ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿ ಧಾರಣೆ ಚೇತರಿಕೆ: ವಿಯೆಟ್ನಾಂ, ಬ್ರೆಜಿಲ್, ಮೆಕ್ಸಿಕೊದಲ್ಲಿ ಉತ್ಪಾದನೆ ಕುಸಿತ

Published 24 ಮೇ 2024, 23:30 IST
Last Updated 24 ಮೇ 2024, 23:30 IST
ಅಕ್ಷರ ಗಾತ್ರ

ಕಳಸ: ಈ ತಿಂಗಳ ಆರಂಭದಲ್ಲಿ ಪ್ರತಿ ಕೆ.ಜಿ.ಗೆ₹400ರಿಂದ ₹335ಕ್ಕೆ ಕುಸಿದಿದ್ದ ರೊಬಸ್ಟಾ ಕಾಫಿ ಧಾರಣೆಯು ಕಳೆದ ವಾರದಿಂದ ಮತ್ತೆ ಚೇತರಿಕೆಯ ಹಾದಿ ಹಿಡಿದಿದೆ. ಸದ್ಯ ಮಾರುಕಟ್ಟೆಯಲ್ಲಿ
ಕೆ.ಜಿ.ಗೆ ₹360 ಬೆಲೆ ಇದೆ.

ಎರಡು ವಾರದಿಂದ ಲಂಡನ್ ಮತ್ತು ನ್ಯೂಯಾರ್ಕ್ ಕಾಫಿ ಮಾರುಕಟ್ಟೆಯಲ್ಲಿ ಸತತವಾಗಿ ಕಾಫಿ ಧಾರಣೆ ಏರುತ್ತಿದೆ. ಇದರಿಂದಾಗಿ ಸ್ಥಳೀಯ ಮಾರುಕಟ್ಟೆ ಯಲ್ಲಿ ಮತ್ತೆ ಸಂಚಲನ ಉಂಟಾಗಿದೆ.

ಕಳೆದ ತಿಂಗಳು 50 ಕೆ.ಜಿಯ ಚೀಲಕ್ಕೆ ₹11 ಸಾವಿರದವರೆಗೆ ಏರಿದ್ದ ರೊಬಸ್ಟಾ ಚೆರ‍್ರಿ ಧಾರಣೆಯು ಬಳಿಕ ₹8 ಸಾವಿರಕ್ಕೆ ಕುಸಿದಿತ್ತು. ಈ ವೇಳೆ ಕಾಫಿ ಮಾರಾಟ ಮಾಡದೆ ದಾಸ್ತಾನು ಇಟ್ಟುಕೊಂಡಿದ್ದ ಬೆಳೆಗಾರರು ಬೇಸರಗೊಂಡಿದ್ದರು. ಧಾರಣೆ ಏರಿಕೆಯಿಂದಾಗಿ ಚೀಲ ವೊಂದಕ್ಕೆ ₹9,500ರವರೆಗೂ ಬೆಲೆ ಸಿಗುತ್ತಿದೆ.

ಲಂಡನ್ ಮಾರುಕಟ್ಟೆಯಲ್ಲಿ ಒಂದು ಟನ್ ರೊಬಸ್ಟಾ ಕಾಫಿ ಧಾರಣೆ ದಾಖಲೆಯ 4,175 ಡಾಲರ್‌ಗೆ ಏರಿಕೆಯಾಗಿತ್ತು. ಆ ಬಳಿಕ 3,400 ಡಾಲರ್‌ಗೆ ಇಳಿದಿತ್ತು. ಶುಕ್ರವಾರದ ಮಾರುಕಟ್ಟೆಯಲ್ಲಿ 3,880 ಡಾಲರ್ ಆಸುಪಾಸಿನಲ್ಲಿ ವ್ಯವಹಾರ ನಡೆದಿದೆ. ಕಾಫಿ ಬೆಲೆ ಏರುಗತಿಯಲ್ಲಿ ಇರುವುದರಿಂದ ಬೆಳೆಗಾರರಲ್ಲಿ ಮತ್ತೆ ಸಂತಸ ಮೂಡಿದೆ.

ವಿಯೆಟ್ನಾಂನಲ್ಲಿ ರೊಬಸ್ಟಾ ಕಾಫಿ ಉತ್ಪಾದನೆ ಕುಸಿದಿದೆ. ಬ್ರೆಜಿಲ್‌ನಲ್ಲೂ ಅರೇಬಿಕಾ ಕಾಫಿ ಉತ್ಪಾದನೆ ಮೇಲೆ ಪ್ರತಿಕೂಲ ಹವಾಮಾನ ಪರಿಣಾಮ ಬೀರಿದೆ. ಮೆಕ್ಸಿಕೊದಲ್ಲಿ ತಾಪಮಾನ 40-45 ಡಿಗ್ರಿ ತಲುಪಿದ್ದು, ಹೂಗಳು ಕರಟಿ ಹೋಗುತ್ತಿವೆ. ಇದರಿಂದ ಮುಂದಿನ ಹಂಗಾಮಿನಲ್ಲೂ ಕಾಫಿ ಉತ್ಪಾದನೆ ಮೇಲೆ ನಕಾರಾತ್ಮಕ ಪ್ರಭಾವ ಬೀರುವ ಸಂಭವ ಇದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

‘ಜಾಗತಿಕವಾಗಿ ಕಾಫಿ ಬೆಳೆಯುವ ಪ್ರದೇಶದಲ್ಲಿ ಆಗುತ್ತಿರುವ ಹವಾಮಾನ ವೈಪರೀತ್ಯ ಗಮನಿಸಿದರೆ ಮುಂದಿನ ಒಂದೆರಡು ವರ್ಷ ಭಾರತದ ಕಾಫಿಗೆ ಗರಿಷ್ಠ ಧಾರಣೆ ಮುಂದುವರಿಯ ಬಹುದು’ ಎಂದು ಬೆಳೆಗಾರ ವಿಶಾಲ್ ತಿಳಿಸಿದರು.

ಕಾಫಿ ರಫ್ತು ಶೇ 12ರಷ್ಟು ಏರಿಕೆ

ನವದೆಹಲಿ (ಪಿಟಿಐ): 2023-24ನೇ ಆರ್ಥಿಕ ವರ್ಷದಲ್ಲಿ ₹10,636 ಕೋಟಿ ಮೌಲ್ಯದ ಕಾಫಿ ರಫ್ತು ಮಾಡಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 12.22ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ.

2022–23ನೇ ಆರ್ಥಿಕ ವರ್ಷದಲ್ಲಿ ಭಾರತದಿಂದ ₹9,473 ಕೋಟಿ ಮೌಲ್ಯದ ಕಾಫಿ ರಫ್ತು ಮಾಡಲಾಗಿತ್ತು. ರೊಬಸ್ಟಾ ಕಾಫಿಗೆ ಹೆಚ್ಚಿದ ಬೇಡಿಕೆಯಿಂದಾಗಿ ರಫ್ತು ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಹೇಳಿದೆ.

2023–24ನೇ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ 1.25 ಲಕ್ಷ ಟನ್‌ನಷ್ಟು ಕಾಫಿ ರಫ್ತು ಮಾಡಲಾಗಿದೆ. ಇದರ ಹಿಂದಿನ ಆರ್ಥಿಕ ವರ್ಷದಲ್ಲಿ 1.10 ಲಕ್ಷ ಟನ್‌ನಷ್ಟು ರಫ್ತು ಮಾಡಲಾಗಿತ್ತು. ಈ ಅವಧಿಯಲ್ಲಿ ಒಟ್ಟಾರೆ ರಫ್ತಿನಲ್ಲಿ ಶೇ 13.35ರಷ್ಟು ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT