ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಖಾ ಕಚೇರಿಯಿಂದ ಪ್ರಧಾನ ಕಚೇರಿ ಸೇವೆಗೆ ಜಿಎಸ್‌ಟಿ ಅನ್ವಯ

Last Updated 18 ಏಪ್ರಿಲ್ 2023, 23:15 IST
ಅಕ್ಷರ ಗಾತ್ರ

ನವದೆಹಲಿ: ಕಂಪನಿಯ ಶಾಖೆಯೊಂದರ ನೌಕರರು ಬೇರೆ ರಾಜ್ಯದಲ್ಲಿ ಇರುವ ತಮ್ಮ ಮುಖ್ಯ ಕಚೇರಿಗೆ ನೀಡಿದ ಸೇವೆಗಳಿಗೆ ಶೇಕಡ 18ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪಾವತಿ ಮಾಡಬೇಕು ಎಂದು ಜಿಎಸ್‌ಟಿ ನ್ಯಾಯಾಲಯವು (ಎಎಆರ್‌) ಹೇಳಿದೆ. ಅಲ್ಲದೆ, ಮುಖ್ಯ ಕಚೇರಿಯಲ್ಲಿನ ನೌಕರರು ಬೇರೆ ರಾಜ್ಯದಲ್ಲಿ ಇರುವ ತಮ್ಮ ಶಾಖಾ ಕಚೇರಿಗೆ ನೀಡಿದ ಸೇವೆಗಳಿಗೆ ಕೂಡ ಇದೇ ದರದ ಜಿಎಸ್‌ಟಿ ಅನ್ವಯವಾಗುತ್ತದೆ ಎಂದು ಅದು ಹೇಳಿದೆ.

ಕರ್ನಾಟಕದಲ್ಲಿ ನೋಂದಾಯಿತ ಕಚೇರಿ ಹೊಂದಿರುವ ಪ್ರೊಫಿಸಲ್ಯೂಷನ್ಸ್‌ ಪ್ರೈ.ಲಿ. ಕಂಪನಿಯು ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಶಾಖೆಯನ್ನು ಹೊಂದಿದೆ. ಶಾಖೆಯಿಂದ ಮುಖ್ಯ ಕಚೇರಿಗೆ ನೀಡುವ ಸೇವೆಗಳಿಗೆ ಜಿಎಸ್‌ಟಿ ಅನ್ವಯವಾಗುತ್ತದೆಯೇ ಎಂಬ ಬಗ್ಗೆ ಆದೇಶ ನೀಡುವಂತೆ ಕಂಪನಿಯು ಎಎಆರ್‌ ಕದ ತಟ್ಟಿತ್ತು.

ಈ ಕಂಪನಿಯ ಶಾಖೆಯು ಬೆಂಗಳೂರಿನಲ್ಲಿ ಇರುವ ಪ್ರಧಾನ ಕಚೇರಿಗೆ ಎಂಜಿನಿಯರಿಂಗ್, ವಿನ್ಯಾಸ ಮತ್ತು ಲೆಕ್ಕಪತ್ರ ನಿರ್ವಹಣೆ ಸೇವೆಗಳನ್ನು ಒದಗಿಸುತ್ತಿದೆ. ನೌಕರರನ್ನು ಇಡೀ ಕಂಪನಿಗಾಗಿ ನೇಮಕ ಮಾಡಿಕೊಳ್ಳಲಾಗುತ್ತದೆಯೇ ವಿನಾ ಯಾವುದೋ ಒಂದು ಶಾಖೆಗಾಗಿ ಅಥವಾ ಪ್ರಧಾನ ಕಚೇರಿಗಾಗಿ ಎಂದಲ್ಲ ಎಂಬ ವಾದ ಕಂಪನಿಯದ್ದಾಗಿತ್ತು.

ಕಂಪನಿಗಳು ಬೇರೆ ಬೇರೆ ರಾಜ್ಯಗಳಲ್ಲಿ ಭೌತಿಕ ಅಸ್ತಿತ್ವ ಹೊಂದಿದ್ದರೆ ಜಿಎಸ್‌ಟಿ ವ್ಯವಸ್ಥೆಯ ಅಡಿ ಅವು ಅಲ್ಲಿ ಪ್ರತ್ಯೇಕವಾಗಿ ನೋಂದಣಿ ಮಾಡಿಕೊಳ್ಳಬೇಕು. ‘ವ್ಯಕ್ತಿಯೊಬ್ಬ ನೇಮಕ ಮಾಡಿಕೊಂಡಿರುವ ನೌಕರರು ಶಾಖಾ ಕಚೇರಿಯಿಂದ ಪ್ರಧಾನ ಕಚೇರಿಗೆ ಅಥವಾ ಪ್ರಧಾನ ಕಚೇರಿಯಿಂದ ಶಾಖಾ ಕಚೇರಿಗೆ ಸೇವೆ ಒದಗಿಸಿದ್ದಲ್ಲಿ, ಎರಡೂ ಕಚೇರಿಗಳು ಪ್ರತ್ಯೇಕ ಜಿಎಸ್‌ಟಿ ನೋಂದಣಿ ಹೊಂದಿದ್ದಲ್ಲಿ ತೆರಿಗೆ ಪಾವತಿ ಮಾಡಬೇಕಾಗುತ್ತದೆ’ ಎಂದು ಎಎಆರ್ ಆದೇಶವು ಹೇಳಿದೆ.

ಈ ಆದೇಶವು, ಪ್ರಧಾನ ಕಚೇರಿಯಿಂದ ಶಾಖಾ ಕಚೇರಿಗಳಿಗೆ ಹಾಗೂ ಶಾಖಾ ಕಚೇರಿಗಳಿಂದ ಪ್ರಧಾನ ಕಚೇರಿಗೆ ಸೇವೆ ಒದಗಿಸುವುದಕ್ಕೆ ಸಂಬಂಧಿಸಿದಂತೆ ಹತ್ತು ಹಲವು ಸಮಸ್ಯೆಗಳನ್ನು ಹೊಸದಾಗಿ ಸೃಷ್ಟಿ ಮಾಡಬಹುದು ಎಂದು ಕೆಪಿಎಂಜಿ ಸಂಸ್ಥೆಯ ಪರೋಕ್ಷ ತೆರಿಗೆ ವಿಭಾಗದ ರಾಷ್ಟ್ರೀಯ ಮುಖ್ಯಸ್ಥ ಅಭಿಷೇಕ್ ಜೈನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT