆ ಹಾಗೂ ₹900 ಕೋಟಿಯನ್ನು ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಗಳಿಗೆ ನೀಡಲಾಗುವುದು ಎಂದು ತಿಳಿಸಿದರು.
₹7,500 ಕೋಟಿಯನ್ನು ಉಳಿದ ರಾಜ್ಯಗಳಿಗೆ ನೀಡಲಾಗುವುದು. ಈಗಾಗಲೇ ಘೊಷಿಸಲಾಗಿರುವ ಆರ್ಥಿಕ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುತ್ತಿರುವ ರಾಜ್ಯ ಸರ್ಕಾರಗಳಿಗೆ ₹2,000 ಕೋಟಿ ನೀಡಲಾಗುವುದು ಎಂದು ಸಚಿವೆ ಹೇಳಿದರು.
ಇದನ್ನೂ ಓದಿ: ವಿಷಯುಕ್ತ ವಿಚಾರ ಹರಡುವ ನ್ಯೂಸ್ ಚಾನೆಲ್‌ಗಳಿಗೆ ಜಾಹೀರಾತು ಇಲ್ಲ: ಪಾರ್ಲೆ, ಬಜಾಜ್
ಸಾಲದ ಮೊತ್ತವನ್ನು ಹೊಸದಾಗಿ ಘೋಷಣೆಯಾಗಿರುವ ಅಥವಾ ಈಗಾಗಲೇ ಜಾರಿಯಲ್ಲಿರುವ ಬಂಡವಾಳ ಯೋಜನೆಗಳಿಗೆ ವಿನಿಯೋಗಿಸಬೇಕು. ಗುತ್ತಿಗೆದಾರರ, ಪೂರೈಕೆದಾರರ ಪಾವತಿಗಾಗಿ ಸಾಲದ ಮೊತ್ತವನ್ನು ಬಳಸಬಹುದು. ಆದರೆ 2021ರ ಮಾರ್ಚ್ 31ರ ಒಳಗಾಗಿ ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.
ಹೆಚ್ಚುವರಿಯಾಗಿ ಕೇಂದ್ರ ಸರ್ಕಾರದಿಂದ ₹25 ಸಾವಿರ ಕೋಟಿ ಬಂಡವಾಳ ವೆಚ್ಚವನ್ನೂ ಹಣಕಾಸು ಸಚಿವೆ ಘೋಷಿಸಿದ್ದಾರೆ. ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದ್ದ ₹4.13 ಲಕ್ಷ ಕೋಟಿಗೆ ಹೆಚ್ಚುವರಿಯಾಗಿ ಇದನ್ನು ಸೇರಿಸಲಾಗಿದೆ. ಈ ಮೊತ್ತವನ್ನು ರಸ್ತೆ, ರಕ್ಷಣಾ ಮೂಲಸೌಕರ್ಯ, ನೀರು ಪೂರೈಕೆ ಮತ್ತು ನಗರಾಭಿವೃದ್ಧಿ ಯೋಜನೆಗಳಿಗೆ ಬಳಸಿಕೊಳ್ಳಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.