ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ವರ್ಷದಲ್ಲಿ ಭಾರತ 3ನೇ ಅತಿದೊಡ್ಡ ಆರ್ಥಿಕತೆ: ಅಮಿತಾಬ್‌ ಕಾಂತ್‌ ವಿಶ್ವಾಸ

Published 21 ಮಾರ್ಚ್ 2024, 18:12 IST
Last Updated 21 ಮಾರ್ಚ್ 2024, 18:12 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಂದಿನ ಐದು ವರ್ಷದೊಳಗೆ ಭಾರತವು, ಜಪಾನ್‌ ಮತ್ತು ಜರ್ಮನಿಯ ಆರ್ಥಿಕತೆಯನ್ನು ಬದಿಗೊತ್ತಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಜೊತೆಗೆ, ದೇಶದ ಷೇರುಪೇಟೆಯೂ ಮೂರನೇ ಸ್ಥಾನಕ್ಕೇರಲಿದೆ’ ಎಂದು ನೀತಿ ಆಯೋಗದ ಮಾಜಿ ಸಿಇಒ ಹಾಗೂ ಜಿ20 ಶೃಂಗಸಭೆಯ ಶೆರ್ಪಾ ಅಮಿತಾಬ್‌ ಕಾಂತ್‌ ಹೇಳಿದರು.

ನಗರದಲ್ಲಿ ಗುರುವಾರ ನಡೆದ ಭಾರತೀಯ ಕೈಗಾರಿಕಾ ಮಹಾಸಂಘದ (ಸಿಐಐ) ದಕ್ಷಿಣ ಪ್ರಾದೇಶಿಕ ವಿಭಾಗದ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ಮೂರು ತ್ರೈಮಾಸಿಕಗಳಲ್ಲಿ ದೇಶದ ಆರ್ಥಿಕತೆಯು ಶೇ 8.3ಕ್ಕೂ ಹೆಚ್ಚು ಬೆಳವಣಿಗೆ ಸಾಧಿಸಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯ ವರದಿ ಪ್ರಕಾರ ಭಾರತವು ಮುಂದಿನ ದಶಕದಲ್ಲಿ ವಿಶ್ವದ ಆರ್ಥಿಕತೆಯ ವಿಸ್ತರಣೆಗೆ ಶೇ 20ರಷ್ಟು ಕೊಡುಗೆ ನೀಡಲಿದೆ ಎಂದು ಹೇಳಿದರು. 

2047ರ ವೇಳೆಗೆ ಭಾರತದಲ್ಲಿ ಶೇ 30ರಷ್ಟು ಕೌಶಲ ವೃದ್ಧಿಯಾಗಲಿದೆ. ಇದಕ್ಕೆ ಪೂರಕವಾಗಿ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿಗೆ ಒತ್ತು ನೀಡಬೇಕಿದೆ. ಇವುಗಳ ಸಂಶೋಧನೆ ಮತ್ತು ಅಭಿವೃದ್ಧಿ ವೆಚ್ಚವನ್ನು ಕನಿಷ್ಠ ಶೇ 2.5ರಿಂದ ಶೇ 3ಕ್ಕೆ ಹೆಚ್ಚಿಸಬೇಕಿದೆ ಎಂದು ತಿಳಿಸಿದರು.

ರಾಜ್ಯಗಳು ಅಭಿವೃದ್ಧಿಯಾದರೆ ಮಾತ್ರ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಇದಕ್ಕೆ ರಾಜ್ಯ ಸರ್ಕಾರ, ಜನಪ್ರತಿನಿಧಿಗಳು ಹಾಗೂ ನೌಕರ ವರ್ಗದ ಸಹಕಾರ ಅಗತ್ಯ. ಆಗಷ್ಟೇ 2047ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಗೆ ಸೇರಲು ಸಾಧ್ಯ ಎಂದು ಹೇಳಿದರು.

ಸಮಾಜದ ಮನಸ್ಥಿತಿ ಬದಲಾಗಲಿ:

‘ಸಮಾಜದಲ್ಲಿ ಗಂಡು–ಹೆಣ್ಣು ಎಂಬ ಲಿಂಗ ಅಸಮಾನತೆ ಕಡಿಮೆಯಾಗಬೇಕಿದೆ. ಆಗಷ್ಟೇ ಮಹಿಳೆಯರು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯವಾಗಲಿದೆ’ ಎಂದು ಕಿರ್ಲೋಸ್ಕರ್‌ ಸಿಸ್ಟಮ್ಸ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಅಧ್ಯಕ್ಷೆ ಗೀತಾಂಜಲಿ ಕಿರ್ಲೋಸ್ಕರ್‌ ಹೇಳಿದರು.

ಗ್ರಾಮೀಣ ಮಹಿಳೆಯರು ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿದಾಗ ಆರ್ಥಿಕವಾಗಿ ಸಬಲರಾಗಲು ಸಾಧ್ಯ. ಕುಟುಂಬ ಮತ್ತು ಸಮಾಜವು ಅವರ ಏಳಿಗೆಗೆ ಬೆಂಬಲ ನೀಡಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಭಾರತೀಯ ಕೈಗಾರಿಕಾ ಮಹಾಸಂಘದ (ಸಿಐಐ) ದಕ್ಷಿಣ ಪ್ರಾದೇಶಿಕ ವಿಭಾಗದ ಅಧ್ಯಕ್ಷ ಕಮಲ್‌ ಬಾಲಿ ಮತ್ತು ಸಿಐಐ ದಕ್ಷಿಣ ಪ್ರಾದೇಶಿಕ ವಿಭಾಗದ ಉಪಾಧ್ಯಕ್ಷೆ ನಂದಿನಿ ರಂಗಸ್ವಾಮಿ, ಸಹ ಸಂಸ್ಥಾಪಕಿ ಸುಚಿತ್ರಾ, ಸಿಐಐ ಮಾಜಿ ಅಧ್ಯಕ್ಷ ಕ್ರಿಷ್‌ ಗೋಪಾಲಕೃಷ್ಣನ್‌ ಹಾಜರಿದ್ದರು.

ಭಾರತೀಯ ಕೈಗಾರಿಕಾ ಮಹಾಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೀತಿ ಆಯೋಗದ ಮಾಜಿ ಸಿಇಒ ಅಮಿತಾಬ್‌ ಕಾಂತ್‌ ಮಾತನಾಡಿದರು. ಸಿಐಐ ದಕ್ಷಿಣ ಪ್ರಾದೇಶಿಕ ಅಧ್ಯಕ್ಷ ಕಮಲ್‌ ಬಾಲಿ ಹಾಜರಿದ್ದರು
ಭಾರತೀಯ ಕೈಗಾರಿಕಾ ಮಹಾಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೀತಿ ಆಯೋಗದ ಮಾಜಿ ಸಿಇಒ ಅಮಿತಾಬ್‌ ಕಾಂತ್‌ ಮಾತನಾಡಿದರು. ಸಿಐಐ ದಕ್ಷಿಣ ಪ್ರಾದೇಶಿಕ ಅಧ್ಯಕ್ಷ ಕಮಲ್‌ ಬಾಲಿ ಹಾಜರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT